Advertisement

ಬಿಜೆಪಿ ಕುಟುಂಬ ಸೀಮಿತ ಪಕ್ಷವಲ್ಲ, ಅದು ಸರ್ವವ್ಯಾಪಿ: ಸಚಿವ ಅರವಿಂದ್ ಲಿಂಬಾವಳಿ

03:53 PM Mar 07, 2021 | Team Udayavani |

ಬೆಂಗಳೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಆಡ್ವಾಣಿ, ಹಿರಿಯ ಮುಖಂಡ ಶ್ಯಾಮಪ್ರಸಾದ್ ಮುಖರ್ಜಿ, ದೀನದಯಾಳ್ ಉಪಾಧ್ಯಾಯ, ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಇವರ್ಯಾರೂ ಪರಸ್ಪರ ಸಂಬಂಧಿಕರಲ್ಲ. ಬಿಜೆಪಿ, ಕೇವಲ ಕುಟುಂಬ- ಪರಸ್ಪರ ಸಂಬಂಧಿಕರಿಗೆ ಸೀಮಿತವಾದ ಪಕ್ಷವಲ್ಲ. ಹೀಗಾಗಿ ಅದು ಸರ್ವವ್ಯಾಪಿಯಾಗಿ ಮತ್ತು ಸರ್ವಸ್ಪರ್ಶಿಯಾಗಿ ಬೆಳೆದಿದೆ ಎಂದು ಸಚಿವ ಅರವಿಂದ್ ಲಿಂಬಾವಳಿ ಹೇಳಿದರು.

Advertisement

ನಗರದ ಮಲ್ಲೇಶ್ವರದ ಬಿಜೆಪಿ ನಗರದಲ್ಲಿ”ಮಾಧ್ಯಮ ಮಂಥನ” ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ವೈಚಾರಿಕ ಚಿಂತನೆ, ರಾಷ್ಟ್ರೀಯವಾದಕ್ಕೆ ಇಲ್ಲಿ ಮಹತ್ವ ನೀಡಲಾಗುತ್ತದೆ ಎಂದರು.

ಪಕ್ಷದ ಮಾಧ್ಯಮ ವಿಭಾಗದಲ್ಲಿ ಕೆಲಸ ಮಾಡುವಾಗ ಪ್ರಬಲವಾಗಿ ವಿಚಾರ ಮಂಡನೆ ನಮ್ಮದಾಗಿರಬೇಕು. ಸತ್ಯಕ್ಕೆ ಹತ್ತಿರವಾದ ಸುದ್ದಿ ನೀಡಬೇಕು. ಕೇವಲ ಸುದ್ದಿಗಾಗಿ ಅನ್ಯ ಮಾರ್ಗ ಬಳಸಿಕೊಳ್ಳಬಾರದು ಎಂದು ಅವರು ಕಿವಿಮಾತು ಹೇಳಿದರು.

ಪತ್ರಿಕೆ ಮತ್ತು ಮಾಧ್ಯಮಗಳು ಪ್ರಜಾಪ್ರಭುತ್ವದ ಮಹತ್ವದ ನಾಲ್ಕನೇ ಆಧಾರ ಸ್ತಂಭವಾಗಿದೆ. ಹಿಂದೆ ಮುದ್ರಣ ಮಾಧ್ಯಮ ಮಾತ್ರವೇ ಇತ್ತು. ಬಳಿಕ ದೂರದರ್ಶನ ಇದರ ಜೊತೆ ಸೇರಿದೆ. ನಂತರದ ದಿನಗಳಲ್ಲಿ ಅನೇಕ ಚಾನೆಲ್‍ಗಳು ಸೇರಿಕೊಂಡಿವೆ. ಸಾಮಾಜಿಕ ಜಾಲತಾಣವೂ ಇದಕ್ಕೆ ಹೊಸ ಸೇರ್ಪಡೆ ಎಂದರು.

ಪಕ್ಷದ ಜವಾಬ್ದಾರಿ ಹೊತ್ತವರು ಮಾಧ್ಯಮವನ್ನು ಹೇಗೆ ನಿಭಾಯಿಸುತ್ತೇವೆ ಎಂಬುದು ಪ್ರಮುಖ ಪಾತ್ರ ವಹಿಸುತ್ತದೆ. ಘಟನೆಗಳು ನಡೆದಾಗ ನಮ್ಮ ಪ್ರತಿಕ್ರಿಯೆ ಮತ್ತು ಹೇಳಿಕೆಗಳು ಹೆಚ್ಚು ಜವಾಬ್ದಾರಿಯುತವಾಗಿರಬೇಕು. ಪತ್ರಿಕಾಗೋಷ್ಠಿಗಳು ಕೇವಲ ಬೆಂಗಳೂರು ನಗರ ಮತ್ತು ರಾಜ್ಯ ಮಟ್ಟಕ್ಕೆ ಸೀಮಿತ ಆಗಬಾರದು. ಅದು ಜಿಲ್ಲೆಗಳು, ಮಂಡಲ ಮಟ್ಟದಲ್ಲೂ ನಡೆಯಬೇಕು. ಇಂಥ ಪತ್ರಿಕಾಗೋಷ್ಠಿಗಳಲ್ಲಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರದ ಹೊಸ ಯೋಜನೆಗಳು, ಉತ್ತಮ ಕಾರ್ಯಕ್ರಮಗಳ ಅನುಷ್ಠಾನ ಕುರಿತು ಬೆಳಕು ಚೆಲ್ಲುವ ಕಾರ್ಯ ಮಾಡಬೇಕಿದೆ ಎಂದರು.

Advertisement

ಪಕ್ಷದ ಬೆಳವಣಿಗೆಗೆ ಪೂರಕ ಕಾರ್ಯಕ್ರಮಗಳು ಹಾಗೂ ಪ್ರಚಾರ ನೀಡಬೇಕು ಎಂದು ತಿಳಿಸಿದರು. ಆಪರೇಷನ್ ಕಮಲ ಶಬ್ದದ ಬದಲಾಗಿ ತಾವು ಬಳಸಿದ “ರಾಜಕೀಯ ಧ್ರುವೀಕರಣ” ಎಂಬ ಪದ ಬಳಕೆ ಹೆಚ್ಚು ಪರಿಣಾಮಕಾರಿಯಾಯಿತು ಎಂದೂ ಅವರು ನೆನಪಿಸಿದರು.

ಟಿ.ವಿ.ಗಳಲ್ಲಿ ಚರ್ಚೆಗೆ ಹೋದಾಗ ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸುವ ಯತ್ನವೂ ನಡೆಯುತ್ತದೆ. ಸಿಕ್ಕಿದ ಸಮಯಾವಕಾಶ ಬಳಸಿಕೊಂಡು ಪಕ್ಷವನ್ನು ಸಮರ್ಥಿಸುವ ಕೆಲಸವನ್ನು ಸಂವಾದಕ್ಕೆ ತೆರಳಿದವರು ಮಾಡಿ ಜನರ ಗಮನ ಸೆಳೆಯಬೇಕು ಎಂದು ಸಲಹೆ ನೀಡಿದರು.

ಅತ್ಯಂತ ದೊಡ್ಡ ಪಕ್ಷ ನಮ್ಮದು. ಕೇಂದ್ರ ಮಾತ್ರವಲ್ಲದೆ ಅತಿ ಹೆಚ್ಚು ರಾಜ್ಯಗಳಲ್ಲಿ ಅದು ಅಧಿಕಾರ ಪಡೆದಿದೆ. ಆದ್ದರಿಂದ ಪಕ್ಷದ ಮಾಧ್ಯಮ ವಿಭಾಗದ ಜವಾಬ್ದಾರಿಯೂ ಅತ್ಯಂತ ಮಹತ್ವದ್ದು ಎಂದು ಅವರು ಕಿವಿಮಾತು ಹೇಳಿದರು.

ಪಕ್ಷದ ರಾಜ್ಯ ಮುಖ್ಯ ವಕ್ತಾರಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಎನ್.ಆರ್. ರಮೇಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಮಂಜುನಾಥ್ ಅವರು ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next