Advertisement

ಅಡಿಕೆ ಹಿಂಗಾರ ಒಣಗುವ ರೋಗ ; ಪುತ್ತೂರು, ಸುಳ್ಯದ ಶೇ. 80 ತೋಟಗಳಲ್ಲಿ ಬಾಧೆ

01:22 AM Feb 22, 2022 | Team Udayavani |

ಪುತ್ತೂರು: ಅಡಿಕೆ ಧಾರಣೆ ಏರಿಕೆಯ ಖುಷಿಯ ನಡುವೆ ಹಿಂಗಾರ ಒಣಗುವ ರೋಗ ತಗಲಿರುವುದರಿಂದ ಅಡಿಕೆ ಬೆಳೆಗಾರರಿಗೆ ಮುಂದಿನ ವರ್ಷದ ಫಸಲು ಕೈಕೊಡುವ ಆತಂಕ ಮೂಡಿದೆ.

Advertisement

ಪುತ್ತೂರು, ಸುಳ್ಯ ಭಾಗದ ಅಡಿಕೆ ತೋಟಗಳಲ್ಲಿ ಹಿಂಗಾರ ಒಣಗುತ್ತಿದ್ದು ನಳ್ಳಿ (ಎಳೆ ಅಡಿಕೆ) ಭಾರೀ ಪ್ರಮಾಣದಲ್ಲಿ ನೆಲಕ್ಕೆ ಉದುರುತ್ತಿವೆ. ರೋಗ ನಿಯಂತ್ರಣಕ್ಕೆ ಔಷಧ ಸಿಂಪಡಿಸುತ್ತಿದ್ದರೂ ನಿರೀಕ್ಷಿತ ಪ್ರಯೋಜನ ಇಲ್ಲ ಎನ್ನುವುದು ಬೆಳೆಗಾರರ ಅಳಲು. ಆದರೆ ಸಮಗ್ರ ರೋಗ ನಿಯಂತ್ರಣಕ್ಕೆ ಸಿಪಿಸಿಆರ್‌ಐ ಕೆಲವು ಸಲಹೆಗಳನ್ನು ನೀಡಿದ್ದು ಇದರ ಪಾಲನೆಯಿಂದ ರೋಗ ನಿಯಂತ್ರಣ ಸಾಧ್ಯವಿದೆ.

ಶೇ. 80ಕ್ಕೂ ಅಧಿಕ
ತೋಟದಲ್ಲಿ ಲಕ್ಷಣ
ಉಭಯ ತಾಲೂಕಿನ ಶೇ. 80ಕ್ಕೂ ಅಧಿಕ ತೋಟಗಳಲ್ಲಿ ಅಡಿಕೆಯ ಹಿಂಗಾರ ಬಾಡುವುದು, ನಳ್ಳಿ ಉದುರುವಿಕೆ ಕಂಡುಬಂದಿದ್ದು, ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ರೋಗದ ತೀವ್ರತೆ ಈ
ಬಾರಿ ಹೆಚ್ಚು. ಹವಾಮಾನ ವೈಪರೀತ್ಯವು ರೋಗ ಹೆಚ್ಚಳಕ್ಕೆ ಕಾರಣ ಆಗಿರುವ ಅನುಮಾನ ಇದೆ ಎನ್ನುತ್ತಾರೆ ಬೆಳೆಗಾರ ಚಂದ್ರಶೇಖರ ಸುಳ್ಯ.

ಏನಿದು ರೋಗ
ಹಿಂಗಾರ ಒಣಗಲು ಕೊಲೆಟೋಟ್ರೈಕಮ್‌ ಎನ್ನುವ ಶಿಲೀಂಧ್ರ ಕಾರಣ. ರೋಗಾಣುವು ಹೆಣ್ಣು ಹೂವಿನ ಶಲಾಕಾಗ್ರ/ಪರಾಗ ಸ್ಪರ್ಶ ಆಗುವ ಭಾಗ ಅಥವಾ ಗಂಡು ಹೂವುಗಳು ಬಿದ್ದ ಅನಂತರ ಅವುಗಳು ಹೂ ಗೊಂಚಲಿಗೆ ತಾಗಿಕೊಂಡಿರುವ ಜಾಗದ ಮೂಲಕ ರೋಗ ಹಬ್ಬಿಸುತ್ತದೆ. ರೋಗದಿಂದ ಸತ್ತ ಮತ್ತು ರೋಗ ಬಾಧಿತ ಹಿಂಗಾರಗಳಲ್ಲಿ ಪ್ರಾಥಮಿಕ ಹಂತದ ಸೋಂಕು ಇದ್ದು, ಗಾಳಿ ಮುಖೇನ ಆರೋಗ್ಯವಂತ ಸಿಂಗಾರಕ್ಕೆ ಹರಡುತ್ತದೆ.

ರೋಗ ನಿರ್ವಹಣೆ
ರೋಗ ಬಾಧಿತ ಹಿಂಗಾರಗಳಲ್ಲಿ ಶಿಲೀಂಧ್ರವು ಸುಮಾರು 8 ತಿಂಗಳ ಕಾಲ ಇರುತ್ತದೆ. ಆದುದರಿಂದ ಒಣಗಿದ ಹಿಂಗಾರವನ್ನು ತೆಗೆದು ನಾಶಪಡಿಸುವುದು ಸೋಂಕನ್ನು ಕಡಿಮೆ ಮಾಡಲು ಮತ್ತು ರೋಗ ಹರಡುವುದನ್ನು ನಿಯಂತ್ರಿಸಲು ಬಹಳ ಮುಖ್ಯ ವಿಧಾನ. ಹೆಚ್ಚು ಸಮಸ್ಯೆಯಿದ್ದರೆ ಪ್ರೋಪಿಕೊನಝೋಲ್‌ ಔಷಧವನ್ನು ಬಳಸಬಹುದು. ಈ ಶಿಲೀಂಧ್ರ ನಾಶಕವನ್ನು ಜನವರಿ-ಫೆಬ್ರವರಿ ತಿಂಗಳಲ್ಲಿ 1 ಲೀಟರ್‌ ನೀರಿಗೆ 3 ಎಂಎಲ್‌ನಂತೆ ಸಿಂಪಡಣೆ ಮಾಡಬಹುದು. 20-25 ದಿನಗಳ ಅನಂತರ ಎರಡನೇ ಸಿಂಪಡಣೆ ಮಾಡಬಹುದು. ಅಡಿಕೆ ಮರದ ಉತ್ತಮ ಆರೋಗ್ಯಕ್ಕೆ ಸಮತೋಲಿತ ಪೋಷಕಾಂಶ ನೀಡುವುದು ಬಹಳ ಮುಖ್ಯ. ಜಾಗರೂಕತೆಯಿಂದ ಶಿಲೀಂಧ್ರ ನಾಶಕಗಳನ್ನು ಮಂಜಿನಂತೆ ಸಿಂಗಾರಗಳಿಗೆ ಸಿಂಪಡಣೆ ಮಾಡಬೇಕು ಎನ್ನುತ್ತಾರೆ ವಿಟ್ಲ ಸಿಪಿಸಿಆರ್‌ಐ ವಿಜ್ಞಾನಿ ಡಾ| ಭವಿಷ್ಯ.

Advertisement

ರೋಗ ಲಕ್ಷಣ
ಹಿಂಗಾರ ಮೊದಲು ಹಳದಿಯಾಗಿ ಅನಂತರ ತುದಿಯಿಂದ ಹಿಮ್ಮುಖವಾಗಿ ಹಳದಿಯಾಗುತ್ತದೆ. ಅನಂತರ ಕಂದು ಬಣ್ಣಕ್ಕೆ ತಿರುಗಿ ಒಣಗಲಾರಂಭಿಸುತ್ತದೆ. ಮುಂದಿನ ಹಂತದಲ್ಲಿ ರೋಗ ಪಸರಿ ಅವುಗಳು ಉದುರುತ್ತವೆ. ಕೆಲವೊಮ್ಮೆ ಹಿಂಗಾರ ಒಣಗುವ ರೋಗ ಲಕ್ಷಣ ಇಲ್ಲದೇ ನೇರ ಸೋಂಕು ತಗಲಿ ನಳ್ಳಿ ಉದುರುವುದೂ ಇದೆ ಎನ್ನುತ್ತಾರೆ ವಿಜ್ಞಾನಿಗಳು.

Advertisement

Udayavani is now on Telegram. Click here to join our channel and stay updated with the latest news.

Next