Advertisement
ಹೌದು, ಅವರು ಅಂತಿಂಥ ಕ್ರೀಡಾ ಪಟುವಲ್ಲ. ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ದೇಶ ಪ್ರತಿನಿಧಿಸಿ, ಏಶ್ಯನ್ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದು, ಕ್ರೀಡಾ ಜೀವನದಲ್ಲಿ 17 ಚಿನ್ನ, 1 ಬೆಳ್ಳಿ ಹಾಗೂ 5 ಕಂಚು ಗೆದ್ದ ಸಾಧಕ ದಿನೇಶ್ ಕುಮಾರ್. ಇವರ ಸಾಧನೆಗಾಗಿಯೇ ಸರಕಾರ 2010ರಲ್ಲಿ ಅರ್ಜುನ ಪ್ರಶಸ್ತಿ ನೀಡಿತ್ತು. ಇಂದು ಆ ಬಾಕ್ಸರ್ ಹೊಟ್ಟೆಪಾಡಿಗಾಗಿ ಹರ್ಯಾಣದ ಭಿವಾನಿ ಪಟ್ಟಣದ ಬೀದಿ ಬದಿಯಲ್ಲಿ ಕುಲ್ಫಿ ಮಾರಾಟ ಮಾಡುತ್ತಿದ್ದಾರೆ.
ದಿನೇಶ್ ಕುಮಾರ್‌ಗೆ ಇದುವರೆಗೆ ಸರಕಾರದಿಂದ ಯಾವುದೇ ನೆರವು ಸಿಕ್ಕಿಲ್ಲ. ಈ ಬಗ್ಗೆ ದಿನೇಶ್ ಕುಮಾರ್ ಹೇಳುವುದು ಹೀಗೆ…
ಯಾವ ಭರವಸೆಯೂ ಇಲ್ಲ “ಈಗಲೂ ಸರಕಾರ ನನಗೆ ಆರ್ಥಿಕ ನೆರವು ನೀಡುತ್ತದೆ ಅಥವಾ ಉದ್ಯೋಗ ನೀಡಿ ಸಹಾಯ ಮಾಡುತ್ತದೆ ಎನ್ನುವ ಭರವಸೆ ಇಲ್ಲ. ಯಾವೊಬ್ಬ ರಾಜಕಾರಣಿಯನ್ನೂ ನಾನು ನಂಬು ವುದಿಲ್ಲ. ನನ್ನ ಅಪಘಾತದ ದಿನದಿಂದ ಇಲ್ಲಿಗೆ ಯಾರೂ ಬಂದಿಲ್ಲ. ಈಗಲೂ ನಾನೊಬ್ಬ ಕ್ರೀಡಾಪಟು. ನನ್ನ ಕುಟುಂಬಕ್ಕೆ ಸಹಾಯ ಮಾಡಬೇಕಿದೆ. ಮತ್ತೆ ಬಾಕ್ಸಿಂಗ್‌ನತ್ತ ಮರಳುವ ಕನಸು ಇಟ್ಟುಕೊಂಡಿದ್ದೇನೆ. ಸದ್ಯ ಹಲವಾರು ಕಿರಿಯರಿಗೆ ತರಬೇತಿ ನೀಡಿ ಅವರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತೆ ಮಾಡಿದ್ದೇನೆ. ಇದಕ್ಕಾಗಿ ಸಂಭಾವನೆ ತೆಗೆದುಕೊಂಡಿಲ್ಲ…’ ಅಪಘಾತದಲ್ಲಿ ಕಮರಿದ ಕನಸು
ದಿನೇಶ್ ಕುಮಾರ್ ಬಾಕ್ಸಿಂಗ್ ಲೋಕದಲ್ಲಿ ಅಮೋಘ ಸಾಧನೆ ಮಾಡಿದ್ದರು. ಆದರೆ ವಿಧಿ ಲೀಲೆ ಬೇರೆಯೇ ಆಗಿತ್ತು. 2014ರಲ್ಲಿ ನಡೆದ ಅಪಘಾತವೊಂದರಲ್ಲಿ ದಿನೇಶ್ ತೀವ್ರವಾಗಿ ಗಾಯಗೊಂಡರು. ಇವರನ್ನು ಬದುಕಿಸಿಕೊಳ್ಳಲು ಕುಟುಂಬದವರು ಸಾಕಷ್ಟು ಸಾಲ ಮಾಡಿದರು. ದಿನೇಶ್ ಚಿಕಿತ್ಸೆ ಬಳಿಕ ಪುನರ್ಜನ್ಮವನ್ನೇನೋ ಪಡೆದರು, ಆದರೆ ಬಾಕ್ಸಿಂಗ್ ಬದುಕು ಬಹುತೇಕ ಅಂತ್ಯವಾಯಿತು. ಜತೆಗೆ ಬೆಟ್ಟದಷ್ಟು ಸಾಲವೂ ಬೆಳೆದಿತ್ತು. ಬಳಿಕ ಸಾಲ ತೀರಿಸುವುದಕ್ಕಾಗಿ ದಿನೇಶ್ ರಸ್ತೆ ಬದಿಯಲ್ಲಿ ಕುಲ್ಫಿ ಮಾರಾಟಕ್ಕೆ ಇಳಿದರು. ಇವರಿಗೆ ಇವರ ತಂದೆ ಕೂಡ ಸಾಥ್ ನೀಡಿದರು.