Advertisement

ಅರ್ಚನಾ ಟೇಬಲ್‌ ಟೆನಿಸ್‌ನ ಬೆಳ್ಳಿ ನಕ್ಷತ್ರ! 

02:50 PM Mar 31, 2019 | mahesh |

ಟೇಬಲ್‌ ಟೆನಿಸ್‌ ಲೋಕದಲ್ಲಿ ಇಂದು ಕರ್ನಾಟಕ ನೂರಾರು ಪದಕ ಗೆದ್ದಿದೆ. ಇದಕ್ಕೆಲ್ಲ ಮುಖ್ಯ ಕಾರಣ ರಾಜ್ಯದ ಆಟಗಾರ್ತಿ ಅರ್ಚನಾ ಕಾಮತ್‌.
ಹೌದು, ಟೇಬಲ್‌ ಟೆನಿಸ್‌ನಲ್ಲಿ ಮಣಿಕಾ ಬಾತ್ರಾ, ಸಾಥಿಯಾನ್‌ ರಂತಹ ಖ್ಯಾತ ಆಟಗಾರರ ಹೆಸರು ಕೇಳಿ ಬರುತ್ತಿದ್ದ ಸಮಯದಲ್ಲಿ ಉದಯಗೊಂಡ ಪ್ರತಿಭೆಯೇ ಅರ್ಚನಾ. ಬೆಂಗಳೂರು ಹುಡುಗಿ ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಹಲವಾರು ಕೂಟಗಳಲ್ಲಿ ಪದಕ ಗೆದ್ದಿದ್ದಾರೆ. ರಾಷ್ಟ್ರಧ್ವಜವನ್ನು ದೇಶ ವಿದೇಶಗಳಲ್ಲಿ ಹಾರಿಸಿದ್ದಾರೆ. ಇದೀಗ ಪ್ರಸಕ್ತ ನಡೆದ ಓಮಾನ್‌ ಟೇಬಲ್‌ ಟೆನಿಸ್‌ ಕೂಟದಲ್ಲಿ ಅರ್ಚನಾ 21 ವರ್ಷ ವಯೋಮಿತಿಯೊಳಗಿನ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಈ ಪದಕ ಗೆದ್ದ ಮೊದಲ ಸಾಧನೆಯನ್ನು ಅರ್ಚನಾ ಮಾಡಿ ಇದೀಗ ಬೆಂಗಳೂರಿಗೆ ವಾಪಸ್‌ ಆಗಿದ್ದಾರೆ.

Advertisement

ಹೆಮ್ಮೆಯ ಕನ್ನಡತಿಗೆ ಒಲಿಂಪಿಕ್ಸ್‌ ಕನಸು: ಒಲಿಂಪಿಕ್ಸ್‌ ಮಹಾಕೂಟದ ಟೇಬಲ್‌ ಟೆನಿಸ್‌ನಲ್ಲಿ ಪದಕ ಗೆಲ್ಲಬೇಕು ಎನ್ನುವುದು ಅರ್ಚನಾ ಕಾಮತ್‌ ಕನಸು, 17 ವರ್ಷದ ಅರ್ಚನಾಗೆ ಅದಕ್ಕಾಗಿ ಹಗಲಿರುಳೆನ್ನದೆ ಶ್ರಮಿಸುತ್ತಿದ್ದಾರೆ. ದಿನ ಬೆಳಗಾದರೆ ಅಭ್ಯಾಸವೊಂದೇ ಸಂಗಾತಿ. ತನ್ನದೆನ್ನುವ ಎಲ್ಲ ಆಸೆ ಆಕಾಂಕ್ಷೆಗಳನ್ನು ಬದಿಗಿಟ್ಟು ಅರ್ಚನಾ ನಿರಂತರ ಪ್ರಯತ್ನದಲ್ಲಿ ತೊಡಗಿದ್ದಾರೆ. ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಸೇರಿದಂತೆ ಹಲವಾರು ಕೂಟಗಳಲ್ಲಿ ಮಿಂಚಿದ್ದಾರೆ. ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿ ಪದಕ ಗೆಲ್ಲುವುದು ನಮ್ಮ ಜೀವನದ ಅತ್ಯಂತ ದೊಡ್ಡ ಕನಸು ಎಂದು ಹೇಳುತ್ತಾರೆ ಅರ್ಚನಾ ಕಾಮತ್‌. ಶಿಸ್ತಿನ ದಾರಿಯಲ್ಲಿ ಅರ್ಚನಾ ನಡೆಯುವುದು ನೋಡಿದರೆ ಮುಂದೊಂದು ದಿನ ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲುವ ಸಾಧ್ಯತೆಯಿದೆ.

ಅರ್ಚನಾ ಸಾಧನೆ ಏನು?: ಅರ್ಚನಾ 9ನೇ ವಯಸ್ಸಿನಲ್ಲಿ ಟೇಬಲ್‌ ಟೆನಿಸ್‌ ಸ್ಪರ್ಧೆಯನ್ನು ಅಭ್ಯಾಸ ನಡೆಸಿದರು. 12 ವರ್ಷ ವಯೋಮಿತಿಯೊಳಗಿನ ವಿಭಾಗದಲ್ಲಿ ಮೊದಲ ಸಲ ಚಾಂಪಿಯನ್‌ ಆದರು. ಬಳಿಕ 18 ವರ್ಷ ವಯೋಮಿತಿಯೊಳಗಿನ ವಿಭಾಗದ ರಾಜ್ಯ ಕೂಟದಲ್ಲಿ ಪ್ರಶಸ್ತಿ ಗೆದ್ದು ಮೆರೆದರು. 2011ರಲ್ಲೇ ಈ ಎರಡು ಪ್ರಮುಖ ಕೂಟಗಳನ್ನು ಜಯಿಸಿ ಅರ್ಚನಾ ಆತ್ಮವಿಶ್ವಾಸ ಹೆಚ್ಚಿಸಿಕೊಂಡರು. 2012ರ ವೇಳೆಗೆ ಸಬ್‌ ಜೂನಿಯರ್‌ ವಿಭಾಗದಲ್ಲಿ ರಾಜ್ಯ ನಂಬರ್‌ ವನ್‌ ಆಟಗಾರ್ತಿಯಾಗಿ ಗಮನ ಸೆಳೆದರು.

ಅರ್ಚನಾ ಅಂಡರ್‌ 15, ಅಂಡರ್‌ 18, ಅಂಡರ್‌ 21 ಹಾಗೂ ಮಹಿಳಾ ಸಿಂಗಲ್ಸ್‌ ಒಟ್ಟಾರೆ ನಾಲ್ಕು ವಯೋ ವಿಭಾಗದಲ್ಲಿ ನಂಬರ್‌ ವನ್‌ ಆಟಗಾರ್ತಿಯಾಗಿ ಮೂಡಿದರು. ಕರ್ನಾಟಕ ಟೇಬಲ್‌ ಟೆನಿಸ್‌ ಇತಿಹಾಸದಲ್ಲಿಯೇ ಇಂತಹದೊಂದು ಸಾಧನೆ ಮಾಡಿದ ಮೊದಲ ಆಟಗಾರ್ತಿ ಎನ್ನುವ ಖ್ಯಾತಿಗೆ ಅರ್ಚನಾ ಭಾಜನರಾದರು. ಒಟ್ಟಾರೆ ಅರ್ಚನಾ ಇದುವರೆಗೆ 30 ಪ್ರಶಸ್ತಿ ಗೆದ್ದಿದ್ದಾರೆ. ಅಲ್ಲದೆ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ, ಡಬಲ್ಸ್‌ನಲ್ಲಿ ಕಂಚಿನ ಪದಕ ಗೆದ್ದರು. ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ 3 ಚಿನ್ನದ ಪದಕ ಗೆದ್ದರು. ಈ ಸಾಧನೆ ಮಾಡಿದ ಮೊದಲ ಆಟಗಾರ್ತಿ ಎನ್ನುವ ಸಾಧನೆ ಮಾಡಿದರು.

2014ರಿಂದ ಅಂ.ರಾ. ಪ್ರಯಾಣ: ಮೊದಲ ಬಾರಿಗೆ ಇವರಿಗೆ ಭಾರತವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕಿದ್ದು 2014ರಿಂದ. 2015ರಲ್ಲಿ ಇವರು ಟೀಮ್‌ ಏಷ್ಯಾ ಐಟಿಟಿಎಫ್ ವಿಶ್ವ ಕೆಡೆಟ್‌ ಚಾಲೆಂಜ್‌ ಕೂಟದಲ್ಲಿ ಪಾಲ್ಗೊಂಡರು. ಮೊದಲ ಭಾರತೀಯ ಆಟಗಾರ್ತಿ ಎನಿಸಿಕೊಂಡರು.ಕೂಟದಲ್ಲಿ ಪಾಲ್ಗೊಂಡಿದ್ದು ಮಾತ್ರವಲ್ಲ ತಂಡ ವಿಭಾಗದಲ್ಲಿ ಬೆಳ್ಳಿ ನಗುವನ್ನು ಚೆಲ್ಲಿದರು. ಇವರ ಈ ಸಾಧನೆಗೆ ಐಟಿಟಿಎಫ್ ಫೇರ್‌ ಪ್ಲೇ ಅವಾರ್ಡ್‌ ಕೂಡ ಲಭಿಸಿತು.

Advertisement

ಸೈನ್ಯಕ್ಕೆ ಸೇರುವ ಕನಸು
ಅರ್ಚನಾ ಕಾಮತ್‌ಗೆ ಸೈನ್ಯಕ್ಕೆ ಸೇರುವ ಕನಸು ಇದೆ. ಸ್ವತಃ ಅದನ್ನು ಅವರು ಹೇಳಿದ್ದು ಹೀಗೆ…”ನಾನು ಸೈನ್ಯಕ್ಕೆ ಸೇರಿ ದೇಶಕ್ಕಾಗಿ ಹೋರಾಡಬೇಕು ಎನ್ನುವ ಕನಸು ಕಂಡಿದ್ದೇನೆ. ನನ್ನ ಕನಸನ್ನು ಟೇಬಲ್‌ ಟೆನಿಸ್‌ ನಿಜವಾಗಿಸಿದೆ. ಪದಕ ಗೆದ್ದು ರಾಷ್ಟ್ರ ಧ್ವಜವನ್ನು ಕೀರ್ತಿ ಶಿಖರಕ್ಕೆ ಏರಿಸುವ ಖುಷಿ ಕೋಟಿ ಕೊಟ್ಟರೂ ಸಿಗದು ಎನ್ನುತ್ತಾರೆ ಅರ್ಚನಾ ಕಾಮತ್‌.

ಕ್ರೀಡೆ, ಓದು ಎರಡರಲ್ಲೂ ಪ್ರಥಮ
ಅರ್ಚನಾ ಕಾಮತ್‌ ಟೇಬಲ್‌ ಟೆನಿಸ್‌ನಲ್ಲಿ ಎಷ್ಟು ಶ್ರೇಷ್ಠ ನಿರ್ವಹಣೆ ನೀಡುತ್ತಿದ್ದಾರೋ ಅಷ್ಟೇ ಓದಿನಲ್ಲೂ ಆಸಕ್ತಿ ವಹಿಸಿದ್ದಾರೆ. ಸಾಮಾನ್ಯವಾಗಿ ಕ್ರೀಡೆಯಲ್ಲಿ ಪರಾಕ್ರಮ ಮೆರೆಯುವ ಸ್ಪರ್ಧಿಗಳು ಓದಿನಲ್ಲಿ ಜಸ್ಟ್‌ ಪಾಸ್‌ ಆಗಿರುವರು. ಆದರೆ ಅರ್ಚನಾ ಇದಕ್ಕೆ ವ್ಯತಿರಿಕ್ತ ಉದಾಹರಣೆ. 2018ರಲ್ಲಿ ನಡೆದ ಪಿಯುಸಿ ಪರೀಕ್ಷೆಯಲ್ಲಿ ಅರ್ಚನಾ ಶೇ.97 (582 ಅಂಕ) ಪಡೆದು ಅಸಾಮಾನ್ಯ ಸಾಧನೆ ಮಾಡಿದ್ದರು. ಅದರಲ್ಲೂ ಮನಶಾಸ್ತ್ರ ವಿಷಯದಲ್ಲಿ ನೂರಕ್ಕೆ ನೂರು ಅಂಕ ಪಡೆದಿದ್ದರು. 2017ರಲ್ಲಿ 10ನೇ ತರಗತಿ ಪರೀಕ್ಷೆಯಲ್ಲಿ ಅರ್ಚನಾ 617 ಅಂಕ (625ಕ್ಕೆ) ಪಡೆದು ರಾಜ್ಯದ ಗಮನ ಸೆಳೆದಿದ್ದನ್ನು ಸ್ಮರಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next