ಮಾಸ್ಕೋ: ಉಕ್ರೇನ್ ಜತೆ ಯುದ್ಧದಲ್ಲಿ ತೊಡಗಿರುವ ರಷ್ಯಾಗೆ ಇದೀಗ ದೇಶದೊಳಗೆ ದಂಗೆ ಎದುರಿಸಬೇಕಾದ ಪರಿಸ್ಥಿತಿ ಬಂದಿದೆ. ಪ್ರಬಲ ಕೂಲಿ ಗುಂಪಿನ ವ್ಯಾಗ್ನರ್ ಮುಖ್ಯಸ್ಥ ಸಶಸ್ತ್ರ ದಂಗೆಯನ್ನು ಆರಂಭಿಸಿದ್ದಾರೆ. ವ್ಯಾಗ್ನರ್ ಬಂಧನಕ್ಕೆ ಸರ್ಕಾರ ಆದೇಶಿಸಿದೆ.
ಉಕ್ರೇನ್ ನಲ್ಲಿನ ಯುದ್ಧದ ಕುರಿತು ರಷ್ಯಾದ ಕೂಲಿ ಮುಖ್ಯಸ್ಥ ಯೆವ್ಗೆನಿ ಪ್ರಿಗೊಜಿನ್ ಮತ್ತು ಮಿಲಿಟರಿ ಉನ್ನತ ಅಧಿಕಾರಿಗಳ ನಡುವಿನ ದೀರ್ಘಕಾಲದ ಬಿಕ್ಕಟ್ಟು ಇದೀಗ ಬಹಿರಂಗವಾಗಿದೆ.
ವ್ಯಾಗ್ನರ್ ಗುಂಪು ಸಶಸ್ತ್ರ ದಂಗೆಯೆಂದು ಕ್ರೆಮ್ಲಿನ್ ಆರೋಪಿಸಿದ ನಂತರ, ವ್ಯಾಗ್ನರ್ ಹೋರಾಟಗಾರರು ಉಕ್ರೇನ್ ನಿಂದ ರಷ್ಯಾದ ಗಡಿಯನ್ನು ದಾಟಿದರು. ಮಾಸ್ಕೋದ ಮಿಲಿಟರಿಯ ವಿರುದ್ಧ ಎಲ್ಲಾ ರೀತಿಯ ಹೋರಾಟಕ್ಕೆ ಸಿದ್ದವಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಇದನ್ನೂ ಓದಿ:ಅದ್ಭುತ ಅವಕಾಶ ತಪ್ಪಿಸಿಕೊಂಡರು..: ಟೆಸ್ಟ್ ತಂಡದ ಬಗ್ಗೆ ಗಾವಸ್ಕರ್ ಅಸಮಾಧಾನ
ವ್ಯಾಗ್ನರ್ ಗ್ರೂಪ್ ಕೂಲಿ ಸೈನಿಕರ ಖಾಸಗಿ ಸೈನ್ಯವಾಗಿದ್ದು, ಇದು ಉಕ್ರೇನ್ ನಲ್ಲಿ ಸಾಮಾನ್ಯ ರಷ್ಯಾದ ಸೈನ್ಯದೊಂದಿಗೆ ಹೋರಾಡುತ್ತಿದೆ. ಇತ್ತೀಚಿನ ತಿಂಗಳುಗಳಲ್ಲಿ ಪುಟಿನ್ ಮಿತ್ರರಾಗಿದ್ದ ಪ್ರಿಗೋಜಿನ್ ಅವರ ಸಂಬಂಧ ಮಾಸ್ಕೋದೊಂದಿಗೆ ಉತ್ತಮವಾಗಿಲ್ಲ.
ವ್ಯಾಗ್ನರ್ ನ ಕೂಲಿ ಸೈನಿಕರು ರೋಸ್ಟೋವ್ ನಲ್ಲಿ ಮಿಲಿಟರಿ ಕಟ್ಟಡವನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ. ಈ ದಂಗೆಯೊಂದಿಗೆ, ಮಾಸ್ಕೋದಲ್ಲಿ ಭದ್ರತಾ ಪಡೆಗಳು ಹೈ ಅಲರ್ಟ್ ಘೋಷಿಸಿದವು.
ರೋಸ್ಟೊವ್ ನಲ್ಲಿರುವ ರಷ್ಯಾದ ಅಧಿಕಾರಿಗಳು ವಾಸಿಗಳನ್ನು ಮನೆಯೊಳಗೆ ಇರುವಂತೆ ಕೇಳಿಕೊಂಡಿದ್ದಾರೆ. “ಪ್ರಸ್ತುತ ಪರಿಸ್ಥಿತಿಯಿಂದಾಗಿ, ದಯವಿಟ್ಟು ಸಾಧ್ಯವಾದರೆ ನಗರ ಕೇಂದ್ರಕ್ಕೆ ಹೋಗುವುದನ್ನು ತಪ್ಪಿಸಿ ಮತ್ತು ನಿಮ್ಮ ಮನೆಗಳಲ್ಲಿ ಇರಿ” ಎಂದು ರೋಸ್ಟೊವ್ ಪ್ರದೇಶದ ಗವರ್ನರ್ ಸಲಹೆ ನೀಡಿದರು.