Advertisement

ಆರ‍್ಹಾಳ: ಭೂಮಿ ಪೋಡಿ ಮುಕ್ತ ಮಾಡದಿದ್ದರೆ ಮತದಾನ ಬಹಿಷ್ಕಾರ

06:42 PM Feb 03, 2023 | Team Udayavani |

ಗಂಗಾವತಿ: ತಾಲೂಕಿನ ಆರ‍್ಹಾಳ ಗ್ರಾಮದಲ್ಲಿ ಎಸ್ಸಿ, ಎಸ್ಟಿ ಹಿಂದುಳಿದ ಮತ್ತು ಅಲ್ಪಸಂಖ್ಯಾತರ 20 ಫಲಾನುಭವಿಗಳಿಗೆ ಸರಕಾರ 1971 ರಲ್ಲಿ ಸುಮಾರು 39.27 ಎಕರೆ ಭೂಮಿಯನ್ನು ಮಂಜೂರು ಮಾಡಿ ಆದೇಶ ಪತ್ರ ನೀಡಿದೆ. ನಂತರ ಫಲಾನುಭವಿಗಳ ಹೆಸರಿನಲ್ಲಿ ಪೋಡಿ ಹಾಗೂ ನಕ್ಷೆ ನೀಡುವಲ್ಲಿ ಕಂದಾಯ ಇಲಾಖೆಯ ಕೆಲ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದರಿಂದ ಕಳೆದ 52 ವರ್ಷಗಳಿಂದ ಸರಕಾರದಿಂದ ಮಂಜೂರಿಯಾದ ಭೂಮಿ ಪೋಡಿ ಮುಕ್ತವಾಗಿಲ್ಲ. ಇದರಿಂದ ಕಳೆದ 52 ವರ್ಷಗಳಿಂದ ಭೂಮಿ ಮಂಜೂರಾತಿ ಪಡೆದ 20 ಫಲಾನುಭವಿ ರೈತರು ಕಂದಾಯ ಇಲಾಖೆಗೆ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ.

Advertisement

ಕೂಡಲೇ ಪೋಡಿ ಮುಕ್ತ ಮಾಡಿ ನಕ್ಷೆ ನೀಡದಿದ್ದರೆ ಮುಂಬರುವ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಬಹಿಷ್ಕಾರ ಮಾಡಲು ರ‍್ಹಾಳ ಗ್ರಾಮದ 20 ರೈತ ಕುಟುಂಬಗಳು ನಿರ್ಧರಿಸಿವೆ ಎಂದು ನೋಂದ ರೈತರು ಆರ‍್ಹಾಳದ ತಮಗೆ ಮಂಜೂರಾದ ಭೂಮಿಯ ಹತ್ತಿರ ಪ್ರತಿಭಟನೆ ನಡೆಸಿ ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ರುದ್ರೇಶ, ತರಸಾಲೆಪ್ಪ, ಶಿವಪ್ಪ ಭೋವಿ,ಹಿರೇಖಾನಸಾಭ ಮಾತನಾಡಿ, ಕಳೆದ 52 ವರ್ಷಗಳಿಂದ ತಹಸೀಲ್ ಕಚೇರಿಗೆ ಅಲೆದಢಿದರೂ ಸರಕಾರ ಮಂಜೂರಿ ಮಾಡಿದ 39.27 ಎಕರೆ ಪ್ರದೇಶವನ್ನು ಕಂದಾಯ ಇಲಾಖೆಯವರು ಸರ್ವೇ ನಡೆಸಿ ಆಯಾ ರೈತರ ಭೂಮಿ ಹದ್ದುಬಸ್ತು ಮಾಡಿ ಪೋಡಿ ಮುಕ್ತಗೊಳಿಸಿ ನಕ್ಷೆ ತಯಾರಿಸಿ ಕೊಡುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ.

ಸರಕಾರ ಬಡ ಕೃಷಿ ಕಾರ್ಮಿಕರಿಗೆ ಭೂಮಿ ಮಂಜೂರಿ ಮಾಡಿ ಆದೇಶ ಪತ್ರ ನೀಡಿದರೂ ಎಸಿಯವರು ಪೋಡಿ ಮುಕ್ತ ಮಾಡಿ ಆಯಾ ರೈತರ ಭೂಮಿ ಹದ್ದುಬಸ್ತು ಗುರುತಿಸಿ ನಕ್ಷೆ ತಯಾರು ಮಾಡಿ ದಾಖಲೆ ನೀಡಲು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಇದರಿಂದ ಸರಕಾರ ಭೂಮಿ ಮಂಜೂರಿ ಮಾಡಿ ಆದೇಶ ಕೊಟ್ಟರೂ ಪ್ರಯೋಜನ ಇಲ್ಲದಂತಾಗಿದೆ. ಗಂಗಾವತಿ ತಹಸೀಲ್ ಕಚೇರಿಯಿಂದ ಅಗತ್ಯ ಮಾಹಿತಿ ದಾಖಲೆಗಳ ಸಮೇತ ಕೊಪ್ಪಳದ ಎಸಿ ಕಚೇರಿಗೆ ಕಡತ ಹೋಗಿದ್ದರೂ ನೂರಾರು ಭಾರಿ ಕೊಪ್ಪಳದ ಎಸಿ ಕಚೇರಿಗೆ ಅಲೆದರೂ ಪ್ರಯೋಜನವಾಗಿಲ್ಲ. ಆದ್ದರಿಂದ 2023 ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯನ್ನು ಆರ‍್ಹಾಳ ಗ್ರಾಮದ 20 ಕುಟುಂಬಗಳ ಮತದಾರರು ಬಹಿಷ್ಕಾರ ಮಾಡಲು ನಿರ್ಧರಿಸಿದ್ದು ಜಿಲ್ಲಾಡಳಿತ ಕೂಡಲೇ ಕ್ರಮ ಕೈಗೊಂಡು ಸರ್ವೇ ನಂ.64 ರಲ್ಲಿರುವ 39. 27 ಎಕರೆ ಪ್ರದೇಶವನ್ನು ಪೋಡಿ ಮುಕ್ತಗೊಳಿಸಿ ರೈತರಿಗೆ ಅಗತ್ಯ ದಾಖಲಾತಿ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಸರಕಾರದಿಂದ ಮಂಜೂರಿಯಾದ ಭೂಮಿಯಾಗಿರುವುದರಿಂದ ಆರ‍್ಹಾಳ ಪೋಡಿ ಮುಕ್ತ ಗ್ರಾಮವಾದರೂ ಸರ್ವೇ ನ.64 ರ 39.27 ಎಕರೆ ಪ್ರದೇಶದ ರೈತರ ಭೂಮಿ ಇನ್ನು ಪೋಡಿ ಮುಕ್ತವಾಗಿಲ್ಲ. ಇತ್ತೀಚೆಗೆ ಬಸಾಪಟ್ಟಣದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳು, ಶಾಸಕರು ಸಂಸದರು. ಸಹಾಯಕ ಆಯುಕ್ತರಿಗೂ ಮನವಿ ಮಾಡಲಾಗಿದೆ. ಜಿಲ್ಲಾಡಳಿತ ಕೂಡಲೇ ಎಚ್ಚೆತ್ತುಕೊಂಡು ಅಗತ್ಯ ಕ್ರಮಕೈಗೊಳ್ಳದಿದ್ದರೆ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಬಹಿಷ್ಕಾರ ಮಾಡಲಾಗುತ್ತದೆ. ಜತೆಗೆ ಇಡೀ ಕುಟುಂಬದವರ ಜತೆಗೂಡಿ ಎಸಿ ಕಚೇರಿ ಬಳಿ ಅಮರಣಾಂತರ ಉಪವಾಸ ಸತ್ಯಗ್ರಹ ನಡೆಸಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.

Advertisement

ಈ ಸಂದರ್ಭದಲ್ಲಿ ಜಿ.ರವಿಕುಮಾರ, ರುದ್ರೇಶ, ಹನುಮಂತಪ್ಪ, ಚಂದುವಂಶಿ, ನಾಗೇಶರಾವ್,ಸಣ್ಣ ಖಾಜಾ,ಹುಲಿಗೆಮ್ಮ, ವಿದ್ಯಾಶ್ರೀ, ಬಾಲಪ್ಪ ಕೊರವರ್,ಮರಿಯಮ್ಮ,ರಾಜಸಾಬ, ತರಸಲೆಪ್ಪ, ವೆಂಕಟರಾವ್, ಮೇದಾರ ಕೃಷ್ಣ ಸೇರಿ ಅನೇಕರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next