ನವದೆಹಲಿ: ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್ ಐ) ಸೋಮವಾರ (ಡಿ.18) ವಾರಣಾಸಿ ಜಿಲ್ಲಾ ನ್ಯಾಯಾಲಯಕ್ಕೆ ಜ್ಞಾನವಾಪಿ ಮಸೀದಿ ಆವರಣದ ವೈಜ್ಞಾನಿಕ ಸಮೀಕ್ಷೆಯ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:Wildlife Doctors: ರಾಜ್ಯದಲ್ಲಿ ಇರೋದು ಕೇವಲ ನಾಲ್ವರು ವನ್ಯಜೀವಿ ವೈದ್ಯರು!
ವಾರಣಾಸಿ ಜ್ಞಾನವಾಪಿ ಮಸೀದಿ ಸಂಕೀರ್ಣದ ಸಮೀಕ್ಷಾ ವರದಿಯನ್ನು ಸಲ್ಲಿಸಲು ಎಎಸ್ ಐಗೆ ನ್ಯಾಯಾಲಯ ಗಡುವನ್ನು ವಿಸ್ತರಿಸಿದ ಒಂದು ವಾರದ ನಂತರ ಈ ಬೆಳವಣಿಗೆ ನಡೆದಿದೆ. ಡಿಸೆಂಬರ್ 21ರಂದು ಸಮೀಕ್ಷಾ ವರದಿಯನ್ನು ಅರ್ಜಿದಾರರಿಗೆ ಶೇರ್ ಮಾಡಲಿದ್ದು, ಒಂದು ಪ್ರತಿಯನ್ನು ಸುಪ್ರೀಂಕೋರ್ಟ್ ಗೆ ಸಲ್ಲಿಸಲಾಗುವುದು ಎಂದು ವರದಿ ವಿವರಿಸಿದೆ.
ಸಮೀಕ್ಷಾ ವರದಿಯನ್ನು ಸಲ್ಲಿಸಿದ ಕುರಿತು ಮಾತನಾಡಿದ ಹಿಂದೂ ಪರ ವಕೀಲ ಮದನ್ ಮೋಹನ್ ಯಾದವ್ ಅವರು, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಇಂದು ವಾರಣಾಸಿ ಜಿಲ್ಲಾ ಕೋರ್ಟ್ ಗೆ ವೈಜ್ಞಾನಿಕ ವರದಿಯನ್ನು ಸಲ್ಲಿಸಿರುವುದಾಗಿ ತಿಳಿಸಿದರು.
ಜ್ಞಾನವಾಪಿ ಮಸೀದಿ ಆವರಣದಲ್ಲಿ ವೈಜ್ಞಾನಿಕ ಸಮೀಕ್ಷೆ ನಡೆಸಬೇಕೆಂಬ ವಾರಣಾಸಿ ಜಿಲ್ಲಾ ಕೋರ್ಟ್ ನ ಆದೇಶವನ್ನು ಅಲಹಾಬಾದ್ ಹೈಕೋರ್ಟ್ ಎತ್ತಿಹಿಡಿದಿತ್ತು. 17ನೇ ಶತಮಾನದಲ್ಲಿ ಹಿಂದೂ ದೇವಾಲಯವನ್ನು ಒಡೆದು ಆ ಸ್ಥಳದಲ್ಲಿ ಮಸೀದಿ ನಿರ್ಮಾಣ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ಜ್ಞಾನವಾಪಿ ಮಸೀದಿ ಆವರಣದ ಸಮೀಕ್ಷೆ ನಡೆಸಬೇಕೆಂದು ಹಿಂದೂ ಪರ ಕಕ್ಷಿದಾರರು ಅರ್ಜಿ ಸಲ್ಲಿಸಿದ್ದರು.