Advertisement

ಮಲೆನಾಡಿನ ಅಡಕೆ ವ್ಯಾಪಾರದಲ್ಲಿ ಹೆಚ್ಚಾಯ್ತು ಗೋಲ್‌ಮಾಲ್‌ ​​​​​​​

06:35 AM Dec 07, 2018 | |

ಶಿವಮೊಗ್ಗ: ಬೇರೆ ರಾಜ್ಯಗಳ ಕಡಿಮೆ ಗುಣಮಟ್ಟದ ಅಡಕೆಯನ್ನು ಶಿವಮೊಗ್ಗಕ್ಕೆ ತಂದು ಇಲ್ಲಿ ಮಿಕ್ಸಿಂಗ್‌ ಮಾಡುತ್ತಿರುವ ಆರೋಪದ ಬೆನ್ನಲ್ಲೇ ಉತ್ತರ ಭಾರತದ ಮಾರುಕಟ್ಟೆಯಿಂದ ಮಲೆನಾಡಿನ ಅಡಕೆ ವಾಪಸ್ಸಾಗುತ್ತಿರುವ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ.

Advertisement

ಪ್ರತಿ ದಿನ 10ರಿಂದ 20 ಲಾರಿಗಳಲ್ಲಿ ಉತ್ತರ ಭಾರತದ ಗುಜರಾತ್‌, ಮಹಾರಾಷ್ಟ್ರಗಳಿಗೆ ಶಿವಮೊಗ್ಗದ ಎಪಿಎಂಸಿಯಿಂದ ಅಡಕೆ ರವಾನೆಯಾಗುತ್ತದೆ. ಇದರಲ್ಲಿ ಒಂದು ಅಥವಾ ಎರಡು ಲಾರಿಗಳು ಕಳಪೆ ಗುಣಮಟ್ಟದ್ದು ಎಂಬ ಕಾರಣಕ್ಕೆ ವಾಪಸ್ಸಾಗುತ್ತಿವೆ. ಹೀಗೆ ವಾಪಸ್‌ ಆಗುವ ಅಡಕೆಗೆ ತೆರಿಗೆ ವಾಪಸ್‌ ನೀಡಲಾಗುತ್ತಿದೆ. ಆದರೆ ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ವ್ಯಾಪಾರಸ್ಥರು ಸರಕಾರಕ್ಕೆ ಕೋಟ್ಯಂತರ ರೂ.ತೆರಿಗೆ ವಂಚಿಸುತ್ತಿದ್ದಾರೆ. ಎಲ್ಲ ವಹಿವಾಟುಗಳು ನಿಯಾಮವಳಿ ಪ್ರಕಾರವೇ ನಡೆಯುವುದರಿಂದ ಈ ಜಾಲ ಪತ್ತೆ ಹಚ್ಚಲು ಅಧಿ ಕಾರಿಗಳೂ ವಿಫಲರಾಗಿದ್ದಾರೆ.

ತಿರಸ್ಕೃತ ಪ್ರಮಾಣ ದುಪ್ಪಟ್ಟು:
2016, 2017ರಲ್ಲಿ ವರ್ಷಕ್ಕೆ ಎರಡೂ¾ರು ಲಾರಿ ಲೋಡ್‌ ಅಡಕೆ ವಾಪಸ್‌ ಬರುತ್ತಿದ್ದವು. ಆದರೆ, ಈ ವರ್ಷ ಇದರ ಪ್ರಮಾಣ ಒಮ್ಮೇಲೇ ಹೆಚ್ಚಾಗಿದೆ. ಅಕ್ಟೋಬರ್‌ ಹಾಗೂ ನವೆಂಬರ್‌ನಲ್ಲಿಯೇ 18 ಲೋಡ್‌ಗಳಿಗೂ ಹೆಚ್ಚು ಅಡಕೆ ವಾಪಸ್ಸಾಗಿದೆ. ಇಷ್ಟು ವರ್ಷ ಇಲ್ಲದಿದ್ದ ಕಳಪೆ ಗುಣಮಟ್ಟದ ಅಡಕೆ ಈಗ ಹೇಗೆ ಸಿಗುತ್ತಿದೆ ಎಂಬುದೇ ಪ್ರಶ್ನೆಯಾಗಿದ್ದು, ಉತ್ತರ ಸಿಗುತ್ತಿಲ್ಲ. ಮಲೆನಾಡಿನ ಅಡಕೆಯಲ್ಲಿ ಗುಣಮಟ್ಟದ ಕೊರತೆ ಇರೋದು ತೀರಾ ಕಡಿಮೆ. ಅಲ್ಲದೆ ಗ್ರೇಡಿಂಗ್‌ ಸಹ ಸರಿಯಾಗಿ ಮಾಡಲಾಗುತ್ತದೆ. ಆದರೂ ಇದ್ದಕ್ಕಿದ್ದಂತೆ ಇಷ್ಟೊಂದು ಪ್ರಮಾಣದಲ್ಲಿ ಅಡಕೆ ವಾಪಸ್ಸಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ತಿರಸ್ಕೃತ ಅಡಕೆ ಯಾರಿಗೆ ಲಾಭ?
ಗುಟ್ಕಾ ಮತ್ತು ಅಡಕೆ ಪುಡಿ ಉತ್ಪಾದನಾ ಕಂಪನಿಗಳ ಬೇಡಿಕೆಗೆ ಅನುಗುಣವಾಗಿ ಶಿವಮೊಗ್ಗದಿಂದ ಉತ್ತರ ಭಾರತದ ನಿಗದಿತ ವಿಳಾಸಕ್ಕೆ ಅಡಕೆ ವಿಲೇವಾರಿಯಾಗುತ್ತದೆ. ಆದರೆ, ಅದೇ ಲಾರಿಯಲ್ಲಿ ಕಳಪೆ ಗುಣಮಟ್ಟದ ಅಡಕೆ ತುಂಬಿ ತಿರಸ್ಕೃತದ ಲೇಬಲ್‌ ಅಂಟಿಸಿಕೊಂಡು ಶಿವಮೊಗ್ಗಕ್ಕೆ ತರಲಾಗುತ್ತದೆ. ಎಪಿಎಂಸಿಯಲ್ಲಿ ಖರೀದಿಯಾಗಿ ಹೊರಗೆ ಹೋಗುವ ಅಡಕೆಗೆ ಶೇ.1.50 ಎಪಿಎಂಸಿ ಸೆಸ್‌ ಮತ್ತು ಶೇ.3ರಷ್ಟು ಜಿಎಸ್‌ಟಿ ವಿಧಿಸಲಾಗುತ್ತದೆ. ಒಟ್ಟಾರೆ ಶೇ.4.50ರಷ್ಟು ತೆರಿಗೆ ಬೀಳುತ್ತದೆ. ಸಾಮಾನ್ಯವಾಗಿ ಲಾರಿಗಳಲ್ಲಿ 70ರಿಂದ 80 ಲಕ್ಷ ರೂ.ಮೌಲ್ಯದ 20ರಿಂದ 21 ಟನ್‌ ಅಡಕೆ ತುಂಬಲಾಗುತ್ತದೆ. ಅಂದರೆ, ಅದಕ್ಕೆ 3ರಿಂದ 4 ಲಕ್ಷ ರೂ.ನಷ್ಟು ತೆರಿಗೆ ವಿಧಿಸಲಾಗುತ್ತದೆ. ಅಕಸ್ಮಾತ್‌ ಅಡಕೆ ತಿರಸ್ಕೃತಗೊಂಡಲ್ಲಿ ಸಂಪೂರ್ಣ ತೆರಿಗೆ ಮನ್ನಾ ಆಗಲಿದೆ. ಹೀಗೆ ತಿರಸ್ಕೃತಗೊಂಡ ಅಡಕೆಯಿಂದ ಅಕ್ಟೋಬರ್‌ ತಿಂಗಳಲ್ಲೇ ವರ್ತಕರು 70ರಿಂದ 80 ಲಕ್ಷ ರೂ. ತೆರಿಗೆ ವಾಪಸ್‌ ಪಡೆದಿದ್ದಾರೆ.

ಈ ಅವಕಾಶವನ್ನೇ ಬಳಸಿಕೊಂಡು ವರ್ತಕರು ಉತ್ತರ ಭಾರತದ ಕಡೆಯಿಂದ ಕಳಪೆ ಗುಣಮಟ್ಟದ ಅಡಕೆಯನ್ನು ತಿರಸ್ಕೃತದ ಲೆಕ್ಕದಲ್ಲಿ ಶಿವಮೊಗ್ಗಕ್ಕೆ ತರಿಸಿಕೊಳ್ಳುತ್ತಿದ್ದಾರೆಂದು ಹೇಳಲಾಗುತ್ತಿದೆ. ರೈತರು ಅಡಕೆಯನ್ನು ಎಪಿಎಂಸಿಗೆ ತಂದಾಗ  “ಎ’ ಬಿಲ್‌ ನೀಡಲಾಗುತ್ತದೆ. ಖರೀದಿಯಾದ ಬಳಿಕ  “ಬಿ’ ಬಿಲ್‌ ಹಾಗೂ ಅದೇ ಅಡಕೆಯನ್ನು ಹೊರಗೆ ಮಾರಾಟ ಮಾಡಿದಾಗ  “ಸಿ’ ಬಿಲ್‌ ನೀಡಲಾಗುತ್ತದೆ. ಆದರೆ, ಸಿ ಬಿಲ್‌ನಲ್ಲಿ ಅಡಕೆಯ ತೂಕ ಮತ್ತು ಧಾರಣೆ ಇರುತ್ತದೆಯೇ ಹೊರತು ಯಾವ ಮಾದರಿ ಎಂಬುದು ಇರುವುದಿಲ್ಲ.

Advertisement

ಕಳಪೆ ಗುಣಮಟ್ಟದ ಅಡಕೆ ತಿರಸ್ಕೃತಗೊಂಡು ವಾಪಸಾಗುವುದು ವರ್ತಕರಿಗೆ ನಷ್ಟ. ಮಲೆನಾಡಿನ ಅಡಕೆಗೆ ಅವಮಾನವೆಂದು ಎಪಿಎಂಸಿ ಭಾವಿಸಿತ್ತು. ಆದರೆ, ಇದರ ಹಿಂದೆ ತೆರಿಗೆ ವಂಚನೆಯ ಹುನ್ನಾರ ಅಡಗಿರಬಹುದೆಂಬ ಸಂಶಯವೂ ಮೂಡಿದೆ.

ಹಿಂದೆಲ್ಲ ಇಷ್ಟೊಂದು ಪ್ರಮಾಣದಲ್ಲಿ ಅಡಕೆ ವಾಪಸ್‌ ಬರುತ್ತಿರಲಿಲ್ಲ. ಈ ವರ್ಷ ಇದರ ಪ್ರಮಾಣ ತೀವ್ರವಾಗಿ ಏರಿದೆ. ಕೆಲ ವ್ಯಾಪಾರಿಗಳ ಪ್ರಕಾರ ದೆಹಲಿಯ ವ್ಯಾಪಾರಿಯೊಬ್ಬರೇ ಈ ರೀತಿ ಮಾಡುತ್ತಿದ್ದಾರೆ. ಆ ಕಂಪನಿಯಲ್ಲಿ ಹೊಸದಾಗಿ ಬಂದಿರುವ ಯುವಕರು ಮುಲಾಜಿಲ್ಲದೆ ಮಾಲನ್ನು ರಿಜೆಕ್ಟ್ ಮಾಡುತ್ತಿದ್ದಾರೆ ಎನ್ನುತ್ತಾರೆ. ಇತ್ತೀಚೆಗೆ ಅಡಕೆ ವಾಪಸ್‌ ಬರುತ್ತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
– ಹೆಸರು ಹೇಳಲಿಚ್ಛಿಸದ ಎಪಿಎಂಸಿ ಅಧಿಕಾರಿ.

ಭಾರೀ ಪ್ರಮಾಣದಲ್ಲಿ ಅಡಕೆ ವಾಪಸ್ಸಾಗುತ್ತಿರುವುದು ಅನುಮಾನ ಮೂಡಿಸಿದೆ. ಈ ಬಗ್ಗೆ ಮೇಲಧಿ ಕಾರಿಗಳಿಗೆ ಮನವಿ ಮಾಡಿದ್ದೇವೆ. ಸಚಿವರಿಗೂ ಈ ಬಗ್ಗೆ ಗಮನಕ್ಕೆ ತರಲಾಗುವುದು. ಇದುವರೆಗೆ ಎಷ್ಟು ಲಾರಿಗಳು ತಿರಸ್ಕೃತದ ಹೆಸರಲ್ಲಿ ವಾಪಸ್ಸಾಗಿದೆ, ಎಲ್ಲಿಂದ ಬಂದಿದೆ ಎಂಬುದನ್ನು ಪರಿಶೀಲಿಸಲಾಗುತ್ತಿದೆ.
– ದುಗ್ಗಪ್ಪಗೌಡ, ಅಧ್ಯಕ್ಷರು, ಎಪಿಎಂಸಿ, ಶಿವಮೊಗ್ಗ.

– ಶರತ್‌ ಭದ್ರಾವತಿ

Advertisement

Udayavani is now on Telegram. Click here to join our channel and stay updated with the latest news.

Next