ಶಿಲ್ಲಾಂಗ್: ಮೇಘಾಲಯದ ಉಮ್ರಾಯ್ ಸೇನಾ ನೆಲೆಯಲ್ಲಿ ಸಂಶೋಧನ ತಂಡವೊಂದು ಹೊಸ ಪ್ರಭೇದದ ಹಲ್ಲಿಯನ್ನು ಪತ್ತೆ ಹಚ್ಚಿದ್ದು, ಅದಕ್ಕೆ ಸೇನೆಯ ಹೆಸರನ್ನೇ ಇಟ್ಟಿದೆ.
ಗುವಾಹಾಟಿ ಮೂಲದ ತಂಡ ಪತ್ತೆ ಹಚ್ಚಿರುವ ಹಲ್ಲಿಗೆ ಸಿರ್ಟೊಡಾಕ್ಟಿಲಸ್ ಎಕ್ಸರ್ಸಿಟಸ್(ಲಾಟಿನ್ ಭಾಷೆಯಲ್ಲಿ ಎಕ್ಸರ್ಸಿಟಸ್ ಅಂದರೆ ಸೇನೆ ಎಂದರ್ಥ) ಎಂದು ಹೆಸರಿಡಲಾಗಿದೆ.
“ಸಿರ್ಟೊಡಾಕ್ಟಿಲಸ್ ವಿಶ್ವಾದ್ಯಂತ ಒಟ್ಟು 320 ಪ್ರಭೇದವನ್ನು ಹೊಂದಿದೆ. ಈಗ ಪತ್ತೆಯಾಗಿರುವ ಸಿರ್ಟೊಡಾಕ್ಟಿಲಸ್ ಎಕ್ಸರ್ಸಿಟಸ್ ವಿಶ್ವದಲ್ಲಿ ಪತ್ತೆಯಾದ ಅತ್ಯಂತ ವಿಶೇಷ ಪ್ರಭೇದದಲ್ಲಿ 3ನೇ ಸ್ಥಾನದಲ್ಲಿದೆ.
ತಾಯ್ನಾಡಿಗೆ ಸೇನೆಯ ನಿಸ್ವಾರ್ಥ ಸೇವೆಯನ್ನು ಗುರುತಿಸಿ, ಈ ಪ್ರಭೇದಕ್ಕೆ ಸೇನೆಯ ಹೆಸರನ್ನೇ ಇಡಲಾಗಿದೆ’ ಎಂದು ಸಂಶೋಧನೆ ಮಾಡಿರುವ ಹೆಲ್ಪ್ ಅರ್ಥ್ ತಂಡದ ಸದಸ್ಯರಾಗಿರುವ ಹರ್ಪಿಟಾಲಜಿಸ್ಟ್ ಜಯಾಧಿತ್ಯ ಪುರಕಾಯಸ್ಥ ತಿಳಿಸಿದ್ದಾರೆ.
ಈ ಹಿಂದೆ ಇದೇ ತಂಡ ಮಿಜೋರಾಂನ ಸಿಯಾಹಾ ಜಿಲ್ಲೆಯಲ್ಲಿ ಮತ್ತೊಂದು ಪ್ರಭೇದದ ಹಲ್ಲಿಯನ್ನು ಪತ್ತೆ ಹಚ್ಚಿದ್ದು, ಅದಕ್ಕೆ ಅದೇ ಜಿಲ್ಲೆಯ ಹೆಸರನ್ನು ಇಟ್ಟಿತ್ತು.