Advertisement

ತುಂಗಭದ್ರಾ ಒಡಲಿನ 96 ಸಾವಿರ ಹೆಕ್ಟೇರ್‌ ಭೂಮಿ ಬರಡು!

06:00 AM Dec 15, 2017 | |

ಗಂಗಾವತಿ(ಕೊಪ್ಪಳ): ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ 96 ಸಾವಿರ ಹೆಕ್ಟೇರ್‌ ಭೂಮಿ ಬರಡಾಗಿದೆ! ಅತಿಯಾದ ನೀರು, ಗೊಬ್ಬರ ಮತ್ತು ಕ್ರಿಮಿನಾಶಕ ಬಳಕೆಯೇ ಇದಕ್ಕೆ ಕಾರಣವೆಂಬುದು ಆಘಾತಕಾರಿ ಅಂಶ. ಇದರಿಂದ ಇತ್ತೀಚಿನ ವರ್ಷಗಳಲ್ಲಿ ಇಳುವರಿ ಕಡಿಮೆಯಾಗುತ್ತಿದೆ.

Advertisement

ತುಂಗಭದ್ರಾ ಅಣೆಕಟ್ಟು ನಿರ್ಮಿಸಿ ಕೇವಲ 63 ವರ್ಷಗಳಲ್ಲಿ ವ್ಯವಸಾಯ ಭೂಮಿ ಬರಡಾಗುತ್ತಿರುವುದು ಆತಂಕ ಮೂಡಿಸಿದೆ.
ಸರ್ಕಾರದ ನಿಯಮ ಉಲ್ಲಂ ಸಿ ಬೆಳೆ ಬೆಳೆಯುವ ಪದ್ಧತಿ ಅಳವಡಿಸಿಕೊಂಡಿದ್ದರಿಂದ ಇಂತಹ ಸ್ಥಿತಿಯುಂಟಾಗಿದೆ. ಅಣೆಕಟ್ಟು ನಿರ್ಮಾಣಕ್ಕೂ ಮುಂಚೆ ಈ ಭಾಗದ ರೈತರು ಮಳೆ ಆಶ್ರಯದಲ್ಲಿ ಶೇಂಗಾ, ನವಣೆ, ಜೋಳ, ಹುರುಳಿ, ತೊಗರಿ ಹೀಗೆ ಬಹು ವಿಧದ ವ್ಯವಸಾಯ ಮಾಡುತ್ತಿದ್ದರು. 60ರ ದಶಕದಲ್ಲಿ ನಿಯಮದಂತೆ ಕಬ್ಬು, ಶೇಂಗಾ ಮತ್ತು ಹತ್ತಿ ಸೇರಿ ವಿವಿಧ ವಾಣಿಜ್ಯ ಬೆಳೆಗಳನ್ನು ಬೆಳೆಯಲಾಗುತ್ತಿತ್ತು. ನಂತರ ಸಕ್ಕರೆ ಕಾರ್ಖಾನೆಗಳ ಸ್ಥಾಪನೆಯಿಂದಾಗಿ ಅಚ್ಚುಕಟ್ಟು ಪ್ರದೇಶದಲ್ಲಿ ಮುಂಗಾರು- ಹಿಂಗಾರು ಸೇರಿ ವರ್ಷವಿಡಿ ಕಬ್ಬನ್ನು ಬೆಳೆಯಲಾಯಿತು. ಹಲವಾರು ಕಾರಣಕ್ಕಾಗಿ ಕಾರ್ಖಾನೆಗಳು ಸ್ಥಗಿತಗೊಂಡವು. ಇದೇ ಸಂದರ್ಭದಲ್ಲಿ ಆಂಧ್ರಪ್ರದೇಶ ಗೋದಾವರಿ ಭಾಗದ ರೈತರು ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗೆ ವಲಸೆ ಬಂದು ಭತ್ತ ಬೆಳೆಯುವ ಪದ್ಧತಿ ರೂಢಿಗೆ ತಂದರು. ಕಾರ್ಖಾನೆ ಸಮಸ್ಯೆ ಸೇರಿ ಇತರೆ ಸ್ಥಳೀಯ ತೊಂದರೆಯಿಂದಾಗಿ ಕಬ್ಬಿನ ಬೆಳೆ ನೇಪಥ್ಯಕ್ಕೆ ಸರಿದು ಕಳೆದ ನಾಲ್ಕು ದಶಕಗಳಲ್ಲಿ ಭತ್ತವನ್ನು ಬಿಟ್ಟರೆ ಇಲ್ಲಿನ ರೈತರಿಗೆ ಬೇರೆ ಬೆಳೆ ಬೆಳೆಯದಂತಹ ಮನಸ್ಥಿತಿ ಮೂಡಿದೆ.

ಕಾರಣವೇನು?: ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ 3.63 ಲಕ್ಷ ಹೆಕ್ಟೇರ್‌ ಪ್ರದೇಶದ ಪೈಕಿ 96,215 ಹೆಕ್ಟೇರ್‌ ಪ್ರದೇಶ ಸವಳು-ಜವಳು ಭೂಮಿಯಾಗಿ ಬದಲಾಗಿದೆ. ಇದರಿಂದ ರೈತರು ಯಾವುದೇ ಬೆಳೆ ಬೆಳೆಯಲಾಗದಂಥ ಸ್ಥಿತಿ ತಲುಪಿದ್ದಾರೆ. ಭೂಮಿಯಲ್ಲಿ ಸವಳು ಜವಳು ಹೆಚ್ಚಾಗುವುದನ್ನು ತಡೆಯಲು ಕೃಷಿ ಇಲಾಖೆ ಕೃಷಿ ವಿವಿ, ಕೃಷಿ ಸಂಶೋಧನಾ ಕೇಂದ್ರಗಳ ಸಲಹೆಯಂತೆ ಸವಳು-ಜವಳು ಭೂಮಿ ಪರಿವರ್ತನೆಗೆ ಯೋಜನೆ ರೂಪಿಸಿದರೂ ಅನುಷ್ಠಾನ ಮಾತ್ರ ಆಗುತ್ತಿಲ್ಲ. ಆದರೂ ಪ್ರತಿವರ್ಷ ಕೋಟ್ಯಂತರ ರೂ. ಗಳನ್ನು ಇದಕ್ಕಾಗಿ ಖರ್ಚು ಮಾಡಿದಂತೆ ಲೆಕ್ಕ ತೋರಿಸಲಾಗುತ್ತಿದೆ. ಅಚ್ಚುಕಟ್ಟು ಪ್ರದೇಶದಲ್ಲಿ ಉಂಟಾಗುವ ಕೃಷಿ ಸಮಸ್ಯೆ ಫಲವತ್ತತೆ ಸೇರಿ ರೈತರಿಗೆ ನೆರವಾಗಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಸಂಶೋಧನಾ ಕೇಂದ್ರ ಹಾಗೂ ಕೃಷಿ ವಿವಿಗಳನ್ನು ಸ್ಥಾಪಿಸಿದೆ. ಇದರಿಂದ ರೈತರಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ.

ರೈತರ ಅನಿಯಮಿತ ಬೆಳೆ ಪದ್ಧತಿಯಿಂದ ಅಚ್ಚುಕಟ್ಟು ಪ್ರದೇಶದ ಶೇ.30ರಷ್ಟು ಭೂಮಿ ಸವಳು-ಜವಳಾಗಿ ಪರಿವರ್ತನೆ ಯಾಗಿದೆ. ಅವೈಜ್ಞಾನಿಕ ಬೆಳೆ ಪದ್ಧತಿ ಇಲ್ಲಿದೆ. ಶಿಫಾರಸಿನಂತೆ ನೀರು, ಗೊಬ್ಬರ, ಕ್ರಿಮಿನಾಶಕ ಬಳಕೆ ಮಾಡುತ್ತಿಲ್ಲ. ಮಣ್ಣು, ನೀರು ಮತ್ತು ಬೀಜ ಪರೀಕ್ಷೆ ನಡೆಯುತ್ತಿಲ್ಲ. ಮುಂಗಾರು-ಹಿಂಗಾರಿನಲ್ಲಿ ಒಂದೇ ಬೆಳೆ ಪದ್ಧತಿಯಿಂದ ಭೂಮಿ ಬರಡಾಗುತ್ತಿದೆ.
– ಡಾ.ಜಿ.ವಿಶ್ವನಾಥ ಮಣ್ಣು ವಿಜ್ಞಾನಿ
ಕೃಷಿ ಸಂಶೋಧನಾ ಕೇಂದ್ರ

– ಕೆ. ನಿಂಗಜ್ಜ

Advertisement
Advertisement

Udayavani is now on Telegram. Click here to join our channel and stay updated with the latest news.

Next