ಬೇರೆ ಯಾರನ್ನೋ ನಾನು ಅಂತ ತಿಳಿದುಕೊಂಡು ನಿಮಗೆ ಗೊಂದಲವಾಗಬಾರದು ಅಂತ ನನ್ನ ಹೆಸರು, ತರಗತಿ, ರೋಲ್ ನಂಬರ್ ಕೂಡಾ ಬರೆದಿದ್ದೇನೆ. ನೀವು ನೋಡಿದ್ರೆ, ಲೆಟರ್ ಎತ್ತಿಕೊಂಡು, ದುಸುಮುಸು ಮಾಡುತ್ತಾ ಪ್ರಿನ್ಸಿಪಾಲರ ಬಳಿ ಓಡುವುದಾ?
ಹಾಯ್,
ಬಿರುಗಾಳಿಯ ವೇಗದಲ್ಲಿ ನೀವು ಪ್ರಿನ್ಸಿಪಾಲರ ಛೇಂಬರ್ ಕಡೆಗೆ ಹೋಗುತ್ತಿದ್ದುದನ್ನು ನೋಡಿದೆ. ನೀವು ಯಾವ ಕಾರಣಕ್ಕೆ ಅಷ್ಟು ಗಡಿಬಿಡಿಯಲ್ಲಿ ಹೊರಟಿದ್ದಿರೆಂದು ನನಗೆ ಗೊತ್ತು. ನೀವು ದಿನಾ ಕೂರುವ, ಆ ಕಿಟಕಿ ಬಳಿಯ ಬೆಂಚಿನಲ್ಲಿದ್ದ ಆ ಪತ್ರವೇ ಅದಕ್ಕೆಲ್ಲ ಕಾರಣ ತಾನೇ? ಸದ್ಯ, ಇವತ್ತು ಪ್ರಿನ್ಸಿಪಾಲ್ ಬಂದಿಲ್ಲ. ಹಾಗಾಗಿ ನಾನು ಬಚಾವಾದೆ.
ಹೌದೂರಿ, ಆ ಪತ್ರ ಬರೆದಿದ್ದು ನಾನೇ. ನಾನು ಯಾರಂತ ನಿಮಗೆ ಗೊತ್ತಿರಲಿಕ್ಕಿಲ್ಲ. ಯಾಕಂದ್ರೆ, ನೀವ್ಯಾವತ್ತೂ ಹುಡುಗರನ್ನು, ಅದರಲ್ಲೂ ನಮ್ಮಂಥ ಕೊನೆಯ ಬೆಂಚಿನ ಹುಡುಗರನ್ನು ಕಣ್ಣೆತ್ತಿ ನೋಡಿದವರೂ ಅಲ್ಲ. ಹಾಗಾಗಿ, ನಿಮ್ಮ ಗಮನ ಸೆಳೆಯಲೆಂದು ನಾನೇ ಆ ಪತ್ರವನ್ನು ಬರೆದಿದ್ದು. ಇದಕ್ಕೂ ಮೊದಲು ಬೋರ್ಡ್ ಮೇಲೆ ನಿಮ್ಮ ಹೆಸರನ್ನು ಬರೆದವನು, ಕಾರಿಡಾರ್‌ನಲ್ಲಿ ನೀವು ನಡೆದು ಹೋಗುವಾಗ ಕಂಬದ ಮರೆಯಲ್ಲಿ ನಿಂತು ನೋಡುತ್ತಿದ್ದವನು, ಲೈಬ್ರರಿಯಲ್ಲಿ ಬೇಕಂತಲೇ ನಿಮ್ಮ ಪಕ್ಕದ ಕುರ್ಚಿಯಲ್ಲಿ ಬಂದು ಕೂರುತ್ತಿದವನು ನಾನೇ. ಇಷ್ಟೆಲ್ಲಾ ಸೈಕಲ್ ಹೊಡೆದರೂ ನೀವು ಕ್ಯಾರೇ ಅನ್ನದಿದ್ದರೆ, ನಾನಾದರೂ ಏನು ಮಾಡಬೇಕು ಹೇಳಿ?
ಅದಕ್ಕೇ ನಿನ್ನೆ ಧೈರ್ಯ ಮಾಡಿ, ತಂಗಿಯ ಬಳಿ ಇದ್ದ ಸ್ಕೆಚ್‌ಪೆನ್‌ಗಳು, ಕಲರ್ ಪೆನ್ಸಿಲ್‌ಗಳನ್ನೆಲ್ಲ ಬಳಸಿ, ನನಗೆ ತಿಳಿದಂತೆ ರಂಗುರಂಗಾದ ಪತ್ರವನ್ನು ಬರೆದೆ. ಇಲ್ಲಿಯವರೆಗೆ ಯಾವ ನೋಟ್ಸನ್ನೂ, ಲ್ಯಾಬ್ ರೆಕಾರ್ಡನ್ನೂ ಇಷ್ಟು ತಾಳ್ಮೆ ವಹಿಸಿ ಬರೆದವನಲ್ಲ ನಾನು. ಇಷ್ಟೆಲ್ಲಾ ಕಷ್ಟಪಟ್ಟಿದ್ದು ವ್ಯರ್ಥವಾಗಬಾರದು ಅನ್ನಿಸಿತು. ಹಾಗಾಗಿ, ನನ್ನ ಪ್ರೀತಿಯನ್ನು ನೀವು ಒಪ್ಪಿಕೊಳ್ಳದಿದ್ದರೂ, ಕನಿಷ್ಠ ಪಕ್ಷ ನನ್ನ ಪರಿಶ್ರಮವನ್ನು ಮೆಚ್ಚಿ “ಇವನ್ಯಾರಪ್ಪಾ, ಇಷ್ಟು ಚೆನ್ನಾಗಿ ಲೆಟರ್ ಬರೆದಿದ್ದಾನೆ’ ಅನ್ನುವ ಕುತೂಹಲಕ್ಕಾದರೂ ನನ್ನತ್ತ ತಿರುಗಿ ನೋಡಬೇಕು ಅಂತಲೇ ನಾನು ಆ ಪತ್ರವನ್ನು ನಿಮ್ಮ ಬೆಂಚಿನ ಮೇಲೆ ಇಟ್ಟಿದ್ದು. ಬೇರೆ ಯಾರನ್ನೋ ನಾನು ಅಂತ ತಿಳಿದುಕೊಂಡು ನಿಮಗೆ ಗೊಂದಲವಾಗಬಾರದು ಅಂತ ನನ್ನ ಹೆಸರು, ತರಗತಿ, ರೋಲ್ ನಂಬರ್ ಕೂಡಾ ಬರೆದಿದ್ದೇನೆ. ನೀವು ನೋಡಿದ್ರೆ, ಲೆಟರ್ ಎತ್ತಿಕೊಂಡು, ದುಸುಮುಸು ಮಾಡುತ್ತಾ ಪ್ರಿನ್ಸಿಪಾಲರ ಬಳಿ ಓಡುವುದಾ?
ನೀವು ಮಾಡಿದ್ದು ಸರೀನಾ ಹೇಳಿ? ಮೊದಲೇ ಕೊನೆಯ ಬೆಂಚಿನ ಹುಡುಗ ನಾನು. ಲೆಟರ್ ಬರೆದಿದ್ದಾನೆ, ಅದೂ ಏನು? ಲವ್ ಲೆಟರ್ ಅಂತ ಗೊತ್ತಾದ್ರೆ ಪ್ರಿನ್ಸಿಪಾಲರು ಸುಮ್ಮನೆ ಬಿಡ್ತಾರ? ನಂದೇ ತಪ್ಪು ಅಂತ ಕ್ಲಾಸಿಂದ ಆಚೆ ಹಾಕ್ತಾರೆ ಅಷ್ಟೆ. ಇದರಲ್ಲಿ ನಿಮ್ಮ ತಪ್ಪೂ ಇದೆ ಅಂತ ಹೇಳಿದ್ರೆ ಅವರು ನಂಬೋದಿಲ್ಲ. ಹೌದೂರಿ, ಇದರಲ್ಲಿ ನಿಮ್ಮದೂ ತಪ್ಪಿದೆ. ನೀವು ದಿನಾ ಚೂಡಿದಾರ ಹಾಕ್ಕೊಂಡು, ಉದ್ದ ಕೂದಲನ್ನು ಲೂಸಾಗಿ ಜಡೆ ಹೆಣೆದು, ಕಿವಿಗೊಂದು ಪುಟ್ಟ ಜುಮ್ಕಿ, ಹಣೆಗೊಂದು ಬಿಂದಿಯಿಟ್ಟು ದೇವತೆಯಂತೆ ಕ್ಲಾಸಿಗೆ ಬಂದರೆ, ಅದನ್ನು ನಾನು ಮೆಚ್ಚಿಕೊಂಡರೆ ಅದು ನನ್ನೊಬ್ಬನ ತಪ್ಪಾ? ತಲೆ ತಗ್ಗಿಸಿಕೊಂಡು ಬಂದು, ವಿಧೇಯಳಾಗಿ ಪಾಠ ಕೇಳಿ, ಎಲ್ಲ ಪರೀಕ್ಷೆಯಲ್ಲೂ ಫಸ್ಟ್ ಬಂದು, ಕಾಲೇಜು ಫಂಕ್ಷನ್‌ಗಳಲ್ಲಿ ಹಾಡನ್ನೂ ಹೇಳಿ ಚಪ್ಪಾಳೆ ಗಿಟ್ಟಿಸಿಕೊಳ್ಳುವ ನಿಮ್ಮನ್ನು ಆರಾಧಿಸದಿದ್ದರೆ, ಅದು ನನ್ನ ತಪ್ಪಾಗುತ್ತದೆ.
ಈಗ ಅರಿವಾಯ್ತಾ, ಈ ವಿಷಯದಲ್ಲಿ ನಿಮ್ಮದೂ ತಪ್ಪಿದೆ. ಹಾಗಂತ ನಾನೂ ಪ್ರಿನ್ಸಿಪಾಲರ ಹತ್ತಿರ ಹೇಳ್ತೀನಿ. ಹೇಳಬಾರದು ಅಂತಿದ್ದರೆ, ನೀವು ನಾಳೆ ನನ್ನತ್ತ ತಿರುಗಿ ನೋಡಬೇಕು. ಮುಗುಳ್ನಕ್ಕರಂತೂ ಇನ್ನೂ ಸಂತೋಷವೇ. ನೀವಾಗಿಯೇ ಬಂದು ಮಾತಾಡಿಸಿದರಂತೂ, ಸ್ವರ್ಗಕ್ಕೆ ಮೂರೇ ಗೇಣು…
ಇಷ್ಟೆಲ್ಲ ಹೇಳಿದ ಮೇಲೂ, ನೀವು ಪ್ರಿನ್ಸಿಪಾಲರ ಬಳಿ ಹೋಗುತ್ತೇನೆ ಅಂದರೆ, ನಿಮ್ಮದು ಕಲ್ಲುಹೃದಯ ಅಂತ ಅರ್ಥ…
ಇಂತಿ ನಿಮ್ಮ ಧ್ಯಾನಿ
ಪನ್ನಗ