Advertisement

ಕೇಂದ್ರದ ಮೋಸದ ಬಗ್ಗೆ ಮೌನವೇಕೆ?

07:31 PM Sep 04, 2020 | Suhan S |

ಚಿತ್ರದುರ್ಗ: ಜಾತಿ, ಧರ್ಮದ ವಿಚಾರಗಳನ್ನು ಕೆದಕಿ ಸಮಾಜದ ಶಾಂತಿ ಕದಡಲು ಪ್ರಯತ್ನಿಸುವ ರಾಜ್ಯ ಬಿಜೆಪಿ ನಾಯಕರು ಕೇಂದ್ರ ಸರ್ಕಾರದ ಮೋಸದ ಬಗ್ಗೆ ಮಾತನಾಡುತ್ತಿಲ್ಲ. ಸಂಸದರು ಮೌನಕ್ಕೆ ಶರಣಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಗಟ್ಟಿ ಧ್ವನಿಯಲ್ಲಿ ಕೇಳುವ ಶಕ್ತಿ ಇಲ್ಲವೇ ಎಂದು ಕೆಪಿಸಿಸಿ ಆರೋಗ್ಯ ಹಸ್ತ ಕಾರ್ಯಕ್ರಮದ ಅಧ್ಯಕ್ಷ ಆರ್‌. ಧ್ರುವನಾರಾಯಣ ಪ್ರಶ್ನಿಸಿದರು.

Advertisement

ಆರೋಗ್ಯ ಹಸ್ತ ಅಭಿಯಾನದ ಬಗ್ಗೆ ಕಾರ್ಯ ಕರ್ತರಿಗೆ ಆಯೋಜಿಸಿದ್ದ ತರಬೇತಿ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕರ್ನಾಟಕದ ಪಾಲಿನ ಜಿಎಸ್‌ಟಿ ಹಣವನ್ನು ನೀಡದಿದ್ದರೆ ಕೇಂದ್ರ ಸರ್ಕಾರದ ವಿರುದ್ಧ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು. ರಾಜ್ಯದ ಜನರ ಬೆವರಿನ ಹನಿ ನಷ್ಟವಾಗಲು ಕಾಂಗ್ರೆಸ್‌ ಬಿಡುವುದಿಲ್ಲ. ರಾಜ್ಯ ಸರ್ಕಾರ ಜಿಎಸ್‌ಟಿ ನಷ್ಟ ಪರಿಹಾರ ಕೇಳುವ ಬದಲು ಸಾಲ ಮಾಡಲು ಮುಂದಾಗಿದೆ ಎಂದು ಕಿಡಿ ಕಾರಿದರು.

ತೆರಿಗೆ ಪಾವತಿಯಲ್ಲಿ ಕರ್ನಾಟಕ ದೇಶದಲ್ಲೇ 3ನೇ ಸ್ಥಾನದಲ್ಲಿದೆ. 4 ತಿಂಗಳಲ್ಲಿ ರಾಜ್ಯಕ್ಕೆ 13,764 ಕೋಟಿ ತೆರಿಗೆ ಹಣ ಬರಬೇಕಿತ್ತು. ಆದರೆ ರಾಜ್ಯದ ಪಾಲು ನೀಡದೇ ಕೇಂದ್ರ ಸರ್ಕಾರ ಕನ್ನಡಿಗರನ್ನು ವಂಚಿಸಿದೆ. ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾದ ಆರ್ಥಿಕ ಸಚಿವೆ ನಿರ್ಮಲಾ ಸೀತಾರಾಮನ್‌ ಕರ್ನಾಟಕದ ಜನರನ್ನು ವಂಚಿಸುತ್ತಿದ್ದಾರೆ. ನೆರೆ ಸಂದರ್ಭದಲ್ಲಿ ಅನುಸರಿಸಿದ ತಾರತಮ್ಯವನ್ನು ಕನ್ನಡಿಗರು ಮರೆತಿಲ್ಲ ಎಂದರು.

ಕೋವಿಡ್‌ ನಿರ್ವಹಣೆಯಲ್ಲಿ ಅನುಸರಿಸಿದ ಅವೈಜ್ಞಾನಿಕ ನಿಯಮಗಳಿಂದ ಸೋಂಕು ಹೆಚ್ಚಾಗಿದೆ. ಈ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯಸರ್ಕಾರಗಳೆರಡೂ ಸಂಪೂರ್ಣ ವಿಫಲವಾಗಿವೆ. ಸೋಂಕಿತರ ಪಟ್ಟಿಯಲ್ಲಿ ಕರ್ನಾಟಕ ದೇಶದಲ್ಲಿ 4ನೇ ಸ್ಥಾನ ಪಡೆದರೆ ಭಾರತ ವಿಶ್ವದಲ್ಲಿ ಭಾರತ 3ನೇ ಸ್ಥಾನದಲ್ಲಿದೆ. ಇದರಿಂದಾಗಿಯೇ ದೇಶ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎಂದು ದೂರಿದರು. ಜಿಡಿಪಿ ದರ ಶೇ. 23ರಷ್ಟು ಕುಸಿದಿದೆ. ಜನರ ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕಾಗಿದ್ದ ಪ್ರಧಾನಿ ಮನ್‌ ಕೀ ಬಾತ್‌ ಕಾರ್ಯಕ್ರಮದಲ್ಲಿ ಗೊಂಬೆಗಳ ಬಗ್ಗೆ ಮಾತನಾಡುತ್ತ ಕಾಲಾಹರಣ ಮಾಡುತ್ತಿದ್ದಾರೆ. ಭಾರತ ಹಸಿವಿನಿಂದ ನರಳುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಂಸದ ಬಿ.ಎನ್‌. ಚಂದ್ರಪ್ಪ ಮಾತನಾಡಿ, ರಾಜ್ಯದ ಜನರು 26 ಬಿಜೆಪಿ ಸಂಸದರನ್ನು ಆಯ್ಕೆ ಮಾಡಿ ಸಂಸತ್ತಿಗೆ ಕಳುಹಿಸಿದ್ದಾರೆ. ಅಲ್ಲಿ ಕ್ಷೇತ್ರಕ್ಕಾಗಿ ಕೆಲಸ ಮಾಡುವ ಬದಲು ಸಂಸದರು ಕೆರೆಗೆ ಬಾಗಿನ ಬಿಟ್ಟು ಕೀಳು ಮಟ್ಟದ ರಾಜಕಾರಣದಲ್ಲಿ ತೊಡಗಿದ್ದಾರೆ ಎಂದು ದೂರಿದರು.

Advertisement

ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್‌ ಪೀರ್‌, ಜಿಪಂ ಅಧ್ಯಕ್ಷೆ ಶಶಿಕಲಾ ಸುರೇಶಬಾಬು, ಶಾಸಕ ಟಿ.ರಘುಮೂರ್ತಿ, ಮಾಜಿ ಶಾಸಕರಾದ ಬಿ.ಜಿ.ಗೋವಿಂದಪ್ಪ, ಉಮಾಪತಿ, ತಿಪ್ಪೇಸ್ವಾಮಿ, ಜಯಮ್ಮ ಬಾಲರಾಜ್‌, ಕಾಂಗ್ರೆಸ್‌ ವೈದ್ಯರ ಘಟಕದ ಅಧ್ಯಕ್ಷ ಡಾ.ರಾಘವೇಂದ್ರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next