ಬರೇಲಿ(ಉತ್ತರಪ್ರದೇಶ): ವಾಗ್ವಾದ ವಿಕೋಪಕ್ಕೆ ತಿರುಗಿದ ಪರಿಣಾಮ ಟಿಕೆಟ್ ಪರೀಕ್ಷಕ(ಟಿಟಿಇ) ಏಕಾಏಕಿ ಯೋಧರೊಬ್ಬರನ್ನು ಚಲಿಸುತ್ತಿದ್ದ ರೈಲಿನಿಂದ ತಳ್ಳಿದ ಪರಿಣಾಮ ಕಾಲು ತುಂಡಾಗಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಇದನ್ನೂ ಓದಿ:ಇಂದಿನಿಂದ ಆ್ಯಕ್ಷನ್ ‘ಅಬ್ಬರ’; ಮೂವರು ನಾಯಕಿಯರ ಜೊತೆ ಪ್ರಜ್ವಲ್ ಡ್ಯುಯೆಟ್
ದಿಬ್ರುಗಢ್- ನವದೆಹಲಿ ರಾಜಧಾನಿ ಎಕ್ಸ್ ಪ್ರೆಸ್ ರೈಲಿನಲ್ಲಿದ್ದ ಯೋಧ ಸೋನು ಅವರನ್ನು ಟಿಟಿಇ ಬರೇಲಿ ರೈಲ್ವೆ ನಿಲ್ದಾಣದ ಪ್ಲ್ಯಾಟಫಾರ್ಮ್ 2ರ ಬಳಿ ತಳ್ಳಿದ್ದ ಘಟನೆ ನಡೆದಿತ್ತು. ಘಟನೆ ಬಳಿಕ ಟಿಟಿಇ ಸುಪಾನ್ ಬೋರೆ ನಾಪತ್ತೆಯಾಗಿದ್ದು, ಈತನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
“ನಾವು ಸಿಸಿಟಿವಿ ಫೂಟೇಜ್ ಪರಿಶೀಲಿಸುತ್ತಿದ್ದೇವೆ” ಎಂದು ಉತ್ತರ ರೈಲ್ವೆಯ ಮೊರದಾಬಾದ್ ಡಿವಿಷನ್ ನ ಹಿರಿಯ ಹಣಕಾಸು ಮ್ಯಾನೇಜರ್ ಸುಧೀರ್ ಸಿಂಗ್ ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.
ಟಿಕೆಟ್ ವಿಚಾರದಲ್ಲಿ ಟಿಟಿಇ ಬೋರೆ ಮತ್ತು ಸೋನು ನಡುವೆ ಗಲಾಟೆ ನಡೆದಿರುವುದಾಗಿ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ವಾಗ್ವಾದ ವಿಕೋಪಕ್ಕೆ ತಿರುಗಿದ ವೇಳೆ ಬೋರೆ ಯೋಧ ಸೋನು ಅವರನ್ನು ತಳ್ಳಿದ ಪರಿಣಾಮ ಅವರು ರೈಲಿನ ಕೆಳಕ್ಕೆ ಸಿಲುಕಿಕೊಂಡಿದ್ದು, ಕಾಲು ತುಂಡಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಚಿಂತಾಜನಕ ಸ್ಥಿತಿಯಲ್ಲಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.