ಹೆಮ್ಮಾಡಿ: ನನ್ನಲ್ಲಿ ಎಲ್ಲ ದಾಖಲೆಗಳಿದ್ದು, ಕಾರು ಚಾಲನೆ ಮಾಡುವಾಗ ಸೀಟ್ ಬೆಲ್ಟ್ ಕೂಡ ಹಾಕಿದ್ದೆ. ಆದರೂ ತಪಾಸಣೆ ವೇಳೆ ಸೀಟ್ ಬೆಲ್ಟ್ ಹಾಕಿಲ್ಲ ಎಂದು ಸುಳ್ಳು ಹೇಳಿ 500 ರೂ. ದಂಡ ಕಟ್ಟಲು ಹೇಳುತ್ತಿದ್ದೀರಿ.
ನಾನು ಸುಮ್ಮನೆ ಸುಮ್ಮನೆ ಯಾಕೆ ಕಟ್ಟಬೇಕು ಎಂದು ಪೊಲೀಸರ ಜತೆ ಕಾರು ಚಾಲಕಿಯೊಬ್ಬರು ಹೆಮ್ಮಾಡಿಯಲ್ಲಿ ವಾದಕ್ಕಿಳಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.
ಕುಂದಾಪುರ – ಬೈಂದೂರು ಹೆದ್ದಾರಿಯ ಹೆಮ್ಮಾಡಿ ಪೇಟೆಗಿಂತ ಸ್ವಲ್ಪ ಮುಂದೆ ಹೈವೇ ಪ್ಯಾಟ್ರೋಲ್ ಪೊಲೀಸರು ಪ್ರತಿ ನಿತ್ಯ ವಾಹನ ತಪಾಸಣೆ ಮಾಡುತ್ತಾರೆ.
ಇದೇ ರೀತಿ ಆ ಕಾರನ್ನು ಕೂಡ ಅಡ್ಡ ಹಾಕಿದೆ ಪೊಲೀಸರು ಎಲ್ಲ ದಾಖಲೆಗಳನ್ನು ಪಡೆದು ಪರಿಶೀಲನೆ ನಡೆಸುತ್ತಾರೆ. ಈ ವೇಳೆ ನೀವು ಕಾರು ಚಲಾಯಿಸುವಾಗ ಸೀಟ್ ಬೆಲ್ಟ್ ಹಾಕಿಲ್ಲ ಎಂದು ಪೊಲೀಸರು ಆ ಚಾಲಕಿಗೆ 500 ರೂ. ದಂಡ ಕಟ್ಟಲು ಹೇಳುತ್ತಾರೆ. ಈ ವೇಳೆ ಗರಂ ಆದ ಆ ಮಹಿಳೆ, ನಾನು ಸೀಟ್ ಬೆಲ್ಟ್ ಹಾಕಿಯೇ ಕಾರು ಚಲಾಯಿಸಿದ್ದೇನೆ.
ನಾನು ಸೀಟ್ ಬೆಲ್ಟ್ ಹಾಕದೇ ಕಾರು ಚಲಾಯಿಸುವುದೇ ಇಲ್ಲ. ಆದರೂ ನೀವು ಸುಮ್ಮನೆ ದಂಡ ಕಟ್ಟಲು ಹೇಳುವುದು ಸರಿಯಲ್ಲ ಎಂದವರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.