Advertisement

ಸೇನಾ ಹಿಡಿತದಲ್ಲಿ ಮಣಿಪುರ: ಹೆಚ್ಚುವರಿ ಸಶಸ್ತ್ರ ಪಡೆಗಳ ನಿಯೋಜನೆ

10:50 PM May 05, 2023 | Team Udayavani |

ಇಂಫಾಲ/ಹೊಸದಿಲ್ಲಿ: ಬುಡಕಟ್ಟು ಪಂಗಡ ಮತ್ತು ಮೈತೇಯಿ ಸಮುದಾಯದ ನಡುವಿನ ಸಂಘರ್ಷದ ಕಾರಣ ಮೂರು ದಿನಗಳಿಂದ ಮಣಿಪುರದಲ್ಲಿ ಹಿಂಸಾಚಾರ ನಡೆಯುತ್ತಿದ್ದರೂ, ಶುಕ್ರವಾರ ತುಸು ಶಾಂತವಾಗಿದೆ. ಮಣಿಪುರ ಸರಕಾರ ಕಂಡಲ್ಲಿ ಗುಂಡು ಆದೇಶ ನೀಡಿರುವುದರಿಂದ ರಸ್ತೆಗಿಳಿಯಲು ಜನ ಹಿಂದೇಟು ಹಾಕುತ್ತಿದ್ದಾರೆ. ಇಷ್ಟರ ನಡುವೆ ರಾಜಧಾನಿ ಇಂಫಾಲದಲ್ಲಿ ಶುಕ್ರವಾರದ ಮಟ್ಟಿಗೆ ಪರಿಸ್ಥಿತಿ ಶಾಂತವಾಗಿದ್ದರೂ, ಬಿಗುವಿನಿಂದ ಕೂಡಿದೆ. ಇನ್ನು ಚುರಾಚಾಂದಪುರದ ಕಂಗಾವಿ ಎಂಬಲ್ಲಿ ಉಗ್ರ ಸಂಘಟನೆಗಳು ಮತ್ತು ಭದ್ರತ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಇದರ ಜತೆಗೆ ನಾರ್ತ್‌ ಈಸ್ಟ್‌ ಫ್ರಾಂಟಿಯರ್‌ ರೈಲ್ವೇ ಮಣಿಪುರ ರಾಜಧಾನಿ ಇಂಫಾಲ ಮತ್ತು ಆ ರಾಜ್ಯದ ಇತರ ಭಾಗಗಳಿಗೆ ತೆರಳುವ ಎಲ್ಲ ರೈಲುಗಳ ಸಂಚಾರವನ್ನು ರದ್ದುಗೊಳಿಸಿದೆ.

Advertisement

ಭೂಸೇನೆಗೆ ಪರಿಸ್ಥಿತಿಯ ನಿಯಂತ್ರಣದ ಉಸ್ತುವಾರಿಯನ್ನು ವಹಿಸಲಾಗಿದ್ದು, ಅದರ ಹೇಳಿಕೆಯ ಪ್ರಕಾರ ಸದ್ಯಕ್ಕೆ ರಾಜ್ಯದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಇಡೀ ರಾಜ್ಯದಲ್ಲಿನ ಪರಿಸ್ಥಿತಿ ನಿಭಾಯಿಸುವ ನಿಟ್ಟಿನಲ್ಲಿ ಹೆಚ್ಚುವರಿ ಪಡೆಗಳನ್ನು ಕರೆಯಿಸಿಕೊಳ್ಳಲಾಗಿದೆ ಎಂದು ಭೂಸೇನೆ ಟ್ವೀಟ್‌ನಲ್ಲಿ ತಿಳಿಸಿದೆ. ಹೆಚ್ಚು ಗಲಾಟೆ, ಅಹಿತಕರ ಘಟನೆಗಳಿಗೆ ತುತ್ತಾಗಿರುವ ಕಾಂಗ್‌ಪೋಕಿ³ ಮತ್ತು ಮೋರೆ ಎಂಬಲ್ಲಿ ಪರಿಸ್ಥಿತಿಯನ್ನು ತಹಬದಿಗೆ ತರಲಾಗಿದೆ ಎಂದೂ ಭೂಸೇನೆ ವಿವರಿಸಿದೆ. ಭೂಸೇನೆ ಮತ್ತು ಅರೆಸೇನಾ ಪಡೆಗಳ 9 ಸಾವಿರ ಯೋಧರನ್ನು ಹಿಂಸಾ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ನಿಯೋಜಿಸಲಾಗಿದೆ.

ಅಸ್ಸಾಂ ರೈಫ‌ಲ್ಸ್‌ ಮತ್ತು ಭೂಸೇನೆಯ 55 ತುಕಡಿಗಳನ್ನು ನಿಯೋಜಿಸಲಾಗಿದೆ. ಇನ್ನೂ 14 ತುಕಡಿಗಳನ್ನು ಪರಿಸ್ಥಿತ ನಿಯಂತ್ರಣಕ್ಕೆ ಅಗತ್ಯ ಬಿದ್ದರೆ ಬಳಸಿಕೊಳ್ಳುವ ನಿಟ್ಟಿನಲ್ಲಿ ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ. ಐಎಎಫ್ನ ಸಿ17 ಗ್ಲೋಬ್‌ಮಾಸ್ಟರ್‌ ಮತ್ತು ಎಎನ್‌32 ಯುದ್ಧ ವಿಮಾನಗಳ ಮೂಲಕ ಅಸ್ಸಾಂನ ಸುರಕ್ಷಿತ ಪ್ರದೇಶಕ್ಕೆ ಜನರನ್ನು ಕಳುಹಿಸಲಾಗಿದೆ ಎಂದು ಸೇನೆಯ ಹೇಳಿಕೆಯಲ್ಲಿ ತಿಳಿಸಲಾಗಿದೆ. ಪರಿಸ್ಥಿತಿ ನಿಯಂತ್ರಣದ ದೃಷ್ಟಿಯಿಂದ ಮುಂಬಯಿ, ಝಾರ್ಖಂಡ್‌, ಗುಜರಾತ್‌ನಿಂದ ಕ್ಷಿಪ್ರ ಕಾರ್ಯಾಚರಣೆ ಪಡೆಯ ಆರು ತುಕಡಿಗಳು, ಹೊಸದಿಲ್ಲಿ, ಪಂಜಾಬ್‌ನಿಂದ ಬಿಎಸ್‌ಎಫ್, ಸಿಆರ್‌ಪಿಎಫ್ನ ಆರು ತುಕಡಿಗಳನ್ನು ಮಣಿಪುರಕ್ಕೆ ಕಳುಹಿಸಲಾಗಿದೆ. ಈ ನಡುವೆ ಇಂಫಾಲದಲ್ಲಿ ಮತ್ತೆ ಕಾರ್‌ಗೆ ಬೆಂಕಿ ಹಾಕಲಾಗಿದೆ.

ಗುಂಡಿನ ಚಕಮಕಿ: ಈ ಬೆಳವಣಿಗೆಯ ನಡುವೆ ಚುರಾಚಾಂದಾಪುರದ ಕಂಗಾವಿ, ವಿಷ್ಣುಪುರ ಜಿಲ್ಲೆಯ ಪೌಗಾಚಾವೋ, ಇಂಫಾಲ ಪೂರ್ವ ಜಿಲ್ಲೆಯ ದೊಲೈತಾಭಿ ಮತ್ತು ಪುಖಾವೋ ಎಂಬಲ್ಲಿ ವರ್ಗ ಸಂರ್ಘ‌ರ್ಷಕ್ಕೆ ಕಾರಣರಾಗಿರುವ ಉಗ್ರ ಸಂಘ ಟನೆಗಳು ಮತ್ತು ಭದ್ರತ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ.

ಹಿರಿಯ ಅಧಿಕಾರಿಗಳ ನಿಯೋಜನೆ
ಈಶಾನ್ಯ ರಾಜ್ಯದಲ್ಲಿನ ಪರಿಸ್ಥಿತಿ ನಿಭಾಯಿಸುವ ನಿಟ್ಟಿನಲ್ಲಿ ಕೇಂದ್ರೀಯ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್)ಯ ವತಿಯಿಂದ ಡೆಪ್ಯುಟಿ ಇನ್‌ಸ್ಪೆಕ್ಟರ್‌ ಜನರಲ್‌ ಶ್ರೇಣಿಯ ಐವರು, ಹಿರಿಯ ಪೊಲೀಸ್‌ ವರಿಷ್ಠಾಧಿಕಾರಿ, ಪೊಲೀಸ್‌ ವರಿಷ್ಠಾಧಿಕಾರಿ ಶ್ರೇಣಿಯ ಏಳು ಮಂದಿ ಅಧಿಕಾರಿಗಳನ್ನು ಪರಿಸ್ಥಿತಿಯನ್ನು ತಹಬದಿಗೆ ತರುವ ನಿಟ್ಟಿನಲ್ಲಿ ನಿಯೋಜಿಸಲಾಗಿದೆ. ನಿಯೋಜನೆಗೊಂಡ ಅಧಿಕಾರಿಗಳು ಹೊಸದಿಲ್ಲಿಯಲ್ಲಿ ಮತ್ತು ರಾಂಚಿಯಲ್ಲಿ ಇದ್ದು, ಅವರನ್ನು ತತ್‌ಕ್ಷಣವೇ ತೊಂದರೆಗೀಡಾಗಿರುವ ರಾಜ್ಯಕ್ಕೆ ತೆರಳುವಂತೆ ಸೂಚಿಸಲಾಗಿದೆ. ಇದಲ್ಲದೆ ಕೇಂದ್ರ ಸಶಸ್ತ್ರ ಮೀಸಲು ಪೊಲೀಸ್‌ ಪಡೆಯ 20 ಕಂಪೆನಿಗಳನ್ನು ಹೆಚ್ಚುವರಿಯಾಗಿ ಮಣಿಪುರಕ್ಕೆ ಕಳುಹಿಸಲಾಗಿದೆ.

Advertisement

ಮೋದಿ ವಿರುದ್ಧ ಆಕ್ರೋಶ
ಪ್ರಧಾನಿ ನರೇಂದ್ರ ಮೋದಿಯವರು ತತ್‌ಕ್ಷಣವೇ ಕರ್ನಾಟಕದಲ್ಲಿನ ಪ್ರಚಾರ ನಿಲ್ಲಿಸಿ ಮಣಿಪುರದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಮುಂದಾಗಬೇಕು. ಈ ನಿಟ್ಟಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ವಿಫ‌ಲ ಹೊಂದಿರುವುದರಿಂದ ಅವರನ್ನು ವಜಾ ಮಾಡಬೇಕು. ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕು ಎಂದು ಕಾಂಗ್ರೆಸ್‌ನ ವಕ್ತಾರೆ ಸುಪ್ರಿಯಾ ಶ್ರೀನಾತೆ ಒತ್ತಾಯಿಸಿದ್ದಾರೆ.

ಅಮಿತ್‌ ಶಾ ಕಣ್ಗಾವಲು
ಮಣಿಪುರದ ಪರಿಸ್ಥಿತಿಯ ಬಗ್ಗೆ ಕೇಂದ್ರ ಗೃಹಸಚಿವ ಅಮಿತ್‌ ಶಾ ತೀವ್ರ ನಿಗಾ ವಹಿಸಿದ್ದಾರೆ. ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಕುಳಿತುಕೊಂಡು ಮಣಿಪುರದ ಉನ್ನತ ನಾಯಕರು, ಅಧಿಕಾರಿಗಳಿಂದ ಮಾಹಿತಿಗಳನ್ನು ಪಡೆಯುತ್ತಿದ್ದಾರೆ. ಗುರುವಾರ ಒಂದೇ ದಿನ ಅವರು ಎರಡು ವೀಡಿಯೋ ಕಾನ್ಫರೆನ್ಸ್‌ ಗಳನ್ನು ನಡೆಸಿದ್ದಾರೆ. ಇದರಲ್ಲಿ ಮಣಿಪುರ ಮುಖ್ಯಮಂತ್ರಿ, ಮುಖ್ಯ ಕಾರ್ಯದರ್ಶಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next