Advertisement

ಹವಾಮಾನ ವೈಪರೀತ್ಯದ ವಿರುದ್ಧ ಸಿಡಿದ ಮಕ್ಕಳ ಸೈನ್ಯ

09:10 AM Sep 26, 2019 | mahesh |

ವಿಶ್ವಸಂಸ್ಥೆ/ಹೊಸದಿಲ್ಲಿ: ಹವಾಮಾನ ವೈಪರೀತ್ಯದ ವಿರುದ್ಧ ಟೊಂಕಕಟ್ಟಿ ಜಾಗತಿಕ ಮಟ್ಟದಲ್ಲಿ ಬೃಹತ್‌ ಪ್ರತಿಭಟನೆಗೆ ಪ್ರೇರಣೆಯಾದ ಯುವ ಹೋರಾಟಗಾರ್ತಿ ಗ್ರೆಟಾ ಥನ್‌ಬರ್ಗ್‌, ತನ್ನಂತೆಯೇ ಉತ್ತಮ ಭವಿಷ್ಯದ ಕನಸು ಕಾಣುತ್ತಿರುವ ಇತರೆ 15 ಪುಟಾಣಿಗಳ ಜತೆಗೆ ಸೇರಿ ಮಂಗಳವಾರ ವಿಶ್ವಸಂಸ್ಥೆಯಲ್ಲಿ ಐದು ದೇಶಗಳ ವಿರುದ್ಧ ದೂರು ಸಲ್ಲಿಸಿದ್ದಾಳೆ.

Advertisement

ಸೋಮವಾರವಷ್ಟೇ ವಿಶ್ವಸಂಸ್ಥೆಯ ಹವಾಮಾನ ವೈಪರೀತ್ಯ ಕುರಿತ ಸೆಷನ್‌ನಲ್ಲಿ “ಹೌ ಡೇರ್‌ ಯೂ'(ನಿಮಗೆಷ್ಟು ಧೈರ್ಯ) ಎಂದು ಜಾಗತಿಕ ನಾಯಕರನ್ನು ಪ್ರಶ್ನಿಸಿ ದಂಗುಬಡಿಸಿದ್ದ 16 ವರ್ಷದ ಬಾಲಕಿ ಥನ್‌ಬರ್ಗ್‌, ಜಾಗತಿಕ ತಾಪಮಾನಕ್ಕೆ ಕಡಿವಾಣ ಹಾಕುವಲ್ಲಿ ವಿಫ‌ಲವಾದ ದೇಶಗಳ ವಿರುದ್ಧ ಸಮರ ಸಾರಿದ್ದಾಳೆ.

ಭಾರತೀಯ ಬಾಲೆಯೂ ಭಾಗಿ: 30 ವರ್ಷಗಳ ಹಿಂದೆಯೇ “ಮಕ್ಕಳ ಹಕ್ಕುಗಳ ಸಮ್ಮೇಳನ’ದಲ್ಲಿ ಜರ್ಮನಿ, ಫ್ರಾನ್ಸ್‌, ಬ್ರೆಜಿಲ್‌, ಅರ್ಜೆಂಟೀನಾ ಮತ್ತು ಟರ್ಕಿ ದೇಶಗಳು ಸಹಿ ಮಾಡಿದ್ದರೂ, ತಮ್ಮ ಹೊಣೆಗಾರಿಕೆಯನ್ನು ನಿಭಾಯಿಸಿಲ್ಲ ಎನ್ನುವುದು ಈ ಮಕ್ಕಳ ದೂರು. ವಿಶೇಷವೆಂದರೆ, ದೂರು ನೀಡಿದ ಈ 16 ಬಾಲ ಹೋರಾಟಗಾರ್ತಿಯರ ಪೈಕಿ ಭಾರತೀಯಳಾದ ರಿಧಿಮಾ ಪಾಂಡೆ ಕೂಡ ಒಬ್ಬಳು. ಹವಾಮಾನ ವೈಪರೀತ್ಯ ತಡೆಯುವಲ್ಲಿ ಸರಕಾರಗಳ ವೈಫ‌ಲ್ಯ ವನ್ನು ಖಂಡಿಸಿರುವ ಈ ಮಕ್ಕಳೆಲ್ಲ 8ರಿಂದ 17ರ ವಯೋಮಾನದವರು. ತಮ್ಮನ್ನು ಹಕ್ಕುಗಳಿಂದ ವಂಚಿ ಸಲಾಗುತ್ತಿದೆ ಎಂದು ಮಕ್ಕಳಿಗೆ ಅನಿಸಿದರೆ ವಿಶ್ವಸಂಸ್ಥೆಯಲ್ಲಿ ದೂರು ನೀಡುವಂಥ ಅವಕಾಶವನ್ನು ಕಲ್ಪಿಸುವ ನಿಯಮ 2014ರಲ್ಲಿ ಜಾರಿಗೆ ಬಂದಿತ್ತು.

ಗ್ರೆಟಾ ಥನ್‌ಬರ್ಗ್‌ ವಿಶ್ವಸಂಸ್ಥೆಯಲ್ಲಿ ಸಿಡಿಲಬ್ಬರದ ಮಾತುಗಳಿಂದ ವಿಶ್ವ ನಾಯಕರಿಗೆ ಬೆವರಿಳಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಅಚ್ಚರಿಯೆಂದರೆ, ಈಕೆಯ ಭಾಷಣದ ಬಳಿಕ ಅಮೆರಿಕ ಹೊರತುಪಡಿಸಿ ವಿಶ್ವಸಂಸ್ಥೆಯ ಎಲ್ಲ ಸದಸ್ಯ ರಾಷ್ಟ್ರಗಳೂ ಮಕ್ಕಳ ಆರೋಗ್ಯ ಮತ್ತು ಹಕ್ಕುಗಳನ್ನು ಸಂರಕ್ಷಿಸುವ ನಿರ್ಣಯ ಕೈಗೊಂಡಿವೆ.

ಭಾಷಣಕ್ಕೆ ಬಾಲಿವುಡ್‌ ಫಿದಾ: ಗ್ರೆಟಾ ಥನ್‌ಬರ್ಗ್‌ ನ್ಯೂಯಾರ್ಕ್‌ನಲ್ಲಿ ಮಾಡಿದ ಭಾಷಣವು ಎಲ್ಲರ ಹುಬ್ಬೇರುವಂತೆ ಮಾಡಿದೆ. ಬಾಲಿವುಡ್‌ ತಾರೆಯರಾದ ಪ್ರಿಯಾಂಕಾ ಛೋಪ್ರಾ, ಅಲಿಯಾ ಭಟ್‌, ಕಾಜೋಲ್‌ ಸೇರಿದಂತೆ ಅನೇಕರು ಗ್ರೆಟಾಗೆ ಬೆಂಬಲ ಸೂಚಿಸಿ ಟ್ವೀಟ್‌ ಮಾಡಿದ್ದಾರೆ. ಸೋಮವಾರದ ಭಾಷಣದ ವೇಳೆ, ಹವಾಮಾನ ವೈಪರೀತ್ಯ ತಡೆಯುವಲ್ಲಿ ವಿಶ್ವಸಮುದಾಯದ ವೈಫ‌ಲ್ಯವನ್ನು ಎತ್ತಿತೋರಿಸಿದ್ದ ಬಾಲಕಿ, “ನಮ್ಮ ಭವಿಷ್ಯವನ್ನು ನಾಶ ಮಾಡಲು ನಿಮಗೆಷ್ಟು ಧೈರ್ಯ’ ಎಂದು ಪ್ರಶ್ನಿಸಿದ್ದಳು. “ನಾನು ಸಾಗರದ ಮತ್ತೂಂದು ಬದಿಯಲ್ಲಿ ಶಾಲೆಗೆ ತೆರಳಬೇಕಿದೆ. ನೀವು ನಿಮ್ಮ ಪೊಳ್ಳು ಮಾತುಗಳಿಂದ ನನ್ನ ಕನಸುಗಳನ್ನು ಕದ್ದಿದ್ದೀರಿ, ನನ್ನ ಬಾಲ್ಯವನ್ನು ಕಿತ್ತುಕೊಂಡಿದ್ದೀರಿ’ ಎಂದು ತರಾಟೆಗೆ ತೆಗೆದುಕೊಂಡಿದ್ದಳು.

Advertisement

“ಗ್ರೇಟ್‌’ ಆದ ಗ್ರೆಟಾ: ತನ್ನ 15ನೇ ವಯಸ್ಸಿನಲ್ಲಿ ಗ್ರೆಟಾ, ಮಾಲಿನ್ಯ ತಡೆಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸುತ್ತಾ ಸ್ವೀಡನ್‌ನ ಸಂಸತ್ತಿನ ಹೊರಗೆ ಪ್ರತಿಭಟನೆ ಮಾಡಿದ್ದಳು. ಇದರಿಂದ ಪ್ರೇರಣೆ ಪಡೆದ ವಿದ್ಯಾರ್ಥಿ ಸಮೂಹವು ಈಗ ಪ್ರತಿಭಟನೆ, ಜಾಗೃತಿ ಕಾರ್ಯಕ್ರಮ  ಕೈಗೊಳ್ಳುತ್ತಿದೆ.

ಭಾರತದಲ್ಲೂ ಪ್ರತಿಭಟನೆ: ಹವಾಮಾನ ವೈಪರೀತ್ಯದ ವಿರುದ್ಧ ಸಾಮೂಹಿಕ ಚಳವಳಿ ರೂಪುಗೊಳ್ಳಬೇಕು ಎಂಬ ಗ್ರೆಟಾಳ ಕರೆಗೆ ವಿಶ್ವಾದ್ಯಂತದ ಮಕ್ಕಳು ಕೈಜೋಡಿಸಲು ಮುಂದಾಗಿದ್ದಾರೆ. ಭಾರತದಲ್ಲೂ 70 ನಗರಗಳ ಶಾಲಾ ವಿದ್ಯಾರ್ಥಿಗಳು ಹವಾಮಾನ ವೈಪರೀತ್ಯ ಖಂಡಿಸಿ ದಿಲ್ಲಿಯ ಭಲ್‌ಸ್ವಾದಲ್ಲಿನ ತ್ಯಾಜ್ಯ ಪರ್ವತದ ಮೇಲೆ ಹತ್ತಲು ಹಾಗೂ ಪ್ರಧಾನಿ ಕಾರ್ಯಾ ಲಯಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ. ಸೆ.27ರಂದು “ಸ್ಟ್ರೈಕ್‌ ಆನ್‌ ದಿ ಸ್ಟ್ರೀಟ್ಸ್‌’ ಹೆಸರಿನಲ್ಲಿ ಈ ಪ್ರತಿಭಟನೆ ನಡೆಯಲಿದೆ.

ಯಾರೀ ರಿಧಿಮಾ ಪಾಂಡೆ?
ವಿಶ್ವಸಂಸ್ಥೆಗೆ ದೂರು ನೀಡಿದ ಬಾಲ ಹೋರಾಟಗಾರರ ಪೈಕಿ ಉತ್ತರಾಖಂಡದ 11 ವರ್ಷದ ರಿಧಿಮಾ ಪಾಂಡೆ ಕೂಡ ಒಬ್ಬಳು. ಈಕೆ ಪರಿಸರ ಹೋರಾಟಗಾರ ದಿನೇಶ್‌ ಪಾಂಡೆ ಅವರ ಪುತ್ರಿ. “ಭವಿಷ್ಯವನ್ನು ಉಳಿಸುವುದೇ ನನ್ನ ಧ್ಯೇಯ. ನನಗೆ ಉತ್ತಮ ಭವಿಷ್ಯ ಬೇಕಾಗಿದೆ. ಅದನ್ನು ಉಳಿಸಿಕೊಳ್ಳಲು ಬಯಸಿದ್ದೇನೆ. ಮುಂದಿನ ತಲೆಮಾರುಗಳ ಎಲ್ಲ ಮಕ್ಕಳ ಭವಿಷ್ಯವನ್ನೂ ಉಳಿಸಬೇಕಾದ್ದು ನಮ್ಮ ಕರ್ತವ್ಯ’ ಎನ್ನುತ್ತಾಳೆ ರಿಧಿಮಾ. 2017ರಲ್ಲಿ ಈಕೆ ಹವಾಮಾನ ವೈಪರೀತ್ಯದ ವಿರುದ್ಧ ಕ್ರಮ ಕೈಗೊಳ್ಳಲಿಲ್ಲ ಎಂದು ಭಾರತ ಸರಕಾರದ ವಿರುದ್ಧವೇ ದೂರು ನೀಡಿದ್ದಳು. ಇಂಗಾಲದ ಹೊರಸೂಸುವಿಕೆಗೆ ಕಡಿವಾಣ ಹಾಕಲು “ಕಾರ್ಬನ್‌ ಬಜೆಟ್‌’ ರೂಪಿಸುವಂತೆ ಹಾಗೂ ರಾಷ್ಟ್ರೀಯ ಹವಾಮಾನ ಚೇತರಿಕೆ ಯೋಜನೆ ಜಾರಿ ಮಾಡುವಂತೆ ಸರಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಆಕೆ ಎನ್‌ಜಿಟಿ ಮೊರೆ ಹೋಗಿದ್ದಳು.

ಮುಖ ಸಿಂಡರಿಸಿಕೊಂಡ ಗ್ರೆಟಾ ಥನ್‌ಬರ್ಗ್‌!
ನ್ಯೂಯಾರ್ಕ್‌ನಲ್ಲಿ ಹವಾಮಾನ ವೈಪರೀತ್ಯ ಕುರಿತು ಮಾತನಾಡಿದ ಗ್ರೆಟಾ ಥನ್‌ಬರ್ಗ್‌ ತನ್ನ ಮುಂದೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಹಾದುಹೋಗುತ್ತಿದ್ದಂತೆ ಮುಖ ಸಿಂಡರಿಸಿಕೊಂಡ ಫೋಟೋವೊಂದು ಈಗ ವೈರಲ್‌ ಆಗಿದೆ. ಅಲ್ಲದೆ, ಟ್ರಂಪ್‌ ಕೂಡ, “ಉಜ್ವಲ ಭವಿಷ್ಯದ ಕನಸನ್ನು ಹೊತ್ತಿರುವ ಖುಷಿ ಖುಷಿಯಾಗಿರುವ ಯುವತಿಯಂತೆ ಆಕೆ ಕಾಣುತ್ತಿದ್ದಾಳೆ’ ಎಂದು ಟ್ವೀಟ್‌ ಮಾಡುವ ಮೂಲಕ, ಆಕೆಯ ಹೋರಾಟದ ಉದ್ದೇಶವನ್ನೇ ಮರೆಮಾಚಿದಂತೆ ಟ್ವೀಟ್‌ ಮಾಡಿದ್ದಾರೆ. ಇದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶವೂ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next