Advertisement

ಅರ್ಕಾವತಿ ನದಿಯನ್ನು ಕೊಂದವರು ಯಾರು?

12:17 PM Aug 31, 2020 | Suhan S |

ರಾಮನಗರ: ನಗರದ ಮಧ್ಯಭಾಗದಲ್ಲಿ ಹರಿಯುತ್ತಿರುವ ಅರ್ಕಾವತಿ ನದಿಯನ್ನು ಕೊಂದವರ್ಯಾರು? ಹೀಗೊಂದು ಪ್ರಶ್ನೆ ಜಿಲ್ಲಾ ಕೇಂದ್ರ ರಾಮ ನಗರದಲ್ಲಿ ಉದ್ಭವಿಸಿದೆ.

Advertisement

ಮರಳು ಲೂಟಿಯಾಗಿ ಬರಡು: ಕೆಲವು ದಶಕಗಳ ಹಿಂದೆ ರಾಮನಗರ ನಗರ ಪ್ರದೇಶದ ಮೂಲಕ ಅರ್ಕಾವತಿ ನದಿಶುಭ್ರ ನೀರಿನೊಂದಿಗೆ ಹರಿಯುತ್ತಿತ್ತು. ಮಂಚನಬೆಲೆ ಜಲಾಶಯ ನಿರ್ಮಾಣವಾದ ನಂತರ ನದಿಯಲ್ಲಿ ನೀರು ಹರಿಯುವುದು ನಿಂತಿದೆ. ನದಿಪಾತ್ರದಲ್ಲಿದ್ದ ಮರಳು ಲೂಟಿಯಾಗಿ ಇಡೀ ನದಿ ಪಾತ್ರ ಬರಡಾಗಿದೆ.

ಅರ್ಕಾವತಿ ನದಿ ಮಲೀನ: ಮುಂದೆ ಸಂಗಮದಲ್ಲಿ ಕಾವೇರಿ ನದಿ ಸೇರುವ ತನಕ ರಾಮನಗರ ನಗರ ಸೇರಿದಂತೆ ನದಿಯ ಎರಡೂ ಕಡೆಯ ಗ್ರಾಮಗಳಲ್ಲಿ ಜನಸಂಖ್ಯೆ ಹೆಚ್ಚಾದಂತೆಲ್ಲ ಕಲ್ಮಷ ನೀರು ನದಿಯ ಒಡಲಿಗೆ ಸೇರುತ್ತಿದೆ. ಇಂದು ಅರ್ಕಾವತಿ ನದಿ ಅಕ್ಷರಶಃ ಮಲೀನವಾಗಿದೆ.ಕೇವಲ ಎರಡು ಮೂರು ದಶಕಗಳಲ್ಲಿ ನದಿ ಪಾತ್ರದಲ್ಲಿ ಲಾಳದ ಕಡ್ಡಿ, ಜೊಂಡು ಮುಂತಾದ ಬೇಡದ ಗಿಡಗಳು ಸೊಂಪಾಗಿ ಬೆಳೆದಿದೆ. ವಿಷ ಜಂತುಗಳ ಆವಾಸ ಸ್ಥಾ ನವಾಗಿ ಪರಿಣಮಿಸಿದೆ. ಕೆಲ ತಿಂಗಳ ಹಿಂದೆ ಚಿರತೆಗಳು ಇಲ್ಲಿ ಅಡಗಿ ಕುಳಿತು, ರಾತ್ರಿ ವೇಳೆ ನಗರ ಪ್ರದೇಶದಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು.

ಗಂಭೀರವಾಗಿ ಪರಿಗಣಿಸಲೇ ಇಲ್ಲ!: ರಾಮನಗರ – ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಕೆ.ಶೇಷಾದ್ರಿಯವರು ಆಸಕ್ತಿ ವಹಿಸಿ ನದಿ ಪಾತ್ರದಲ್ಲಿ ಬೆಳೆದಿದ್ದ ಲಾಳದಕಡ್ಡಿ, ಜೊಂಡು ಇತ್ಯಾದಿಯನ್ನು ತೆರವು ಮಾಡಿಸಿದ್ದರು. ಈ ಪ್ರಯತ್ನಗಳೆಲ್ಲ ತಾತ್ಕಾಲಿಕ, ಜೊಂಡು ಮತ್ತೆ ಮತ್ತೆ ಬೆಳೆಯುತ್ತದೆ. ಇದಕ್ಕೆ ವೈಜ್ಞಾನಿಕ ಪರಿಹಾರ ಕಂಡು ಕೊಳ್ಳಬೇಕಾಗಿದೆ ಎಂದು ಅವರು ಅಂದೇ ಸರ್ಕಾರದ ಗಮನ ಸೆಳೆದಿದ್ದರು. ಆದರೆ ಅದನ್ನು ಯಾರು ಗಂಭೀರವಾಗಿ ಪರಿಗಣಿಸಲೇ ಇಲ್ಲ.

20 ಕಡೆಯಿಂದ ನದಿ ಸೇರುತ್ತಿದೆ ಒಳಚರಂಡಿ ನೀರು! : ನಗರ ವ್ಯಾಪ್ತಿಯಲ್ಲಿ ಹರಿಯುತ್ತಿರುವ ಸುಮಾರು 5 ಕಿ.ಮೀ. ಉದ್ದದ ನದಿ ಪಾತ್ರ ಇಂದು ಗಬ್ಬೆದ್ದು ಹೋಗಿದೆ. ಜಿಲ್ಲಾ ಕೇಂದ್ರ ರಾಮನಗರದಲ್ಲಿ ಒಳಚರಂಡಿ ವ್ಯವಸ್ಥೆ ಇದೆ. ಆದರೆ ಅದು ಅವೈಜ್ಞಾನಿಕವಾಗಿದೆ. ನಗರದ ಹೊರವಲಯದಲ್ಲಿರುವ ಯುಜಿಡಿ ನೀರು ಶುದ್ಧೀಕರಣ ಘಟಕಕ್ಕೆ ತಲುಪಬೇಕಾದ ಒಳಚರಂಡಿ ವ್ಯವಸ್ಥೆ ನೀರು ತಲುಪುತ್ತಿಲ್ಲ. 5 ಕಿ.ಮೀ ವ್ಯಾಪ್ತಿಯಲ್ಲಿ ಸುಮಾರು 20 ಕಡೆ ಒಳಚರಂಡಿ ನೀರು ನದಿ ಸೇರುತ್ತಿದೆ ಎಂದು ಬಿಜೆಪಿ ಕಾರ್ಯಕರ್ತರಾದ ಪಿ.ವಿ.ಬದರೀನಾಥ್‌, ಚಂದನ್‌ ಮತ್ತಿತರರು ಪತ್ತೆ ಹಚ್ಚಿದ್ದಾರೆ. ಈ ವಿಚಾರದಲ್ಲಿ ಈ ಕಾರ್ಯಕರ್ತರ ತಂಡ ನಗರಸಭೆಯ ಮಾಜಿ ಸದಸ್ಯ ಬಿ.ನಾಗೇಶ್‌ ನೇತೃತ್ವದಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್‌ ಅವರ ಗಮನ ಸೆಳೆದಿದ್ದಾರೆ.

Advertisement

ಏನಾಗಬೇಕು? :  ಸರ್ಕಾರ ಪರಿಸರ ಕಾಳಜಿ ಮೆರೆಯಬೇಕಾಗಿದೆ. ಇದಕ್ಕೆ ಸ್ಥಳೀಯ ನಗರಸಭೆ, ತಾಲೂಕು ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ನದಿ ಪಾತ್ರದ ಮೂಲಕ ಹಾಳಾಗುತ್ತಿರುವ ಪರಿಸರ ಉಳಿಸಬೇಕಾಗಿದೆ. ನಗರ ವ್ಯಾಪ್ತಿಯ ಯುಜಿಡಿ ವ್ಯವಸ್ಥೆಯನ್ನು ತಕ್ಷಣ ಉನ್ನತೀಕರಿಸಿ, ಕಲ್ಮಷ ನೀರು ನದಿ ಒಡಲನ್ನು ಸೇರದಂತೆ ಎಚ್ಚರ ವಹಿಸಬೇಕು. ಕಲ್ಮಷ ನೀರು ನೇರ ಶುದ್ಧೀಕರಣ ಘಟಕ ಸೇರುವಂತೆ ಅಲ್ಲಿ ನೀರು ಸಂಸ್ಕರಣಗೊಂಡ ನಂತರ ನದಿಪಾತ್ರಕ್ಕೆ ಹರಿ ಬಿಡಬೇಕು ಎಂಬುದು ನಾಗರಿಕರ ಆಶಯ. ಇಲ್ಲದಿದ್ದರೆ ಈ ನದಿ ಕೂಡ ವೃಷಭಾವತಿಯಂತೆ ಆಗುತ್ತದೆ ಎಂದು ಜನತೆ ಎಚ್ಚರಿಸಿದ್ದಾರೆ.

ನಗರ ವ್ಯಾಪ್ತಿಯ ಅರ್ಕಾವತಿ ನದಿಯ ಎರಡೂ ಬದಿಯ ಹದ್ದುಬಸ್ತನ್ನು ಸರ್ವೇ ಮೂಲಕ ಗುರುತಿಸಬೇಕು. ಒತ್ತುವರಿತೆರವುಗೊಳಿಸಬೇಕು. ಕೊಳಚೆ ನೀರು ನದಿ ಸೇರದಂತೆ ಪರಿಹಾರೋಪಾಯ ಕಂಡುಕೊಳ್ಳಬೇಕು. ತಕ್ಷಣಕ್ಕೆ ಲಾಳದ ಕಡ್ಡಿ ಮುಂತಾದ ಗಿಡಗಳನ್ನು ತೆರವುಗೊಳಿಸಿ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿ ಮತ್ತೆ ಬೆಳೆಯದಂತೆ ಕ್ರಮ ವಹಿಸಬೇಕಾಗಿದೆ.  ಬಿ.ನಾಗೇಶ್‌, ನಗರಸಭೆ ಮಾಜಿ ಸದಸ್ಯ

 

ಬಿ.ವಿ.ಸೂರ್ಯ ಪ್ರಕಾಶ್‌

Advertisement

Udayavani is now on Telegram. Click here to join our channel and stay updated with the latest news.

Next