Advertisement

ದಂಡ ಪ್ರಯೋಗದ ಮದ್ದು ಭಾರತದಿಂದ ತಕ್ಕ ಪ್ರತ್ಯುತ್ತರ

11:33 AM May 24, 2017 | |

ಪಾಕಿಸ್ಥಾನ ತನ್ನ ಹಳೆಯ ಚಾಳಿಯನ್ನು ಮುಂದುವರಿಸಿದರೆ ಉಭಯ ದೇಶಗಳ ಬಾಂಧವ್ಯದ ಜತೆಗೆ ಶಾಂತಿಗೂ ಭಂಗ ಬರಲಿದೆ. ಭಾರತೀಯ ಸೇನೆಯ ತಾಳ್ಮೆಗೂ ಮಿತಿಯಿದೆ ಅನ್ನುವ ಸಂದೇಶವನ್ನು ಈ ದಾಳಿ ರವಾನಿಸಿದೆ. 

Advertisement

ಒಂದೆಡೆಯಿಂದ ಪಾಕಿಸ್ಥಾನ ಗಡಿಯಲ್ಲಿ ಪದೇಪದೇ ಕದನ ವಿರಾಮ  ಉಲ್ಲಂಘಿಸಿ ಭಾರತೀಯ ಭದ್ರತಾ ಪಡೆಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಲೇ ಬಂದಿದ್ದರೆ ಮತ್ತೂಂದೆಡೆಯಿಂದ ಸಶಸ್ತ್ರ ನುಸುಳು ಕೋರರಿಗೆ ನೆರವು ನೀಡುವ ಮೂಲಕ ಪರೋಕ್ಷ ಯುದ್ಧ ಸಾರಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಇದೀಗ ಕಾಶ್ಮೀರದ ಗಡಿ ಭಾಗವಾದ ಜೌರಿಯಾ- ನೌಶೇರಾ ಸೆಕ್ಟರ್‌ನಲ್ಲಿನ ಪಾಕಿಸ್ಥಾನಿ ಸೇನಾ ನೆಲೆಗಳ ಮೇಲೆ ಫಿರಂಗಿ ದಾಳಿ ನಡೆಸಿ ಅವುಗಳನ್ನು ನಾಶ ಮಾಡಿರುವುದು ತಕ್ಕ ಪ್ರತ್ಯುತ್ತರ. ದಂಡ ಪ್ರಯೋಗದಿಂದಾದರೂ ಪಾಕ್‌ ತಕ್ಕಮಟ್ಟಿಗಿನ ಪಾಠ ಕಲಿತೀತೇ ಎಂದು ಕಾದುನೋಡಬೇಕಾಗಿದೆ.

ಕಾಶ್ಮೀರ ಕಣಿವೆಯಲ್ಲಿ ಇದೀಗ ತಾಪಮಾನ ಹೆಚ್ಚಿರುವುದರಿಂದ ಹಿಮ ಕರಗಲಾರಂಭಿಸಿದೆ. ಪಾಕ್‌ ಪ್ರೇರಿತ ಉಗ್ರರು ಈ ಪರಿಸ್ಥಿತಿಯನ್ನು ಬಳಸಿಕೊಂಡು ಗಡಿಯ ಮೂಲಕ ಭಾರತದೊಳಕ್ಕೆ ನುಸುಳಲು ನಿರಂತರವಾಗಿ ಪ್ರಯತ್ನಿಸುತ್ತಾರೆ. ಪಾಕಿಸ್ಥಾನದ ಪಡೆಗಳು ಗಡಿ ಭಾಗದಲ್ಲಿ ಪದೇ ಪದೇ ಕದನ ವಿರಾಮವನ್ನು ಉಲ್ಲಂ ಸುವ ಮೂಲಕ ಭಾರತೀಯ ಸೇನೆಯ ಗಮನವನ್ನು ಸೆಳೆದು ಉಗ್ರರ ನುಸುಳುವಿಕೆಗೆ ನೆರವಾಗುತ್ತವೆ. ಕಳೆದ ವರ್ಷದ ಸೆಪ್ಟಂಬರ್‌ 29ರಂದು ಪಾಕಿಸ್ಥಾನದ ಈ ವಕ್ರಬುದ್ಧಿಗೆ ಭಾರತೀಯ ಸೇನೆಯ ವಿಶೇಷ ಕಮಾಂಡೋ ಪಡೆಗಳು ಸರ್ಜಿಕಲ್‌ ದಾಳಿಯ ಮೂಲಕ ಪಾಠ ಕಲಿಸಿದ್ದವು.

ಈ ದಾಳಿಯ ಬಳಿಕ ಗಡಿಯಲ್ಲಿ ಉಗ್ರರ ಚಟುವಟಿಕೆಗಳು ಒಂದಿಷ್ಟು ಕಡಿಮೆಯಾಗಿದ್ದವಾದರೂ ಕಳೆದ ಕೆಲ ತಿಂಗಳುಗಳಿಂದೀಚೆಗೆ ನುಸುಳುಕೋರರು ಮತ್ತು ಪಾಕಿಸ್ಥಾನ  ಸೇನೆಯ ಆಟೋಪ ಗಡಿಯಲ್ಲಿ ಹೆಚ್ಚಿದೆ. ಪಾಕಿಸ್ಥಾನದ ಸೇನೆ ಕದನ ವಿರಾಮ ಉಲ್ಲಂ ಸಿದಾಗಲೆಲ್ಲ ಭಾರತೀಯ ಪಡೆಗಳು ಪ್ರತಿ ದಾಳಿ ನಡೆಸಿ ಪಾಕಿಸ್ಥಾನಿ ಯೋಧರನ್ನು ಹಿಮ್ಮೆಟ್ಟಿಸುತ್ತಲೇ ಬಂದಿವೆ. ಆದರೆ ಪಾಕಿಸ್ಥಾನದ ಯೋಧರು ಮತ್ತು ಉಗ್ರರು ಇವುಗಳಿಂದ ಪಾಠ ಕಲಿತಿಲ್ಲ. ಮಾತ್ರವಲ್ಲದೆ ಗಡಿಯಲ್ಲಿ ಹೇಯ ಕೃತ್ಯಗಳನ್ನು ಮುಂದುವರಿಸಿದ್ದಾರೆ. 

ಈಗ ಭಾರತೀಯ ಸೇನೆ ಪಾಕಿಸ್ಥಾನಿ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿ ಧ್ವಂಸಗೈದಿದೆ. ಈ ದಾಳಿಯಲ್ಲಿ ಉಗ್ರರ ಆಶ್ರಯದಾಣವಾಗಿದ್ದ ಪಾಕ್‌ ಸೇನೆಯ ಕೆಲ ಬಂಕರ್‌ಗಳೂ ನಾಶವಾಗಿವೆ ಮತ್ತು ಕೆಲ ಪಾಕಿಸ್ಥಾನಿ ಯೋಧರು ಬಲಿಯಾಗಿದ್ದಾರೆ ಎನ್ನಲಾಗಿದೆ. 

Advertisement

ಉಗ್ರರಿಗೆ ನೆರವು ಮತ್ತು ಆಶ್ರಯ ನೀಡುತ್ತಿರುವ ಪಾಕ್‌ ಸೇನಾ ನೆಲೆಗಳನ್ನೇ ಗುರಿಯಾಗಿಸಿ ಭಾರತೀಯ ಸೇನೆ ನಡೆಸಿರುವ ಈ ದಾಳಿ ಪಾಕಿಸ್ಥಾನ ಕ್ಕೆ ಸ್ಪಷ್ಟ ಸಂದೇಶ ರವಾನಿಸಿದೆ. 

ಭಯೋತ್ಪಾದನೆಗೆ ಪ್ರಚೋದನೆ ಮತ್ತು ಉತ್ತೇಜನ ನೀಡುವುದನ್ನು ನಿಲ್ಲಿಸುವಂತೆ ವಿಶ್ವದ ಹಲವಾರು ರಾಷ್ಟ್ರಗಳು ಪಾಕಿಸ್ಥಾನ ವನ್ನು ಆಗ್ರಹಿಸುತ್ತಲೇ ಬಂದಿವೆಯಾದರೂ ಅದು ತನ್ನ ದುಬುìದ್ಧಿಯನ್ನು ಬಿಟ್ಟಿಲ್ಲ. ಕಾಶ್ಮೀರ ವಿಷಯವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದಾ ಚರ್ಚೆಯಲ್ಲಿರಿಸುವ ಯತ್ನವಾಗಿ ಉಗ್ರರಿಗೆ ಆಶ್ರಯ ಮತ್ತು ನೆರವು ನೀಡುತ್ತಲೇ ಬಂದಿದೆ. ಭಾರತವು ಪಾಕ್‌ನ ಸೇನಾ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿ ಎಚ್ಚರಿಕೆ ನೀಡಿರುವುದು ತಕ್ಕ ಕ್ರಮ. ಪಾಕ್‌ ಉಗ್ರರಿಗೆ ನೆರವು ನೀಡುವುದನ್ನು ನಿಲ್ಲಿಸಬೇಕು ಮತ್ತು ತನ್ನಲ್ಲಿ ಆಶ್ರಯ ಪಡೆದಿರುವ ಉಗ್ರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಬೇಕು.  ಪಾಕಿಸ್ಥಾನ  ಸರಕಾರ ಮತ್ತು ಸೇನೆ ಉಗ್ರರ ದಮನ ಕಾರ್ಯಾಚರಣೆ ಕೈಗೊಂಡದ್ದೇ ಆದಲ್ಲಿ ಕೇವಲ ಗಡಿಯಲ್ಲಿ ಮಾತ್ರವಲ್ಲದೆ ಎರಡೂ ದೇಶಗಳಲ್ಲಿ ಶಾಂತಿ ಕಾಯ್ದುಕೊಳ್ಳಲು ಸಹಕಾರಿ. ಪಾಕಿಸ್ಥಾನ ತನ್ನ ಹಳೆಯ ಚಾಳಿಯನ್ನು ಮುಂದುವರಿಸಿದರೆ ಉಭಯ ದೇಶಗಳ ಬಾಂಧವ್ಯದ ಜತೆಗೆ ಶಾಂತಿಗೂ ಭಂಗ ಬರಲಿದೆ. ಭಾರತೀಯ ಸೇನೆಯ ತಾಳ್ಮೆಗೂ ಮಿತಿಯಿದೆ ಅನ್ನುವ ಸಂದೇಶವನ್ನು ಈಗ ನಡೆದಿರುವ ದಾಳಿ ರವಾನಿಸಿದೆ.

ಇದೆಲ್ಲದರ ಜತೆಗೆ ಇಂಥ ಸಂದರ್ಭಗಳಲ್ಲಿ ಸಾರ್ವಭೌಮತೆಯ ರಕ್ಷಣೆಯ ವಿಚಾರದಲ್ಲಿ ದೇಶ ಸೇನೆಯ ಬೆಂಬಲಕ್ಕೆ ನಿಲ್ಲಬೇಕು. ರಾಜಕೀಯ ಪಕ್ಷಗಳೂ ಇದಕ್ಕೆ ಹೊರತಲ್ಲ. ಜನರು-ರಾಜಕೀಯ ಪಕ್ಷಗಳ ಇಂಥ‌ ನಡೆ ಸಹಜವಾಗಿಯೇ ಸೇನೆಯ ಸ್ಥೈರ್ಯವನ್ನು ಹೆಚ್ಚಿಸಬಲ್ಲುದು ಮಾತ್ರವಲ್ಲದೆ ವೈರಿಗಳಲ್ಲಿ ಒಂದಿಷ್ಟು ಅಳುಕನ್ನು ಸೃಷ್ಟಿಸಬಲ್ಲುದು.

Advertisement

Udayavani is now on Telegram. Click here to join our channel and stay updated with the latest news.

Next