Advertisement
ನಾನಾದರೋ ವಾಹಿನಿಯೊಂದರಲ್ಲಿ ಉದ್ಯೋಗದಲ್ಲಿದ್ದ ದಿನಗಳವು. ಬೇಕೆಂದಾಗ ರಜೆ ಸಿಗುತ್ತಿರಲಿಲ್ಲ. ಹಾಗಾಗಿ, ನಮ್ಮ ಸಮಯಾನುಕೂಲದಲ್ಲಿ ಸ್ವಲ್ಪ ಸ್ವಲ್ಪವೇ ಚಿತ್ರೀಕರಣ ಮಾಡುತ್ತಿದ್ದೆವು. ಜಯಂತ ಕಾಯ್ಕಿಣಿಯವರು ಒಂದಷ್ಟು ಮಂದಿಯ ಹೆಸರು ಸೂಚಿಸಿ ಅವರನ್ನು ಸಂದರ್ಶಿಸುವಂತೆ ಹೇಳಿದ್ದರು. ಅವರನ್ನೆಲ್ಲ ಸಂಪರ್ಕಿಸಿ ಅವರ ಸಮಯಾನುಕೂಲದಲ್ಲಿ ಸಂದರ್ಶನ ನಡೆಸುತ್ತಿದ್ದೆವು. ಜಯಂತ ಕಾಯ್ಕಿಣಿಯವರ ಹುಟ್ಟೂರಾದ ಗೋಕರ್ಣವೂ ಸೇರಿದಂತೆ ಹೊನ್ನಾವರ, ಬೆಂಗಳೂರು, ಧಾರವಾಡ, ಮುಂಬಯಿ- ಮುಂತಾದ ಊರುಗಳಿಗೆ ತೆರಳಿದೆವು.
Related Articles
Advertisement
ಸಾಕ್ಷ್ಯಚಿತ್ರವೊಂದರ ಚೌಕಟ್ಟಿನಲ್ಲಿ ಜಯಂತ ಕಾಯ್ಕಿಣಿಯಂಥ ವಿಶಿಷ್ಟ ಮನಸ್ಸಿನ ಬದುಕನ್ನು ಕಟ್ಟಿಕೊಡುವುದು ಕಷ್ಟವೇ. ಸ್ವತಃ ಜಯಂತ ಕಾಯ್ಕಿಣಿಯವರೇ “ಒಂದು ಚೌಕಟ್ಟಿನೊಳಗೆ ಬದುಕಬೇಡಿ. ಬದುಕನ್ನು ಬಂದ ಹಾಗೆ ಸ್ವೀಕರಿಸಿ ಮುನ್ನಡೆಯಿರಿ’ ಎಂದು ಹೇಳುತ್ತಾರೆ. ಸಾಹಿತ್ಯದ ಕುರಿತಾದ ಅವರ ಧೋರಣೆಯೂ ಚೌಕಟ್ಟಿನ ಹೊರಗೆ ಬರಲು ತವಕಿಸುವಂಥಾದ್ದು. ಅವರ ಕತೆಗಳು ಕೂಡಾ ಹಾಗೆಯೇ. ಮುಖ್ಯವಾಹಿನಿಯ ಆಚೆಗಿರುವ ಬದುಕನ್ನು ಕತೆಗಳನ್ನಾಗಿಸುತ್ತಾರೆ. ಅಂಥವರನ್ನು ಕೆಲವೇ ನಿಮಿಷಗಳ ಸಾಕ್ಷ್ಯಚಿತ್ರದಲ್ಲಿ ಸಂಗ್ರಾಹ್ಯವಾಗಿ ಕೊಡುವುದು ಸವಾಲೇ ಸರಿ. ಅಂತೂ 2019ರ ಕೋಟದ ಕಾರಂತ ಭವನದಲ್ಲಿಯೇ ಸಾಕ್ಷ್ಯಚಿತ್ರಕ್ಕೆ ಬಿಡುಗಡೆಯ ಭಾಗ್ಯ ಬಂತು. “ಬೊಗಸೆಯಲ್ಲಿ ಮಳೆ’ ಅದರ ಶೀರ್ಷಿಕೆ. ಅದೀಗ ಯೂಟ್ಯೂಬ್‌ನಲ್ಲಿ ಲಭ್ಯ.
ಈ ಸಾಕ್ಷ್ಯಚಿತ್ರ ನಿರ್ಮಾಣವೆಂಬುದು ನಮ್ಮ ಬಳಗದವರ ಪಾಲಿಗೆ ಒಂದು ಅನುಭವ ಯಾತ್ರೆ. ಅನಂತನಾಗ್, ಪ್ರಕಾಶ್ ರೈ, ಜಿ. ಎಸ್. ಅಮೂರ, ವಿವೇಕ ಶಾನುಭಾಗ, ಎಂ. ಎಸ್. ಶ್ರೀರಾಮ್, ವ್ಯಾಸರಾವ್ ನಿಂಜೂರ್ ಹೀಗೆ ಅನೇಕ ಮಂದಿಯನ್ನು ಸಂದರ್ಶನ ಮಾಡುವ ಅವಕಾಶ ದೊರೆಯಿತು. ಅನೇಕ ಊರುಗಳನ್ನು ಸುತ್ತಾಡುತ್ತ ಕೆಮರಾ ಕಣ್ಣಿನಲ್ಲಿ ನೋಡುವುದಕ್ಕೆ ಸಾಧ್ಯವಾಯಿತು.ಬೊಗಸೆಯಲ್ಲಿ ಹಿಡಿದಷ್ಟು ಮಳೆ ; ಈ ಸಾಕ್ಷ್ಯಚಿತ್ರವೂ. — ಅವಿನಾಶ್ ಕಾಮತ್