Advertisement
ದೆಹಲಿವಾಲಾಗಳೆಲ್ಲ ಕೇಜ್ರಿವಾಲ್‌ರನ್ನು ಮತ್ತೂಮ್ಮೆ ಆಯ್ಕೆ ಮಾಡಿದ್ದಾರೆ. ಚುನಾವಣಾ ಪೂರ್ವ ಸಮೀಕ್ಷೆಗಳು ಹಾಗೂ ಮತಗಟ್ಟೆ ಸಮೀಕ್ಷೆಗಳೆಲ್ಲ ಲೆಕ್ಕಹಾಕಿದ ರೀತಿಯಲ್ಲೇ ಫಲಿತಾಂಶ ಬಂದು, ಆಪ್‌ನ ಪ್ರಮುಖ ಎದುರಾಳಿಗಳಾದ ಬಿಜೆಪಿ ಮತ್ತು ಕಾಂಗ್ರೆಸ್‌ನ ಲೆಕ್ಕಾಚಾರ ತಲೆಕೆಳಗಾಗಿದೆ. 70 ಸ್ಥಾನಗಳಿಗಾಗಿ ನಡೆದ ದೆಹಲಿ ವಿಧಾನಸಭಾ ಚುನಾವಣೆಯು ಆಪ್ ಮತ್ತು ಬಿಜೆಪಿಯ ನಡುವೆ ಪ್ರತಿಷ್ಠೆಯ ಪ್ರಶ್ನೆಯಾಗಿ ಬದಲಾಗಿತ್ತು. ಬಿಜೆಪಿಯಂತೂ ಮೋದಿ ಹೆಸರಲ್ಲೇ ಚುನಾವಣೆ ಗೆದ್ದುಬಿಡುತ್ತೇವೆ ಎಂದು ಭಾವಿಸಿ ಅಖಾಡಕ್ಕೆ ಇಳಿಯಿತು. ಹಿಂದಿನ ಬಾರಿಗೆ ಹೋಲಿಸಿದರೆ ಈಗ ಬಿಜೆಪಿ ಸ್ಥಾನಗಳು, ಮತಪ್ರಮಾಣದಲ್ಲಿ ಏರಿಕೆಯಾಗಿದೆಯಾದರೂ, ಈ ಪ್ರಮಾಣ ಬಿಜೆಪಿಯ ನಾಯಕತ್ವ ನಿರೀಕ್ಷಿಸಿದಷ್ಟಂತೂ ಇಲ್ಲ. ಮತಗಟ್ಟೆ ಸಮೀಕ್ಷೆಗಳ ನಂತರವೂ, ದೆಹಲಿ ಬಿಜೆಪಿ ನಾಯಕ ಮನೋಜ್ ತಿವಾರಿ “”ಬಿಜೆಪಿ 48 ಸ್ಥಾನ ಪಡೆದು ಸರ್ಕಾರ ರಚಿಸುವುದು ಪಕ್ಕಾ, ಬೇಕಿದ್ದರೆ ಈ ಮಾತನ್ನು ಬರೆದಿಟ್ಟುಕೊಳ್ಳಿ” ಎಂಬ ಓವರ್‌ಕಾನ್ಫಿಡೆನ್ಸ್ ತೋರಿಸಿದ್ದರು.
Related Articles
ಮಾತನಾಡುತ್ತಿದ್ದರೆ, ಇವರು ಮಾತ್ರ “ನಾನು ನಿಮ್ಮ ಮಗ’ ಎಂದು ಜನತೆಯ ಮುಂದೆ ಹೋದರು. ಚುನಾವಣಾ ಕಾಲದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯಿಂದಲೇ ಅತಿ ಹೆಚ್ಚು ವಿವಾದಾತ್ಮಕ ಹೇಳಿಕೆಗಳು ಬಂದವು. ಬಿಜೆಪಿಯ ಅನುರಾಗ್ ಠಾಕೂರ್, ಮನೋಜ್ ತಿವಾರಿ, ಪರ್ವೇಶ್ ವರ್ಮಾ, ಕಪಿಲ್ ಮಿಶ್ರಾ ಹಾಗೂ ಪ್ರಕಾಶ್ ಜಾವಡೇಕರ್ ಅತಿಯಾಗಿ ಅಗ್ರೆಸಿವ್ ಆಗಿ ಮಾತನಾಡಿದರು. ರಾಹುಲ್ ಗಾಂಧಿಯವರಂತೂ ಈ ಬಾರಿ ತುಸು ಹೆಚ್ಚೇ ನಾಲಿಗೆ ಹರಿಬಿಟ್ಟರು. ಪ್ರಧಾನಿಗೆ ಜನ “ಬೆತ್ತದಿಂದ ಬಾರಿಸುತ್ತಾರೆ’ ಎಂಬ ಅವರ ಹೇಳಿಕೆಯಂತೂ ದೊಡ್ಡ ಗದ್ದಲ ಸೃಷ್ಟಿಸಿತು.
Advertisement
ಆದರೆ ಇನ್ನೊಂದೆಡೆ ಕೇಜ್ರಿವಾಲ್ ಹೇಗೆ ಮೋದಿ ಪರವೂ ಮಾತನಾಡಿ “ಸೆನ್ಸಿಬಲ್’ ಎನಿಸಿಕೊಂಡರು ಎನ್ನುವುದನ್ನು ಗಮನಿಸಿ! ಸದಾ ಭಾರತದ ಮೇಲೆ ಕೆಂಡ ಕಾರುವ ಪಾಕಿಸ್ತಾನದ ಸಚಿವ ಫವಾದ್ ಹುಸೇನ್, “”ಭಾರತೀಯರೆಲ್ಲ ಸೇರಿ ಮೋದಿಯನ್ನು ಈ ಚುನಾವಣೆಯಲ್ಲಿ ಸೋಲಿಸಬೇಕು” ಎಂದು ಇತ್ತೀಚೆಗೆ ಟ್ವೀಟ್ ಮಾಡಿದ್ದರು. ಕೂಡಲೇ ಕೇಜ್ರಿವಾಲ್, “”ನರೇಂದ್ರ ಮೋದಿ ಭಾರತದ ಪ್ರಧಾನಮಂತ್ರಿ. ಅವರು ನನ್ನ ಪ್ರಧಾನಮಂತ್ರಿಯೂ ಹೌದು. ದೆಹಲಿಯ ಚುನಾವಣೆ ಭಾರತದ ಆಂತರಿಕವಿಷಯವಾಗಿದ್ದು, ಆಂತಕವಾದದ ಅತಿದೊಡ್ಡ ಪ್ರಾಯೋಜಕ ರಾಷ್ಟ್ರವಾದ ಪಾಕಿಸ್ತಾನದ ಹಸ್ತಕ್ಷೇಪವನ್ನು ನಾವು ಸಹಿಸಿಕೊಳ್ಳುವುದಿಲ್ಲ. ಪಾಕಿಸ್ತಾನ ಎಷ್ಟೇ ಪ್ರಯತ್ನಿಸಲಿ, ಭಾರತದ ಏಕತೆಯ ಮೇಲೆ ಪ್ರಹಾರ ಮಾಡಲು ಅದಕ್ಕೆ ಸಾಧ್ಯವಿಲ್ಲ” ಎಂದು ಪ್ರತ್ಯುತ್ತರ ನೀಡಿದರು. ಒಂದು ಸಮಯದಲ್ಲಿ, “ಸರ್ಜಿಕಲ್ ಸ್ಟ್ರೆ „ಕ್‌ಗೆ ಪುರಾವೆ ಕೊಡಿ’ ಎಂದು ಕೇಂದ್ರ ಸರ್ಕಾರಕ್ಕೆ ಕೇಳಿದ್ದ ಕೇಜ್ರಿವಾಲ್, ಹೇಗೆ ಈಗ ರಾಷ್ಟ್ರೀಯತೆಯ ವಿಚಾರದಲ್ಲಿ ತಮ್ಮ ಧ್ವನಿ ಬದಲಿಸಿದ್ದಾರೋ ನೋಡಿ. ಇದಷ್ಟೇ ಅಲ್ಲ, ಈ ಬಾರಿಯಂತೂ ಕೇಜ್ರಿವಾಲ್ ಸಾಫ್ಟ್ ಹಿಂದುತ್ವದ ಅಶ್ವವೇರಿಬಿಟ್ಟರು. ಇತ್ತೀಚೆಗೆ ಟೆಲಿವಿಷನ್ ಕಾರ್ಯಕ್ರಮವೊಂದರಲ್ಲಿ ಅವರು, ತಾವು ಹನುಮಂತನ ಕಟ್ಟರ್ ಭಕ್ತರೆಂದು ಹೇಳುತ್ತಾ, “ಹನುಮಾನ್ ಚಾಲೀಸಾ’ ಪಠಿಸಿದರು. ಈಗ ಗೆಲುವಿನ ನಂತರವೂ ಅವರು ತಮ್ಮ ಗೆಲುವು “ಭಾರತ ಮಾತೆಯ ಗೆಲುವು'(ರಾಷ್ಟ್ರೀಯತೆ) ಎಂದು ಬಣ್ಣಿಸಿರುವುದಷ್ಟೇ ಅಲ್ಲದೇ, “ಥ್ಯಾಂಕ್ಯೂ ಹನುಮಾನ್‌ಜಿà'(ಹಿಂದುತ್ವ) ಎಂದು ಆಂಜನೇಯನಿಗೂ ನಮಿಸಿದ್ದಾರೆ! ಆದರೆ
ರಾಷ್ಟ್ರೀಯತೆ ಮತ್ತು ಹಿಂದುತ್ವ ಸ್ವಲ್ಪಮಟ್ಟಿಗೆ ಅವರಿಗೆ ಸಹಕರಿಸಿರಬಹುದಷ್ಟೇ. ಏಕೆಂದರೆ, ಕೇಜ್ರಿವಾಲ್ ಯಶಸ್ಸಿನ ಹಿಂದೆ, ಹೆಚ್ಚಾಗಿ ಅವರ ಅಭಿವೃದ್ಧಿ, ಸಬ್ಸಿಡಿ ರಾಜಕಾರಣ ಕೆಲಸ ಮಾಡಿದೆ. ಅಭಿವೃದ್ಧಿ ಮತ್ತು ಸಬ್ಸಿಡಿ ರಾಜಕಾರಣ: “ಬಿಜಿ ಹಾಫ್, ಪಾನಿ ಮಾಫ್’ ಎಂದು 2015ರಲ್ಲಿ ಅಧಿಕಾರಕ್ಕೇರಿದ ಕೇಜ್ರಿವಾಲ್, ವಿದ್ಯುತ್ ಮತ್ತು ನೀರಿನ ವಿಚಾರದಲ್ಲಿ ಈಗಲೂ ಜನಪ್ರಿಯ ಹೆಜ್ಜೆ ಇಡುತ್ತಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಅವರ ಸರ್ಕಾರ 200 ಯೂನಿಟ್‌ವರೆಗಿನ ವಿದ್ಯುತ್ ಅನ್ನು (800 ರೂಪಾಯಿ) ಉಚಿತವಾಗಿ ನೀಡುತ್ತಿದೆ, ಪ್ರತಿ ಕುಟುಂಬಕ್ಕೆ ತಿಂಗಳಿಗೆ 700 ಲೀಟರ್‌ನಷ್ಟು ಉಚಿತ ನೀರಿನ ಸರಬರಾಜು ಮಾಡುತ್ತಿದೆ, ಮುಂದಿನ ಐದು ವರ್ಷಗಳವರೆಗೆ ಖಾಸಗಿ ಶಾಲೆಗಳು ಶುಲ್ಕ ಏರಿಸದಂತೆ ನಿರ್ಬಂಧ ಹೇರಿದೆ, ಉತ್ತಮ ಫಲಿತಾಂಶದ ಮೂಲಕ ಸರ್ಕಾರಿ ಶಾಲೆಗಳು-ಮೊಹಲ್ಲಾ ಕ್ಲಿನಿಕ್‌ಗಳು ಜನಮೆಚ್ಚುಗೆ ಗಳಿಸಿವೆ, ಹೆಣ್ಣುಮಕ್ಕಳಿಗೆ ದೆಹಲಿ ಸಾರಿಗೆಯಲ್ಲಿ ಉಚಿತ ಪ್ರಯಾಣ ನೀಡುವ ಯೋಜನೆಯಂತೂ ಮಹಿಳಾ ಮತದಾರರನ್ನು ಆಪ್‌ನತ್ತ ಸೆಳೆದಿರಲಿಕ್ಕೂ ಸಾಕು. ವಿದ್ಯುತ್ ಪೂರೈಕೆಯಲ್ಲಿ ಆಪ್ ಸರ್ಕಾರ ನೀಡುತ್ತಿರುವ ಸಬ್ಸಿಡಿಯಂತೂ ಬಹಳ ಪ್ರಖ್ಯಾತಿ ಪಡೆದಿದೆ. ಕಳೆದ ನಾಲ್ಕೂವರೆ ವರ್ಷಗಳ ಆಪ್ ಆಡಳಿತದಲ್ಲಿ ದೆಹಲಿಯ 42 ಲಕ್ಷ ಕುಟುಂಬಗಳು ವಿದ್ಯುತ್ ಸಬ್ಸಿಡಿ ಸ್ಕೀಮಿನ ಫಲಾನುಭವಿಗಳಾಗಿವೆ. ಇದರರ್ಥ, ದೆಹಲಿಯ ಶೇ. 80ರಷ್ಟು ಜನರು ವಿದ್ಯುತ್ ಸಬ್ಸಿಡಿಯ ಫಲಾನುಭವಿಗಳಾಗಿದ್ದಾರೆ! ಯಾವ ಮಟ್ಟಕ್ಕೆೆ ಈ ಯೋಜನೆ ದೆಹಲಿ ನಾಗರಿಕರನ್ನು ತಲುಪಿದೆಯೆಂದರೆ, ಈ ವಿಚಾರವನ್ನು ಬಹಿರಂಗವಾಗಿ ಟೀಕಿಸುವುದಕ್ಕೂ ಬಿಜೆಪಿ-ಕಾಂಗ್ರೆಸ್ ಹಿಂಜರಿದವು. ಕಾಂಗ್ರೆಸ್ ತಾನು ಅಧಿಕಾರಕ್ಕೆ ಬಂದರೆ 400-600 ಯೂನಿಟ್ ವಿದ್ಯುತ್ ಸಬ್ಸಿಡಿ ನೀಡುವುದಾಗಿ ಹೇಳಿತು. ದೆಹಲಿ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿಯೂ ಒಮ್ಮೆ ಮಾತಿನ ಭರದಲ್ಲಿ “ನಮ್ಮ ಸರ್ಕಾರ ಬಂದರೆ ಆಪ್ ಘೋಷಿಸಿರುವುದಕ್ಕಿಂತ 5 ಪಟ್ಟು ಹೆಚ್ಚು ಸಬ್ಸಿಡಿಯಲ್ಲಿ ವಿದ್ಯುತ್ ನೀಡುತ್ತೇವೆ’ ಎಂದುಬಿಟ್ಟರು. ತಿವಾರಿ ಮಾತನ್ನು, ದೆಹಲಿ ಚುನಾವಣೆಯ ಉಸ್ತುವಾರಿ ಹೊತ್ತಿದ್ದ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ತಳ್ಳಿಹಾಕಿದರೆನ್ನಿ. ದೆಹಲಿಯ ಜಾಣ ಮತದಾರ: ಇಲ್ಲಿ ದೆಹಲಿ ಮತದಾರರ ಆದ್ಯತೆ
ಶ್ಲಾಘನೀಯ. ಲೋಕಸಭಾ ಚುನಾವಣೆಯಲ್ಲಿ ಅವರು ಟೀಂ ಮೋದಿಗೆ, ವಿಧಾನಸಭಾ ಚುನಾವಣೆಯಲ್ಲಿ ಕೇಜ್ರಿವಾಲರಿಗೆ ಮತ್ತು ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಬಿಜೆಪಿಗೆ…ಹೀಗೆ, ತಮ್ಮ ಆದ್ಯತೆಯಲ್ಲಿ ಬಹಳ ಸ್ಪಷ್ಟತೆ ಸಾಧಿಸಿದ್ದಾರೆ. ಕೆಲವೇ ತಿಂಗಳ ಹಿಂದಷ್ಟೇ(ಲೋಕಸಭಾ ಚುನಾವಣೆಯಲ್ಲಿ) ಬಿಜೆಪಿಗೆ 7-0 ಅಂತರದ ಗೆಲುವು ತಂದುಕೊಟ್ಟಿದ್ದ ದೆಹಲಿಯ ಮತದಾರ ಈಗ ಸಂಪೂರ್ಣವಾಗಿ ಆಪ್‌ನ ಕೈ ಹಿಡಿದಿದ್ದಾನೆ. ಹಾಗಿದ್ದರೆ ಆಪ್, ಇನ್ಮುಂದೆ ಬಿಜೆಪಿಗೆ ರಾಷ್ಟ್ರೀಯ ಪರ್ಯಾಯವಾಗಬಲ್ಲದೇ ಎನ್ನುವ ಪ್ರಶ್ನೆ ಎದುರಾಗುವುದು ಸಹಜ. ಆದರೆ, ದೆಹಲಿ ಹೊರತುಪಡಿಸಿ, ಯಾವ ರಾಜ್ಯದಲ್ಲೂ(ಪಂಜಾಬ್‌ನಲ್ಲೂ ಸಹ) ಆಪ್‌ಗೆ ನೆಲೆ ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇತ್ತೀಚಿನ ಕೆಲವು ವಿಧಾನಸಭಾ ಚುನಾವಣೆಗಳಲ್ಲೂ ಆಪ್‌ನ ಪ್ರದರ್ಶನ ಲೆಕ್ಕಕ್ಕಿಲ್ಲದಂತಿದೆ. ಬಿಜೆಪಿ ನಾಯಕರಾರು?: ಬಿಜೆಪಿಗೆ ಈ ಬಾರಿಯೂ ರಾಜ್ಯದಲ್ಲಿ ನಾಯಕತ್ವದ ಚಹರೆಯನ್ನು ನಿರ್ಧರಿಸಲು ಸಾಧ್ಯವಾಗಲಿಲ್ಲ. ಈ ವಿಷಯವೂ ಅದಕ್ಕೆ ಬಹಳ ಪೆಟ್ಟು ನೀಡಿದೆ. 2015ರ ಚುನಾವಣೆಯಲ್ಲಿ ಕೊನೆಯ ಗಳಿಗೆಯಲ್ಲಿ ಕಿರಣ್ ಬೇಡಿಯವರನ್ನು ತಂದು ನಿಲ್ಲಿಸಿತಾದರೂ, ಆಗ ಬಿಜೆಪಿ ಅಕ್ಷರಶಃ ನೆಲಕಚ್ಚಿತ್ತು. ಈ ಬಾರಿ ಅಖಾಡದಲ್ಲಿ ಮನೋಜ್ ತಿವಾರಿ ಹೆಸರು ಬಹಳ ಕೇಳಿಬಂದಿತ್ತು. ಆದರೆ ಪಕ್ಷದಲ್ಲಿ ತಿವಾರಿ ಕುರಿತು
ಕೆಲವರಿಗೆ ತೀವ್ರ ಅಸಮಾಧಾನವಿದ್ದ ಕಾರಣ, ಮೋದಿಯ ಹೆಸರು ಹೇಳಿಕೊಂಡೇ ಮತ ಯಾಚಿಸಿತು. ಕೇಜ್ರಿವಾಲ್ ಈಗ “ಬ್ರಾಂಡ್ ಆಗಿ ಬದಲಾಗಿರುವುದನ್ನು ಬಿಜೆಪಿ ಒಪ್ಪಿಕೊಂಡು, ದೆಹಲಿಯಲ್ಲಿ ಅವರಿಗೆ ಸವಾಲೆಸೆಯಬಲ್ಲ ಲೀಡರ್‌ಗಳನ್ನು ಬೆಳೆಸುವ ಕೆಲಸ ಮಾಡಲಿ. ಕಾಂಗ್ರೆಸ್ ವಿಚಾರಕ್ಕೆ ಬರುವುದಾದರೆ, ಅದು ದೆಹಲಿಯಷ್ಟೇ ಅಲ್ಲದೇ, ರಾಷ್ಟ್ರೀಯ ಮಟ್ಟದಲ್ಲೂ ನಾಯಕತ್ವದಲ್ಲಿ ಬದಲಾವಣೆ ತರಲೇಬೇಕಿದೆ. – ರಾಘವೇಂದ್ರ ಆಚಾರ್ಯ