Advertisement

ಕೇಂದ್ರ-ರಾಜ್ಯ ಜಂಟಿ ಯೋಜನೆಗಳಿಗೆ ಗ್ರಹಣ ? 

09:02 AM May 20, 2018 | Team Udayavani |

ಉಡುಪಿ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯಾಬಲ ಗಳಿಸಿಯೂ ಬಿಜೆಪಿಗೆ ಸರಕಾರ ರಚಿಸಲು ಸಾಧ್ಯವಾಗದೆ ಇರುವುದು ಸ್ಥಳೀಯ ಅಭಿವೃದ್ಧಿ ದೃಷ್ಟಿಯಿಂದ ಕರಾವಳಿಗರಿಗೆ ತೀವ್ರ ನಿರಾಶೆ ಮೂಡಿಸಿದೆ. ಕರಾವಳಿಯಲ್ಲಿ 12 ಮಂದಿ (13 ವಿಧಾನಸಭಾ ಕ್ಷೇತ್ರಗಳು) ಬಿಜೆಪಿ ಶಾಸಕರು ಆಯ್ಕೆಯಾಗಿದ್ದರು. ಇದರೊಂದಿಗೆ ಬಿ.ಎಸ್‌. ಯಡಿಯೂರಪ್ಪ ಮೇ 17ರಂದು ಬಿಜೆಪಿ ಸರಕಾರದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗ ಕರಾವಳಿಯಲ್ಲಿ ಸಂತಸ ಉಂಟಾಗಿತ್ತು. ಆದರೆ ಯಡಿಯೂರಪ್ಪನವರು ಮೂರೇ ದಿನಗಳಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಬೇಸರ ಉಂಟು ಮಾಡಿದೆ.

Advertisement

ಬಿಜೆಪಿ ಸರಕಾರ ಯಾಕೆ ಬೇಕಿತ್ತು ?
ಇದುವರೆಗೂ ರಾಜ್ಯದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಾಗ ಕೇಂದ್ರದಲ್ಲಿ ಬೇರೆ ಪಕ್ಷಗಳ ಸರಕಾರ ಇರುವುದು ಅಥವಾ ಕೇಂದ್ರದಲ್ಲಿ ಬಿಜೆಪಿ ನೇತೃತ್ವ ಸರಕಾರ ಇದ್ದಾಗ ರಾಜ್ಯದಲ್ಲಿ ಬೇರೆ ಪಕ್ಷಗಳ ಸರಕಾರ ಅಸ್ತಿತ್ವದಲ್ಲಿರುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಮೊದಲ ಬಾರಿಗೆ ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರಕಾರ ರಚನೆಯಾದಂತಾಗಿತ್ತು. ಇದರಿಂದ ಕರಾವಳಿ ಪ್ರದೇಶದ ನನೆಗುದಿಗೆ ಬಿದ್ದಿರುವ ಹಲವಾರು ಯೋಜನೆಗಳು ವೇಗಗತಿಯಲ್ಲಿ ಜಾರಿಗೊಳ್ಳಬಹುದೆಂಬ ಆಸೆ ಜನರಲ್ಲಿ ಮೂಡಿತ್ತು. ಆದರೆ ಅದು ಹುಸಿಯಾಗಿದೆ. 

ಸಮನ್ವಯದ ಕೊರತೆ 
ಕೇಂದ್ರ ಮತ್ತು ರಾಜ್ಯದಲ್ಲಿ ಬೇರೆ ಬೇರೆ ಪಕ್ಷಗಳ ಸರಕಾರಗಳು ಇದ್ದಾಗ ಪರಸ್ಪರ ಸಮನ್ವಯ ಕೊರತೆ, ಸಹಕಾರ, ಹೊಂದಾಣಿಕೆಗಳಲ್ಲಿನ ಏರುಪೇರು ಎಲ್ಲವೂ ಅಭಿವೃದ್ಧಿ ಯೋಜನೆಗಳ ಜಾರಿಗೆ ಕೊಡಲಿ ಪೆಟ್ಟು ನೀಡುತ್ತವೆ. ಯೋಜನೆಗಳ ಜಾರಿಯಲ್ಲಿ ಆಗುವ ವಿಳಂಬಕ್ಕೂ ಅದೇ ಕಾರಣವಾಗುತ್ತದೆ. ಇದರಿಂದ ಸ್ಥಳೀಯ ಅಭಿವೃದ್ಧಿ ಕಾರ್ಯಗಳ ತೊಡಕಿಗೆ ನೇರ ಕಾರಣವಾಗುತ್ತವೆ. 2008ರಲ್ಲಿ ಕರಾವಳಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಶಾಸಕರು ಆರಿಸಿ ಹೋಗಿ ರಾಜ್ಯದಲ್ಲಿ ಬಿಜೆಪಿ ಸರಕಾರ ಬಂದಿದ್ದರೂ ಆಗ ಕೇಂದ್ರದಲ್ಲಿ ಯುಪಿಎ ಸರಕಾರ ಅಧಿಕಾರದಲ್ಲಿತ್ತು. ಹಾಗಾಗಿ ಯೋಜನೆಗಳು ತ್ವರಿತಗತಿಯಲ್ಲಿ ಜಾರಿಗೊಳ್ಳಲಿಲ್ಲ. 2013ರಿಂದ ರಾಜ್ಯದಲ್ಲಿ ಕಾಂಗ್ರೆಸ್‌ ನೇತೃತ್ವದ ಸರಕಾರವಿದ್ದು, ಕೇಂದ್ರದಲ್ಲಿ ಬಿಜೆಪಿ ಇದ್ದಾಗಲೂ ಇದೇ ಸಮಸ್ಯೆ ಕಾಡಿತ್ತು.

ಹಾಗಾಗಿ ಈ ಬಾರಿ ಅದೇ ಬೆಳವಣಿಗೆ ಪುನರಾವರ್ತನೆಗೊಂಡಿರುವುದು ರಾಜ್ಯ-ಕೇಂದ್ರ ಸಹಭಾಗಿತ್ವದ ಅಭಿವೃದ್ಧಿ ಯೋಜನೆಗಳಿಗೆ ಮತ್ತೆ ಗ್ರಹಣ ಕಾಡಲಿದೆಯೇ ಎಂಬ ಆತಂಕ ಸ್ಥಳೀಯರಲ್ಲಿ ಮೂಡಿದೆ.  8 ಸಾವಿರ ಕೋಟಿ ರೂ. ವೆಚ್ಚದ ಯೋಜನೆಗಳು ಕರಾವಳಿಯಲ್ಲಿ ವೇಗ ಪಡೆಯಬೇಕಿದ್ದ, ಕೇಂದ್ರ-ರಾಜ್ಯ ಸರಕಾರದ ಸುಮಾರು 6-7 ಯೋಜನೆಗಳು ಇದೀಗ ಕುಂಟುತ್ತಾ ಸಾಗುತ್ತಿವೆ. ಇವುಗಳ ಒಟ್ಟು ವೆಚ್ಚ ಸುಮಾರು 8 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿದ್ದು, ಕೆಲವು ಯೋಜನೆಗಳು ಯೋಜನಾ ವರದಿ ಹಂತ, ಸರ್ವೆ ಹಂತದಲ್ಲಿದ್ದರೆ, ಇನ್ನು ಕೆಲವು ವಿವಿಧ ಕಾರಣಗಳಿಗಾಗಿ ಜಾರಿಯ ಅಂಚಿಗೇ ಬಂದಿಲ್ಲ. ಮೂಲಸೌಕರ್ಯ ವೃದ್ಧಿಯಂತಹ ಯೋಜನೆಗಳೇ ಇವುಗಳಲ್ಲಿ ಹೆಚ್ಚಿದ್ದು, ಕರಾವಳಿ ಭಾಗದ ಬೆಳವಣಿಗೆಗೆ ಪ್ರಮುಖವಾಗಿದ್ದವು.

ಮಂಗಳೂರಿಗೆ ಸ್ಕೈಬಸ್‌ ಬರುತ್ತದೆಯೇ?
ಹೊಸ ಮುಖ್ಯಮಂತ್ರಿಯಾಗಿ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರಕಾರದ ಎಚ್‌.ಡಿ. ಕುಮಾರಸ್ವಾಮಿ ಪ್ರಮಾಣ ವಚನ ಸ್ವೀಕರಿಸುತ್ತಿರುವುದು ನಿರಾಶೆಯ ಮಧ್ಯೆಯೂ ಭರವಸೆಯ ಕೋಲ್ಮಿಂಚಾಗಿ ತೋರಿದೆ. ಕರಾವಳಿಯ ಪ್ರಮುಖ ನಗರಗಳಾದ ಮಂಗಳೂರು-ಉಡುಪಿಗಳಲ್ಲಿ ಮೋನೋರೈಲು 
ಯೋಜನೆಯ ಕಾರ್ಯಸಾಧ್ಯತೆ ಬಗ್ಗೆ ಅಧ್ಯಯನ ನಡೆಸುವುದಾಗಿ 2008ರ ಬಜೆಟ್‌ನಲ್ಲಿ ಆಗಿನ ಸಿಎಂ ಯಡಿಯೂರಪ್ಪ ಘೋಷಣೆ ಮಾಡಿದ್ದರು. ಇದರ ಬಗ್ಗೆ ಸಾಕಷ್ಟು ನಿರೀಕ್ಷೆಗಳಿದ್ದು, ಸೂಕ್ತವಾಗಿದೆ ಎಂದು ಕೆನರಾ ವಾಣಿಜ್ಯ ಒಕ್ಕೂಟ ಹರ್ಷ ವ್ಯಕ್ತಪಡಿಸಿತ್ತು. ಎರಡು ದಿನಗಳ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಲೂ ಕರಾವಳಿಯ ಜನತೆ ಇನ್ನಾದರೂ ಮೋನೋ ರೈಲು ಯೋಜನೆಗೆ ವೇಗ ದೊರಕಬಹುದೆಂದು ನಿರೀಕ್ಷಿಸಿದ್ದರು. ಈಗ ಅದಕ್ಕೂ ಮೊದಲು ಎಚ್‌.ಡಿ.ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಮಂಗಳೂರಿಗೆ ಸ್ಕೈಬಸ್‌ ಯೋಜನೆ ಕುರಿತು ಹೇಳàದ್ದರು. ಈಗ ಆ ಯೋಜನೆಯಾದರೂ ಕಾರ್ಯಗತಗೊಳ್ಳಬಹುದೆಂಬ ನಿರೀಕ್ಷೆಯಲ್ಲಿದ್ದಾರೆ ಕರಾವಳಿ ನಾಗರಿಕರು.

Advertisement

ಯಾವೆಲ್ಲ ಯೋಜನೆಗಳು 
ಭಾರತ್‌ ಮಾಲಾ ಯೋಜನೆ ಅನ್ವಯ ಮಂಗಳೂರು ರಾಯಚೂರು ಕಾರಿಡಾರ್‌
ಸಾಗರ್‌ಮಾಲಾ ಯೋಜನೆ ಅನ್ವಯ ಶಿರಾಡಿ ಚತುಷ್ಪಥ (ಗ್ರೀನ್‌ ಬೈಪಾಸ್‌ 7 ಸುರಂಗ, 6 ಸೇತುವೆ ನಿರ್ಮಾಣ) 
ಮೂಡಬಿದಿರೆ-ಮಂಗಳೂರು ಚತುಷ್ಪಥ 
ಮಂಗಳೂರು ವಿಶ್ವದರ್ಜೆ ರೈಲು ನಿಲ್ದಾಣ 
ಮಂಗಳೂರು ರೈಲ್ವೇ ವಿಭಾಗ ಸ್ಥಾಪನೆ
ಕುಳಾಯಿ ಮೀನುಗಾರಿಕೆ ಜೆಟ್ಟಿ ನಿರ್ಮಾಣ 
ಸ್ಮಾರ್ಟ್‌ ಸಿಟಿ ಯೋಜನೆ 
ಮಂಗಳೂರು ಹೊರ ವರ್ತುಲ ರಸ್ತೆ 
ಮಂಗಳೂರು ಹಳೆ ಬಂದರು, ಹೊಸ ಬಂದರು ಮಧ್ಯೆ ನೇರ ಸಂಪರ್ಕ ರಸ್ತೆ 
ಮಲ್ಪೆ, ಹೆಜಮಾಡಿ ಬಂದರು ಅಭಿವೃದ್ಧಿ
ಆದಿ ಉಡುಪಿ- ತೀರ್ಥಹಳ್ಳಿ ಚತುಷ್ಪಥ 

Advertisement

Udayavani is now on Telegram. Click here to join our channel and stay updated with the latest news.

Next