Advertisement
ಉಡುಗೆ ಖರೀದಿಸುವಾಗ ಅದರ ಬಣ್ಣ, ಡಿಸೈನ್, ಮೆಟೀರಿಯಲ್ ಮತ್ತು ಸೈಝ್‌ಗೆ ಮಹತ್ವ ಕೊಡುತ್ತೇವೆಯೇ ಹೊರತು, ತೋಳುಗಳು ಹೇಗಿವೆ ಅನ್ನುವುದಕ್ಕೆ ಅಷ್ಟೊಂದು ಮಹತ್ವ ನೀಡುವುದಿಲ್ಲ ಅಲ್ಲವೇ? ಯಾಕಂದ್ರೆ, ತೋಳುಗಳನ್ನು ಬೇಕಾದಂತೆ ಬದಲಾಯಿಸಿಕೊಳ್ಳಬಹುದು. ಸ್ಲೀವ್‌ಲೆಸ್ ಆಗಿದ್ದರೆ, ತೋಳು ಹೊಲಿಸಬಹುದು. ತೋಳುಗಳು ಸಿಕ್ಕಾಾಪಟ್ಟೆ ಉದ್ದವಾಗಿದ್ದರೆ, ಕತ್ತರಿಸಿ, ಬೇಕಾದ ಉದ್ದಕ್ಕೆ ಆಲ್ಟರ್ ಮಾಡಿಸಬಹುದು. ಆದರೆ, ಇತ್ತೀಚಿನ ಫ್ಯಾಷನ್ ಟ್ರೆಂಡ್‌ಗಳಲ್ಲಿ ಬಟ್ಟೆಯ ತೋಳುಗಳಿಗೆ ಬಹಳ ಮಹತ್ವ ನೀಡಲಾಗುತ್ತಿದೆ.
Related Articles
Advertisement
ಹಿಂದೆಯೂ ಇತ್ತು: ಫ್ಯಾಷನ್ ಲೋಕದಲ್ಲಿ ಯಾವುದೂ ಹೊಸತಲ್ಲ, ಯಾವುದೂ ಹಳೆತಲ್ಲ. ನಿನ್ನೆಯ ಫ್ಯಾಷನ್ ಇಂದಿಗೆ ಹಳತಾಗಿ, ನಾಳೆ ಮತ್ತೆ ಹೊಸರೂಪದಲ್ಲಿ ಬರಬಹುದು ಎಂಬ ಮಾತಿಗೆ ಪವರ್ ಸ್ಲೀವ್ಸ್ ಸಾಕ್ಷಿ. ಯಾಕೆಂದರೆ, ಇದು ಎಪ್ಪತ್ತು- ಎಂಬತ್ತರ ದಶಕದ ಬಹಳ ಪ್ರಸಿದ್ಧ ವಸ್ತ್ರವಿನ್ಯಾಸಗಳಲ್ಲೊಂದು. ಆಗಿನ ಸಿನಿಮಾಗಳಲ್ಲಿ ಹೀರೋಯಿನ್‌ಗಳು ಈ ಬಗೆಯ ಉಡುಪು ಧರಿಸಿದ್ದನ್ನು ನೋಡಬಹುದು.
#ಪವರ್ ಸ್ಲೀವ್ಸ್: ಈ ಬಗೆಯ ದಿರಿಸುಗಳು ಸಾಮಾಜಿಕ ಜಾಲತಾಣಗಳಲ್ಲಿಯೂ ಟ್ರೆಂಡ್ ಆಗುತ್ತಿವೆ. ಪಫಿ, ಫ್ಲೇರ್ಡ್, ಬಲೂನ್ (ಪುಗ್ಗೆ) ಆಕಾರದ, ವಿಂಡ್ (ರೆಕ್ಕೆ) ಆಕಾರದ ಅಥವಾ ಕೇಪ್ (ಬ್ಯಾಟ್‌ಮ್ಯಾನ್, ಸೂಪರ್‌ಮ್ಯಾನ್ ಉಡುಗೆಯಲ್ಲಿ ಕತ್ತಿನಿಂದ ಬೆನ್ನ ಮೇಲೆ ಜೋತಾಡುವ ಬಟ್ಟೆ) ನಂಥ ಆಯ್ಕೆಗಳು ಲಭ್ಯ ಇವೆ. ಯಾರಾದರೂ ಕೊಂಕು ಮಾತಾಡಿದರೆ ಐ ಡೋಂಟ್ ಕೇರ್ ಅನ್ನುವವರು ಇನ್ನೂ ಚಿತ್ರ- ವಿಚಿತ್ರ ತೋಳುಗಳನ್ನು ಹೋಲಿಸುವ ಸಾಹಸಕ್ಕೆ ಕೈ ಹಾಕಬಹುದು! ಇಂಥ ಉಡುಗೆ ತೊಟ್ಟು, ಫೋಟೋ ಕ್ಲಿಕ್ಕಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡುವಾಗ #ಪವರ್ ಸ್ಲೀವ್ಸ್ ಅಂತ ಹಾಕಿ, ಟ್ರೆಂಡ್ ಸೃಷ್ಟಿಸಬಹುದು!
-ಈ ಬಗೆಯ ಡ್ರೆಸ್ ಅನ್ನು ಪಾರ್ಟಿಗಳಿಗೆ ಧರಿಸುತ್ತೀರಾದರೆ, ಬಣ್ಣ ಗಾಢವಾಗಿರಲಿ.-ಆಫೀಸು, ಕಾಲೇಜಿಗೆ ಕಪ್ಪು, ಬಳಿ, ಬೂದು, ನೀಲಿಯಂಥ ಬಣ್ಣಗಳ ಪವರ್ ಸ್ಲೀವ್ಸ್ ಸೂಕ್ತ.
-ಗಾಢ ಕೆಂಪು ಬಣ್ಣದ ಸ್ಲೀವ್ಸ್‌ಗಳು ಬೋಲ್ಡ್ ಲುಕ್ ನೀಡುತ್ತವೆ.
-ತೆಳ್ಳಗಿರುವವರಿಗೆ, ಸಣ್ಣಗಿನ ಸೊಂಟವುಳ್ಳವರಿಗೆ ಈ ಡ್ರೆಸ್ ಹೆಚ್ಚು ಸೂಕ್ತ.
-ಅಗಲವಾದ ಭುಜವುಳ್ಳವರಿಗೆ ಇದು ಅಷ್ಟು ಚೆನ್ನಾಗಿ ಹೊಂದುವುದಿಲ್ಲ. ಯಾಕಂದ್ರೆ, ಪವರ್ ಸ್ಲೀವ್ಸ್‌ಗಳು ಅವರ ಭುಜವನ್ನು ಮತ್ತಷ್ಟು ಅಗಲವಾಗಿ ಕಾಣುವಂತೆ ಮಾಡುತ್ತವೆ.
-ಕೈಗೆ ಯಾವುದೇ ಆ್ಯಕ್ಸೆಸರೀಸ್ ಬೇಡ.
-ದೊಡ್ಡ ಕಿವಿಯೋಲೆ, ಉಂಗುರ, ಸಾಂಪ್ರದಾಯಿಕ ಉಡುಗೆಯಾದರೆ ನೆಕ್‌ಲೇಸ್ ಧರಿಸಿದರೆ ಸಾಕು. * ಅದಿತಿ ಮಾನಸ ಟಿ.ಎಸ್.