ವಾಷಿಂಗ್ಟನ್: ಜಾಗತಿಕವಾಗಿ ನಡೆಯುತ್ತಿರುವ ಯುದ್ಧದಲ್ಲಿ ರಷ್ಯಾ ವಿರುದ್ಧ ಉಕ್ರೈನ್ ಹಾಗೂ ಇರಾನ್ ವಿರುದ್ಧ ಇಸ್ರೇಲ್ ಅನ್ನು ವಿಶ್ವದ ದೊಡ್ಡಣ್ಣ ಅಮೆರಿಕ ಬೆಂಬಲ ನೀಡುವ ಮೂಲಕ ವಿದೇಶಿ ಪ್ರಾಯೋಜಿತ ಹಿಂಸಾಚಾರದೊಂದಿಗೆ ದೇಶವನ್ನು ಅಸ್ಥಿರಗೊಳಿಸುವ ಕಳವಳ ಹೆಚ್ಚಾಗಿರುವುದಾಗಿ ವರದಿ ತಿಳಿಸಿದೆ.
ನವೆಂಬರ್ 5ರಂದು ಅಮೆರಿಕದ ನೂತನ ಅಧ್ಯಕ್ಷರ ಆಯ್ಕೆಯ ಚುನಾವಣೆ ನಡೆಯಲಿದ್ದು, ಏತನ್ಮಧ್ಯೆ ಗುಪ್ತಚರ ಇಲಾಖೆಯ ರಹಸ್ಯ ಮಾಹಿತಿ ಅಮೆರಿಕದ ನಿದ್ದೆಗೆಡಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆಯಲ್ಲಿ ಪ್ರತಿಭಟನೆಯ ಕಿಡಿಹೊತ್ತಿಸಿ ಹಿಂಸಾರೂಪಕ್ಕೆ ತಿರುಗಿಸಲು ರಷ್ಯಾ ಮತ್ತು ಇರಾನ್, ಚೀನಾ ಪ್ರಯತ್ನಿಸುವ ಸಾಧ್ಯತೆ ಇದ್ದಿರುವುದಾಗಿ ಅಮೆರಿಕದ ಗುಪ್ತಚರ ಇಲಾಖೆಯ ಹಿರಿಯ ಅಧಿಕಾರಿಗಳು ಮುನ್ನೆಚ್ಚರಿಕೆ ನೀಡಿರುವುದಾಗಿ ವರದಿ ತಿಳಿಸಿದೆ.
ರಷ್ಯಾ ಮತ್ತು ಇರಾನ್, ಚೀನಾ ಹಿಂಸಾತ್ಮಾಕ ಪ್ರತಿಭಟನೆಯನ್ನು ಪ್ರಚೋದಿಸುವ ಸಾಧ್ಯತೆ ಇದೆ ಎಂದು ಡೈರೆಕ್ಟರ್ ಆಫ್ ನ್ಯಾಷನಲ್ ಇಂಟೆಲಿಜೆನ್ಸ್ ಎಚ್ಚರಿಕೆಯನ್ನು ನೀಡಿದೆ. ಅಮೆರಿಕದ ಮೇಲೆ ಪ್ರತೀಕಾರ ತೀರಿಸಿಕೊಳ್ಳುವ ಕಾತುರದಲ್ಲಿರುವ ರಷ್ಯಾ ಮತ್ತು ಇರಾನ್ ಈ ಬಾರಿಯ ಚುನಾವಣೆಯ ಸಂದರ್ಭವನ್ನು ಬಳಸಿಕೊಳ್ಳುವ ಎಲ್ಲಾ ಸಾಧ್ಯತೆ ಇದ್ದಿರುವುದಾಗಿ ತಿಳಿಸಿದೆ.
ಚುನಾವಣಾ ಫಲಿತಾಂಶ ವ್ಯತಿರಿಕ್ತ ಪರಿಣಾಮ ಬೀರುವಂತೆ ಮಾಡಿ, ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಬುಡಮೇಲು ಮಾಡುವ ಸಂಚು ರೂಪಿಸಿರುವುದಾಗಿ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.