ಇಸ್ಲಾಮಾಬಾದ್: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ರನ್ನು ಹಣಿಯಲು ಪಾಕ್ ಸರ್ಕಾರ ತನ್ನ ಬತ್ತಳಿಕೆಯ ಎಲ್ಲ ಅಸ್ತ್ರಗಳನ್ನೂ ಪ್ರಯೋಗಿಸುತ್ತಿದ್ದು, ಇದೀಗ ಸೇನಾ ಮಹಾಸ್ತ್ರವನ್ನೇ ಪ್ರಯೋಗಿಸಲು ಮುಂದಾಗಿದೆ. ಖಾನ್‌ಗೆ ಬಹುದೊಡ್ಡ ಶಕ್ತಿಯಾಗಿರುವ ಅವರ ಬೆಂಬಲಿಗರನ್ನೇ ಮೊದಲಿಗೆ ಮಣಿಸಲು ಸೇನೆ ಯೋಜನೆ ರೂಪಿಸಿದ್ದು, ಅವರ ವಿರುದ್ಧ ಸೇನಾ ರಹಸ್ಯ ಕಾಯ್ದೆ 1952ರ ಅನ್ವಯ ಕೇಸು ದಾಖಲಿಸುವ ಪ್ರಸ್ತಾಪಕ್ಕೆ ಮಂಗಳವಾರ ಅನುಮೋದನೆಯನ್ನೂ ಪಡೆದಿದೆ.
ಇಮ್ರಾನ್ ಬಂಧನದ ಬಳಿಕ ಅವರ ಬೆಂಬಲಿಗರು ಸೇನಾನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಿದ್ದರಲ್ಲದೇ ಹಲವು ಮಿಲಿಟರಿ ಸೌಕರ್ಯಗಳನ್ನು ಧ್ವಂಸಗೊಳಿಸಿದ್ದರು. ಇದೀಗ ಪಾಕ್ ಸೇನೆ ಇದನ್ನೇ ಅಸ್ತ್ರವಾಗಿಸಿಕೊಂಡಿದೆ. ದಾಳಿ ನಡೆಸಿದವರ ವಿರುದ್ಧ ಸೇನಾ ರಹಸ್ಯಕಾಯ್ದೆ ಅನ್ವಯ ಕೇಸು ದಾಖಲಿಸಲು ಮೇ 9ರಂದು ಪ್ರಸ್ತಾಪಿಸಿತ್ತು. ಆ ಪ್ರಸ್ತಾವನೆಗೆ ಪಾಕ್ ರಾಷ್ಟ್ರೀಯ ಭದ್ರತಾ ಸಮಿತಿ (ಎನ್‌ಎಸ್) ಅನುಮತಿಸಿದೆ.
ಸರ್ಕಾರವೂ ಕೂಡ ದಾಳಿಕೋರರನ್ನು ಬಂಧಿಸಲು 72 ಗಂಟೆಗಳ ಗಡುವು ನೀಡಿದ್ದು, ಈ ಕಾಯ್ದೆ ಅನ್ವಯ ಬಂಧಿಸಿದ್ದೇ ಆದರೆ ಅಂಥವರಿಗೆ ಜೀವನಪೂರ ಜೈಲುವಾಸ ಕಟ್ಟಿಟ್ಟ ಬುತ್ತಿಯಾಂತಾಗುತ್ತದೆ. ಪ್ರಸ್ತಾವನೆಗೆ ಅನುಮೋದನೆ ದೊರೆಯುತ್ತಿದ್ದಂತೆ ಪಾಕ್‌ನಲ್ಲಿ ತೀವ್ರ ವಿರೋಧವೂ ವ್ಯಕ್ತವಾಗಿದ್ದು, ಮಾನವ ಹಕ್ಕು ಸಂಘಟನೆಗಳು ಕೂಡ ಅನುಮೋದನೆಗೆ ತಾಕೀತು ಮಾಡಿವೆ.
31ರವರೆಗೆ ಖಾನ್‌ಗೆ “ಹೈ” ಜಾಮೀನು
ಇತ್ತೀಚೆಗಷ್ಟೇ ಜಾಮೀನು ಪಡೆದು ನಿರಾಳರಾಗಿರುವ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್‌ಗೆ ಇಸ್ಲಾಮಾಬಾದ್ ಉಚ್ಚ ನ್ಯಾಯಾಲಯ ಮತ್ತೂಂದು ರಿಲೀಫ್ ನೀಡಿದ್ದು, ಖಾನ್ ವಿರುದ್ಧ ದಾಖಲಾಗಿರುವ ಪ್ರಕರಣಗಳಲ್ಲಿ ಅವರನ್ನು ಬಂಧಿಸದಂತೆ ನೀಡಿರುವ ತಡೆಯನ್ನು ಮೇ 31ರವರೆಗೆ ವಿಸ್ತರಿಸಿದೆ. ಖಾನ್ ವಿರುದ್ಧ ದಾಖಲಾಗಿರುವ ಎಲ್ಲ ಪ್ರಕರಣಗಳ ಮಾಹಿತಿ ಕೋರಿ, ಇಮ್ರಾನ್ ಅವರ ಪಕ್ಷ ಪಿಟಿಐ ಪರವಾಗಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಇಸ್ಲಾಮಾಬಾದ್ ಹೈಕೋರ್ಟ್ ವಿಚಾರಣೆ ನಡೆಸಿದೆ. ಈ ವೇಳೆ ಪಾಕಿಸ್ತಾನ ಸರ್ಕಾರ ಪರ ಹಾಜರಾಗಿದ್ದ ಅಟಾರ್ನಿ ಜನರಲ್ ಮಾಹಿತಿ ಸಲ್ಲಿಕೆಗೆ ಕಾಲವಕಾಶ ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಸರ್ಕಾರದ ಮನವಿಗೆ ಸಮ್ಮತಿಸಿದೆ. ಅಲ್ಲದೇ, ವಿಚಾರಣೆಯನ್ನು ಮೇ 31ಕ್ಕೆ ಮುಂದುವರಿಸಿದೆ.