ಪಾಟ್ನಾ: ಶಸ್ತ್ರಸಜ್ಜಿತ ದರೋಡೆಕೋರರ ತಂಡ ಹಾಡಹಗಲೇ ಖಾಸಗಿ ಬ್ಯಾಂಕ್ ಗೆ ನುಗ್ಗಿ 1.19 ಕೋಟಿ ರೂಪಾಯಿ ನಗದನ್ನು ದೋಚಿಕೊಂಡು ಹೋಗಿರುವ ಘಟನೆ ಬಿಹಾರದ ಹಾಜಿಪುರ್ ನಲ್ಲಿ ಗುರುವಾರ(ಜೂನ್ 10) ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಬೆಂಕಿ ಇಲ್ಲದೆ ಹೊಗೆಯಾಡದು; ಬಿಎಸ್‍ವೈ, ಹೈಕಮಾಂಡ್ ಎರಡೂ ದುರ್ಬಲ: ಸಿದ್ದರಾಮಯ್ಯ
ಗುರುವಾರ ಬೆಳಗ್ಗೆ ಜುಡುಹಾದಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ್ ರಾಯ್ ಅವರ ನಿವಾಸದ ಸಮೀಪ ಇರುವ ಎಚ್ ಡಿಎಫ್ ಸಿ ಬ್ಯಾಂಕ್ ಶಾಖೆಯಲ್ಲಿ ಈ ಘಟನೆ ನಡೆದಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ವರದಿ ವಿವರಿಸಿದೆ.
ಶಸ್ತ್ರಸಜ್ಜಿತ ಐವರು ಬೈಕ್ ನಲ್ಲಿ ಆಗಮಿಸಿದ್ದು, ಬ್ಯಾಂಕ್ ನೊಳಕ್ಕೆ ನುಗ್ಗಿ ನೌಕರರನ್ನು ಬೆದರಿಸಿ ಕ್ಯಾಶ್ ರೂಂನೊಳಗೆ ತೆರಳಿ 1.19 ಕೋಟಿ ರೂಪಾಯಿ ನಗದನ್ನು ಚೀಲದಲ್ಲಿ ತುಂಬಿಸಿಕೊಂಡು ಪರಾರಿಯಾಗಿದ್ದರು.ಹಣವನ್ನು ಚೀಲಕ್ಕೆ ತುಂಬಿಸಿಕೊಂಡು ಬ್ಯಾಂಕ್ ನಿಂದ ಹೊರ ಹೋಗುತ್ತಿರುವ ದುಷ್ಕರ್ಮಿಗಳ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸಿಸಿಟಿವಿ ಫೂಟೇಜ್ ಅನ್ನು ಪರಿಶೀಲಿಸುತ್ತಿದ್ದು, ಐವರ ಗುರುತು ಪತ್ತೆಹಚ್ಚಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಹಾಡಹಗಲೇ ಈ ದರೋಡೆ ನಡೆದಿದ್ದು, ಆರೋಪಿಗಳನ್ನು ಶೀಘ್ರವೇ ಬಂಧಿಸುವುದಾಗಿ ತಿಳಿಸಿದ್ದಾರೆ. ಕಳೆದ ವಾರ ಮುಝಾಪರ್ ನಗರದಲ್ಲಿನ ಬ್ಯಾಂಕ್ ನಿಂದ 65ಸಾವಿರ ರೂಪಾಯಿ ದೋಚಿಕೊಂಡು ಹೋಗಿರುವ ಘಟನೆ ನಡೆದಿತ್ತು.