ಅಂಟಾಲ್ಯ: ಅಭಿಷೇಕ್ ವರ್ಮ, ರಜತ್ ಚೌಹಾಣ್ ಮತ್ತು ಅಮನ್ ಸೈನಿ ಅವರನ್ನು ಒಳಗೊಂಡ ಭಾರತೀಯ ಪುರುಷರ ಕಾಂಪೌಂಡ್ ಆರ್ಚರಿ ತಂಡವು ಫ್ರಾನ್ಸ್ ತಂಡವನ್ನು ರೋಮಾಂಚಕವಾಗಿ ಒಂದು ಅಂಕದಿಂದ ಸೋಲಿಸಿ ವಿಶ್ವಕಪ್ ಸ್ಟೇಜ್ ಒಂದರ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದುಕೊಂಡಿದೆ.
ಇದು ಶಾಂಘೈನಲ್ಲಿ 2017ರ ಬಳಿಕ ಭಾರತೀಯ ಕಾಂಪೌಂಡ್ ಆರ್ಚರಿ ತಂಡದ ಮೊದಲ ವಿಶ್ವಕಪ್ ಚಿನ್ನದ ಪದಕವಾಗಿದೆ. ಆದರೆ ಭಾರತ ಕಾಂಪೌಂಡ್ ಮಿಕ್ಸೆಡ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆಲ್ಲಲು ವಿಫಲವಾಗಿದೆ. ಅಭಿಷೇಕ್ ವರ್ಮ ಮತ್ತು ಮುಸ್ಕಾನ್ ಕಿರಾರ್ ಅವರು ಕಂಚಿನ ಪದಕಕ್ಕಾಗಿ ನಡೆದ ಸ್ಪರ್ಧೆಯಲ್ಲಿ ಕ್ರೊವೇಷ್ಯದೆದುರು ಒಂದು ಅಂಕದಿಂದ ಸೋತರು.
ಪುರುಷರ ಕಾಂಪೌಂಡ್ ಆರ್ಚರಿ ಫೈನಲ್‌ನಲ್ಲಿ ಭಾರತೀಯ ಆಟಗಾರರು ಉತ್ತಮ ಆರಂಭ ಪಡೆದಿದ್ದರು. ಎದುರಾಳಿ ಫ್ರಾನ್ಸ್‌ನ ಜಾನ್ ಫಿಲಿಪ್ ಬೌಲ್c, ಕ್ವೆಂಟಿನ್ ಬರಾರ್ ಮತು ಆ್ಯಡ್ರಿಯೆನ್ ಗಾಂಟೀರ್ ತೀವ್ರ ಪೈಪೋಟಿ ನೀಡಿದರು. ಅಂತಿಮವಾಗಿ ಭಾರತ ಒಂದಂಕದಿಂದ ಚಿನ್ನ ಗೆಲ್ಲುವಲ್ಲಿ ಯಶಸ್ವಿಯಾಯಿತು.
ಭಾನುವಾರ ಭಾರತೀಯ ರಿಕರ್ವ್ ಮಿಕ್ಸೆಡ್ ತಂಡವಾದ ತರುಣ್‌ದೀಪ್ ರೈ ಮತ್ತು ರಿಧಿ ಪೋರ್ ಅವರು ಇನ್ನೊಂದು ಪದಕಕ್ಕಾಗಿ ಹೋರಾಡಲಿದ್ದಾರೆ. ಸೆಮಿಫೈನಲ್‌ನಲ್ಲಿ ಅವರು ಸ್ಪೇನ್ ತಂಡದ ಆಟಗಾರರನ್ನು 5-3 ಅಂತರದಿಂದ ಸೋಲಿಸಿದ್ದರು.
ಮಾನಸಿಕವಾಗಿ ನಾವಿಂದು ಬಲಿಷ್ಠರಾಗಿದ್ದೆವು. ಮುಂದಿನ ಏಷ್ಯನ್ ಗೇಮ್ಸ್ ನಡೆಯುವ ಕಾರಣ ನಾವು ಉತ್ತಮ ಹೋರಾಟ ನೀಡಲು ಸಿದ್ಧರಾಗಿದ್ದೆವು ಎಂದು ಸೈನಿ ಹೇಳಿದರು. ಅವರಿಗಿದು ವಿಶ್ವಕಪ್‌ನಲ್ಲಿ ಮೊದಲ ಚಿನ್ನದ ಪದಕದ ಸಂಭ್ರಮವಾಗಿದೆ.
ಚಿನ್ನ ಗೆದ್ದಿರುವ ಕಾರಣ ನಮ್ಮ ಆತ್ಮವಿಶ್ವಾಸ ಹೆಚ್ಚಿದೆ. ಇನ್ನುಳಿದ ವಿಶ್ವಕಪ್ ಕೂಟಗಳಲ್ಲಿ ಉತ್ತಮ ನಿರ್ವಹಣೆ ನೀಡಲು ಇದು ಪ್ರೇರಣೆ ನೀಡಲಿದೆ. ಫ್ರಾನ್ಸ್ ಆಟಗಾರರ ತೀವ್ರತರದ ಹೋರಾಟ ನಮಗೆ ನೆರವಾಗುವ ಸಾಧ್ಯತೆಯಿದೆ ಎಂದವರು ಹೇಳಿದರು.