Advertisement

ಗ್ಯಾರಂಟಿಗಳು ಇನ್ನೂ ಇರುತ್ತಾ? ಇರಲ್ವಾ! ಪರಾಮರ್ಶೆಗೆ ಮುಂದಾಗುವುದೇ ಸರ್ಕಾರ ?

10:01 PM Jun 05, 2024 | Team Udayavani |

ಬೆಂಗಳೂರು: ಲೋಕಸಭಾ ಚುನಾವಣೆ ಫ‌ಲಿತಾಂಶದಲ್ಲಿ ಅನಿರೀಕ್ಷಿತ ಆಘಾತಕ್ಕೆ ಒಳಗಾಗಿರುವ ಆಡಳಿತಾರೂಢ ಕಾಂಗ್ರೆಸ್‌, ಸೋಲು-ಗೆಲುವಿನ ಲೆಕ್ಕಾಚಾರಗಳ ಜತೆಗೇ ತನ್ನ ಜನಪ್ರಿಯ “ಗ್ಯಾರಂಟಿ’ ಯೋಜನೆಗಳನ್ನೂ ಪರಾಮರ್ಶೆಗೊಳಪಡಿಸಲು ಮುಂದಾಗಿದೆ.

Advertisement

ವಿಧಾನಸಭಾ ಚುನಾವಣೆ ಪೂರ್ವ ಘೋಷಿಸಿದ ಗ್ಯಾರಂಟಿಗಳು ಪಕ್ಷದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದು ನಿಜ. ನಂತರದಲ್ಲಿ ಜಾರಿಗೊಳಿಸುವ ಮೂಲಕ ನಾವು ನುಡಿದಂತೆ ನಡೆದಿದ್ದೂ ಅಷ್ಟೇ ಸತ್ಯ. ಆದರೆ, ಅದೇ ಯೋಜನೆಗಳು ಲೋಕಸಭಾ ಚುನಾವಣೆಯಲ್ಲಿ “ಕೈ’ ಹಿಡಿಯಲಿಲ್ಲ ಎಂಬುದು ವಾಸ್ತವ.

ಹೀಗಿರುವಾಗ, ಗ್ಯಾರಂಟಿಗಳನ್ನು ಮುಂದುವರಿಸುವುದು ಸೂಕ್ತವೇ ಎಂಬ ಚರ್ಚೆ ಈಗ ಪಕ್ಷದಲ್ಲಿ ಶುರುವಾಗಿದೆ.
ಸಹಜವಾಗಿ ಲೋಕಸಭಾ ಚುನಾವಣೆಯ ಲೆಕ್ಕಾಚಾರ ಇದ್ದುದು ನಿಜ. ಆದರೆ, ಎಲ್ಲ ಪ್ರಯತ್ನದ ಹೊರತಾಗಿಯೂ “ಗ್ಯಾರಂಟಿ’ಗಳು ನಿರೀಕ್ಷಿತ ಫ‌ಲ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಗ್ಯಾರಂಟಿಗಳ ಅಸ್ತಿತ್ವದ ಸಹಜವಾಗಿ ಚರ್ಚೆ ಶುರುವಾಗಿದೆ. ಗ್ಯಾರಂಟಿಗಳು ಮುಂದುವರಿಯಬೇಕಾ? ಒಂದು ವೇಳೆ ಮುಂದುವರಿದರೂ ಯಾವ ಪ್ರಮಾಣದಲ್ಲಿ ಇರಬೇಕು? ನಿಜವಾಗಿಯೂ ಬಡ ವರ್ಗಗಳಿಗೆ ಆ “ಕೊಡುಗೆ’ಗಳು ತಲುಪುತ್ತಿವೆಯೇ? ಬಡವರನ್ನು ಗುರಿಯಾಗಿಟ್ಟುಕೊಂಡು ಅನುಷ್ಠಾನ ಪ್ರಕ್ರಿಯೆಯಲ್ಲಿ ಇನ್ನಷ್ಟು ಬಿಗಿ ಮಾಡಬಹುದೇ? ಫ‌ಲಿತಾಂಶದ ಬೆನ್ನಲ್ಲೇ ಇಂತಹ ಹಲವು ಚರ್ಚೆಗಳು ಪಕ್ಷದ ವಲಯದಲ್ಲಿ ನಡೆಯುತ್ತಿವೆ.

ಸದ್ಯಕ್ಕಿಲ್ಲ ಯೋಚನೆ: ಹಲವು ನಕಾರಾತ್ಮಕ ಅಂಶಗಳ ಹೊರತಾಗಿಯೂ ಸರ್ಕಾರ ಸದ್ಯಕ್ಕಂತೂ ಗ್ಯಾರಂಟಿಗಳಿಗೆ ಬ್ರೇಕ್‌ ಹಾಕುವ ಯೋಚನೆಯಲ್ಲಿಲ್ಲ. ಯಾಕೆಂದರೆ, ಮುಂದೆ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನೂ ಎದುರಿಸಬೇಕಿದೆ. ಇದಕ್ಕೆ ಪೂರಕವಾಗಿ “ಯಾವುದೇ ಕಾರಣಕ್ಕೂ ಗ್ಯಾರಂಟಿಗಳು ಸ್ಥಗಿತಗೊಳ್ಳುವುದಿಲ್ಲ. ಲೋಕಸಭಾ ಚುನಾವಣೆ ನಂತರವೂ ಮುಂದುವರಿಯಲಿವೆ’ ಅಂತ ಸ್ವತಃ ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ. ಆದ್ದರಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆ ನಂತರ ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ವಲಸೆ ಇದ್ದಲ್ಲಿ ಕೆಲಸ ಮಾಡಿದ “ಗ್ಯಾರಂಟಿ’
ರಾಜ್ಯಾದ್ಯಂತ ಭಾರೀ ಗೆಲುವನ್ನು “ಗ್ಯಾರಂಟಿ’ಗಳು ತಂದುಕೊಡದಿರಬಹುದು. ಆದರೆ, ಬಡತನ ಮತ್ತು ವಲಸೆ ಹೆಚ್ಚಿರುವ ಕಡೆಗಳಲ್ಲಿ ಸರ್ಕಾರದ ಈ ಯೋಜನೆಗಳು “ಕೈ’ ಹಿಡಿದಿವೆ. 28 ಸ್ಥಾನಗಳ ಪೈಕಿ ಕಾಂಗ್ರೆಸ್‌ ಗೆದ್ದ ಒಂಬತ್ತು ಸ್ಥಾನಗಳಲ್ಲಿ ಐದು ಕಲ್ಯಾಣ ಕರ್ನಾಟಕದ ಕ್ಷೇತ್ರಗಳಾಗಿವೆ. ಹೆಚ್ಚು ವಲಸೆ ಇರುವುದೂ ಆ ಭಾಗದಲ್ಲೇ ಎಂಬುದು ವಾಸ್ತವ.

Advertisement

ಕರ್ನಾಟಕದಲ್ಲಿ ನಮಗೆ ಮಿಶ್ರ ಫ‌ಲಿತಾಂಶ ಸಿಕ್ಕಿದೆ. ಕಲ್ಯಾಣ ಕರ್ನಾಟಕದ ಅಷ್ಟೂ ಕ್ಷೇತ್ರ ಗೆದ್ದಿದ್ದೇವೆ. ಕಿತ್ತೂರು ಕರ್ನಾಟಕದ ಕೆಲವೆಡೆ ಸಹ ಗೆಲುವು ಸಿಕ್ಕಿದೆ. ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್‌ ಹೊಂದಾಣಿಕೆಯಿಂದ ಹಿನ್ನಡೆಯಾಗಿದೆ. ಆದರೆ, ಕಾಂಗ್ರೆಸ್‌ಗೆ ಹೆಚ್ಚುವರಿ ಮತಗಳೂ ಸಿಕ್ಕಿವೆ. ಗ್ಯಾರಂಟಿ ಕೆಲಸ ಮಾಡಿದೆ. ಅದರಿಂದ 9 ಸ್ಥಾನಗಳು ಬಂದಿವೆ. ನಮ್ಮಲ್ಲಿ ಒಗ್ಗಟ್ಟಿಲ್ಲದ ಕಾರಣದಿಂದ ಸೋತಿದ್ದೇವೆ.
– ಕೆ.ಎಚ್‌. ಮುನಿಯಪ್ಪ, ಆಹಾರ ಸಚಿವ

ಪ್ರತಿಪಕ್ಷಗಳ ಮೈತ್ರಿಗೆ ಮತ ಹಾಕಿದರೋ, ಸಮುದಾಯ ನೋಡಿ ಜನ ಮತ ಹಾಕಿದರೋ ಗೊತ್ತಿಲ್ಲ. ಗ್ಯಾರಂಟಿ ಪರವಂತೂ ಜನ ನಿಂತಿಲ್ಲ ಅನ್ನಿಸುತ್ತದೆ. ಜೆಡಿಎಸ್‌, ಬಿಜೆಪಿಗೆ ಗ್ಯಾರಂಟಿ ಬೇಕಿರಲಿಲ್ಲ. ಒಟ್ಟಾರೆ ಗ್ಯಾರಂಟಿಗಳಿಗೆ ಹಿನ್ನಡೆಯಾಗಿದೆ. ವಿಶೇಷವಾಗಿ ಹಳೆಯ ಮೈಸೂರು ಭಾಗದಲ್ಲಿ ಹೆಚ್ಚು ಹಿನ್ನಡೆಯಾಗಿದೆ.
-ಎನ್‌. ಚಲುವರಾಯಸ್ವಾಮಿ, ಕೃಷಿ ಸಚಿವರು.

Advertisement

Udayavani is now on Telegram. Click here to join our channel and stay updated with the latest news.

Next