ಬೆಳಗ್ಗೆ 6 ಗಂಟೆಗೆ ಅಲರಾಂ ಕಿರೊ ಎಂದು ಬಡಿದುಕೊಳ್ಳುತ್ತಿದೆ. ಆದರೆ ಏಳುವುದಕ್ಕೆ ಮನಸ್ಸೇ ಇಲ್ಲ. ತುಂಬಾ ಚಳಿ. ಇನ್ನು ಸ್ವಲ್ಪ ಹೊತ್ತು ಹೀಗೇ ಮಲಗೋಣ ಎಂದು ಮುದುರಿಕೊಳ್ಳುವಷ್ಟರಲ್ಲಿ, ಆತ ಇಂದು ನನ್ನನ್ನು ಭೇಟಿಯಾಗಲು ಬರುತ್ತಿದ್ದಾನೆ ಎಂಬ ವಿಷಯ ನೆನಪಾಯ್ತು. ತಕ್ಷಣ ಅವಸರವಾಗಿ ಎದ್ದು, ಪಕ್ಕದಲ್ಲಿದ್ದ ಮೊಬೈಲ್ ಎತ್ತಿಕೊಂಡು ಅವನಿಗೆ ಕಾಲ್ ಮಾಡಿ, ಇಂದಿನ ಭೇಟಿಯ ಬಗ್ಗೆ ಖಾತ್ರಿಪಡಿಸಿಕೊಂಡೆ. ಯಾಕಂದ್ರೆ, ಆತನೂ ನಿದ್ದೆ ಪ್ರಿಯ. ನಾನು ಊಹಿಸಿದಂತೆ ಆತ ಇನ್ನೂ ಕನಸಿನ ಲೋಕದಲ್ಲಿ ತೇಲಾಡುತ್ತ ಇದ್ದ. “ಹೋಯ್…ಸೋಂಬೇರಿ ಇನ್ನೂ ಮಲಗಿದ್ದೀಯಾ?’ ಎಂಬ ನನ್ನ ಗದರು ಧ್ವನಿಗೆ ಬೆಚ್ಚಿ ಬಿದ್ದು, ” ಹೇಳು ಜಾನು’ ಎಂದ. “ಬೇಗ ಎದ್ದು ರೆಡಿಯಾಗಿ ಬಾ. ಬಸ್‌ಸ್ಟಾಂಡಿನಲ್ಲಿ ಕಾಯ್ತಾ ಇರ್ತೀನಿ’ ಎಂದು ಹೇಳಿ, ಅವನ ಗುಂಗಿನಲ್ಲಿಯೇ ಉಳಿದ ಕೆಲಸ ಮುಗಿಸಿದೆ.
ಆ ದಿನ ಎಷ್ಟೇ ಶೃಂಗಾರ ಮಾಡಿಕೊಂಡರೂ ಮನಸ್ಸಿಗೆ ತೃಪ್ತಿ ಎನಿಸಲಿಲ್ಲ. ಕಡೆಗೊಮ್ಮೆ ತರಾತುರಿಯಲ್ಲಿ ರೆಡಿಯಾಗಿ “ಅಮ್ಮಾ..ಬರ್ತೀನಿ’ ಎಂದು ಮನೆಯಿಂದೀಚೆ ಹೆಜ್ಜೆ ಇಟ್ಟಾಕ್ಷಣ ಏನೋ ಒಂಥರ ಭಯ. ಯಾಕಂದ್ರೆ ಅದು ನಮ್ಮಿಬ್ಬರ ಮೊದಲ ಭೇಟಿ. ಒಂದೆಡೆ ಮೊದಲ ಭೇಟಿಯ ಖುಷಿ, ಇನ್ನೊಂದೆಡೆ ಅವನ ಜೊತೆ ಹೇಗೆ ಮಾತು ಪ್ರಾರಂಭಿಸೋದು, ನಾವಿಬ್ಬರೂ ಜೊತೆಯಲ್ಲಿರೋದನ್ನು ಯಾರಾದರೂ ನೋಡಿದ್ರೆ ಎಂಬಿತ್ಯಾದಿ ಆತಂಕಗಳು. ಈ ಗೊಂದಲದಲ್ಲೇ ಬಸ್‌ಸ್ಟಾಂಡಿಗೆ ಬಂದೆ.
ಆತ ಇನ್ನೂ ಬಂದಿರಲಿಲ್ಲ. ಕಾಲ್ ಮಾಡಿದೆ, “ಹತ್ತು ನಿಮಿಷದಲ್ಲಿ ಬರ್ತೀನಿ’ ಎಂದ. ನಿಮಿಷಗಳು ಸರಿಯುತ್ತಾ ಹೋದವು. ಸುಡುಬಿಸಿಲಿನಲ್ಲೂ ಚಳಿಯ ಅನುಭವ. ಇದ್ದಕ್ಕಿದ್ದಂತೆ ಮನಸ್ಸಲ್ಲೇನೋ ಸಂತೋಷ. ಯಾರೋ ನನ್ನನ್ನು ಸೆಳೆಯುತ್ತಿರುವಂಥ ಭಾವ, ಆ ಸೆಳೆತ ಸಮೀಪಿಸುತ್ತಿದ್ದಂತೆ ಎದೆ ಬಡಿತ ಹೆಚ್ಚುತ್ತಾ ಹೋಯಿತು. ತಲೆ ಎತ್ತಿ ನೋಡಿದಾಗ ಕಣ್ಣು ತುಂಬಿ ಬಂತು. ಇಷ್ಟು ದಿನ ದೂರದಿಂದಲೇ ಕಾಡಿದವನು, ಕಾಯಿಸಿದವನು ಎದುರಿಗೆ ಬಂದು ನಿಂತಿದ್ದ! “ಹಲೋ… ಏನಾಯ್ತು? ಯಾಕ್ ಹೀಗೆ ಸುಮ್ಮನೆ ಮುಖ ನೋಡ್ತಿದ್ದೀಯಾ?’ ಅಂತ ಭುಜ ಹಿಡಿದು ಅಲುಗಾಡಿಸಿದಾಗ ನಾಚಿ ನೀರಾದೆ.
“ಹೀಗೇ ಯೋಚನೆ ಮಾಡ್ತಾ ಕುಳಿತಿರುತ್ತೀಯಾ? ನನ್ನ ಜೊತೆ ಮಾತಾಡ್ತೀಯಾ?’ ಎಂದಾಗ ಗಂಟೆಗಟ್ಟಲೆ ಮೊಬೈಲ್‌ನಲ್ಲಿ ಅವನೊಂದಿಗೆ ಮಾತಾಡುತ್ತಿದ್ದವಳು ನಾನೇನಾ ಅನ್ನಿಸಿತು. ಕಡೆಗೆ ಅವನೇ ಮಾತು ಆರಂಭಿಸಿದ. ಅಲ್ಲಿಂದ ಪ್ರಾರಂಭವಾದ ನಮ್ಮಿಬ್ಬರ ಹರಟೆ, ಕಾಫಿಡೇಗೆ ಹೋಗಿ ಕಾಫಿ ಕುಡಿದು, ಪಾರ್ಕ್‌ನಲ್ಲೆಲ್ಲಾ ಸುತ್ತಾಡಿದರೂ ಮುಗಿಯಲಿಲ್ಲ. ಸಮಯ ಕಳೆದದ್ದೇ ತಿಳಿಯಲಿಲ್ಲ.
ಅವನ ಧ್ಯಾನದಲ್ಲಿ ಮನೆಗೆ ಹೋಗುವುದನ್ನೇ ಮರೆತು ನಿಂತುಬಿಟ್ಟಿದ್ದೆ. ಹೀಗಿದ್ದಾಗಲೇ- “ಎಷ್ಟೊತ್ತು ಮಲಗಿರಿ¤àಯ? ಕ್ಲಾಸ್‌ಗೆ ಟೈಮ್ ಆಯ್ತು, ಎದ್ದೇಳು’ ಎಂದು ಬೈಯುತ್ತಿರುವ ಅಮ್ಮನ ಧ್ವನಿ ಕೇಳಿಸಿತು. ತಟ್ಟನೆ ಕಣ್ಣು ಬಿಟ್ಟು ಸುತ್ತ ಮುತ್ತ ನೋಡಿದೆ! ಅಯ್ಯೋ, ಇಷ್ಟೊತ್ತು ನಾ ನೋಡಿದ್ದು ಕನಸಾ ಎಂದು ಬೇಸರವಾಯ್ತು…
ಷಾಹಿನಾ ಎ., ತುಮಕೂರು