ಮುಂಬೈ: ಅಧಿಕಾರ ದುರ್ಬಳಕೆ ಸೇರಿ ಹಲವು ವಿವಾದಗಳಿಂದ ಪ್ರೊಬೆಷನರಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಸುದ್ದಿಯಲ್ಲಿದ್ದರೆ ಇದೀಗ ಅವರ ತಾಯಿ ಪಿಸ್ತೂಲ್ ಹಿಡಿದು ರೈತರನ್ನು ಬೆದರಿಸಿದ ಹಳೆಯ ವಿಡಿಯೋ ವೈರಲ್ ಆದ ಬೆನ್ನಲ್ಲೇ ಪೂಜಾ ಅವರ ತಂದೆ ದಿಲೀಪ್ ಖೇಡ್ಕರ್ ಹಾಗೂ ತಾಯಿ ಮನೋರಮಾ ಖೇಡ್ಕರ್ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ರೈತರನ್ನು ಬೆದರಿಸಿದ ಪ್ರಕರಣಕ್ಕೆ ಸಂಬಂಧಿಸಿ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 323, 504, 506, 143, 144, 147, 148 ಮತ್ತು 149 ಮತ್ತು ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಮಹಾರಾಷ್ಟ್ರದಾದ್ಯಂತ ಆಸ್ತಿ ಹೊಂದಿರುವ ಖೇಡ್ಕರ್ ಕುಟುಂಬ ಪುಣೆಯ ಮುಲ್ಶಿ ತಹಸಿಲ್‌ನಲ್ಲಿ 25 ಎಕರೆ ಭೂಮಿಯನ್ನು ಖರೀದಿಸಿತ್ತು. ಈ ನಡುವೆ ಇದರ ಅಕ್ಕಪಕ್ಕದಲ್ಲಿರುವ ರೈತರ ಜಮೀನನ್ನು ಖೇಡ್ಕರ್ ಕುಟುಂಬ ಕಬಳಿಸಲು ಯತ್ನಿಸುತ್ತಿದೆ ಎಂದು ರೈತರು ಆರೋಪಿಸಿದ್ದರು ಇದರ ನಡುವೆ ತನ್ನ ಪೂಜಾ ಅವರ ತಾಯಿ ಮನೋರಮಾ ತನ್ನ ಬೌನ್ಸರ್ ಗಳ ಜೊತೆ ಜಮೀನಿಗೆ ಬಂದು ಕೈಯಲ್ಲಿ ಪಿಸ್ತೂಲ್ ಹಿಡಿದು ರೈತರನ್ನು ಗದರಿಸಿದ್ದಾರೆ ಇದರ ವಿಡಿಯೋ ಅಲ್ಲೇ ಇದ್ದ ರೈತರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು ಇದೀಗ ಪೂಜಾ ಖೇಡ್ಕರ್ ವಿಚಾರ ಸುದ್ದಿಯಲ್ಲಿರುವಂತೆ ತಾಯಿ ಮನೋರಮಾ ಅವರ ೨೦೨೩ರ ವಿಡಿಯೋ ಮುನ್ನೆಲೆಗೆ ಬಂದಿದೆ.
ಇನ್ನು ಪುಣೆಯ ಸಹಾಯಕ ಜಿಲ್ಲಾಧಿಕಾರಿಯಾಗಿದ್ದ ಪೂಜಾ ಖೇಡ್ಕರ್ ತಮ್ಮ ಖಾಸಗಿ ಕಾರಿನಲ್ಲಿ ಮೇಲೆ ಐಎಎಸ್ ಅಧಿಕಾರಿಗಳಿಗೆ ಸಿಗುವ ಕೆಂಪು ನೀಲಿ ಬಣ್ಣದ ದೀಪವನ್ನು ಅಳವಡಿಸಿಕೊಂಡಿದ್ದರು. ಜೊತೆಗೆ ಕಾರಿನ ನಂಬರ್ ಪ್ಲೇಟ್ ಮೇಲೆ ‘ಮಹಾರಾಷ್ಟ್ರ ಸರ್ಕಾರ’ ಎಂದು ಬರೆಸಿಕೊಂಡಿದ್ದರು. ಇದ್ಯಾವುದೂ ಪ್ರೊಬೇಷನರಿ ಅವಧಿಯಲ್ಲಿರುವ ಅಧಿಕಾರಿಗಳಿಗೆ ಸಿಗುವ ಸೌಲಭ್ಯಗಳಲ್ಲ. ಆದರೂ ಪೂಜಾ ಈ ಎಲ್ಲ ನಿಯಮಗಳನ್ನು ಉಲ್ಲಂಘಿಸಿ ಇದೀಗ ಸುದ್ದಿಯಲ್ಲಿದ್ದು ಒಂದು ವೇಳೆ ಆರೋಪ ಸಾಬೀತಾದರೆ ಪೂಜಾ ಕರ್ತವ್ಯದಿಂದ ವಜಾಗೊಳ್ಳುವುದು ಪಕ್ಕಾ.