ಪುತ್ತೂರು: ಅಡಿಕೆ ಪೇಟೆಂಟ್‌ಗಾಗಿ ಅರ್ಜಿ ಸಲ್ಲಿಸಲು ಕೃಷಿ ಮಾರುಕಟ್ಟೆ ಹಾಗೂ ಸಂಶೋಧನ ತಂಡವೊಂದು ತೀರ್ಮಾನಿಸಿದ್ದು, ಗುಟ್ಕಾ ನಿಷೇಧ ತೂಗುಗತ್ತಿಯ ನಡುವೆಯೂ ಅಡಿಕೆ ಬೆಳೆಗಾರರಿಗೆ ಸಿಹಿ ಸುದ್ದಿ ಎನಿಸಿದೆ.
ಸಾಗರದಲ್ಲಿ ಇತ್ತೀಚೆಗೆ ನಡೆದ 3 ದಿನಗಳ ಅಡಿಕೆ ಮಾರುಕಟ್ಟೆ ಹಾಗೂ ಕೃಷಿ ಕುರಿತ ಸಮಾವೇಶದಲ್ಲಿ ಕೃಷಿ ಮಾರುಕಟ್ಟೆ ತಜ್ಞ ಡಾ| ವಿಘ್ನೇಶ್ವರ ವರ್ಮುಡಿ ನೇತೃತ್ವದ ಕೃಷಿ ಮಾರುಕಟ್ಟೆ ಹಾಗೂ ಸಂಶೋಧನ ತಂಡದಿಂದ ಅಡಿಕೆ ಪೇಟೆಂಟ್‌ಗಾಗಿ ಅರ್ಜಿ ಸಲ್ಲಿಸಲು ತೀರ್ಮಾನಿಸಲಾಗಿದೆ.
386 ಉತ್ಪನ್ನಗಳಿಗೆ ಪೇಟೆಂಟ್
ಈಗಾಗಲೇ ಭಾರತದ 386 ಕೃಷಿ ಉತ್ಪನ್ನಗಳಿಗೆ ಪೇಟೆಂಟ್ ಲಭಿಸಿದೆ. ಸದ್ಯಕ್ಕೆ ಅಡಿಕೆ ಸೇರಿದಂತೆ ಕರಾವಳಿಯ 80ಕ್ಕೂ ಅಧಿಕ ಕೃಷಿ ಉತ್ಪನ್ನ ಹಾಗೂ ವಾಣಿಜ್ಯ ಉತ್ಪನ್ನಗಳಿಗೆ ಪೇಟೆಂಟ್ ಇಲ್ಲ. ಅಡಿಕೆ ಬೆಳೆಯುವ ಮಲೇಶ್ಯ, ಇಂಡೋನೇಶ್ಯ, ಆಫ್ರಿಕದ ಕೆಲವು ದೇಶಗಳು ಈವರೆಗೆ ಅಡಿಕೆ ಪೇಟೆಂಟ್‌ಗಾಗಿ ಅರ್ಜಿ ಸಲ್ಲಿಸಿಲ್ಲ. ಅರ್ಜಿ ಸಲ್ಲಿಸಿದ ಅನಂತರ ಒಂದು ವರ್ಷ ಕಾಲ ಅದು ಪರಿಶೀಲನೆಗೆ ಒಳಪಡುತ್ತದೆ. ಸಲ್ಲಿಕೆಯಾದ ಅರ್ಜಿ ಆಧಾರದಲ್ಲಿ ಪೇಟೆಂಟ್ ನೀಡುವ ಸಂಸ್ಥೆ ನೋಟಿಫಿಕೇಶನ್ ಹೊರಡಿಸುತ್ತದೆ. ಈ ಸಂದರ್ಭ ಅಡಿಕೆಯ ಸಾಧಕ – ಬಾಧಕ, ಪ್ರಯೋಗಾಲಯದ ವರದಿ, ದೂರು, ಪರ -ವಿರೋಧಗಳ ಚರ್ಚೆ ನಡೆದು ಅಂತಿಮವಾಗಿ ಪೇಟೆಂಟ್ ನೀಡುತ್ತದೆ.
ಕರಾವಳಿ ಕರ್ನಾಟಕ ಹಾಗೂ ಮಲೆನಾಡಿನ ಪ್ರದೇಶದಲ್ಲಿ ಬೆಳೆಯುವ ಅಡಿಕೆಯ ಗುಣಮಟ್ಟ, ರುಚಿ ಹಾಗೂ ಗಾತ್ರದಲ್ಲಿ ವ್ಯತ್ಯಾಸವಿದೆ. ಅಡಿಕೆಯ ಗುಣಮಟ್ಟ ಹಾಗೂ ಪ್ರಾಮುಖ್ಯದ ಆಧಾರದಲ್ಲಿ ಪೇಟೆಂಟ್ ಕೇಳಲು ತೀರ್ಮಾನಿಸಲಾಗಿದೆ. ಮಲೆನಾಡಿನ ಅಡಿಕೆ ಉತ್ತಮ ಗುಣಮಟ್ಟ ಹೊಂದಿದ್ದರೆ ಕರಾವಳಿಯ ಅಡಿಕೆ ವಾಣಿಜ್ಯ ಉತ್ಪನ್ನವಾಗಿ ಪ್ರಾಮುಖ್ಯ ಪಡೆದಿದೆ. ಹಲವು ರೀತಿಯ ಲಾಭ ಅಡಿಕೆ ಪೇಟೆಂಟ್ ಭಾರತಕ್ಕೆ ಲಭ್ಯವಾದರೆ ಹಲವು ರೀತಿಯ ಲಾಭಗಳಿವೆ. ಅಡಿಕೆ ಮಾರುಕಟ್ಟೆ ಮೌಲ್ಯ ಹೆಚ್ಚಳ, ಬ್ರ್ಯಾಂಡ್ ಆಗಿ ಮಾರುಕಟ್ಟೆಯಲ್ಲಿ ವ್ಯವಸ್ಥೆ, ಅಡಿಕೆ ಬೆಳೆಗಾರರ, ಬೆಲೆಯ ರಕ್ಷಣೆಗೆ ಸರಕಾರದಿಂದ ಕ್ರಮ ಕೈಗೊಳ್ಳಲು ಸಾಧ್ಯ, ಅಡಿಕೆಗೂಪ್ರಮುಖ ಸ್ಥಾನಮಾನ ಲಭ್ಯವಾಗಲಿದೆ.
ನಮ್ಮ ಕೃಷಿ ಮಾರುಕಟ್ಟೆ ಹಾಗೂ ಸಂಶೋಧನ ತಂಡ ಹಾಗೂ ಸರಕಾರ ಜತೆಯಾಗಿ ಪೇಟೆಂಟ್‌ಗಾಗಿ ಅರ್ಜಿ ಸಲ್ಲಿಸಿದರೆ ಬೇಗ ಲಭ್ಯವಾಗಬಹುದು. ಈಗಾಗಲೇ ಅಡಿಕೆ ಪೇಟೆಂಟ್‌ಗಾಗಿ ಅರ್ಜಿ ಸಲ್ಲಿಸಲು ಒಂದು ಸುತ್ತಿನ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ. ಕೃಷಿ ಹಾಗೂ ವಾಣಿಜ್ಯ ಮಾರುಕಟ್ಟೆ ತಜ್ಞರ ಸಮಗ್ರ ವರದಿ ಪಡೆದು ಅರ್ಜಿ ಸಲ್ಲಿಸಲಾಗುವುದು.
ಡಾ| ವಿಘ್ನೇಶ್ವರ ವರ್ಮುಡಿ, ಕೃಷಿ ಮಾರುಕಟ್ಟೆ ತಜ್ಞ