ಬೆಂಗಳೂರು: ಕೋವಿಡ್ ವೈದ್ಯಕೀಯ ಮಾಹಿತಿ ಕಲೆ ಹಾಕಲು ತೆರಳುವ ಆರೋಗ್ಯ, ಆಶಾ ಕಾರ್ಯಕರ್ತೆಯರು ಹಾಗೂ ಇತರ ಸಿಬ್ಬಂದಿಯೊಂದಿಗೆ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಅವಶ್ಯಕತೆ ಕಂಡು ಬಂದಲ್ಲಿ ಸಶಸ್ತ್ರ ಪೊಲೀಸ್ ಪೇದೆಯನ್ನು ನಿಯೋಜಿಸುವಂತೆ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ರಾಜ್ಯ ಸರ್ಕಾರ
ಹೈಕೋರ್ಟ್‌ಗೆ ತಿಳಿಸಿದೆ.
ಕೋವಿಡ್-19 ಕರ್ತವ್ಯಕ್ಕೆ ತೆರಳಿದ್ದ ಆರೋಗ್ಯ ಕಾರ್ಯಕರ್ತರು ಹಾಗೂ ಬಿಬಿಎಂಪಿ ಸಿಬ್ಬಂದಿ ಮೇಲೆ ಪಾದರಾಯನಪುರದಲ್ಲಿ ಹಲ್ಲೆ ನಡೆದ ಘಟನೆ ಹಿನ್ನೆಲೆಯಲ್ಲಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ್ ಅವರಿದ್ದ ವಿಭಾಗೀಯ ನ್ಯಾಯಪೀಠಕ್ಕೆ ಸರ್ಕಾರ ಶುಕ್ರವಾರ ಈ ಮಾಹಿತಿ ನೀಡಿದೆ. ವಿಚಾರಣೆ ವೇಳೆ ನ್ಯಾಯಪೀಠಕ್ಕೆ ಲಿಖೀತ ಹೇಳಿಕೆ ಸಲ್ಲಿಸಿದ ಹೆಚ್ಚುವರಿ ಸರ್ಕಾರಿ ವಕೀಲ ವಿಕ್ರಂ ಹುಯಿಲ್‌ಗೋಳ್, ಪಾದರಾಯನಪುರ ಗಲಭೆ ಸಂಬಂಧ ಜೆಜೆ ನಗರ ಠಾಣೆಯಲ್ಲಿ 5 ಪ್ರತ್ಯೇಕ ಕೇಸ್ ದಾಖಲಿಸಿದ್ದು, 126 ಆರೋಪಿಗಳನ್ನು ಬಂಧಿಸಲಾಗಿದೆ. ಮ್ಯಾಜಿಸ್ಟ್ರೇಟ್ ನಾಯಾಲಯವು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಇತರೆ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ.
ಘಟನಾ ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಘಟನೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿದ್ದು, ಆರೋಗ್ಯ ಕಾರ್ಯಕರ್ತರು ಹಾಗೂ ಇತರ ಸಿಬ್ಬಂದಿ ಕೋವಿಡ್-19 ಕರ್ತವ್ಯಕ್ಕೆ ತೆರಳುವ ಸ್ಥಳದ ಬಗ್ಗೆ ಮಾಹಿತಿ ಪಡೆದು, ಅಲ್ಲಿನ ಸ್ಥಳೀಯ ಪರಿಸ್ಥಿತಿಗೆ ಅನುಗುಣವಾಗಿ ಸಶಸ್ತ್ರ ಪೊಲೀಸ್ ಪೇದೆಯನ್ನು ನಿಯೋಜಿಸುವ ಬಗ್ಗೆ ಎಲ್ಲಾ ಪೊಲೀಸ್ ಠಾಣೆಗಳಿಗೆ ಸೂಚನೆ ನೀಡಲಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಅದನ್ನು ಪರಿಗಣಿಸಿದ ನ್ಯಾಯಪೀಠ ಆರೋಗ್ಯ ಕಾರ್ಯಕರ್ತರು, ವೈದ್ಯರು ಹಾಗೂ ಇತರೆ ಸಿಬ್ಬಂದಿಗೆ ಕೋವಿಡ್-19 ಕರ್ತವ್ಯಕ್ಕಾಗಿ ಎಲ್ಲಿಗೆ ತೆರಳುತ್ತಾರೆ? ಎಂಬ ಬಗ್ಗೆ ಮುಂಚಿತವಾಗಿ ಮಾಹಿತಿ ಪಡೆದು, ಅವರಿಗೆ ತೊಂದರೆಯಾಗದಂತೆ ಮುಂಜಾಗ್ರತಾ ಸಶಸ್ತ್ರ ಪೊಲೀಸರನ್ನು ಭದ್ರತೆಗೆ ಕಳುಹಿಸುವುದು ಸರ್ಕಾರದ ಜವಾಬ್ದಾರಿ ಎಂದು ಸಲಹೆ ನೀಡಿ ವಿಚಾರಣೆ ಮುಂದೂಡಿತು.