Advertisement

ಅಡಕೆಗೆ ಕೊಳೆ: ಸಮಗ್ರ ಅಧ್ಯಯನಕ್ಕೆ ಭಟ್‌ ಒತ್ತಾಯ

07:53 PM Aug 21, 2020 | Suhan S |

ಸಾಗರ: ತಾಲೂಕಿನ ಬಹುತೇಕ ಎಲ್ಲ ಭಾಗಗಳಲ್ಲಿ ಈ ಬಾರಿ ಅಡಕೆ ತೋಟಗಳಲ್ಲಿ ವ್ಯಾಪಕವಾಗಿ ಕೊಳೆ ರೋಗ ಕಾಣಿಸಿಕೊಂಡಿದ್ದು, ಬಹುತೇಕ ಬೆಳೆಗಾರರು ಮೂರು- ನಾಲ್ಕು ಬಾರಿ ಬೋರ್ಡೂ ಸಿಂಪಡನೆ ಮಾಡಿದ ನಂತರವೂ ರೋಗ ಕಾಣಿಸಿದೆ. ಈ ಹಿನ್ನೆಲೆಯಲ್ಲಿ ತಕ್ಷಣ ಸರ್ಕಾರದಿಂದ ಈ ಕುರಿತು ಸಮಗ್ರ ಅಧ್ಯಯನ ನಡೆಯಬೇಕು ಎಂದು ಭೀಮನಕೋಣೆಯ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ಅಧ್ಯಕ್ಷ ವ.ಶಂ. ರಾಮಚಂದ್ರ ಭಟ್‌ ಒತ್ತಾಯಿಸಿದ್ದಾರೆ.

Advertisement

ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಸರ್ಕಾರದ ವಿಜ್ಞಾನಿಗಳ ಶಿಫಾರಸಿನಂತೆ ರೈತರು ಮೈಲುತುತ್ತ, ಸುಣ್ಣ, ಅಂಟಿನ ಮಿಶ್ರಣದಿಂದ ಬೋರ್ಡೂ ದ್ರಾವಣವನ್ನು ಸಿದ್ಧಪಡಿಸಿ ಸಂಪೂರ್ಣ ಶುಷ್ಕ ವಾತಾವರಣ ಇದ್ದಾಗ ಅಡಕೆ ಕೊನೆಗಳಿಗೆ ಸಿಂಪಡನೆ ಮಾಡಿದಲ್ಲೂ ಕೊಳೆ ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಈ ಮೂರು ಅಂಶಗಳಲ್ಲಿ ದೋಷ ಇರುವ ಸಾಧ್ಯತೆ ಅಧಿಕವಾಗಿದೆ ಅಥವಾ ಕೊಳೆಗೆ ಕಾರಣವಾಗುವ ಫಂಗಸ್‌ ಸ್ವರೂಪ ಬದಲಿಸಿಕೊಂಡಿರುವ ಸಾಧ್ಯತೆ ಇದೆ. ಈ ಬಗ್ಗೆ ಸೂಕ್ತ ಅಧ್ಯಯನ ನಡೆಸಿ ಪರಿಹಾರ ಸೂಚಿಸದಿದ್ದರೆ ರೈತರು ತೀವ್ರ ಆರ್ಥಿಕ ನಷ್ಟಕ್ಕೊಳಗಾಗುತ್ತಾರೆ ಎಂದು ಪ್ರತಿಪಾದಿಸಿದ್ದಾರೆ. ಈ ಹಿಂದಿಗಿಂತ ಈ ಬಾರಿ ಒಮ್ಮೆಗೇ ತೀವ್ರ ಸ್ವರೂಪದ ಮಳೆ ಸುರಿಯುತ್ತಿದೆ. ಈ ರೀತಿಯ ಮಳೆಯಿಂದ ಔಷಧದಲ್ಲಿ ಬಳಸುವ ಅಂಟು ಪ್ರಭಾವಯುತವಾಗಿ ಕೆಲಸ ಮಾಡದ ಸಾಧ್ಯತೆ ಇದೆ. ಅದೇ ರೀತಿ ವಿಜ್ಞಾನಿಗಳು ಕೊಳೆಗೆ ಇನ್ನಷ್ಟು ಪರಿಣಾಮಕಾರಿ ಪರ್ಯಾಯ ಔಷಧವನ್ನು ಕಂಡುಹಿಡಿಯಬೇಕಾದ ಅಗತ್ಯವನ್ನು ಕೂಡ ಇಂದಿನ ಪರಿಸ್ಥಿತಿ ಪ್ರತಿಪಾದಿಸುತ್ತಿದೆ. ಈ ಕಾರಣ ವಿಜ್ಞಾನಿಗಳಿಗೆ ಸಮಯಮಿತಿಯನ್ನು ನಿಗದಿಪಡಿಸಿ ಪರಿಹಾರ ಮಾರ್ಗ ಕಂಡುಹಿಡಿಯಲು ಸರ್ಕಾರ ಸೂಚಿಸಬೇಕಾಗಿದೆ.

ಶಿವಮೊಗ್ಗದ ನವಿಲೆಯಿಂದ ಅಡಕೆ ಕುರಿತು ಕೃಷಿ ಸಂಶೋಧನಾ ಕೇಂದ್ರ ಸೂಕ್ತ ಮಾದರಿಯಲ್ಲಿ ಸಂಶೋಧನೆ ಮಾಡುವುದು ಕಷ್ಟ. ಈ ಹಿನ್ನೆಲೆಯಲ್ಲಿ ವಿಜ್ಞಾನಿಗಳು ಸಾಗರದಲ್ಲಿಯೇ ನೆಲೆ ನಿಂತು, ಹೆಚ್ಚು ವ್ಯಾಪಕವಾದ ಕ್ಷೇತ್ರ ಅಧ್ಯಯನ ನಡೆಸಬೇಕು. ಸ್ಪಷ್ಟ ಅಂಕಿ-ಅಂಶ, ಮಾಹಿತಿ ಸಂಗ್ರಹಿಸಿ ಅಡಕೆ ಬೆಳೆಗಾರರಿಗೆ ಕೊಳೆಗೆ ಶಾಶ್ವತವಾದ ಪರಿಹಾರ ಸೂತ್ರವನ್ನು ಸಲಹೆ ಮಾಡಬೇಕಾಗಿದೆ. ಕೊಳೆ, ಗಾಳಿ ಮಳೆ, ಮಂಗಗಳ ಕಾರಣದಿಂದ ಅಡಕೆ ಬೆಳೆ ಮಲೆನಾಡಿನಲ್ಲಿ ನಾಶವಾಗುತ್ತಿದೆ. ಬೆಳೆ ನಾಶ ಎಂಬುದು ಕೇವಲ ಬೆಳೆಗಾರರ ನಷ್ಟವಲ್ಲ. ಇದು ದೇಶ, ರಾಜ್ಯದ ಆರ್ಥಿಕ ವ್ಯವಸ್ಥೆಯನ್ನೂ ಪ್ರಭಾವಿಸುವ ಅಂಶವಾಗಿರುವುದರಿಂದ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಹಿಂದಿನ ಎರಡು ವರ್ಷಗಳಿಂದ ಬೆಳೆಹಾನಿಗೆ ಸರ್ಕಾರ ಪರಿಹಾರ ಘೋಷಿಸುತ್ತಿದೆಯಾದರೂ ಅದು ಸಮರ್ಪಕವಾಗಿ ರೈತರ ಕೈ ಸೇರುತ್ತಿಲ್ಲ. ಕಳೆದ ವರ್ಷದ ಅರ್ಜಿಗಳಲ್ಲಿ ಅರ್ಧಕ್ಕೂ ಹೆಚ್ಚಿನ ಸಂತ್ರಸ್ತರಿಗೆ ಪರಿಹಾರ ಸಿಕ್ಕಿಲ್ಲ. ಎಕರೆಗೆ 20 ಸಾವಿರ ರೂ.ಗಳಷ್ಟು ಖರ್ಚು ಮಾಡಿ ಬೋಡೋì ಹೊಡೆದರೂ ಸರ್ಕಾರ ಹೆಕ್ಟೇರ್‌ ಒಂದಕ್ಕೆ ವರ್ಷಕ್ಕೊಮ್ಮೆ 1,200 ರೂ.ಗಳನ್ನಷ್ಟೇ ನೀಡುತ್ತದೆ. ಸರ್ಕಾರ ಕೈಗಾರಿಕೆಗಳನ್ನು ಬೆಂಬಲಿಸಿದಂತೆ ರೈತರನ್ನು ಪ್ರೋತ್ಸಾಹಿಸದಿದ್ದರೆ ದೇಶ ಇನ್ನಷ್ಟು ಸಂಕಷ್ಟಗೊಳಗಾಗುತ್ತದೆ. ಸರ್ಕಾರ ಸೂಕ್ತ ವ್ಯವಸ್ಥೆಯನ್ನು ರೈತರಿಗೆ ಮಾಡಿಕೊಡಬೇಕು ಎಂದು ರಾಮಚಂದ್ರ ಭಟ್‌ ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next