ಬೆಂಗಳೂರು: ಕಾಂಗ್ರೆಸ್‌ನಲ್ಲಿರುವ ಒಳಬೇಗುದಿ ಮುಚ್ಚಿಕೊಳ್ಳಲು ಬಿಜೆಪಿ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಆರೋಪಕ್ಕೆ ಸೂಕ್ತ ದಾಖಲೆಗಳಿದ್ದರೆ ಚುನಾವಣಾ ಆಯೋಗಕ್ಕೆದೂರು ಸಲ್ಲಿಸಲಿ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಅರವಿಂದ ಲಿಂಬಾವಳಿ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿ, ಆರ್‌ಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಹಳ ದೊಡ್ಡ ಅಂತರದ ಮತ ಗಳಲ್ಲಿ ಜಯ ಸಾಧಿಸಲಿದ್ದಾರೆ. ಕಾಂಗ್ರೆಸ್‌ನವರಿಗೆ ಇದನ್ನು ಸಹಿಸಲಾಗುತ್ತಿಲ್ಲ ಎಂದರು.
ಬಿಜೆಪಿಯಿಂದ ಈಗಾಗಲೇ ಕಾಂಗ್ರೆಸ್ ವಿರುದ್ಧ 26 ದೂರು ನೀಡಿದ್ದೇವೆ. ಕೆಲವೊಂದು ಎಫ್ಐಆರ್ ಕೂಡ ಆಗಿದೆ. ಬಿಜೆಪಿಗರು ಹಣ ಹಂಚಿದ್ದಾರೆ ಎನ್ನುವ ಆರೋಪ ಸತ್ಯಕ್ಕೆ ದೂರ. ಕಾಂಗ್ರೆಸ್‌ನವರು ಎಂದು ಹೇಳಿಕೊಳ್ಳುವವರು ಹಣ ಹಂಚುತ್ತಿರುವುದನ್ನು ಖುದ್ದು ಪತ್ತೆ ಹಚ್ಚಿ ಸಾಕ್ಷ್ಯ ಸಮೇತವಾಗಿ ಪೊಲೀಸರಿಗೆ ಒಪ್ಪಿಸಿದ್ದೇವೆ. ಸಂಸದ ಡಿ.ಕೆ.ಸುರೇಶ್ ಬಿಜೆಪಿ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಕನಕಪುರದ ಗೂಂಡಾಗಳನ್ನು ಕರೆಸಿ, ಆರ್.ಆರ್.ನಗರದ ಬಿಜೆಪಿ ಮುಖಂಡರ ಮೇಲೆ ಹಲ್ಲೆ ಮಾಡಿಸಲಾಗಿದ್ದು ದೂರು ನೀಡಿದ್ದೇವೆ ಎಂದು ಹೇಳಿದರು.
ಚುನಾವಣೆ ಗಿಮಿಕ್: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ರಿಗೆ ಈಗ ರಾಮನ ನೆನಪಾಗಿದೆ. ಚುನಾವಣಾ ರ್ಯಾಲಿಯೊಂದರಲ್ಲಿ ಜೈ ಶ್ರೀರಾಮ್ ಎಂದು ಹೇಳಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಕಾರ್ಯಾರಂಭವಾದಾಗ ಹೇಳಿಕೆ ನೀಡಿಲ್ಲ. ಡಿ.ಜೆ.ಹಳ್ಳಿ, ಕೆ.ಜೆ.ಹಳ್ಳಿ ಗಲಭೆ ವೇಳೆ ಅಮಾಯಕ ಹಿಂದೂಗಳ ಮನೆಗೆ ಭೇಟಿ ನೀಡಿಲ್ಲ. ಆದರೆ, ಬಂಧಿತರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸುತ್ತಿದ್ದಾರೆ. ಇವರ ಇಬ್ಟಾಗಿ ನೀತಿ ಏನು ಎಂಬುದು ಎಲ್ಲರಿಗೂ ತಿಳಿದಿದೆ. ಏಕಾಏಕಿ ರಾಮನಾಮ ಸ್ಮರಣೆ ನೆನಪಾಗಿದೆ. ಸೋಲಿನ ಹತಾಸೆಯಿಂದೇ ಏನೇನೋ ಮಾಡುತ್ತಿದ್ದಾರೆಂದರು. ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದಿಂದ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದವರೆಗಿನ ಮೆಟ್ರೋ ಮಾರ್ಗದ ಡಿಪಿಆರ್ ಬಗ್ಗೆ ಚರ್ಚೆ ನಡೆಯುತ್ತಿದೆ. ಒಟ್ಟಾರೆ ಬೆಂಗಳೂರಿನ ಅಭಿವೃದ್ಧಿಗೆ ಸರ್ಕಾರ ಬದ್ಧ ಎಂದರು. ನಗರ ಜಿಲ್ಲಾಧ್ಯಕ್ಷ ಜಿ.ಮಂಜುನಾಥ್, ಮಾಜಿ ಉಪ ಮೇಯರ್ ಹರೀಶ್,ಬಿಜೆಪಿ ಮುಖಂಡ ಸಿದ್ದೇಗೌಡ ಸುದ್ದಿಗೋಷ್ಠಿಯಲ್ಲಿದ್ದರು.
ಅಭಿವೃದ್ಧಿ ಅಜೆಂಡಾದಡಿ ಮತಯಾಚನೆ : ಬಿಜೆಪಿ ಉಪಚುನಾವಣೆಯಲ್ಲಿ ಅಭಿವೃದ್ಧಿ ಅಜೆಂಡಾದಡಿ ಮತ ಯಾಚಿಸಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಹಿತವಾಗಿ ಕೇಂದ್ರ ಸಚಿವರು, ಸಂಸದರು, ಸಚಿವರು, ಚಿತ್ರ ನಟರು ಹೀಗೆ ಎಲ್ಲರೂ ಪ್ರಚಾರ ಮಾಡಿದ್ದಾರೆ. ಆರ್.ಆರ್.ನಗರ ಸಹತವಾಗಿ ಇಡೀ ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಬದ್ಧವಾಗಿದೆ ಮತ್ತು ಬಿಡುಗಡೆಯಾಗಿರುವ ಅನುದಾನದ ಸಂಪೂರ್ಣ ಮಾಹಿತಿಯನ್ನು ಈಗಾಗಲೇ ಕ್ಷೇತ್ರ ಜನತೆಗೆ ನೀಡಿದ್ದೇವೆ. ಬೆಂಗಳೂರಿನ ಅಭಿವೃದ್ಧಿಗೆ ಹಲವು ಯೋಜನೆ ರೂಪಿಸಿದ್ದು, ಅದರಲ್ಲಿ ಕೆಲವನ್ನು ಅನುಷ್ಠಾನ ಮಾಡಿದ್ದೇವೆ ಮತ್ತು ಇನ್ನು ಕೆಲವು ಅನುಷ್ಠಾನದ ಹಂತದಲ್ಲಿದ್ದು, ಮುಂದೆ ಅನುಷ್ಠಾನವಾಗಲಿದೆ ಎಂದರು.