Advertisement

ಆಷಾಢದ ಸಂಜೆಯಲ್ಲಿ ಝೇಂಕರಿಸಿದ ಅರ್ಚನಾ –ಸಮನ್ವಿ ದ್ವಂದ್ವ ಗಾಯನ

06:34 PM Aug 15, 2019 | mahesh |

ಪರ್ಕಳದ ಸರಿಗಮ ಭಾರತಿಯಲ್ಲಿ, ಆ. 1ರಂದು ನಿರ್ದೇಶಕಿ ಉಮಾಶಂಕರಿಯವರ ಜನ್ಮ‌ದಿನದ ಆಚರಣೆಯ ಅಂಗವಾಗಿ ಕು| ಅರ್ಚನಾ ಹಾಗೂ ಕು| ಸಮನ್ವಿ ಅವರ ಹಾಡುಗಾರಿಕೆಯನ್ನು ಏರ್ಪಡಿಸಲಾಗಿತ್ತು. ಆರಂಭದಲ್ಲಿ ದಿ|ಟಿ. ಕೆ. ಗೋವಿಂದ ರಾವ್‌ ವಿರಚಿತ ವಾಚಸ್ಪತಿ ರಾಗದಲ್ಲಿ ನಿನ್ನನೇ ಪಾಡುವೆ ನಿನ್ನನೇ ಪೊಗಳುವೆಯನ್ನು ವರ್ಣದ ಮಾದರಿಯಲ್ಲಿ ಹಾಡಿದರು. ಮುಂದೆ ಉಮಾಮಹೇಶ್ವರಾತಜಂ (ಉಮಾಭರಣ ರಾಗ), ಬಳಿಕ ಕರ್ಣರಂಜಕವಾದ ಕರ್ಣರಂಜನಿ ರಾಗಾಲಾಪನೆ ಬಹು ರಂಜಕವಾಗಿ ಮೂಡಿ ಬಂತು. ಇಲ್ಲಿ ಹಾಡಿದ ಪುರಂದರ ದಾಸರ “ನೀನ್ಯಾಕೋ ನಿನ್ನ ಹಂಗ್ಯಾಕೋ’ ಆದ್ರವಾಗಿ ತೆರೆದುಕೊಂಡ ಈ ರಚನೆಯನ್ನು ಸುಖಾನುಭವದಿಂದ ಕೇಳುವಂತಾಯಿತು. ಪ್ರತಿಯೊಂದು ಸಂಗತಿಗಳೂ ವಿಭಿನ್ನವೂ, ಹೊಸದೂ ಆಗಿದ್ದು “ಘನ್ನ ಮಹಿಮ ಶ್ರೀ’ಯಲ್ಲಿನ ಸಾಹಿತ್ಯ, ಸಂಗೀತ ಬದ್ಧವಾದ ನೆರವಲ್‌ ಸ್ವರಪ್ರಸ್ತಾರಗಳು ರಾಗದ ಸೊಬಗನ್ನು ಸೊಗಸಾಗಿ ಚಿತ್ರಿಸಿದವು. ಅಠಾಣದ “ಚಡೇ ಬುದ್ಧಿ’ ಕೃತಿಯ ಬಿಗುವಿನ ಪ್ರಸ್ತುತಿ ಹಾಗೂ ಅತೀತ ಎಡಪ್ಪಿನಲ್ಲಿನ ಕಲ್ಪನಾ ಸ್ವರಗಳು ಕೇಳುಗರನ್ನು ಲಾಲಿತ್ಯದಿಂದ (ಕರ್ಣರಂಜನಿ) ಬಿಗುವಿನೆಡೆಗೆ ಹುರಿದುಂಬಿಸಿ ಬಡಿದೆಬ್ಬಿಸಿದಂತಿತ್ತು. ನಡುವೆ ಮೂಡಿ ಬಂದ “ರಾಮಾ ರಾಮಾ’ ಎನ್ನುವ ರಾಮ್‌ ಕಲೀ ರಾಗದ ದೀಕ್ಷಿತರ ರಚನೆ ಹೃದ್ಯವಾಗಿತ್ತು. ಮುಂದೆ ಕೇದಾರಗೌಳದ ಸವಿಸ್ತಾರವಾದ ಆಲಾಪನೆಯೊಂದಿಗೆ “ಸಾಮೀಕೀ ಸರಿ ಎವರು’ ಕೃತಿಯನ್ನು ಪ್ರಸ್ತುತಿಪಡಿಸಿದರು.

Advertisement

“ರಾಮ ಸುಂದರ ಜಗನ್ಮೋಹನ ಲಾವಣ್ಯಂ’ನಲ್ಲಿ ನೆರವಲ್‌ ಹಾಗೂ ಸ್ವರ ಪ್ರಸ್ತಾರವನ್ನು ಮಾಡಲಾಯಿತು. ಕೇದಾರಗೌಳದ ಕರಾರುವಕ್ಕಾದ ನೆರವಲ್‌ನ್ನು ತಲ್ಲೀನರಾಗಿ ಸವಿಯುತ್ತಿರುವಂತೆಯೇ, ಅಲ್ಲಿಯೇ ನಯವಾಗಿ ಜಾರುತ್ತಾ ಮೋಹನಕ್ಕೆ ಬಂದ ರೀತಿಯಂತೂ ಆಕರ್ಷಕವಾಗಿತ್ತು. ಹಾಗೆಯೇ ಶಿವರಂಜನಿ, ಭೂಪಾಲ, ವಾಸಂತಿ ( ಈ ಎಲ್ಲಾ ಔಡವ-ಔಡವ ರಾಗಗಳ ಆರೋಹಣ ಅವರೋಹಣಗಳೂ, ಸರಿಗಪದಸ-ಸದಪಗರಿಸ ಆಗಿದೆ ಎಂಬುದು ಉಲ್ಲೇಖನೀಯ ) ಅಂತೆಯೇ ತಿರುಗಿ ಬರುವ ಯಾದಿಯಲ್ಲಿ ಈ ರಾಗಗಳಲ್ಲಿ ಕಲ್ಪನಾ ಸ್ವರಗಳನ್ನು ಹಾಡಲಾಯಿತು. ಕೇದಾರಗೌಳದ ಎಲ್ಲಾ ಸ್ತರಗಳಲ್ಲಿಯೂ ಸಂಚರಿಸಿದ ಆಲಾಪನೆಯೂ ಸೇರಿದಂತೆ ಈ ಪ್ರಸ್ತುತಿಯು ಕಾರ್ಯಕ್ರಮದ “ಮಾಸ್ಟರ್‌ಪೀಸ್‌’ ಆಗಿತ್ತು. ಇಲ್ಲಿ ಮೃದಂಗವಾದಕ ಶಂಕರ್‌ ಪ್ರಸಾದ್‌ ನುಡಿಸಿದ ತನಿ ಆವರ್ತನವು ಗಾಯಕಿಯರ ಮಟ್ಟಕ್ಕೆ ಸಮನಾಗಿಯೇ ಇತ್ತು. ಮುಂದೆ ಮಾಲ್‌ಕೌಂಸ್‌ ರಾಗದಲ್ಲಿ ಹಿಂದುಸ್ತಾನಿ ಶೈಲಿಯಲ್ಲಿ ಅಭಂಗನ್ನು ಹಾಡಿದರು.

ಮಾಲ್ಕಂಸ್‌ನ ಆಲಾಪನೆಯೂ, ನಡುವೆ ಗಾಯಕಿಯರಲ್ಲಿ ಒಬ್ಬರು ಸರಗಮ್‌, ಇನ್ನೊಬ್ಬರು ಅಕಾರವನ್ನು ಖಚಿತತೆಯಿಂದ ಹಾಗೂ ಕ್ಷಿಪ್ರವಾಗಿ ಹಾಡಿ ಬೆರಗುಗೊಳಿಸಿದರು. ಕೊನೆಯಲ್ಲಿ ಇಂದು ಸೈರಿಸಿರಿ (ದೇಶ್‌), ನಂಬಿಕೆಟ್ಟವರಿಲ್ಲ (ಪೂರ್ವಿಕಲ್ಯಾಣಿ), ಬಾಗೇಶ್ರೀ ರಾಗದ ತಿಲ್ಲಾನ ಮುಂತಾದ ಲಘು ಪ್ರಸ್ತುತಿಗಳೊಂದಿಗೆ ಈ ದ್ವಂದ್ವ ಹಾಡುಗಾರಿಕೆ ಸಮಾಪನ‌ಗೊಂಡಿತು. ಪಕ್ಕವಾದ್ಯವನ್ನು ನುಡಿಸಿದವರು ಆರ್‌. ದಯಾಕರ್‌(ವಯಲಿನ್‌), ಶಂಕರ್‌ ಪ್ರಸಾದ್‌ ಚೆನ್ನೈ(ಮೃದಂಗ). ಈ ಕಲಾವಿದೆಯರು ಕಛೇರಿಯನ್ನು ನಡೆಸುವ ರೀತಿಯೇ ವಿಭಿನ್ನ. ರಾಗ ವಿಸ್ತಾರ ಮಾಡುವಾಗಲೂ ಒಂದು ಸಂಚಾರವನ್ನು ಒಬ್ಬರು ಹಾಡಿ ಮುಗಿಸುತ್ತಿರುವಂತೆಯೇ, ಇನ್ನೊಬ್ಬರು ಅದನ್ನೇ ಭಿನ್ನವಾಗಿ ಹಾಡಿ ಮುಂದುವರಿಯುತ್ತಾರೆ.

ವಿದ್ಯಾಲಕ್ಷ್ಮೀ ಕಡಿಯಾಳಿ

Advertisement

Udayavani is now on Telegram. Click here to join our channel and stay updated with the latest news.

Next