ಪುತ್ತೂರು:ಮಂಗಳೂರು ಮಾರುಕಟ್ಟೆಯಲ್ಲಿ ಚಾಲಿ ಅಡಿಕೆ ಧಾರಣೆ ಏರುಗತಿಯಲ್ಲಿ ಸಾಗಿದ್ದು ಡಬ್ಬಲ್ ಚೋಲ್, ಸಿಂಗಲ್ ಚೋಲ್ ಧಾರಣೆ 500 ರೂ. ಹತ್ತಿರಕ್ಕೆ ತಲುಪಿದೆ.
ನಿರೀಕ್ಷಿತ ಪೂರೈಕೆ ಇಲ್ಲದಿರುವುದು ಮತ್ತು ಬಿಸಿಲಿನ ಹೊಡೆತದ ಪರಿಣಾಮ ಮುಂದಿನ ವರ್ಷ ಶೇ. 50ರಷ್ಟು ಫಸಲು ಕಡಿಮೆ ಆಗಬಹುದೆಂಬ ಭೀತಿಯಿಂದ ಅಡಿಕೆಗೆ ಬೇಡಿಕೆ ಸೃಷ್ಟಿಯಾಗಿದ್ದು ಧಾರಣೆ ಹೆಚ್ಚಳದ ಮೂಲಕ ಖರೀದಿಸುವ ಪ್ರಯತ್ನ ನಡೆಯುತ್ತಿದೆ. ಅದಾಗ್ಯೂ ಅಡಿಕೆ ಪೂರೈಕೆ ನಿರೀಕ್ಷಿಸಿದಷ್ಟು ಇಲ್ಲ ಎಂದು ಅಡಿಕೆ ಮಾರುಕಟ್ಟೆ ಮೂಲಗಳು ತಿಳಿಸಿವೆ.
ಡಬ್ಬಲ್ ಚೋಲ್, ಸಿಂಗಲ್ ಚೋಲ್ ಅಡಿಕೆ ಧಾರಣೆ ಕೆ.ಜಿ.ಗೆ 500 ರೂ. ಗಡಿಗೆ ತಲುಪಿದೆ. ಬೆಳ್ಳಾರೆ ಹೊರ ಮಾರುಕಟ್ಟೆಯಲ್ಲಿ ಮೇ 15ರಂದು ಡಬ್ಬಲ್ ಚೋಲ್‌ಗೆ ಕೆ.ಜಿ.ಗೆ 490 ರೂ. ಇದ್ದರೆ, ಸಿಂಗಲ್ ಚೋಲ್‌ಗೆ 480 ರೂ. ಇತ್ತು. ಹೊಸ ಅಡಿಕೆ ಧಾರಣೆ ಕೆ.ಜಿ.ಗೆ 400 ರೂ. ಗಡಿಗೆ ತಲುಪಿದೆ. ಮೇ 15ರಂದು ಹೊರ ಮಾರುಕಟ್ಟೆಯಲ್ಲಿ 390 ರೂ. ತನಕ ಖರೀದಿಯಾಗಿದೆ. ಕ್ಯಾಂಪ್ಕೋ ಮಾರುಕಟ್ಟೆಯಲ್ಲಿನ ಧಾರಣೆ ಗಮನಿಸಿದರೆ ಹೊಸ ಅಡಿಕೆಗೆ ಮಾತ್ರ ಇಲ್ಲಿ ಬೇಡಿಕೆ ಇರುವುದು ಕಂಡು ಬಂದಿದೆ. ಕ್ಯಾಂಪ್ಕೋದಲ್ಲಿ ಮೇ 15ರಂದು ಹೊಸ ಅಡಿಕೆಗೆ 380 ರೂ., ಸಿಂಗಲ್ ಚೋಲ್‌ಗೆ 465 ರೂ., ಡಬ್ಬಲ್ ಚೋಲ್‌ಗೆ 475 ರೂ. ದಾಖಲಾಗಿದೆ.
100 ರೂ. ಇಳಿಕೆ ಕಂಡ ಕೊಕ್ಕೋ!
ಸುಳ್ಯ: ಏರಿಕೆ ಹಾದಿಯಲ್ಲಿ ಐತಿಹಾಸಿಕ ಧಾರಣೆ ಪಡೆದಿದ್ದ ಕೊಕ್ಕೋ ಕೆಲವು ದಿನಗಳಿಂದ ಧಾರಣೆ ಇಳಿಕೆ ಕಾಣುತ್ತಿದ್ದು ಇದೀಗ 100 ರೂ.ಗಳಷ್ಟು ಇಳಿಕೆ ಕಂಡಿದೆ. ಕೆ.ಜಿ.ಗೆ 320 ರೂ. ವರೆಗೆ ಏರಿಕೆ ಕಂಡಿದ್ದ ಹಸಿ ಕೊಕ್ಕೋ ಧಾರಣೆ ಇದೀಗ 220 ರೂ.ಗೆ ಇಳಿದಿದೆ. ಬುಧವಾರ ಕ್ಯಾಂಪ್ಕೋ ಸಂಸ್ಥೆ 150-220 ವರೆಗೆ ಹಸಿ ಕೊಕ್ಕೋ ಖರೀದಿಸಿದೆ. ಒಣ ಕೊಕ್ಕೊ ಧಾರಣೆ 650- 700 ರೂ.ಗಳಷ್ಟಿತ್ತು.