ನವದೆಹಲಿ: ಕೋವಿಡ್ ಸೋಂಕಿನ ಹಿನ್ನೆಲೆ ಜಾರಿಯಲ್ಲಿರುವ ಲಾಕ್‌ಡೌನ್ ಮುಗಿದ ಬಳಿಕ ವಿಮಾನಗಳಲ್ಲಿ ಸಂಚರಿಸಲು ಪ್ರಯಾಣಿಕರಿಗೆ ತಮ್ಮ ಬಳಿ ಆರೋಗ್ಯ ಸೇತು ಆ್ಯಪ್ ಹೊಂದಿರುವುದು ಕಡ್ಡಾಯ ಮಾಡುವ ಕುರಿತಂತೆ ಕೇಂದ್ರ ಸರಕಾರ ನಿರ್ಧಾರ ಮಾಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತಂತೆ ವಿಮಾನಯಾನ ಸಂಸ್ಥೆಗಳ ಜತೆ ಮೊದಲ ಹಂತದ ಮಾತುಕತೆ ನಡೆಸಲಾಗಿದೆ. ನಾಗರಿಕ ವಿಮಾನಯಾನ ಸಚಿವಾಲಯವು ತನ್ನ ನಿರ್ಧಾರವನ್ನು ಹೊರಡಿಸಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೋವಿಡ್ ವೈರಸ್ ಹಿನ್ನೆಲೆ ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ದೇಶಾದ್ಯಂತ ಅಗತ್ಯ ಸರಕು ವಿಮಾನ, ವೈದ್ಯಕೀಯ ಮತ್ತು ವಿಶೇಷ ವಿಮಾನಗಳನ್ನು ಹೊರತುಪಡಿಸಿ ಎಲ್ಲಾ ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನ ಸಂಚಾರನ್ನು ಸ್ಥಗಿತಗೊಳಿಸಿವೆ
ಕೋವಿಡ್ ಲಾಕ್‌ಡೌನ್ ಮೇ 17ರಂದು ಅಂತಿಮಗೊಳ್ಳಲಿದೆ. ಲಾಕ್‌ಡೌನ್ ತೆರವುಗೊಂಡ ಬಳಿಕ ವಿಮಾನ ಸಂಚಾರ ಪುನಾರಭದ ಕುರಿತು ಸರಕಾರ ಇನ್ನಷ್ಟೇ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ.
ಆರೋಗ್ಯ ಸೇತು ಮೋಬೈಲ್ ಆ್ಯಪ್ ಬಳಕೆದಾರರಿಗೆ ಕೋವಿಡ್ ಕುರಿತಾದ ಮಾಹಿತಿ, ರೋಗ ಲಕ್ಷಣ ಮತ್ತು ಈ ಮಹಾಮಾರಿಯಿಂದ ಬಚವಾಗಲು ಅನುಸರಿಸಬೇಕಾದ ಮುಂಜಾಗರೂಕತಾ ಕ್ರಮಗಳ ಕುರಿತು ಮಾಹಿತಿ ನೀಡುತ್ತದೆ.
ಈ ಅಪ್ಲಿಕೇಶನ್ ಬಳಕೆದಾರರ ಆರೋಗ್ಯ ಸ್ಥಿತಿ ಮತ್ತು ಅವರ ಪ್ರಯಾಣದ ಇತಿಹಾಸವನ್ನು ಸಂಗ್ರಹಿಸುತ್ತದೆ. ಈ ಮುಖೇನ ಬಳಕೆದಾರ ಕೋವಿಡ್ ಸೋಂಕಿತರ ಸಂಪರ್ಕಕ್ಕೆ ಅಥಾವ ಸೋಂಕಿತ ಪ್ರದೇಶಕ್ಕೆ ಬಂದಿರುವ ಕುರಿತಂತೆ ಮಾಹಿತಿ ಕಲೆಹಾಕಲು ಮತ್ತು ಅವರನ್ನು ಪತ್ತೆ ಹಚ್ಚಲು ಸಹಾಯಮಾಡುತ್ತದೆ.