Advertisement

ಮನೆಯ ಅಂದಕ್ಕೆ ಕಮಾನಿನ ಕಮಾಲ್‌

03:07 PM Jul 07, 2018 | |

ದುಡಿದು ಗಳಿಸಿ ಉಳಿತಾಯ ಮಾಡಿದ ಹಣದ ಹಿಂದೆ ಬೆಚ್ಚನೆಯ ಸೂರೊಂದು ನಿರ್ಮಿಸುವ ಕನಸು ಪ್ರತಿಯೊಬ್ಬರಿಗಿರುತ್ತದೆ. ತಮಗಿಷ್ಟವಾದ ಚಂದದ ಮನೆ ನಿರ್ಮಾಣ ಮಾಡಬೇಕು. ಆ ಮನೆಯ ಅಂದ ನಾವಂದುಕೊಂಡಂತೆಯೇ ಇರಬೇಕು. ಮನೆಯ ವಿನ್ಯಾಸ, ಗೋಡೆಯ ಚಿತ್ತಾರಗಳು, ಟೈಲ್ಸ್‌, ಪೈಂಟ್‌ನ ಬಣ್ಣ… ಹೀಗೆ ಪ್ರತಿಯೊಂದನ್ನು ಹಲವು ಬಾರಿ ಯೋಚಿಸಿಯೇ ಮನೆ ನಿರ್ಮಿಸಲು ಹೊರಡುವುದು ಸಾಮಾನ್ಯ.

Advertisement

ಹೀಗೆ ನಿರ್ಮಿಸಿದ ಮನೆಯ ಅಂದ ಹೆಚ್ಚುಸುವಲ್ಲಿ ಪ್ರಧಾನ ಪಾತ್ರ ವಹಿಸುವುದು ಆ ಮನೆಯ ಒಳಾಂಗಣ ಮತ್ತು ಹೊರಾಂಗಣದಲ್ಲಿ ಮಾಡಲಾಗುವ ಕಮಾನುಗಳ ವಿನ್ಯಾಸ. ಮನೆ ನಿರ್ಮಿಸಿದರೆ ಆಯಿತೇ? ಅವುಗಳ ಕಮಾನುಗಳಲ್ಲಿಯೂ ಮನೆಯ ಹೊಸತನ ಶೋಭಿಸುವಂತಿರಬೇಡವೇ? ಅದಕ್ಕಾಗಿಯೇ ಅಂದದ ಮನೆಗೆ ಚೆಂದದ ಕಮಾನು ರಚಿಸುವುದೂ ಅಷ್ಟೇ ಕಷ್ಟ.

ನಾನಾ ವಿನ್ಯಾಸ
ಈ ಕಮಾನುಗಳಲ್ಲಿಯೂ ನಾನಾ ರೀತಿಯ ವಿನ್ಯಾಸಗಳಿರುತ್ತವೆ. ಅರ್ಧ ವೃತ್ತಾಕಾರ, ತ್ರಿಕೋನಾಕಾರ, ಬಾಗಿದಂತಿರುವ ಕಮಾನುಗಳು, ನೇರ ಕಮಾನುಗಳು, ಹೂವಿನ ಎಸಳಿನಂತಿರುವ ಕಮಾನುಗಳು ಹೀಗೆ ನಾನಾ ವಿನ್ಯಾಸದಲ್ಲಿ ಕಮಾನು ನಿರ್ಮಿಸಲಾಗುತ್ತದೆ.

ಸಾಮಾನ್ಯವಾಗಿ ಅರ್ಧವೃತ್ತಾಕಾರದ ಕಮಾನುಗಳು ಹೊರಾಂಗಣದ ಅಂದ ಹೆಚ್ಚಿಸುತ್ತದೆ. ಮನೆ ಒಳಾಂಗಣದಲ್ಲಿ ಹಾಲ್‌ ಮತ್ತು ಅಡುಗೆ ಕೋಣೆಯ ಬಾಗಿಲಿಗೆ ಅರ್ಧವೃತ್ತಾಕಾರದ ಕಮಾನು ಚೆನ್ನಾಗಿ ಒಪ್ಪುತ್ತದೆ. ದೇವರ ಕೋಣೆ ಮತ್ತು ಮಲಗುವ ಕೋಣೆಗೆ ಹೂವಿನೆಸಳಿನಾಕಾರದ ಕಮಾನು ಅಂದ ಹೆಚ್ಚಿಸುತ್ತದೆ. ದೇವರ ಕೋಣೆಗೆ ಅರ್ಧ ವೃತ್ತಾಕಾರದ ಕಮಾನು ಕೂಡ ಶೋಭೆ ನೀಡುತ್ತದೆ. ಹೀಗೆ ಮನೆಯ ಸೌಂದರ್ಯವರ್ಧನೆಯಲ್ಲಿ ಈ ಕಮಾನಿನ ಕಮಾಲ್‌ ತುಸು ಜಾಸ್ತಿಯೇ ಇರುತ್ತದೆ. ವೈವಿಧ್ಯ ರೀತಿಯ ಕಮಾನುಗಳನ್ನು ಮನೆಯ ಒಳಾಂಗಣ ಮಾತ್ರವಲ್ಲ ಹೊರಾಂಗಣಕ್ಕೂ ಶೋಭೆ ನೀಡುತ್ತದೆಯಲ್ಲದೆ, ನೋಡುಗರನ್ನು ಸೆಳೆಯುತ್ತದೆ. ಮನೆ, ಕಟ್ಟಡ, ಕಿಟಕಿಗಳನ್ನು ಇವು ಆಕರ್ಷಣೀಯಗೊಳಿಸುತ್ತವೆ.

ಡಿಸೈನ್ಡ್ ಕಮಾನು ಆಕರ್ಷಕ
ಸಾಮಾನ್ಯವಾಗಿರುವ ಅರ್ಧವೃತ್ತಾಕಾರ, ಹೂವಿನೆಸಳಿನಂತ ಕಮಾನುಗಳು ಹಾಗೂ ತ್ರಿಕೋನ ಮಾದರಿಯಲ್ಲಿ ನಿರ್ಮಿತವಾಗಿರುವ ಕಮಾನುಗಳಿಗೂ ಕೆತ್ತನೆಯ ಡಿಸೈನ್‌ಗಳನ್ನು ಮಾಡಿ ಹೆಚ್ಚು ಆಕರ್ಷಕವಾಗಿ ಕಾಣುವಂತೆ ನಿರ್ಮಿಸಲಾಗುತ್ತದೆ. ಮರದ ಕೆತ್ತನೆಯಲ್ಲಿಯೋ ಅಥವಾ ಇತರ ಕಲಾತ್ಮಕ ಕುಸುರಿಗಳನ್ನು ಅಳವಡಿಸಿ ಮಾಡುವ ಈ ಡಿಸೈನ್‌ಗಳು ಮನೆಯ ಸೌಂದರ್ಯವನ್ನು ಇಮ್ಮಡಿಸುತ್ತದೆ. ಬೃಹತ್ತಾದ ಒಳಾಂಗಣ ಹಾಲ್‌ನ್ನು ಹೊಂದಿರುವ ಮನೆಗಳಲ್ಲಿ ಹೀಗೆ ಕೆತ್ತಲಾದ ಕಮಾನುಗಳು ಮನೆಯೊಳಗಡೆ ಆಹ್ಲಾದಕರ ವಾತಾವರಣವನ್ನು ನೀಡುತ್ತವೆ.

Advertisement

ಕಮಾನುಗಳಲ್ಲಿ ಮಾಮೂಲಿ ಅರ್ಧ ವೃತ್ತಾಕಾರದ ಆರ್ಚ್‌ಗಳು ಹೆಚ್ಚು ಜನಪ್ರಿಯವಾಗಿದ್ದರೂ ಎಲಿಪ್ಟಿಕಲ…, ಚೂಪು ಕಮಾನು – ಪಾಯಿಂಟೆಡ್‌ ಆರ್ಚ್‌, ತ್ರೀಪಾಯಿಂಟ್‌ ಅಂದರೆ ಮೂರು ಕೇಂದ್ರ ಹೊಂದಿರುವ ಕಮಾನುಗಳೂ ಸಾಮಾನ್ಯವಾಗೇ ಬಳಕೆಯಲ್ಲಿವೆ.

ಸೌಂದರ್ಯ ವರ್ಧನೆ
ಮನೆ ಕಟ್ಟುವವರಿಗೆ ತಮ್ಮ ಮನೆ ಸುಂದರವಾಗಿ ಮೂಡಿಬರಬೇಕು, ನೋಡಿದವರು ನಾಲ್ಕು ಜನ ಹೊಗಳಬೇಕು ಎಂಬ ದೊಡ್ಡ ಆಸೆ ಇರುತ್ತದೆ. ಈ ಆಸೆಯಿಂದಲೇ ಮನೆ ಖರ್ಚು ಎದ್ವಾತದ್ವಾ ಏರಿಬಿಡುತ್ತದೆ ಅನ್ನೋದು ಮನೆ ಕಟ್ಟಿದ ಅನಂತರ ತಿಳಿಯುತ್ತದೆ.
ಚೆನ್ನಾಗಿ ಕಾಣಬೇಕು ಅನ್ನುವ ಕಾರಣಕ್ಕೆ ಮನೆಯ ಕೆಲಸವೆಲ್ಲ ಮುಗಿಯುವ ವೇಳೆಯಲ್ಲಿ ಕೈಯಲ್ಲಿನ ಕಾಸೆಲ್ಲ ಮುಗಿಯುತ್ತಿದ್ದರೂ ಹೆಚ್ಚುವರಿಯಾಗಿ ಖರ್ಚು ಮಾಡಿ, ಡೆಕೊರೇಟ್‌ ಮಾಡಲು ಮುಂದಾಗುತ್ತಾರೆ. ಇದಕ್ಕೆ ಬದಲಾಗಿ ನಾವು ಮನೆ ಕಟ್ಟುವಾಗಲೇ ವಿವಿಧ ಆರ್ಚ್‌ ನಮೂನೆಗಳನ್ನು ಕಲಾತ್ಮಕವಾಗಿ ವಿನ್ಯಾಸ ಮಾಡಿ ಅಳವಡಿಸಿಕೊಂಡರೆ, ಸೌಂದರ್ಯ ಸಹಜವಾಗಿಯೇ ಮೂಡಿಬರುತ್ತದೆ. ಹೆಚ್ಚುವರಿಯಾಗಿ ಎಲಿವೇಶನ್‌ಗೆಂದು ಹಣ ಖರ್ಚು ಮಾಡುವ ಅಗತ್ಯ ಇರುವುದಿಲ್ಲ.

ಕಿಟಕಿ ದುಬಾರಿ
ಕಮಾನುಗಳನ್ನು ಮನೆಗೆ ಅಳವಡಿಸಿದರೆ ಕಿಟಕಿ ಬಾಗಿಲುಗಳೂ ಇದೇ ರೀತಿಯಲ್ಲಿ ಇರಬೇಕು ಎಂದೇನೂ ಇಲ್ಲ. ಇದರಲ್ಲಿ ಸಾಕಷ್ಟು ಕೆಲಸವಿರುವುದರಿಂದ ಇದು ಕೊಂಚ ದುಬಾರಿಯಾಗಬಹುದು. ಕಿಟಕಿಗಳಿಗೆ ಕಲಾತ್ಮಕವಾದ ವಸ್ತುಗಳನಿಟ್ಟು ಮನೆಯ ಸೌಂದರ್ಯ ವೃದ್ಧಿಸಿಕೊಳ್ಳಬಹುದು. ನಮ್ಮಲ್ಲಿ ಆರ್ಚ್‌ಗಳ ಬಳಕೆ ನೂರಾರು ವರ್ಷಗಳಿಂದ ಇದೆ. ಕಮಾನುಗಳ ಬಳಕೆಯಿಂದ ಮನೆಯ ಒಟ್ಟಾರೆ ಸೌಂದರ್ಯದಲ್ಲಿ ವಿಶೇಷ ಮೆರುಗು ಲಭ್ಯವಾಗುವುದರ ಜತೆಗೆ ಭಿನ್ನತೆಯನ್ನೂ ಮರೆಸುವಂತೆ ಆಗುತ್ತದೆ. ಜತೆಗೆ ಆರ್ಚ್‌ಗಳ ಬಳಕೆಯಿಂದ ಸಾಕಷ್ಟು ಸಮಯ ಹಾಗೂ ಹಣವನ್ನೂ ಉಳಿಸಬಹುದು. 

ಬಹುಮಹಡಿ ಕಟ್ಟಡದಲ್ಲಿ..
ಇನ್ನು ಬಹು ಮಹಡಿ ಕಟ್ಟಡಗಳ ಸೌಂದರ್ಯಕ್ಕೆ ಈ ಕಮಾನುಗಳ ಕೊಡುಗೆ ಅವರ್ಣನೀಯ. ಕಟ್ಟಡದ ಪ್ರತಿ ಮಹಡಿಗಳ ಹೊರಭಾಗದಲ್ಲಿ ಅರ್ಧ ವೃತ್ತಾಕಾರದ ಕಮಾನು ನಿರ್ಮಿಸಿ ವಿನ್ಯಾಸಗೊಳಿಸಿದರೆ ಅದರ ಆಕರ್ಷಣೆ ಇಮ್ಮಡಿಯಾಗುತ್ತದೆ. ಸುಮಾರು ನಾಲ್ಕರಿಂದ ಹೆಚ್ಚಿನ ಮಹಡಿಗಳಿರುವ ಬಹು ಮಹಡಿ ಕಟ್ಟಡಗಳಲ್ಲಿ ಪ್ರತಿ ಮಹಡಿಯಲ್ಲಿ ಸಮಾನವಾಗಿ ನಿರ್ಮಿಸುವ ಈ ಕಮಾನುಗಳು ಹೊರ ಭಾಗದಿಂದ ಜನಾಕರ್ಷಣೆ ಹೆಚ್ಚಿಸಿಕೊಳ್ಳುತ್ತದೆ. ಮಹಡಿಯ ಕೊನೆ ಛಾವಡಿಗೂ ಆಕರ್ಷಕ ಕಮಾನುಗಳ ವಿನ್ಯಾಸ ಮಾಡಿದರೆ ಉತ್ತಮ.

 ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next