ಕೋಲ್ಕತಾ: ಸೇನಾನೆಲೆಗೆ ಮೊದಲ ಬಾರಿಗೆ ನೇಮಕವಾದ ಮಹಿಳಾ ಲೆಫ್ಟಿನೆಂಟ್‌ಗೆ ಸ್ಥಳಕ್ಕೆ ಹೋದಾಗ ಅಚ್ಚರಿಯೊಂದು ಕಾದಿತ್ತು!
ಹೌದು, ಅದು ಅರುಣಾಚಲ ಪ್ರದೇಶದ ತೆಂಗಾದಲ್ಲಿರುವ ಅತ್ಯಂತ ಪ್ರಮುಖ ಸೇನಾ ನೆಲೆ. ಆ ಪೋಸ್ಟ್‌ನ ಹೆಸರು ಆಶಿಶ್ ಟಾಪ್. ಅಲ್ಲಿಗೆ ಇದೇ ಮೊದಲ ಬಾರಿಗೆ ಮಹಿಳಾ ಲೆಫ್ಟಿನೆಂಟ್ ನೇಮಕ ಮಾಡಲಾಗಿದ್ದು, ಅಲ್ಲಿಗೆ ಭೇಟಿ ನೀಡಿದ ಮೊದಲ ದಿನವೇ ಅವರಿಗೆ “ಆಶಿಶ್’ ಹೆಸರು ಗಮನ ಸೆಳೆಯುವಂತೆ ಮಾಡಿತು. ತಕ್ಷಣ, ಏನಿದು ಆಶಿಶ್? ಎಂದಿದ್ದಾರೆ. ಹೆಸರಿನ ಹಿನ್ನೆಲೆ ಕೇಳಿದ ಲೆಫ್ಟಿನೆಂಟ್ ಅವರಿಗೆ ಅಲ್ಲಿಯ ತನಕ ಅದು ತಮ್ಮ ತಂದೆ ಆಶಿಶ್ ದಾಸ್ ನೆನಪಿಗಾಗಿ ಇಟ್ಟ ಹೆಸರೆನ್ನುವುದು ಗೊತ್ತೇ ಇರಲಿಲ್ಲ. ಅರೆ ಕ್ಷಣ ಭಾವೋದ್ವೇಗಕ್ಕೆ ಒಳಗಾದರು.
ಇಂಥದ್ದೊಂದು ವಿಶಿಷ್ಟ ಸನ್ನಿವೇಶಕ್ಕೆ ಆಶಿಶ್ ದಾಸ್ ಪುತ್ರಿ ಸಾಕ್ಷಿಯಾಗಿದರು. ಆಶಿಶ್ ದಾಸ್, ಅಸ್ಸಾಂ ರೆಜಿಮೆಂಟ್‌ನಲ್ಲಿ ಕರ್ನಲ್ ಆಗಿದ್ದಾಗ, 1986ರಲ್ಲಿ ಚೀನಾ ಈ ಭಾಗದಲ್ಲಿ ವಾಸ್ತವ ಗಡಿ ರೇಖೆಯೊಳಗೆ ನುಸುಳಿತ್ತು. ಅರುಣಾಚಲದ ಸುಮ್‌ಡೊರೊಂಗ್ ಚು ಕಣಿವೆಯಲ್ಲಿ ಚೀನಾ ಸೇನೆ ಹೆಲಿಪ್ಯಾಡ್‌ಗಳು ಮತ್ತು ಇತರ ಕಟ್ಟಡಗಳನ್ನು ನಿರ್ಮಿಸಲು ಆರಂಭಿಸಿತ್ತು. ವರ್ಷದ ನಂತರ ಆಗಿನ ಸೇನಾ ಮುಖ್ಯಸ್ಥರಾಗಿದ್ದ ಜ.ಕೆ. ಸುಂದರ್ ಆಪರೇಶನ್ ಫಾಲ್ಕನ್ ಎಂಬ ಕಾರ್ಯಾಚರಣೆ ಆರಂಭಿಸಿದ್ದರು. ಆಗ ಕರ್ನಲ್ ದಾಸ್ ನೇತೃತ್ವ ವಹಿಸಿದ ಪಡೆಯು ಓಣಮ್ ದಿನ ಸೇನಾ ನೆಲೆಗೆ ಆಗಮಿಸುತ್ತಿದ್ದ ವೇಳೆ ಚೀನಾ ಪಡೆ ಗುಂಡಿನ ದಾಳಿ ನಡೆಸಲು ಆರಂಭಿಸಿತ್ತು. ಆಗ ಭಾರತೀಯ ಪಡೆ ಪ್ರತಿದಾಳಿ ನಡೆಸಿ, ಚೀನಾ ಆ ಪ್ರದೇಶದಿಂದ ಹಿಂದಕ್ಕೆ ಸಾಗು ವಂತೆ ಮಾಡಿದ್ದರು. ಜತೆಗೆ, ಆ ಪ್ರದೇಶದಲ್ಲೇ ದಾಸ್ ನೇತೃತ್ವದ ಪಡೆ ನೆಲೆ ಯೂರಿತ್ತು. ವಿಪರೀತ ಹಿಮ ಸುರಿಯುತ್ತಿದ್ದ ಆ ಸಮಯದಲ್ಲಿ ಇವರಿಗೆ ಆಹಾರವೂ ಇರಲಿಲ್ಲ. ಈ ಮಧ್ಯೆ ಉಭಯ ದೇಶಗಳ ಸೇನಾಧಿಕಾರಿಗಳು ಮಾತುಕತೆ ನಡೆಸಿದಾಗ, ಚೀನಾ ಸೋಲೊಪ್ಪಿಕೊಂಡು ಹಿಂದೆಗೆಯಿತು.
ಈ ಯಶಸ್ಸಿನ ನಂತರವೇ ಭಾರತ ಸರ್ಕಾರವು ಅರುಣಾಚಲ ಪ್ರದೇಶವನ್ನು ಕೇಂದ್ರಾಡಳಿತ ಪ್ರದೇಶದ ಬದಲಿಗೆ ಸಂಪೂರ್ಣ ರಾಜ್ಯ ಎಂದು ಘೋಷಿಸಿತು ಎಂದು ಆಶಿಶ್ ದಾಸ್ ನೆನಪಿಸಿಕೊಂಡಿದ್ದಾರೆ.
1986ರಲ್ಲಿ ಈ ಘಟನೆ ನಡೆದು, ಕೆಲವು ವರ್ಷಗಳ ನಂತರ ಆಶಿಶ್ ನಿವೃತ್ತರಾದರು. ಆದರೆ ಆಗಿನ್ನೂ ಪುತ್ರಿ ಜನಿಸಿರಲಿಲ್ಲ. ಅಷ್ಟಕ್ಕೂ ಈ ಪ್ರದೇಶಕ್ಕೆ ತನ್ನ ಹೆಸರನ್ನೇ ಇಟ್ಟಿರುವುದು ಆಶಿಶ್‌ಗೆ ತಿಳಿದಿದ್ದೇ 2003ರಲ್ಲಂತೆ! ಅಂದರೆ 14 ಸಾವಿರ ಅಡಿ ಎತ್ತರದ ಈ ಪ್ರದೇಶದಲ್ಲಿ ಚೀನಾ ಪಡೆ ಹಿಮ್ಮೆಟ್ಟಿಸಿ, ವಶಪಡಿಸಿಕೊಂಡ 17 ವರ್ಷಗಳ ನಂತರ ಅವರಿಗೆ ಈ ವಿಷಯ ತಿಳಿದಿತ್ತು. ಈ ವಿಚಾರವನ್ನು ಅವರು ಕುಟುಂಬದವರಿಗೆ ಹೇಳಿರಲಿಲ್ಲ.