ಮೈಸೂರು: ಬಂಡೀಪುರ, ನಾಗರಹೊಳೆ ಸೇರಿದಂತೆ ಮೈಸೂರು ಭಾಗದ ಅರಣ್ಯ ಪ್ರದೇಶದಲ್ಲಿ ಉಂಟಾಗುವ ಕಾಡ್ಗಿಚ್ಚನ್ನು ನಂದಿಸಲು ಶೀಘ್ರವೇ ಸೇನಾ ಹೆಲಿಕಾಪ್ಟರ್ ನೀಡುವಂತೆ ರಕ್ಷಣಾ ಸಚಿವರಿಗೆ ಮನವಿ ಮಾಡಲಾಗಿದೆ ಎಂದು ಅರಣ್ಯ ಸಚಿವ ಸಿ.ಸಿ.ಪಾಟೀಲ್ ಹೇಳಿದರು.
ಮೈಸೂರು ಮೃಗಾಲಯದಲ್ಲಿ ಜೋಡಿ ಹೂಲಾಕ್ ಗಿಬ್ಬನ್ ವಾನರ ಪ್ರಬೇಧವನ್ನು ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ವರ್ಷ ಸರಿಯಾದ ಕ್ರಮ ಕೈಗೊಳ್ಳದ ಪರಿಣಾಮ ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ 70 ಎಕರೆಯಷ್ಟು ಅರಣ್ಯ ನಾಶವಾಗಿತ್ತು.
ಈ ಹಿನ್ನೆಲೆಯಲ್ಲಿ ಸೇನಾ ಹೆಲೆಕಾಪ್ಟರ್ ಒದಗಿಸಲು ರಕ್ಷಣಾ ಸಚಿವರೊಂದಿಗೆ ಚರ್ಚಿಸಲಾಗಿದ್ದು, ಕಾಪ್ಟರ್‌ನ್ನು ನಿರ್ವಹಣೆ ಮಾಡಲು ಅದಕ್ಕೆ ತಗಲುವ ವೆಚ್ಚದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ನಿರ್ವಹಣೆಗೆ ಹೆಚ್ಚು ಖರ್ಚು ಆಗುವುದಿಲ್ಲ ಎಂದು ತಿಳಿಸಿದ್ದಾರೆ. ಹೀಗಾಗಿ, ಮೈಸೂರು ಏರ್‌ಬೇಸ್‌ಗೆ ಶಾಶ್ವತವಾಗಿ ಸೇನಾ ಹೆಲಿಕಾಪ್ಟರ್ ಒದಗಿಸುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಹಿಮವದ್ ಗೋಪಾಲಸ್ವಾಮಿ ಬೆಟ್ಟದಲ್ಲಿ ಕಳೆದ ವರ್ಷ ಪೈರ್‌ಲೈನ್ ಗುರುತಿಸಿರಲಿಲ್ಲ. ಇದರಿಂದ ಕಾಡ್ಗಿಚ್ಚಿನಿಂದ ಅಪಾರ ಹಾನಿಯಾದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಅಧಿಕಾರಿಗಳು ಈಗಾಗಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ರಸ್ತೆ ಬದಿಯಲ್ಲಿರುವ ಹುಲ್ಲಿಗೆ ಬೆಂಕಿ ಹೊತ್ತಿಕೊಂಡು ಇಡೀ ಅರಣ್ಯಕ್ಕೆ ವ್ಯಾಪಿಸಿತ್ತು. ಹೀಗಾಗಿ, ಈ ಬಾರಿ ರಸ್ತೆ ಬದಿಯ ಹುಲ್ಲನ್ನು ಸುಟ್ಟು ಸ್ವಚ್ಛಗೊಳಿಸಲಾಗಿದೆ.
ಕಾಡಂಚಿನ ಜನರು ಬೆಂಕಿ ನಂದಿಸಲು ಅರಣ್ಯ ಇಲಾಖೆಗೆ ಹೆಚ್ಚು ಸಹಾಯ ಮಾಡುತ್ತಾರೆ. ಅವರಿಗೆ ಸರಕಾರದಿಂದ ನೀಡಲಾಗುವ ಸೌಲಭಗಳನ್ನು ನೀಡಲಾಗುತ್ತದೆ ಎಂದು ಹೇಳಿದರು. ವನ್ಯ ಪ್ರಾಣಿ ಮತ್ತು ಮಾನವ ಸಂಘರ್ಷ, ಕಾಡಂಚಿನ ಗ್ರಾಮದಲ್ಲಿ ಬೆಳೆ ಹಾನಿ ತಡೆಯಲು ಆನೆ ಕಂದಕಗಳನ್ನು ಮಾಡಲಾಗುತ್ತದೆ. ಕೆಲವೆಡೆ ಸೋಲಾರ್ ಬೇಲಿ ಅಳವಡಿಸಲಾಗಿದೆ ಎಂದರು.