ಬೆಳಗಾವಿ: ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಜ್ಞಾನಾರ್ಜನೆಯ ಕೇಂದ್ರವಾಗಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಆವರಣ ಗುರುವಾರ ಭಾರತೀಯ ಸೇನೆಯ ಭಾವಿ ಯೋಧರ ಕಸರತ್ತಿನ ತಾಣವಾಗಿ ಬದಲಾಗಿತ್ತು. ಕೊರೊನಾ ಹಾವಳಿಯ ಮಧ್ಯೆ ನಡೆಯುತ್ತಿರುವ ಮೊದಲ ದೊಡ್ಡ ಸೇನಾ ಭರ್ತಿ ರ್ಯಾಲಿಯಲ್ಲಿ ಉತ್ಸಾಹದಿಂದ ದಾಖಲೆಯ ಸಂಖ್ಯೆಯಲ್ಲಿ ಭಾಗವಹಿಸಿರುವ ಯುವಕರು ವಿವಿ ಆವರಣದ ಚಿತ್ರವನ್ನೇ ಬದಲಾಯಿಸಿದ್ದರು.
ಸೇನಾ ನೇಮಕಾತಿ ಪ್ರಧಾನ ಕಚೇರಿ ಆಶ್ರಯದಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಮೈದಾನದಲ್ಲಿ ಗುರುವಾರದಿಂದ ಆರಂಭವಾದ ಸೇನಾ ನೇಮಕಾತಿ ರ್ಯಾಲಿಯಲ್ಲಿ ಬೆಳಗಾವಿ, ಕಲಬುರಗಿ ಸೇರಿದಂತೆ ಆರು ಜಿಲ್ಲೆಗಳ ಸಾವಿರಾರು ಅಭ್ಯರ್ಥಿಗಳು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಬೇಕು ಎಂಬ ಮಹದಾಸೆಯಿಂದ ಪಾಲ್ಗೊಂಡಿದ್ದಾರೆ.
ಬೆಳಗಾವಿ, ಕಲಬುರಗಿ, ರಾಯಚೂರು, ಕೊಪ್ಪಳ, ಯಾದಗಿರಿ ಹಾಗೂ ಬೀದರ ಜಿಲ್ಲೆಗಳ 62,217 ಅಭ್ಯರ್ಥಿಗಳು ಈ ರ್ಯಾಲಿಗೆ ತಮ್ಮ ಹೆಸರು ನೋಂದಾಯಿಸಿದ್ದಾರೆ. ಇದರಲ್ಲಿ ಬೆಳಗಾವಿ ಜಿಲ್ಲೆಯೊಂದರಿಂದಲೇ 51,423 ಅಭ್ಯರ್ಥಿಗಳು ಹೆಸರು ನೋಂದಣಿ ಮಾಡಿರುವುದು ವಿಶೇಷ. ಉಳಿದಂತೆ ಕಲಬುರಗಿ ಜಿಲ್ಲೆಯಿಂದ 3007, ಬೀದರ್‌ನಿಂದ 2709, ಕೊಪ್ಪಳದಿಂದ 2909, ರಾಯಚೂರು ಜಿಲ್ಲೆಯಿಂದ 1445 ಹಾಗೂ ಯಾದಗಿರಿಯಿಂದ 724 ಅಭ್ಯರ್ಥಿಗಳು ತಮ್ಮ ಹೆಸರು ನೋಂದಾಯಿಸಿದ್ದಾರೆ.
ಫೆ.15ರವರೆಗೆ ನಡೆಯಲಿರುವ ನೇಮಕಾತಿ ರ್ಯಾಲಿಯಲ್ಲಿ ಪ್ರತಿ ದಿನ ಸುಮಾರು 4800 ಅಭ್ಯರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಗುರುವಾರ ಬೆಳಗ್ಗೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಕರ್ನಲ್ ರಾಹುಲ್ ಆರ್ಯ ಮತ್ತು ಬ್ರಿಗೇಡಿಯರ್ ಎ.ಎಸ್. ವಾಳಿಂಬೆ ಸೇನಾ ನೇಮಕಾತಿ ರ್ಯಾಲಿಗೆ ಹಸಿರು ನಿಶಾನೆ ತೋರಿಸಿದರು.
ನಂತರ ಮಾತನಾಡಿದ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ, ಆರು ಜಿಲ್ಲೆಗಳಿಗೆ ಸಂಬಂಧಪಟ್ಟ ಈ ಸೇನಾ ಭರ್ತಿ ರ್ಯಾಲಿಯನ್ನು ಅಚ್ಚುಕಟ್ಟಾಗಿ ನಡೆಸಲಾಗುತ್ತಿದ್ದು ಆಯ್ಕೆಗೊಂಡ ಅಭ್ಯರ್ಥಿಗಳಿಗೆ ಸ್ಥಳದಲ್ಲೇ ಪ್ರಮಾಣಪತ್ರ ನೀಡುವ ವ್ಯವಸ್ಥೆ ಮಾಡಲಾಗಿದೆ. ಜಿಲ್ಲಾಡಳಿತದಿಂದ ಎಲ್ಲ ಸಹಾಯ,ಸಹಕಾರ ನೀಡಲಾಗಿದೆ. ಆನ್‌ಲೈನ್ ಮೂಲಕ ಒಟ್ಟು 62,217 ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಅದರಲ್ಲಿ ಬಹುತೇಕ ಅಂದರೆ 51,423 ಅಭ್ಯರ್ಥಿಗಳು ಬೆಳಗಾವಿ ಜಿಲ್ಲೆಗೆ ಸೇರಿದವರಾಗಿದ್ದಾರೆ ಎಂದರು.
ಅಭ್ಯರ್ಥಿಗಳಿಗೆ ಪಾಲಿಕೆ ವತಿಯಿಂದ ಸಂಚಾರಿ ಶೌಚಾಲಯ ಸೇರಿದಂತೆ ಎಲ್ಲ ಅಗತ್ಯ ಸೌಲಭ್ಯ ಒದಗಿಸಲಾಗಿದೆ. ರೈಲ್ವೆ ಮತ್ತು ಬಸ್ ನಿಲ್ದಾಣಗಳಿಂದ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಭಾಗದ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗಲಿ ಎಂಬ ಉದ್ದೇಶದಿಂದ ರ್ಯಾಲಿಗೆ ಜಿಲ್ಲಾಡಳಿತದಿಂದ ಎಲ್ಲ ರೀತಿಯ ನೆರವು ನೀಡಲಾಗಿದೆ. ವಿವಿಧ ಜಿಲ್ಲೆಗಳಿಂದ ಬರುವ ಅಭ್ಯರ್ಥಿಗಳಿಗೆ ಪೀರನವಾಡಿ ಗ್ರಾಮದ ಮೂರು ಕಲ್ಯಾಣ ಮಂಟಪಗಳಲ್ಲಿ ಊಟ, ವಸತಿ ಮತ್ತು ಅಲೊ³àಪಹಾರದ ವ್ಯವಸ್ಥೆ ಮಾಡಲಾಗಿದೆ ಎಂದರು.
ಇದನ್ನೂ ಓದಿ :ರೈತರ 12 ಸಾವಿರ ಕೋಟಿ ರೂ. ಸಾಲ ಮನ್ನಾ: ತಮಿಳುನಾಡು ಸರ್ಕಾರದಿಂದ ಘೋಷಣೆ
ಬ್ರಿಗೇಡಿಯರ್ ಎ.ಎಸ್.ವಾಳಿಂಬೆ ಮಾತನಾಡಿ, ಈ ರ್ಯಾಲಿಯಲ್ಲಿ ಸುಮಾರು 5500 ಅಭ್ಯರ್ಥಿಗಳನ್ನು ನೇಮಕ ಮಾಡಿಕೊಳ್ಳಲಾಗುವುದು. ಆಯ್ಕೆ ಬಳಿಕ ರೆಜಿಮೆಂಟ್‌ನಲ್ಲಿ ಎರಡು ವರ್ಷ ತರಬೇತಿ ನಡೆಯಲಿದ್ದು ನಂತರ ಸೇವೆಗೆ ಸೇರ್ಪಡೆ ಮಾಡಿಕೊಳ್ಳಲಾಗುತ್ತದೆ ಎಂದರು.