Advertisement

ಫ‌ಲಕ ಪ್ರದರ್ಶನ: ಆರ್ದ್ರಾ ನಾರಾಯಣ್‌ ಬಂಧನ

10:12 AM Feb 23, 2020 | Sriram |

ಬೆಂಗಳೂರು: ಅಮೂಲ್ಯಾ ಹೇಳಿಕೆ ಖಂಡಿಸಿ ನಡೆದ ಪ್ರತಿಭಟನೆಯಲ್ಲಿ “ಮುಸಲ್ಮಾನ್‌,ದಲಿತ,ಕಾಶ್ಮೀರಿ, ಟ್ರಾನ್ಸ್‌,ಆದಿವಾಸಿ-ಮುಕ್ತಿ, ಮುಕ್ತಿ, ಮುಕ್ತಿ, ಈ ಕೂಡಲೇ’ ಎಂಬ ಫ‌ಲಕ ಪ್ರದರ್ಶಿಸಿ ಆರ್ದ್ರಾ ನಾರಾಯಣ್‌ ಎಂಬಾಕೆ ಜೈಲು ಸೇರಿದ್ದಾಳೆ.

Advertisement

ಹಿಂದೂ ಪರ ಸಂಘಟನೆ ಸದಸ್ಯರು ಈಕೆ ಪಾಕಿಸ್ಥಾನ ಪರವಾಗಿ ಘೋಷಣೆ ಕೂಗಿದ್ದಾಳೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ.

ಬಜರಂಗದಳ, ಹಿಂದೂ ಜನಜಾಗೃತಿ ವೇದಿಕೆ ಮತ್ತು ಕರ್ನಾಟಕ ನಾಡ ಸಂಘಟನೆಗಳ ಒಕ್ಕೂಟ ಕಾರ್ಯಕರ್ತರು ಶುಕ್ರವಾರ ಪುರಭವನದ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಅಲ್ಲಿಗೆ ಆಗಮಿಸಿದ ಆರ್ದ್ರಾ ಫ‌ಲಕ ಪ್ರದರ್ಶಿಸಿದ್ದು ವಿವಾದಕ್ಕೆ ಕಾರಣ ವಾಗಿತ್ತು. ಆಕೆಯನ್ನು ಬಂಧಿಸಿದ ಎಸ್‌.ಜೆ.ಪಾರ್ಕ್‌ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಆಕೆಗೆ ಮಾ.5ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು,ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ.

ನಡೆದಿದ್ದೇನು?
ಪ್ರತಿಭಟನೆ ಮುಗಿಯುವ ವೇಳೆ ಅಚಾನಕ್‌ ಆಗಿ ಕಾಣಿಸಿಕೊಂಡಿದ್ದ ಆರ್ದ್ರಾ ಫ‌ಲಕ ಪ್ರದರ್ಶಿಸುತ್ತಿದ್ದಂತೆ ಜಗಳ ಆರಂಭವಾಯಿತು. ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಸೂಚನೆ ಅರಿತು ಸ್ಥಳದಲ್ಲಿದ್ದ ಪೊಲೀಸರು ಆಕೆಯನ್ನು ವಶಕ್ಕೆ ಪಡೆದರು.

ದೇಶದ್ರೋಹಿ ಘೋಷಣೆ?
ಯುವತಿ ದೇಶದ್ರೋಹಿ ಘೋಷಣೆ ಕೂಗಿದ್ದಾಳೆ ಎಂದು ಸ್ಥಳದಲ್ಲಿದ್ದ ಪ್ರತಿಭಟನಕಾರರು ಆರೋಪಿಸಿದ್ದಾರೆ. ಘಟನೆ ಬಗ್ಗೆ ಸ್ಪಷ್ಟನೆ ನೀಡಿ ರುವ ಕೇಂದ್ರ ವಿಭಾಗದ ಡಿಸಿಪಿ ಡಾ| ಚೇತನ್‌ಸಿಂಗ್‌ ರಾಥೋರ್‌, ಆಕೆ ಯಾವುದೇ ಘೋಷಣೆ ಕೂಗಿರುವುದಕ್ಕೆ ಪುರಾವೆ ಇಲ್ಲ. ಫ‌ಲಕ ಮಾತ್ರ ಪ್ರದರ್ಶಿಸಿದ್ದಾಳೆ ಎಂದಿದ್ದಾರೆ.

Advertisement

ಆರ್ದ್ರಾ ದೇಶದ್ರೋಹ ಎಸಗಿದ್ದಾಳೆ ಎಂದು ಆರೋಪಿಸಿ ಹಿಂದೂ ಜನ ಜಾಗೃತಿ ಮುಖಂಡ ಮೋಹನ್‌ ಗೌಡ ಪೊಲೀಸರಿಗೆ ಪ್ರತ್ಯೇಕ ದೂರು ನೀಡಿದ್ದಾರೆ.

ಮಲ್ಲೇಶ್ವರ ನಿವಾಸಿ
ಅನ್ನಪೂರ್ಣ ಮೂಲ ಹೆಸರಿನ ಆರ್ದ್ರಾ ಮಲ್ಲೇಶ್ವರ ನಿವಾಸಿಯಾಗಿದ್ದು, ಖಾಸಗಿ ಕಂಪೆನಿಯಲ್ಲಿ ಗ್ರಾಫಿಕ್‌ ಡಿಸೈನರ್‌ ಆಗಿದ್ದಾಳೆ.

ಅಮೂಲ್ಯಾಳನ್ನು ಗಡಿಪಾರು ಮಾಡುವ ಬಗ್ಗೆ ಆಲೋಚನೆ ಮಾಡಿಲ್ಲ. ನಮ್ಮಲ್ಲೇ ಸಾಕಷ್ಟು ಬಿಗಿ ಕಾನೂನುಗಳಿವೆ. ಯುವತಿ ತನ್ನ ಹಿಂದೆ ಸಾಕಷ್ಟು ಸಂಘಟನೆಗಳಿವೆ ಎಂದು ಹೇಳಿರುವುದು ಗಮನಕ್ಕೆ ಬಂದಿದ್ದು, ಆ ನಿಟ್ಟಿನಲ್ಲಿಯೂ ತನಿಖೆ ನಡೆಸಲಾಗುತ್ತಿದೆ.
– ಬಸವರಾಜ ಬೊಮ್ಮಾಯಿ, ಗೃಹ ಸಚಿವ

ಅಮೂಲ್ಯಾ ಆಗಲಿ, ಮತ್ಯಾರೋ ಆಗಲಿ ದೇಶದ್ರೋಹಿಗಳನ್ನು ಸಮರ್ಥಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಆಕೆ ಪಾಕ್‌ ಪರ ಘೋಷಣೆ ಕೂಗಿರುವ ಬಗ್ಗೆ ಹೆಚ್ಚಿನ ತನಿಖೆಯಾಗಲಿ. ದೇಶ ಭಕ್ತಿ, ದೇಶ ಕಟ್ಟುವ ವಿಚಾರದಲ್ಲಿ ಎಲ್ಲ ಭಾರತೀಯರ ಅಭಿಪ್ರಾಯ ಒಂದೇ.
– ಡಿ.ಕೆ. ಶಿವಕುಮಾರ್‌, ಮಾಜಿ ಸಚಿವ

ಪಾಕಿಸ್ಥಾನದ ಮೇಲೆ ಪ್ರೀತಿ ಇದ್ದರೆ ಅಲ್ಲಿಗೇ ಹೋಗಲಿ. ಪಾಕ್‌ ಒಂದು ದರಿದ್ರ ರಾಷ್ಟ್ರ. ಅದರ ಜತೆ ಯಾಕೆ ಹೋಲಿಕೆ ಮಾಡಿಕೊಳ್ಳಬೇಕು?
– ಎಂ.ಬಿ. ಪಾಟೀಲ್‌,ಮಾಜಿ ಗೃಹ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next