ಈ ವರ್ಷದ ಮುಂಗಾರು ದೇಶದಿಂದ ಹಿಂದೆ ಸರಿದಿದೆ. ಮುಂಗಾರು ಮಾರುತಗಳು ದೇಶದಿಂದ ಸಂಪೂರ್ಣವಾಗಿ ಮಾಯ ವಾಗುವ ವಾಡಿಕೆಯ ತೇದಿ ಅಕ್ಟೋಬರ್ 15. ಈ ಬಾರಿ ಅದಕ್ಕಿಂತ ನಾಲ್ಕು ದಿನ ವಿಳಂಬ ವಾಗಿದೆ ಎಂದಿದೆ ಭಾರತೀಯ ಹವಾಮಾನ ಸಂಸ್ಥೆ. ಇನ್ನು ಮಳೆಗಾಲದ ಮುಖ ಕಾಣಲು ಮುಂದಿನ ವರ್ಷದ ಜೂನ್ ವರೆಗೆ ಕಾಯಬೇಕು.
ಕೆಲವು ದಶಕಗಳ ಹಿಂದಿನ ಮಳೆಗಾಲಕ್ಕೂ ಈಗಿನ ಮಳೆಗಾಲಕ್ಕೂ ಎಷ್ಟೊಂದು ವ್ಯತ್ಯಾಸ ಇದೆ ಎಂಬುದನ್ನು ಎರಡನ್ನೂ ಸ್ವತಃ ಕಂಡು ಅನುಭವಿಸಿದವರು ಬಲ್ಲರು. ಆಗ ಮಳೆಗಾಲದಲ್ಲಿ ಒಮ್ಮೆ ಕತ್ತಲು ಮುಸುಕಿ ಮಳೆ ಹಿಡಿಯಿತೆಂದರೆ ನಾಲ್ಕೈದು ದಿನ ಬಿಡುತ್ತಲೇ ಇರಲಿಲ್ಲ. ಒಮ್ಮೆ ಮಳೆ ಬಿಡಲಿ, ಸೂರ್ಯ ಕಿರಣ ಕಾಣಿಸಿಕೊಳ್ಳಲಿ ಎಂದು ಕಾತರಿಸುತ್ತಿದ್ದ ದಿನಗಳಿದ್ದವು. ಭೂಮಿಯ ಎಲ್ಲೆಂದರಲ್ಲಿ ಒರತೆಗಳು ಚಿಮ್ಮುತ್ತಿದ್ದವು. ಇಂಥ ಮಳೆಯನ್ನು ಕಂಡು ಅನುಭವಿಸಿಯೇ ತುಳುವಿನಲ್ಲಿ ಮಳೆ ನಕ್ಷತ್ರಗಳ ಬಗೆಗೆ ಗಾದೆಗಳು ಹುಟ್ಟಿಕೊಂಡದ್ದು. ಮಳೆಗಾಲದ ಆರಂಭವೂ ಹಾಗೆಯೇ. ಈಗಿನಂತೆ ಹವಾಮಾನ ಇಲಾಖೆ ಪ್ರಕಟನೆಯ ಮೂಲಕ, ನಾಲ್ಕಾರು ಮಳೆ ಹಾಗೋ ಹೀಗೋ ಸುರಿದ ಬಳಿಕ ಮಳೆಗಾಲ ಆರಂಭವಾಯಿತು ಎಂದು ತಿಳಿದುಕೊಳ್ಳುತ್ತಿದ್ದ ಕಾಲ ಅದಲ್ಲ. ಜೂನ್ ತಿಂಗಳ ಆರಂಭದಲ್ಲಿ ಒಂದು ರಾತ್ರಿ ಕಳೆದು ಬೆಳಗ್ಗೆ ಎದ್ದು ನೋಡಿದರೆ ಇಡೀ ಬಾನಿನಲ್ಲಿ ಮೋಡ ಮುಸುಕಿ ಮಳೆಗಾಲ ಆರಂಭವಾಗಿಯೇ ಬಿಟ್ಟಿರುತ್ತಿತ್ತು.
ಈಚೆಗಿನ ಕೆಲವು ದಶಕಗಳಲ್ಲಿ ಮಳೆಗಾಲದ ಈ ಸಹಜ ಸ್ವಭಾವ ಸಂಪೂರ್ಣ ಬದಲಾಗುತ್ತ ಬಂದಿದೆ. ಕಳೆದ ಕೆಲವು ವರ್ಷಗಳಿಂದೀಚೆಗೆ ಈ ಬದಲಾವಣೆ ಇನ್ನಷ್ಟು ಸ್ಪಷ್ಟವಾಗಿ ಅನುಭವಕ್ಕೆ ಬರತೊಡಗಿದೆ. ಈ ವರ್ಷ ಮಳೆಗಾಲವೇ ಇಲ್ಲವೇನೋ ಎಂದು ದೇಶದ ಕೆಲವು ಭಾಗಗಳಲ್ಲಿ ಅನ್ನಿಸಿದರೆ ಇನ್ನು ಕೆಲವು ಭಾಗಗಳಲ್ಲಿ ಸಾಕೋ ಸಾಕು ಅನ್ನಿಸುವಷ್ಟು ಮಳೆಯಾಗಿತ್ತು. ಈಗ ಆತಂಕ ಹುಟ್ಟಿಸಿರುವ ವಿಚಾರ ಎಂದರೆ ಮುಂದಿನ ವರ್ಷ ಪೆಸಿಫಿಕ್ ಸಾಗರದಲ್ಲಿ “ಸೂಪರ್ ಎಲ್‌ನಿನೋ’ ಉಂಟಾಗಬಹುದು ಎಂದು ಅಮೆರಿಕದ ನ್ಯಾಶನಲ್ ಓಶಿಯಾನಿಕ್ ಆ್ಯಂಡ್ ಅಟೊ¾àಸ್ಪಿಯರಿಕ್ ಅಡ್ಮಿನಿಸ್ಟ್ರೇಶನ್ ನುಡಿದಿರುವ ಭವಿಷ್ಯ.
ಪೆಸಿಫಿಕ್ ಅಥವಾ ಶಾಂತಸಾಗರದ ಉತ್ತರ ಅಮೆರಿಕದ ಬದಿ ಮತ್ತು ದಕ್ಷಿಣ ಅಮೆರಿಕದ ಬದಿಗಳಲ್ಲಿ ಸಾಗರದ ನೀರಿನ ಉಷ್ಣತೆ ಇಡೀ ಜಗತ್ತಿನ ಹವಾಮಾನವನ್ನು ಪ್ರಭಾವಿಸುತ್ತದೆ ಎನ್ನುವುದು ಎಲ್ಲರೂ ತಿಳಿದಿರುವ ಸತ್ಯ. ಶಾಂತ ಸಾಗರದ ಉತ್ತರ ಅಮೆರಿಕ ಕಡೆಯಲ್ಲಿ ಶೀತ ನೀರು ಮತ್ತು ದಕ್ಷಿಣ ಅಮೆರಿಕ ಬದಿಯಲ್ಲಿ ಉಷ್ಣ ನೀರು ಇರುತ್ತದೆ. ಸಾಗರದ ಒಳಗೆ ಉಷ್ಣ ಮತ್ತು ಶೀತ ಅಂತರ್‌ಪ್ರವಾಹಗಳಿರುತ್ತವೆ. ದಕ್ಷಿಣ ಅಮೆರಿಕ ಬದಿಯ ನೀರು ಸಹಜಕ್ಕಿಂತ ಹೆಚ್ಚು ಬಿಸಿಯಾದರೆ ಎಲ್ ನಿನೋ ಉಂಟಾಗುತ್ತದೆ; ಉತ್ತರ ಅಮೆರಿಕ ಬದಿಯ ಶೀತ ನೀರು ವಾಡಿಕೆಗಿಂತ ಹೆಚ್ಚು ತಂಪಾದರೆ ಲಾ ನಿನಾ ತಲೆದೋರುತ್ತದೆ. ಇವೆರಡೂ ಸ್ಥಿತಿಗಳು ಜಾಗತಿಕ ಹವಾಮಾನ ಸ್ಥಿತಿಗತಿಯಲ್ಲಿ ಅಲ್ಲೋಲಕಲ್ಲೋಲ ಉಂಟು ಮಾಡಬಲ್ಲವು. ಈ ವರ್ಷದ ಮಳೆಗಾಲದ ಅವಾಂತರಗಳಿಗೆ ಎಲ್ ನಿನೋ ಕಾರಣ. ಮುಂದಿನ ವರ್ಷ ಇದು “ಸೂಪರ್ ಎಲ್ ನಿನೋ’ ಆಗಿ ಮರುಕಳಿಸಬಹುದು ಎನ್ನುವುದು ಅಮೆರಿಕದ ನ್ಯಾಶನಲ್ ಓಶಿಯಾನಿಕ್ ಆ್ಯಂಡ್ ಅಟೊ¾àಸ್ಪಿಯರಿಕ್ ಅಡ್ಮಿನಿಸ್ಟ್ರೇಶನ್‌ನ ಭವಿಷ್ಯ. ಸಾಗರದ ನೀರು 1.5 ಡಿಗ್ರಿ ಸೆಂಟಿಗ್ರೇಡ್‌ನಷ್ಟು ಬಿಸಿಯಾಗಿ “ಬಲವಾದ ಎಲ್‌ನಿನೋ’ ಉಂಟಾಗುವ ಸಾಧ್ಯತೆ ಶೇ. 75-80 ಇದ್ದರೆ 2 ಡಿಗ್ರಿ ಸೆಂಟಿಗ್ರೇಡ್‌ಗಿಂತ ಹೆಚ್ಚಿ “ಸೂಪರ್ ಎಲ್‌ನಿನೋ’ ತಲೆದೋರುವ ಸಂಭವ ಶೇ. 30 ಇದೆ ಎನ್ನುವುದು ಈ ಹವಾಮಾನ ತಜ್ಞರ ಅಂಬೋಣ.
ಭಾರತದಲ್ಲಿ ಈ ವರ್ಷದ ಮಳೆಗಾಲ ಏರುಪೇರಾದದ್ದು ಎಲ್ ನಿನೋ ಪ್ರಭಾವದಿಂದಾಗಿ. ಮುಂದಿನ ವರ್ಷ ಬಲವಾದ ಎಲ್ ನಿನೋ ಅಥವಾ ಸೂಪರ್ ಎಲ್‌ನಿನೋ ಕಾಣಿಸಿಕೊಂಡರೆ ಎಂತೆಂತಹ ಉತ್ಪಾತಗಳನ್ನು ಕಾಣಬೇಕಾದೀತೋ! ಇತಿಹಾಸವನ್ನು ತೆರೆದುನೋಡಿದರೆ ಇದುವರೆಗೆ ಎಲ್‌ನಿನೋ ವರ್ಷಗಳಲ್ಲಿ ಅರ್ಧಾಂಶಕ್ಕಿಂತ ಹೆಚ್ಚು ಬರಗಾಲಕ್ಕೆ ಕಾರಣವಾಗಿವೆ. ಇದನ್ನು ಮುಂದಿನ ವರ್ಷಕ್ಕೆ ಅನ್ವಯಿಸಿ ಹೇಳುವುದಾದರೆ 2024ರಲ್ಲಿ ಮಳೆ ಇನ್ನಷ್ಟು ಕ್ಷೀಣಿಸೀತೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಈ ವರ್ಷದ ಬರಗಾಲ ಸ್ಥಿತಿಯ ಪರಿಣಾಮ ಇನ್ನು ಮುಂದಿನ ದಿನಗಳಲ್ಲಿ ಅನುಭವಕ್ಕೆ ಬರಬೇಕಷ್ಟೇ. ಅದಾದ ಬೆನ್ನಿಗೆ ಇನ್ನೊಂದು ಬರಗಾಲವೇ? ಅದನ್ನು ಎದುರಿಸಲು ನಾವು ಸಿದ್ಧರಿದ್ದೇವೆಯೇ?
* ಸತ್ಯ