Advertisement

ಕೃಷಿ ಚಟುವಟಿಕೆಗೆ ಕಳೆ ತಂದ ಆರಿದ್ರಾ ಮಳೆ

08:15 AM Jul 05, 2019 | Suhan S |

ಬೈಲಹೊಂಗಲ: ತಾಲೂಕಿನಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುರಿದ ಆರಿದ್ರಾ ಮಳೆಯಿಂದ ರೈತರ ಮೊಖದಲ್ಲಿ ಮಂದಹಾಸ ಮೂಡಿದ್ದು, ರೈತರು ಬಿತ್ತನೆ ಕಾರ್ಯ ಪ್ರಾರಂಭಿಸಿದ್ದಾರೆ.

Advertisement

ಜೂನ್‌ ಕೊನೆಯ ಮೂರು ದಿನಗಳಲ್ಲಿ ಸುರಿದ ಭಾರೀ ಮಳೆಗೆ ಭೂಮಿ ತಕ್ಕ ಮಟ್ಟಿಗೆ ಹಸಿಯಾಗಿದೆ. ರೈತರು ಮಾತ್ರ ಬಿತ್ತನೆ ಕಾರ್ಯ ಕೈಗೊಳ್ಳುತ್ತಿದ್ದಾರೆ. ಸೋಯಾಬಿನ್‌ ಬಿತ್ತಿದರೆ ಒಂದು ತಿಂಗಳ ತಡವಾಗಿ ಪೈರು ಬಂದು, ಹಿಂಗಾರಿ ಬಿತ್ತನೆ ಪೂರ್ತಿ ವಿಳಂಬ ಆಗಲಿದೆ ಎನ್ನುವುದು ರೈತರ ಚಿಂತೆಯಾಗಿದೆ.

ಕಳೆದೆರಡು ವರ್ಷಗಳಿಂದ ಮಳೆ- ಬೆಳೆ ಸರಿಯಾಗಿ ಬಾರದ್ದರಿಂದ ರೈತ ಕಂಗಾಲಾಗಿದ್ದು, ಈ ಬಾರಿ ಜೂನ್‌ನಲ್ಲಿ ಬೀಜ- ಗೊಬ್ಬರ ಖರೀದಿ ಮಾಡಿ ಇಟ್ಟುಕೊಂಡರೂ ಬೇಗ ಮಳೆ ಬಾರದೆ ಇರುವುದರಿಂದ ಚಿಂತೆಯಲ್ಲಿ ಕಾಲ ಕಳೆದಿದ್ದ ರೈತರಿಗೆ ಈಗ ಸುರಿದ ಮಳೆ ಆಶಾಭಾವನೆ ಮೂಡಿಸಿದೆ ಎನ್ನುವುದು ರೈತರ ಅಭಿಪ್ರಾಯ.

ಇನ್ನಷ್ಟು ಮಳೆ ಈಗ ಬೀಳಬೇಕು. ಇಲ್ಲದಿದ್ದರೆ ಬಿತ್ತನೆ ಪ್ರಮಾಣ ತೀರಾ ಕಡಿಮೆಯಾಗಿದ್ದರಿಂದ ಮುಂದಿನ ದಿನಗಳಲ್ಲಿ ಮೇವಿನ ಕೊರತೆ ಎದುರಾಗಲಿದೆ. ಮೇವು ಸಿಗದೇ ಹೋದಲ್ಲಿ ರೈತರು ದನಕರುಗಳನ್ನು ಮಾರಾಟ ಮಾಡುವುದು ಅನಿವಾರ್ಯವಾಗಲಿದೆ. ಸರ್ಕಾರ ಮೇವು ಸಂಗ್ರಹ ಮಾಡಿಕೊಳ್ಳಬೇಕು. ರೈತರಿಗೆ ಮೇವು ವಿತರಣೆಗೆ ಕ್ರಮ ಕೈಗೊಳ್ಳಬೇಕು ಎನ್ನುವುದು ರೈತರ ಒತ್ತಾಯ.

ತಾಲೂಕಿನ ಬಿತ್ತನೆ ವ್ಯಾಪ್ತಿ: ತಾಲೂಕಿನಲ್ಲಿ 85 ಸಾವಿರ ಹೆಕ್ಟೇರ್‌ ಕೃಷಿ ಜಮೀನಿದ್ದು, ಇದರಲ್ಲಿ 5 ಸಾವಿರ ಹೆಕ್ಟೇರ್‌ ಜಮೀನಿನಲ್ಲಿ ತೋಟಗಾರಿಕೆ ಹಾಗೂ ರೇಷ್ಮೆ ಬೆಳೆಯ ವ್ಯಾಪ್ತಿ ಇದೆ. 12 ಸಾವಿರ ಹೆಕ್ಟೇರ್‌ ನೀರಾವರಿ ಕೃಷಿ ಜಮೀನಿದೆ. 68 ಸಾವಿರ ಹೆ. ಜಮೀನು ಒಣಬೇಸಾಯ (ಮಳೆಯಾಶ್ರಿತ) ಅವಲಂಭಿಸಿದೆ. ಬೈಲಹೊಂಗಲ ಹೋಬಳಿ ವ್ಯಾಪ್ತಿಯ 26,800 ಹೆಕ್ಟೇರ್‌ದಲ್ಲಿ ಬಿತ್ತನೆ ಗುರಿ ಇತ್ತು. ಇದರಲ್ಲಿ 100 ಹೆಕ್ಟೇರ್‌ ಹೆಸರು, 250 ಹೆ. ಸೋಯಾಬಿನ್‌, 150 ಹೆಕ್ಟೇರ್‌ ಹತ್ತಿ ಬಿತ್ತನೆಯಾಗಿದೆ. 1500 ಹೆಕ್ಟೇರ್‌ ಕಬ್ಬು ಇದ್ದು, ಒಟ್ಟು ಶೇ.8ರಷ್ಟು ಬಿತ್ತನೆ ಮಾಡಲಾಗಿದೆ.

Advertisement

ನೇಸರಗಿ ಹೋಬಳಿ ವ್ಯಾಪ್ತಿಯ 29ಸಾವಿರ ಹೆ. ಬಿತ್ತನೆ ಗುರಿ ಇದ್ದು, 200 ಹೆಕ್ಟೇರ್‌ ಸೋಯಾಬಿನ್‌, 25 ಹೆಕ್ಟೇರ್‌ ಹತ್ತಿ ಬಿತ್ತನೆಯಾಗಿದೆ. 800 ಹೆ.ಕಬ್ಬು ಇದ್ದು, ಶೇ.5ರಷ್ಟು ಬಿತ್ತನೆಯಾಗಿದೆ. ಕಿತ್ತೂರು ಹೋಬಳಿ ವ್ಯಾಪ್ತಿಯ 24 ಸಾವಿರ ಹೆಕ್ಟೇರ್‌ ಬಿತ್ತನೆ ಗುರಿ ಇತ್ತು. 20 ಹೆಕ್ಟೇರ್‌ ಭತ್ತ, 2500 ಹೆಕ್ಟೇರ್‌ ಸೋಯಾಬಿನ್‌ 800 ಹೆ.ಗೋವಿನ ಜೋಳ ಬಿತ್ತನೆಯಾಗಿದೆ. 9ಸಾವಿರ ಹೆಕ್ಟೇರ್‌ ಕಬ್ಬು ಇದೆ. ಕಬ್ಬು ಹೊರತು ಪಡಿಸಿ ಒಟ್ಟು ಶೇ. 10ರಷ್ಟು ಬಿತ್ತನೆಯಾಗಿದೆ.

ಮಳೆ ಪ್ರಮಾಣ: ಬೈಲಹೊಂಗಲ ಹೋಬಳಿ ಯಲ್ಲಿ ಜನವರಿಯಿಂದ ಮೇ ತಿಂಗಳವರೆಗೆ 130 ಮಿ.ಮೀ. ಮಳೆಯಾಗಬೇಕಾಗಿತ್ತು. 47 ಮಿ.ಮೀ. ಮಳೆಯಾಗಿದ್ದು, ಶೇ.63ರಷ್ಟು ಕೊರತೆಯಾಗಿದೆ. ನೇಸರಗಿ ಹೋಬಳಿಯಲ್ಲಿ 130 ಮಿ.ಮೀ. ಮಳೆಯಾಗಬೇಕಾಗಿತ್ತು. 44 ಮೀ.ಮಿ. ಮಳೆಯಾಗಿದೆ. ಶೇ.66ರಷ್ಟು ಕೊರತೆ. ಕಿತ್ತೂರು ಹೋಬಳಿಯಲ್ಲಿ 128 ಮಿ.ಮೀ. ಮಳೆಯಾಗಬೇಕಾಗಿತ್ತು. 37 ಮಿ.ಮೀ. ಮಳೆಯಾಗಿದ್ದು, ಶೇ.71ರಷ್ಟು ಕೊರತೆಯಾಗಿದೆ. ಜೂನ್‌ನಲ್ಲಿ ಬೈಲಹೊಂಗಲ ಹೋಬಳಿಯಲ್ಲಿ 91 ಮಿ.ಮೀ. ಮಳೆಯಾಗಬೇಕಾಗಿತ್ತು. 72ಮಿ.ಮೀ.ಮಳೆಯಾಗಿದ್ದು, ಶೇ.21ರಷ್ಟು ಕೊರತೆ, ನೇಸರಗಿ ಹೋಬಳಿಯಲ್ಲಿ 163 ಮಿ.ಮೀ. ಮಳೆಯಾಗಬೇಕಾಗಿತ್ತು. 112 ಮಿ.ಮೀ. ಮಳೆಯಾಗಿದ್ದು, ಶೇ.31ರಷ್ಟು ಕೊರತೆಯಾಗಿದೆ. ಜೂನ್‌ 29 ಹಾಗೂ 30ರಂದು ಬಿದ್ದ ಮಳೆಯಿಂದ ಬಿತ್ತನೆ ಕಾರ್ಯ ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಾಗಬಹುದು ಎನ್ನುವ ನಿರೀಕ್ಷೆಯನ್ನು ಕೃಷಿ ಇಲಾಖೆ ಹೊಂದಿದೆ.

 

ಸೋಯಾಬಿನ್‌ ಬಿತ್ತನೆ ಮಳೆಯ ಕೊರತೆಯಿಂದ ಹಿನ್ನೆಡೆಯಾಗಿದೆ. ಇನ್ನಷ್ಟು ಮಳೆಯಾದಲ್ಲಿ ಹೆಚ್ಚಿನ ಆದಾಯ ನಿರೀಕ್ಷೆ ಮಾಡಬಹುದಾಗಿದೆ.• ಮಹಾಂತೇಶ ಪಾಟೀಲ,ರೈತ ಬೈಲಹೊಂಗಲ

ಮಳೆ ತಡವಾಗಿ ಪ್ರಾರಂಭವಾಗಿದ್ದರೂ ಸೋಯಾಬಿನ್‌ ಬಿತ್ತನೆ ರೈತರು ಮಾಡುತ್ತಿದ್ದು, ಜು. 15 ರವರೆಗೆ ಬಿತ್ತನೆ ಮಾಡಬಹುದು. 35 ರಿಂದ 45 ದಿವಸಗಳ ಬೆಳೆ ಇದ್ದಾಗ ತುಕ್ಕು ರೋಗ ಭಾದೆಯಿಂದ ತಪ್ಪಿಸಿಕೊಳ್ಳಲು ಒಮ್ಮೆ ಹಾಗೂ ಹೂ ಬಿಡುವ ಹಂತದಲ್ಲಿ 55 ರಿಂದ 60 ದಿವಸಗಳಲ್ಲಿ ಒಮ್ಮೆ ಅವಶ್ಯಕ ಬಿದ್ದರೆ 10 ದಿನಗಳ ನಂತರ ಕೈಷಿ ಇಲಾಖೆ ಸೂಚನೆಯಂತೆ ಸಸ್ಯ ಸಂರಕ್ಷಣೆ ಕ್ರಮ ಕೈಗೊಂಡರೆ ಸಾಮಾನ್ಯ ಇಳುವರಿ ಪಡೆಯಬಹುದು.• ಎಂ.ಬಿ. ಹೊಸಮನಿ, ಸಹಾಯಕ ನಿರ್ದೆಶಕ ಕೃಷಿ ಇಲಾಖೆ ಬೈಲಹೊಂಗಲ

 

•ಸಿ.ವೈ.ಮೆಣಶಿನಕಾಯಿ

Advertisement

Udayavani is now on Telegram. Click here to join our channel and stay updated with the latest news.

Next