Advertisement

700 ಕೆ.ಜಿ. ಭಾರ ಹೊತ್ತು ಅರ್ಜುನ ತಾಲೀಮು

04:20 PM Oct 04, 2018 | Team Udayavani |

ಮೈಸೂರು: ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಕಾಡಿನಿಂದ ನಾಡಿಗೆ ಬಂದಿರುವ ಗಜಪಡೆ ಸಾರಥಿ ಅರ್ಜುನನಿಗೆ ಬುಧವಾರ ಮರದ ಅಂಬಾರಿ ಹೊರಿಸಿ ತಾಲೀಮು ನಡೆಸಲಾಯಿತು. ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ದಿನಗಣನೆ ಶುರು ವಾಗಿದ್ದು, ನಗರದೆಲ್ಲೆಡೆ ನಾಡಹಬ್ಬಕ್ಕಾಗಿ ಭರ್ಜರಿ ತಯಾರಿ ನಡೆಯುತ್ತಿದೆ. ಅದರಂತೆ ದಸರೆಯ ಪ್ರಮುಖ ಆಕರ್ಷಣೆ ಜಂಬೂಸವಾರಿ ಮೆರವಣಿಗೆ ದಿನ ಚಿನ್ನದ ಅಂಬಾರಿ ಹೊತ್ತು ಸಾಗುವ ಅರ್ಜುನನಿಗೆ ಮರದ ಅಂಬಾರಿ ಕಟ್ಟಿ ತಾಲೀಮು ನಡೆಸಲಾಯಿತು. ಈಗಾಗಲೇ ಗಜಪಡೆಗೆ ವಿವಿಧ ಹಂತಗಳಲ್ಲಿ ತಾಲೀಮು ನೀಡಲಾಗಿದ್ದು, ಜಂಬೂಸವಾರಿ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿ ಹೊರುವ ಅರ್ಜುನನಿಗೆ ಮರದ ಅಂಬಾರಿ ಕಟ್ಟಿ ತಾಲೀಮು ನೀಡಲಾಯಿತು.

Advertisement

ಅಂಬಾವಿಲಾಸ ಅರಮನೆಯ ಎಡಭಾಗದಲ್ಲಿ ಮಾವುತರು, ಕಾವಾಡಿಗಳು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಕ್ರೇನ್‌ ನೆರವಿ ನಿಂದ ಅರ್ಜುನನಿಗೆ ಮರದ ಅಂಬಾರಿಯನ್ನು ಕಟ್ಟಿದರು. ಇದರಲ್ಲಿ 280 ಕೆ.ಜಿ. ತೂಕದ ಮರದ ಅಂಬಾರಿ ಜೊತೆಗೆ, 350 ರಿಂದ 400 ಕೆ.ಜಿ. ತೂಕದ ಮರಳಿನ ಚೀಲ ಹೊರಿಸಲಾಯಿತು. ಒಟ್ಟು ಅರ್ಜುನ 650ರಿಂದ 700 ಕೆ.ಜಿ. ಭಾರ ಹೊತ್ತು ಅರ್ಜುನ ಗಜ ಗಾಂಭೀರ್ಯದಿಂದ ತಾಲೀಮಿನಲ್ಲಿ ಸಾಗಿತು. ಮರದ ಅಂಬಾರಿಯನ್ನು ಹೊತ್ತು ಸಾಗಿದ ಅರ್ಜುನನಿಗೆ ಕುಮ್ಮಿ ಆನೆಗಳಾದ ಚೈತ್ರಾ, ಕಾವೇರಿ, ವಿಜಯ ಸೇರಿದಂತೆ ಇತರ ಆನೆಗಳು ಸಾಥ್‌ ನೀಡಿದವು.ಮರದ ಅಂಬಾರಿ ಹೊತ್ತ ಅರ್ಜುನ ಅರಮನೆಯಿಂದ ನಿರ್ಗಮಿಸುವ ವೇಳೆಗೆ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್‌ ಸ್ಥಳಕ್ಕೆ ಆಗಮಿಸಿ, ಅಂಬಾರಿ ಆನೆಗೆ ನಮಿಸಿದರು. ಅಲ್ಲದೆ ಮರದ ಅಂಬಾರಿ ಕಟ್ಟಿ ತಾಲೀಮು ನೀಡುವ ಮುನ್ನ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು. ಅರಮನೆ ಆವರಣದಿಂದ ಹೊರಟು, ವಿಜಯದಶಮಿಯ ದಿನದಂದು ಜಂಬೂಸವಾರಿ ಮೆರವಣಿಗೆ ಸಾಗುವ ಮಾರ್ಗದಲ್ಲಿ ರಾಜ ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತಾ ಸಾಗಿದ. ದಸರಾ ಆನೆಗಳ ಆಕರ್ಷಣೆಯನ್ನು ಸಾರ್ವಜನಿಕರು ಸಂಭ್ರಮದಿಂದ ಕಣ್ತುಂಬಿಕೊಂಡರು.

ದಸರಾ ಮಹೋತ್ಸವ ಆಹಾರ ಮೇಳದಲ್ಲಿ ನಳಪಾಕ, ಸವಿ ಭೋಜನ ಸ್ಪರ್ಧೆ
ಮೈಸೂರು: ನಾಡಹಬ್ಬ ಮೈಸೂರು ದಸರಾ ಆಹಾರ ಮೇಳದಲ್ಲಿ ನಳಪಾಕ ಸ್ಪರ್ಧೆ ಹಾಗೂ ಸವಿ ಭೋಜನ ಸ್ಪರ್ಧೆ ಆಯೋಜಿಸಲಾಗಿದೆ. ಆಹಾರ ಮೇಳ ನಡೆಯುವ ಜಿಲ್ಲಾಧಿಕಾರಿಗಳ ಕಚೇರಿ ಹಿಂಭಾಗದ ಭಾರತ್‌ ಸ್ಕೌಟ್ಸ್‌ ಮೈದಾನ ಹಾಗೂ ಲಲಿತ್‌ ಮಹಲ್‌ ಹೆಲಿಪ್ಯಾಡ್‌ ಬಳಿಯ ಮುಡಾ ಜಾಗದಲ್ಲಿ ಅ.11ರಿಂದ 17ರ ವರೆಗೆ ಬೆಳಗ್ಗೆ 11.30 ರಿಂದ ಮಧ್ಯಾಹ್ನ 1 ಗಂಟೆವರೆಗೆ ನಳಪಾಕ ಸ್ಪರ್ಧೆ, ಅ.11ರಿಂದ 16ರವರೆಗೆ ಮಧ್ಯಾಹ್ನ 3 ರಿಂದ 4ಗಂಟೆವರೆಗೆ ಸವಿ ಭೋಜನ ಸ್ಪರ್ಧೆ ನಡೆಯಲಿದೆ. 

ನಳಪಾಕ ಸ್ಪರ್ಧೆ: ಅ.11ರಂದು ಅತ್ತೆ – ಸೊಸೆ ವಿಭಾಗದಲ್ಲಿ ಅಕ್ಕಿರೊಟ್ಟಿ ಮತ್ತು ಬದನೆಕಾಯಿ ಎಣ್ಣೆಗಾಯಿ ಮಾಡುವ ಸ್ಪರ್ಧೆ. 12ರಂದು ಗಂಡ-ಹೆಂಡತಿ ವಿಭಾಗದಲ್ಲಿ ರಾಗಿರೊಟ್ಟಿ ಮತ್ತು ಹುಚ್ಚೆಳ್‌ ಚಟ್ನಿ, 13ರಂದು ಯುವಕರ ವಿಭಾಗದಲ್ಲಿ ವೆಜ್‌ಪ್ರೈಡ್‌ ರೈಸ್‌ ಮತ್ತು ಸಲಾಡ್‌, 14ರಂದು ಯುವತಿಯರ ವಿಭಾಗದಲ್ಲಿ ಗೀರೈಸ್‌ ಮತ್ತು ವೆಜ್‌ ಕುರ್ಮ, 15ರಂದು ಹಿರಿಯ ಪುರುಷ – ಮಹಿಳೆಯರ ವಿಭಾಗದಲ್ಲಿ ಸಿರಿಧಾನ್ಯ ಅಡುಗೆ (ವಿವಿಧ ಬಗೆಯ ಮೂರು ಖಾದ್ಯಗಳು), 16ರಂದು
ಮಹಿಳಾ ಸಂಘ ಸ್ತ್ರೀಶಕ್ತಿ ಸಂಘಗಳ ವಿಭಾಗದಿಂದ ಕಾಯಿ ಹೋಳಿಗೆ, ವೆಜ್‌ ಪಕೋಡ ಮತ್ತು ರೈಸ್‌ ಪಲಾವ್‌, 17ರಂದು
ಹೋಟೆಲ್‌-ಕೆಟರರ್‌-ಗೃಹ ಕುಟುಂಬಗಳ ವಿಭಾಗದಲ್ಲಿ ಒತ್ತು ಶಾವಿಗೆ, ನಾಟಿಕೋಳಿ ಸಾರು ಮತ್ತು ಗಸಗಸೆ ಪಾಯಸ ಮಾಡುವ ಸ್ಪರ್ಧೆ ಏರ್ಪಡಿಸಲಾಗಿದೆ.

ಸವಿ ಭೋಜನ ಸ್ಪರ್ಧೆ: ಅ.11ರಂದು ಮಹಿಳೆಯರ ವಿಭಾಗದಲ್ಲಿ ಇಡ್ಲಿ ತಿನ್ನುವ ಸ್ಪರ್ಧೆ, 12ರಂದು ಪುರುಷರ ವಿಭಾಗದಲ್ಲಿ ರಾಗಿ ಮುದ್ದೆ – ನಾಟಿಕೋಳಿ ಸಾರು ಊಟದ ಸ್ಪರ್ಧೆ, 13ರಂದು ಕಾಲೇಜು ವಿದ್ಯಾರ್ಥಿನಿಯರಿಗೆ ಪಾನಿಪೂರಿ ತಿನ್ನುವ ಸ್ಪರ್ಧೆ, 14ರಂದು ಕಾಲೇಜು ವಿದ್ಯಾರ್ಥಿಗಳಿಗೆ ಮೊಟ್ಟೆ ತಿನ್ನುವ ಸ್ಪರ್ಧೆ, 15ರಂದು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬಾಳೆಹಣ್ಣು ತಿನ್ನುವ ಸ್ಪರ್ಧೆ, 16ರಂದು ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ಕೇಕ್‌ ತಿನ್ನುವ ಸ್ಪರ್ಧೆ ನಡೆಯಲಿದೆ ಎಂದು ದಸರಾ ಆಹಾರ ಮೇಳ ಉಪ ಸಮಿತಿ ಕಾರ್ಯಾಧ್ಯಕ್ಷ ಪಿ.ಶಿವಣ್ಣ ತಿಳಿಸಿದ್ದಾರೆ.

Advertisement

ನಳಪಾಕ ಸ್ಪರ್ಧೆ ಹಾಗೂ ಸವಿ ಭೋಜನ ಸ್ಪರ್ಧೆಗಳಲ್ಲಿ ಭಾಗವಹಿಸುವವರು ಜಿಲ್ಲಾಧಿಕಾರಿ ಕಚೇರಿಯ ಕೊಠಡಿ ಸಂಖ್ಯೆ
17ರಲ್ಲಿನ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖಾ ಕಚೇರಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು.

Advertisement

Udayavani is now on Telegram. Click here to join our channel and stay updated with the latest news.

Next