Advertisement

ಅಡಿಕೆಗೆ ಕಲಬೆರಕೆಯ ಕರಾಮತ್ತು: ಸಂಕಷ್ಟದಲ್ಲಿ ಅಡಿಕೆ ಬೆಳೆ

12:49 PM Apr 29, 2019 | keerthan |

ವಿಟ್ಲ: ಕೊಳೆ ರೋಗ, ಹಳದಿ ರೋಗದಿಂದ ತತ್ತರಿಸಿರುವ ಅಡಿಕೆ ಬೆಳೆಗೆ ಈಗ ಕಳಪೆ ಗುಣಮಟ್ಟದ ಕಲಬೆರಕೆ ಅಡಿಕೆಯ ಅಪಾಯ ಎದುರಾಗಿದೆ. ವಿದೇಶದಿಂದ ಕಡಿಮೆಬೆಲೆಗೆ ಕಳಪೆ ಗುಣಮಟ್ಟದ ಅಡಿಕೆಯನ್ನು ಆಮದು ಮಾಡಿ ಕೊಂಡು ಸ್ಥಳೀಯ ಅತ್ಯುತ್ತಮ ಗುಣಮಟ್ಟದ ಅಡಿಕೆಯೊಂದಿಗೆ ಕಲಬೆರಕೆ ಮಾಡಿ ಇಡೀ ಅಡಿಕೆಯ ಮೌಲ್ಯವನ್ನೇ ಕಡಿಮೆಗೊಳಿಸುವ ವ್ಯವಸ್ಥಿತ ತಂತ್ರ ಬೆಳಕಿಗೆ ಬಂದಿದೆ. ಈ ದಂಧೆ ಹೊಸದಲ್ಲವಾದರೂ ಸಣ್ಣ ಮಟ್ಟದಲ್ಲಿತ್ತು. ಆದರೀಗ ಕರಾವಳಿ ಅಡಿಕೆ ಮಾರುಕಟ್ಟೆಯನ್ನು ತಲ್ಲಣಗೊಳಿಸುವಷ್ಟು ಬೆಳೆಯುತ್ತಿದೆ. ಇದು ಹೀಗೆ ಮುಂದುವರಿದರೆ ಮತ್ತಷ್ಟು ಸಂಕಷ್ಟ ಎದುರಿಸುವ ಸ್ಥಿತಿ ನಿರ್ಮಾಣವಾಗಲಿದೆ ಎಂಬ ಆತಂಕ ದ.ಕ. ಜಿಲ್ಲೆಯ ಬೆಳೆಗಾರರದ್ದು, ಜಿಲ್ಲೆಯ ಸುಮಾರು 39 ಸಾವಿರ ಹೆಕ್ಟೇರ್‌ ವ್ಯಾಪ್ತಿಯಲ್ಲಿ ಅಡಿಕೆ ಬೆಳೆಯಲಾಗುತ್ತಿದೆ.

Advertisement

ವಾಸ್ತವ
ವಾಗಿ ವಿಟ್ಲ – ಬಾಯಾರು – ಬದಿಯಡ್ಕ ಪ್ರದೇಶದ ಅಡಿಕೆಗೆ ಬೇಡಿಕೆ ಹೆಚ್ಚು. ಈ ಪ್ರದೇಶದ ಅಡಿಕೆಯನ್ನು ಪ್ರತ್ಯೇಕಿಸಿ ಮಾರುಕಟ್ಟೆಯಲ್ಲಿ ವಿಶೇಷ ಮೌಲ್ಯ ನೀಡಲಾಗುತ್ತಿತ್ತು. ಆದರೆ ಈಗ ಪರಿಸ್ಥಿತಿಯೇ ಸಂಪೂರ್ಣ ಬದಲಾಗುತ್ತಿದೆ.

ಮಾರುಕಟ್ಟೆ ಬೀಳಿಸುವ ತಂತ್ರ
ವಿದೇಶಿ ಒಪ್ಪಂದಗಳನ್ನು ದುರುಪಯೋಗ ಪಡಿಸಿಕೊಳ್ಳುವ ದಂಧೆಕೋರರು ನೇಪಾಲ, ಶ್ರೀಲಂಕಾ, ಬಾಂಗ್ಲಾದೇಶ ಮೂಲಕ ಬರ್ಮಾ – ಇಂಡೋನೇಶಿಯಾಗಳಲ್ಲಿ ಬೆಳೆಯುವ ಕೆಳದರ್ಜೆಯ ಅಡಿಕೆಯನ್ನು ಕರಾವಳಿಗೆ ತರಿಸಿಕೊಳ್ಳುತ್ತಿದ್ದಾರೆ. ಕೆಜಿಗೆ 145 ರೂ.ಗಳಿಗೆ ಸಿಗುವ ಈ ಕಳಪೆ ದರ್ಜೆಯ ಅಡಿಕೆಯನ್ನು ಸ್ಥಳೀಯ ಉತ್ತಮ ಗುಣಮಟ್ಟದ ಅಡಿಕೆ ಜತೆ ಮಿಶ್ರಣ ಮಾಡಲಾಗುತ್ತಿದೆ. ವ್ಯಾಪಾರಿಗಳು ಗಾರ್ಬಲ್‌ನಲ್ಲಿ ಎರಡನ್ನೂ ಮಿಶ್ರಗೊಳಿಸಿ,
ಮತ್ತೆ ಮಾರುಕಟ್ಟೆಗಿಳಿಸುತ್ತಾರೆ. ಈ ಕುತಂತ್ರದಿಂದ ಕರಾವಳಿಯ ಉತ್ತಮ ಅಡಿಕೆ ಗುಜರಾತ್‌ ಮತ್ತು ಉತ್ತರ ಭಾರತದ ಮಾರುಕಟ್ಟೆಯಲ್ಲಿ ಗಳಿಸಿದ ಪ್ರಸಿದ್ಧಿಗೆ ಕುತ್ತು ಬರತೊಡಗಿದೆ. ಜತೆಗೆ ಬೆಲೆಯೂ ಕೆಜಿಗೆ 340 ರೂ.ಗಳಿಂದ 230 ರೂ.ಗಿಳಿದಿದೆ ಎನ್ನಲಾಗುತ್ತಿದೆ. ಈ ಅಪಾಯದತ್ತ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸರಕಾರಗಳು ಗಮನಹರಿಸಿ ಕ್ರಮ ಕೈಗೊಳ್ಳಬೇಕೆಂಬುದು ಬೆಳೆಗಾರರ ಆಗ್ರಹ.

ವಿದೇಶಿ ಅಡಿಕೆ ರುಚಿಯಿಲ್ಲ
ಈ ಕಲಬೆರಕೆಯನ್ನು ಸುಲಭವಾಗಿ ಪತ್ತೆ ಮಾಡಬಹುದು. ಬರ್ಮಾ ಅಡಿಕೆ ಗಟ್ಟಿ. ವಾಸನೆ ಮತ್ತು ರುಚಿಯಲ್ಲಿ ವ್ಯತ್ಯಾಸವಿದ್ದು, ಮೇಲ್ನೋಟಕ್ಕೇ ಪತ್ತೆಹಚ್ಚಬಹುದು.

ಉದಯವಾಣಿ ಆಗ್ರಹ
ವಿದೇಶದಿಂದ ಆಮದಾಗುತ್ತಿರುವ ಕಳಪೆ ಗುಣಮಟ್ಟದ ಅಡಿಕೆಯನ್ನು ಸ್ಥಳೀಯ ಅಡಿಕೆಯೊಂದಿಗೆ ಬೆರೆಸಿ ಮಾರುವ ತಂತ್ರ ನಿಜಕ್ಕೂ ಅಪಾಯಕಾರಿ. ನಮ್ಮ ಅತ್ಯುತ್ತಮ ಗುಣಮಟ್ಟದ ಅಡಿಕೆಯ ಮೌಲ್ಯವನ್ನೂ ಕುಸಿಯುವಂತೆ ಮಾಡುವ ಹುನ್ನಾರ. ಹಲವು ವರ್ಷಗಳ ಪ್ರಸಿದ್ಧಿಗೆ ಕಪ್ಪು ಮಸಿ ಬಳಿಯುವ ಕುತಂತ್ರ. ಈಗ ಎಚ್ಚೆತ್ತುಕೊಳ್ಳದಿದ್ದರೆ ಕ್ರಮೇಣ ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕುವುದು ಸ್ಪಷ್ಟ. ಸ್ಥಳೀಯ ಅಡಿಕೆ ಬೆಲೆ ಕುಸಿಯುವುದಲ್ಲದೆ ವ್ಯಾಪಾರಸ್ಥರು ಅಸಲಿ ಅಡಿಕೆಯನ್ನು ನಂಬದ ಸ್ಥಿತಿ ಉದ್ಭವಿಸಬಹುದು. ಹೀಗಾಗುವ ಮೊದಲು ಸ್ಥಳೀಯ ಜನಪ್ರತಿನಿಧಿಗಳು ಕೂಡಲೇ ವಿಶೇಷಾಸಕ್ತಿ ವಹಿಸಿ ರಾಜ್ಯ ಸಚಿವರು, ರಾಜ್ಯ ಸರಕಾರದ ಮೂಲಕ ಕೇಂದ್ರ ಸರಕಾರದ ಗಮನಕ್ಕೆ ತಂದು ಕಲಬೆರಕೆ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ಯಶಸ್ವಿ ಯಾಗಬೇಕು. ಈ ನಿಟ್ಟಿನಲ್ಲಿ ಪಕ್ಷಾತೀತವಾಗಿ ಕಾರ್ಯನಿರ್ವಹಿಸಬೇಕಾದುದು ತುರ್ತು ಅಗತ್ಯ.

Advertisement

ಸಾರ್ಕ್‌ ಕೂಟದ ಸದಸ್ಯರಾಗಿ ಭಾರತವೂ ಸೇರಿದಂತೆ, ಶ್ರೀಲಂಕಾ, ಬಾಂಗ್ಲಾದೇಶ, ಮಾಲ್ಡೀವ್ಸ್‌, ಭೂತಾನ್‌, ನೇಪಾಲ, ಆಪಾ^ನಿಸ್ಥಾನ, ಪಾಕಿಸ್ಥಾನ ರಾಷ್ಟ್ರಗಳಿವೆ. ಸಾರ್ಕ್‌ ದೇಶಗಳ ನಡುವಿನ ವಾಣಿಜ್ಯ ಒಪ್ಪಂದದಂತೆ ಆಯಾ ದೇಶಗಳಲ್ಲಿ ಬೆಳೆದ ಬೆಳೆಗಳನ್ನು ನಮ್ಮಲ್ಲಿ ಮಾರಲು ಅವಕಾಶವಿದೆ. ಇದನ್ನು ದುರುಪಯೋಗ ಮಾಡಿಕೊಳ್ಳುತ್ತಿರುವ ಸಾರ್ಕ್‌ ಕೂಟದಲ್ಲಿರದ ಕೆಲವು ದೇಶಗಳು ಸಾರ್ಕ್‌ ಸದಸ್ಯ ರಾಷ್ಟ್ರಗಳಿಗೆ ತಮ್ಮ ಉತ್ಪನ್ನಗಳನ್ನು ಪೂರೈಸಿ ಅಲ್ಲಿಂದ ಭಾರತಕ್ಕೆ ಕಳಿಸಲಾಗುತ್ತಿದೆ. ಇಲ್ಲಿನ ಕೆಲವು ವ್ಯಾಪಾರಿಗಳ ಮೂಲಕ ಈ ದಂಧೆ ನಡೆಯುತ್ತಿದೆ. ಇತ್ತೀಚೆಗಷ್ಟೇ ವಿಯೆಟ್ನಾಂನ ಕಾಳುಮೆಣಸನ್ನು ನಮ್ಮಲ್ಲಿ ಮಾರಲು ಇದೇ ತಂತ್ರವನ್ನು ಬಳಸಲಾಗುತ್ತಿತ್ತು. ಈ ಸಂಬಂಧ ಕೇಂದ್ರ ಸರಕಾರಕ್ಕೂ ಕ್ರಮ ಕೈಗೊಳ್ಳಲು ಮನವಿ ಮಾಡಲಾಗಿತ್ತು.

ನಿಯಂತ್ರಿಸದಿದ್ದರೆ ಉಳಿಗಾಲವಿಲ್ಲ!
ವಿದೇಶದಿಂದ ಆಮದಾಗುತ್ತಿದ್ದ ಅಡಿಕೆ ತುಂಬಿದ ಲಾರಿಯನ್ನು ನಾನು ಗೆಳೆಯರೊಂದಿಗೆ ಪರೀಕ್ಷಿಸಿದ್ದೇನೆ. ಕೆಜಿಗೆ 145 ರೂ.ಗಳ ಅಡಿಕೆಯನ್ನು ಪುತ್ತೂರಿನ ಖಾಸಗಿ ಗಾರ್ಬಲ್‌ಗೆ ಒಯ್ಯಲಾಗುತ್ತಿತ್ತು. ಆರಂಭದಲ್ಲಿ ಲಾರಿ ಚಾಲಕ ನಮ್ಮ ದಿಕ್ಕು ತಪ್ಪಿಸಲೆತ್ನಿಸಿದರೂ ಆಮೇಲೆ ಬಾಯಿಬಿಟ್ಟ. ವಾರಕ್ಕೆ ಮೂರು ಬಾರಿ ಪೂರೈಕೆಯಾಗುತ್ತಿದೆ ಎಂದು ಹೇಳಿದಾಗ ಸತ್ಯ ತಿಳಿಯಿತು. ಅಂದರೆ ಈ ಪರಿಸರದ ಎಲ್ಲ ಗಾರ್ಬಲ್‌ಗ‌ಳಿಗೆ ಈ ಅಡಿಕೆ ಪ್ರವೇಶಿಸಿದರೆ ನಮ್ಮ ಕಥೆ ಮುಗಿದಂತೆಯೇ. ಇದನ್ನು ತಡೆಗಟ್ಟದಿದ್ದರೆ ನಮಗೆ ಉಳಿಗಾಲವಿಲ್ಲ. ಮುರಳೀಧರ ರೈ, ಮಠಂತಬೆಟ್ಟು

ಗಡಿಯಲ್ಲೇ ನಿಯಂತ್ರಿಸಿ
ಅಡಿಕೆ ಮಾರುಕಟ್ಟೆ ಧಾರಣೆ ಏರಿಕೆ ಕಾಣದ್ದಕ್ಕೆ ವಿದೇಶಿ ಅಡಿಕೆಯ ಆಮದು ಕಾರಣ. ಇದನ್ನು ಗಡಿಯಲ್ಲಿ ನಿಯಂತ್ರಿಸಿದಲ್ಲಿ ಮಾತ್ರ ಧಾರಣೆ ಏರಿಕೆ ಸಾಧ್ಯ. ಬಿಳಿ ಅಡಿಕೆ ಮತ್ತು ಕೆಂಪು ಅಡಿಕೆ ಮಿಶ್ರಣದಿಂದ ಪಾನ್‌ಮಸಾಲಾ ತಯಾರಿಸುತ್ತಿರುವುದು, ಕಲಬೆರಕೆ ಅಡಿಕೆ ಗುಜರಾತಿಗೆ ತಲುಪಿರುವುದು, ಹವಾಲಾ ವ್ಯವಹಾರ ಸ್ಥಗಿತಗೊಂಡಿರುವುದು ಕೂಡ ದರ ಕುಸಿತಕ್ಕೆ ಕಾರಣ.
ಎ.ಎಸ್‌. ಭಟ್‌, ನಿವೃತ್ತ ಎಂಡಿ-ಹಾಲಿ ನಿರ್ದೇಶಕ, ಕ್ಯಾಂಪ್ಕೋ

ಗಮನಕ್ಕೆ ಬಂದಿದೆ
ವಿದೇಶದಿಂದ ಆಮದಾದ ಅಡಿಕೆಯನ್ನು ಜಿಲ್ಲೆಯ ಅಡಿಕೆಯೊಂದಿಗೆ ಮಿಶ್ರಣ ಮಾಡಿ ಬೆಲೆ ಕುಸಿತಕ್ಕೆ ತಂತ್ರ ನಡೆಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಕ್ಯಾಂಪ್ಕೋ ಅಧಿಕಾರಿಗಳ ಜತೆ ಚರ್ಚಿಸಿದ್ದು, ಕ್ಯಾಂಪ್ಕೋ ನಿಯೋಗ ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿ ಕ್ರಮ ಕೈಗೊಳ್ಳಲು ವಿನಂತಿಸಿದೆ. ಇದು ನಮ್ಮ ವ್ಯಾಪ್ತಿಗೆ ಬರದು. ಮಾರುಕಟ್ಟೆ ವಿಭಾಗ ಗಮನಹರಿಸಿ, ಸ್ಪಷ್ಟ ಮಾಹಿತಿ ನೀಡಬೇಕು.
ಯೋಗೇಶ್‌, ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ

ಅಪಾಯಕಾರಿ ಬೆಳವಣಿಗೆ
ವಿಟ್ಲ ಪರಿಸರದ ಖಾಸಗಿ ಅಂಗಡಿಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ನಮ್ಮ ಗಮನಕ್ಕೆ ಬಂದಿಲ್ಲ. ಆ ರೀತಿ ಕಲಬೆರಕೆ ಮಾಡುವುದರಿಂದ ಜಿಲ್ಲೆಯ ಅಡಿಕೆ ಬೆಳೆಗೆ ಧಕ್ಕೆಯಾಗುತ್ತದೆ. ಮೇಲ್ವಿಚಾರಕರಿಗೆ ಆ ಬಗ್ಗೆ ತನಿಖೆ ನಡೆಸಿ, ಕ್ರಮ ಕೈಗೊಳ್ಳಲು ಸೂಚಿಸುತ್ತೇವೆ. ಗಾರ್ಬಲ್‌ಗೆ ವಾರಕ್ಕೆ 3 ಲೋಡ್‌ ವಿದೇಶೀ ಅಡಿಕೆ ಆಮದಾಗಿ, ಕಲಬೆರಕೆ ಮಾಡಿ ಮಾರುಕಟ್ಟೆಗೆ ಪೂರೈಸುತ್ತಿರುವುದು ಅಪಾಯಕಾರಿ ಬೆಳವಣಿಗೆ.
ಭಾರತಿ ಪಿ.ಎಸ್‌. ಕಾರ್ಯದರ್ಶಿ, ಕೃಷಿ ಉತ್ಪನ್ನ ಮಾರುಕಟ್ಟೆ, ಬಂಟ್ವಾಳ ಎಪಿಎಂಸಿ

ಉದಯಶಂಕರ್‌ ನೀರ್ಪಾಜೆ

Advertisement

Udayavani is now on Telegram. Click here to join our channel and stay updated with the latest news.

Next