ಆಂಟಿಬಯೋಟಿಕ್ ಪ್ರತಿರೋಧವು (resistance) ಆರೋಗ್ಯ ರಕ್ಷಣಾ ವ್ಯವಸ್ಥೆಯಲ್ಲಿ ಗಮನಾರ್ಹವಾದ ವಿಷಯವಾಗಿದೆ. ಇತ್ತೀಚೆಗಿನ ದಿನಗಳಲ್ಲಿ ಪ್ರಪಂಚದ ಯಾವುದಾದರೂ ಒಂದು ಪ್ರದೇಶದಲ್ಲಿ ಹೊಸ ಔಷಧ-ನಿರೋಧಕ “ಸೂಪರ್‌ಬಗ್’ ಬಗ್ಗೆ ಕೇಳದೆ ನಾವು ಒಂದು ತಿಂಗಳು ಇರಲು ಸಾಧ್ಯವಿಲ್ಲ. ನಮ್ಮ ಮತ್ತು ನಮ್ಮ ಪ್ರೀತಿಪಾತ್ರರ ಆರೋಗ್ಯದಲ್ಲಿ ಸಕ್ರಿಯ ಪಾತ್ರವನ್ನು ವಹಿಸಲು ಮತ್ತು ಸಾರ್ವಜನಿಕ ಆರೋಗ್ಯಕ್ಕೆ ರಚನಾತ್ಮಕ ಶಕ್ತಿಯಾಗಲು ಪ್ರತಿಜೀವಕ ನಿರೋಧಕತೆ ((Antibiotic Resistance/ABR) ಏನು ಮತ್ತು ಅದು ಹೇಗೆ ಉಂಟಾಗುತ್ತದೆ ಎಂಬುದನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ.
ಆ್ಯಂಟಿಮೈಕ್ರೊಬಿಯಲ್‌ಗಳು ಮತ್ತು ಪ್ರತಿಜೀವಕಗಳು
ಆ್ಯಂಟಿಮೈಕ್ರೊಬಿಯಲ್‌ಗಳು ಸಾಮಾನ್ಯವಾಗಿ ಬ್ಯಾಕ್ಟೀರಿಯಾ, ವೈರಸ್ ಗಳು, ಶಿಲೀಂಧ್ರಗಳು (fungus) ಮತ್ತು ಪರಾವಲಂಬಿಗಳಿಂದ (parasites) ಉಂಟಾಗುವ ಸೋಂಕುಗಳ ವಿರುದ್ಧ ಹೋರಾಡಲು ಬಳಸುವ ಔಷಧಗಳ ಗುಂಪು.
ಪ್ರತಿಜೀವಕಗಳು ಅಂದರೆ ಆಂಟಿಬಯೋಟಿಕ್, ಮಾನವ ದೇಹದಲ್ಲಿ ಬ್ಯಾಕ್ಟೀರಿಯಾದ ಸೋಂಕಿಗೆ ಚಿಕಿತ್ಸೆ ನೀಡಲು ಬಳಸುವ ಔಷಧಗಳಾಗಿವೆ. ಈ ಔಷಧಗಳು ಬ್ಯಾಕ್ಟೀರಿಯಾದ ಗುಣೀಕರಣವನ್ನು ಕಡಿಮೆ ಮಾಡುತ್ತವೆ ಅಥವಾ ಅವುಗಳನ್ನು ಕೊಲ್ಲುತ್ತವೆ. ಮಾನವರಲ್ಲದೆ ಪ್ರತಿಜೀವಕಗಳನ್ನು ಪಶುಸಂಗೋಪನೆ ಮತ್ತು ಕೃಷಿ/ಬೆಳೆಗಳಲ್ಲಿಯೂ ಬಳಸಲಾಗುತ್ತದೆ.
ಪ್ರತಿಜೀವಕ ನಿರೋಧಕತೆ (ABR)
ಪ್ರತಿಜೀವಕಗಳ ಆವಿಷ್ಕಾರವು ವೈದ್ಯಕೀಯ ಜಗತ್ತಿನಲ್ಲಿ ಕ್ರಾಂತಿಯನ್ನು ಉಂಟು ಮಾಡಿತು ಮತ್ತು ಅಲೋಪತಿ/ಇಂಗ್ಲಿಷ್ ಮೆಡಿಸಿನ್ ಇತಿಹಾಸದಲ್ಲಿ ಅತ್ಯಂತ ಪ್ರಯೋಜನಕಾರಿ ಪ್ರಗತಿಗಳಲ್ಲಿ ಒಂದಾಗಿದೆ. ವೈದ್ಯರು ನ್ಯುಮೋನಿಯಾ, ಸೈನಸೈಟಿಸ್ ಮತ್ತು ಕ್ಷಯ ರೋಗದಂತಹ ಗಂಭೀರ ಸೋಂಕುಗಳಿಗೆ ಕೆಲವೇ ಮಾತ್ರೆಗಳೊಂದಿಗೆ ಚಿಕಿತ್ಸೆ ನೀಡಲು ಸಾಧ್ಯವಾಯಿತು. ಕಾಲಾಂತರದಲ್ಲಿ ಬ್ಯಾಕ್ಟೀರಿಯಾವು ಪ್ರತಿಜೀವಕಗಳಿಗೆ ಹೊಂದಿಕೊಳ್ಳಲು ಮತ್ತು ಬದುಕಲು ಮಾರ್ಗಗಳನ್ನು ಕಂಡುಕೊಂಡಿದೆ. ಕೆಲವು ಪ್ರತಿಜೀವಕಗಳನ್ನು ಕಡಿಮೆ ಪರಿಣಾಮಕಾರಿ ಅಥವಾ ನಿಷ್ಪ್ರಯೋಜಕವಾಗಿಸುತ್ತದೆ. ಅಂತಹ ಔಷಧ-ನಿರೋಧಕ ಬ್ಯಾಕ್ಟೀರಿಯಾಗಳನ್ನೂ “ಸೂಪರ್‌ಬಗ್ಸ್’ ಎಂದು ಕರೆಯಲಾಗುತ್ತದೆ. ಪ್ರತಿಜೀವಕಗಳು ಬ್ಯಾಕ್ಟೀರಿಯಾವನ್ನು ಕೊಲ್ಲಲು ಸಾಧ್ಯವಾಗದ ಸ್ಥಿತಿಯನ್ನು ಪ್ರತಿಜೀವಕ ಪ್ರತಿರೋಧಕತೆ ಎಂದು ಕರೆಯಲಾಗುತ್ತದೆ.
ಹೀಗೆ ಪ್ರತಿರೋಧವು ಬ್ಯಾಕ್ಟೀರಿಯಾಗಳಲ್ಲಿ ವೈರಸ್‌ಗಳಲ್ಲಿ, ಶಿಲೀಂಧ್ರಗಳಲ್ಲಿ (fugus) ಮತ್ತು ಪರಾವಲಂಬಿಗಳಲ್ಲಿ ಉಂಟಾಗಬಹುದು. ಒಟ್ಟಾರೆಯಾಗಿ ಇದನ್ನು ಸೂಕ್ಷ್ಮಜೀವಿ ವಿರೋಧಿ ಪ್ರತಿರೋಧ (Antimicrobial Resistance/ AMR) ಎಂದು ಕರೆಯಲಾಗುತ್ತದೆ.
ಬ್ಯಾಕ್ಟೀರಿಯಾಗಳು ತಮ್ಮನ್ನು ತಾವು ಮಾರ್ಪಡಿಸಿಕೊಳ್ಳುವುದರಿಂದ ಎಬಿಆರ್ ಸಮಯದೊಂದಿಗೆ ನೈಸರ್ಗಿಕವಾಗಿ ಸಂಭವಿಸಬಹುದು. ಆದರೆ ಈ ಪ್ರಕ್ರಿಯೆಯು ಈ ಕೆಳಗಿನ ಅಂಶಗಳಿಂದ ವೇಗಗೊಳ್ಳುತ್ತದೆ.
ಪ್ರತಿಜೀವಕಗಳನ್ನು ದುರುಪಯೋಗ ಪಡಿಸಿಕೊಳ್ಳುವುದರಿಂದ: ಅಂದರೆ ಪ್ರತಿಜೀವಕ ಔಷಧಗಳನ್ನು ಅಗತ್ಯವಿಲ್ಲದಿದ್ದಾಗ ಸೂಚಿಸಲಾಗುತ್ತದೆ, ತಪ್ಪು ಪ್ರಮಾಣದಲ್ಲಿ ಸೇವಿಸಲಾಗುತ್ತದೆ. ಕೋಳಿ, ಹಂದಿ, ಕುರಿ, ಮೀನುಗಳಂತಹ ಆಹಾರ ಪ್ರಾಣಿಗಳ ತೂಕವನ್ನು ಹೆಚ್ಚಿಸಲು ಮತ್ತು ಸೋಂಕನ್ನು ತಡೆಗಟ್ಟಲು ಪ್ರಾಣಿಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ರೋಗಗಳನ್ನು ತಡೆಗಟ್ಟಲು ಅವುಗಳನ್ನು ಬೆಳೆಗಳ (ಹಣ್ಣು-ತರಕಾರಿಗಳು) ಮೇಲೆ ಅತಿಯಾಗಿ ಬಳಸುವುದರಿಂದ ಪ್ರತಿಜೀವಕಗಳ ಮಿತಿಯಿಲ್ಲದ ಬಳಕೆಯಾಗುತ್ತಿದೆ.
ಮುಂದಿನ ವಾರಕ್ಕೆ ಡಾ| ರಕ್ಷಿತಾ ಕೆ. ರಿಸರ್ಚ್ ಫೆಲೋ ಗ್ಲೋಬಲ್ ಹೆಲ್ತ್ ಪಾಲಿಸಿ ಮತ್ತು ಗವರ್ನೆನ್ಸ್ ವಿಭಾಗ ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್, ಮಾಹೆ, ಮಣಿಪಾಲ ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಮೆಡಿಸಿನ್ ವಿಭಾಗ, ಕೆಎಂಸಿ, ಮಾಹೆ, ಮಂಗಳೂರು