Advertisement

ದಸರಾ ಗಜಪಡೆಗೆ ಅರ್ಜುನನೇ ಕ್ಯಾಪ್ಟನ್‌

11:22 AM Sep 03, 2018 | |

ಮೈಸೂರು: ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವಿಜಯದಶಮಿ ದಿನ ನಡೆಯುವ ಜಂಬೂ ಸವಾರಿ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಬರುವ ದೇಶ-ವಿದೇಶಿ ಪ್ರವಾಸಿಗರು ಸೇರಿದಂತೆ ಲಕ್ಷಾಂತರ ಜನರ ಗೌಜು-ಗದ್ದಲದ ನಡುವೆ 750 ಕೆ.ಜಿ. ತೂಕದ ಚಿನ್ನದ ಅಂಬಾರಿಯಲ್ಲಿ ನಾಡದೇವತೆ ಚಾಮುಂಡೇಶ್ವರಿ ದೇವಿಯ ವಿಗ್ರಹವನ್ನು ಹೊತ್ತು ಸಾಗುವ ಅರ್ಜುನನೇ ದಸರಾ ಗಜಪಡೆಯ ಕ್ಯಾಪ್ಟನ್‌. 

Advertisement

ಅರ್ಜುನ: 1968ರಲ್ಲಿ ಖೆಡ್ಡಾ ವಿಧಾನದಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿರುವ ಅಂದಾಜು 58 ವರ್ಷದ ಈ ಆನೆ ಕಳೆದ 18-19 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದ್ದು, ಅಂದಾಜು 5,870 ಕೆ.ಜಿ. ತೂಕವಿದ್ದು, 2.95 ಮೀಟರ್‌ ಎತ್ತರ, 3.75 ಮೀಟರ್‌ ಉದ್ದವಿದೆ. 2012ರಿಂದ ಚಿನ್ನದ ಅಂಬಾರಿಯನ್ನು ಹೊರುವ ಜವಾಬ್ದಾರಿ ನಿರ್ವಹಿಸುತ್ತಾ ಬಂದಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಬಳಿ ಆನೆ ಶಿಬಿರದಿಂದ ಕರೆತರಲಾಗಿರುವ ಅರ್ಜುನನಿಗೆ ವಿನು ಮಾವುತ, ಸಣ್ಣಪ್ಪ ಕಾವಾಡಿಯಾಗಿದ್ದಾರೆ.

ವರಲಕ್ಷ್ಮೀ: 1977ರಲ್ಲಿ ಕಾಕನಕೋಟೆಯಲ್ಲಿ ಈ ಆನೆಯನ್ನು ಸೆರೆ ಹಿಡಿಯಲಾಗಿದ್ದು, ತುಂಬಾ ಸಾಧು ಸ್ವಭಾವದ 62 ವರ್ಷದ ಈ ಹಿರಿಯ ಆನೆ ಕಳೆದ 9 ವರ್ಷಗಳಿಂದ ಜಂಬೂಸವಾರಿಯಲ್ಲಿ ಭಾಗವಹಿಸುತ್ತಿದೆ. 3,325 ಕೆ.ಜಿ. ಅಂದಾಜು ತೂಕವಿರುವ ಈ ಆನೆಯು 2.46 ಮೀಟರ್‌ ಎತ್ತರ, 3.34 ಮೀಟರ್‌ ಉದ್ದವಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮತ್ತಿಗೋಡು ಆನೆ ಶಿಬಿರದಲ್ಲಿರುವ ಈ ಆನೆಯ ಮಾವುತ ರವಿ ಜೆ.ಕೆ., ಕವಾಡಿ ಮಾದೇಶ.

ಗೋಪಿ: 1993ರಲ್ಲಿ ಕಾರೇಕೊಪ್ಪ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿರುವ ಅಂದಾಜು 36 ವರ್ಷ ವಯಸ್ಸಿನ ಅಂದಾಜು 3,710 ಕೆ.ಜಿ ತೂಕ, 2.92 ಮೀಟರ್‌ ಎತ್ತರ, 3.42 ಮೀಟರ್‌ ಉದ್ದ ಇರುವ ಈ ಆನೆಯು ಕೊಡಗಿನ ದುಬಾರೆ ಆನೆ ಶಿಬಿರದಲ್ಲಿ ಸಫಾರಿ ಕೆಲಸವನ್ನು ನಿರ್ವಹಿಸುತ್ತಿದ್ದು, ಕಳೆದ 8 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದೆ. ನವೀದ್‌ ಈ ಆನೆಯ ಮಾವುತ, ಅಪ್ಪಯ್ಯ ಕವಾಡಿ.

ವಿಕ್ರಮ: 1990ರಲ್ಲಿ ದೊಡ್ಡಬೆಟ್ಟ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದ್ದು, 45 ವರ್ಷ ವಯಸ್ಸಿನ ಈ ಆನೆಯು ಅಂದಾಜು 3,820 ಕೆ.ಜಿ. ತೂಕವಿದ್ದು, 2.60 ಮೀಟರ್‌ ಎತ್ತರ, 3.43 ಮೀಟರ್‌ ಉದ್ದವಿದ್ದು, ದುಬಾರೆ ಆನೆ ಶಿಬಿರದ ಈ ಆನೆ ಕಳೆದ 14 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಭಾಗವಹಿಸುತ್ತಿದ್ದು, 2015ರಿಂದ ಪಟ್ಟದ ಆನೆಯಾಗಿ ಅರಮನೆಯ ಪೂಜಾ ವಿಧಿ ವಿಧಾನಗಳಲ್ಲಿ ಭಾಗವಹಿಸುತ್ತಿದೆ. ಪುಟ್ಟ ಈ ಆನೆಯ ಮಾವುತ, ಹೇಮಂತ್‌ ಕುಮಾರ್‌ ಕವಾಡಿ.

Advertisement

ಧನಂಜಯ: 2013ರಲ್ಲಿ ಹಾಸನ ಜಿಲ್ಲೆ ಯಸಳೂರು ವಲಯದ ಅರಣ್ಯ ವ್ಯಾಪ್ತಿಯಲ್ಲಿ ಸೆರೆ ಹಿಡಿಯಲಾಗಿರುವ 35 ವರ್ಷ ವಯಸ್ಸಿನ ಈ ಆನೆಯು ಬಲಿಷ್ಠವಾಗಿದ್ದು, ಅಂದಾಜು 4,050 ಕೆ.ಜಿ ತೂಕವಿದ್ದು, 2.78 ಮೀಟರ್‌ ಎತ್ತರ, 3.84 ಮೀಟರ್‌ ಉದ್ದವಿದೆ. ಕಾಡಾನೆಗಳನ್ನು ಸೆರೆ ಹಿಡಿಯುವ ಕಾರ್ಯಗಳಲ್ಲಿ ಭಾಗವಹಿಸುವ ಈ ಆನೆಯನ್ನು ಇದೇ ಮೊದಲ ಬಾರಿಗೆ ದಸರಾ ಮಹೋತ್ಸವಕ್ಕೆ ಕರೆತಲಾಗಿದೆ. ಭಾಸ್ಕರ್‌ ಜೆ.ಸಿ ಮಾವುತ, ಸೂನ್ಯ ಜೆ.ಬಿ. ಕವಾಡಿ.

ಚೈತ್ರ: ಬಂಡೀಪುರ ಆನೆ ಶಿಬಿರದಲ್ಲಿದ್ದ ಗಂಗೆ ಆನೆಯ ಮರಿ 47 ವರ್ಷ ವಯಸ್ಸಿನ ಚೈತ್ರ ತುಂಬಾ ಶಾಂತ ಸ್ವಭಾವದ್ದಾಗಿದ್ದು, 3,600 ಕೆ.ಜಿ ತೂಕ, 2.52 ಮೀಟರ್‌ ಎತ್ತರ, 3.62 ಮೀಟರ್‌ ಉದ್ದವಿರುವ ಈ ಆನೆಯು ನಾಲ್ಕು ಬಾರಿ ದಸರಾ ಮಹೋತ್ಸವದಲ್ಲಿ ಭಾಗವಹಿಸಿದ್ದ ಈ ಆನೆಯನ್ನು ಈ ಬಾರಿಯೂ ದಸರೆಗೆ ಕರೆತರಲಾಗಿದೆ. ಈ ಆನೆಯ ಮಾವುತ ಮಹದೇವ, ಕವಾಡಿ ಕಲೀಂ.

Advertisement

Udayavani is now on Telegram. Click here to join our channel and stay updated with the latest news.

Next