Advertisement

ಕಂಡನಿ ಬುಡೆದಿನ ಉಡಲ್‌ ದಿಂಜಿನ ಪಾತೆರ!

10:05 AM Jan 04, 2020 | mahesh |

ಮಂಗಳೂರು ಬಜಾಲ್‌ನಲ್ಲಿರುವ ಕಾವುಬೈಲ್‌ನ “ಭಗವತಿ ನಿಲಯ’ದ ಅಂಗಳದಲ್ಲಿ ನಿಂತಾಗ “ಏರ್‌ ಅವು’ ಅಂತ ಮನೆಯ ಯಜಮಾನ ಅರವಿಂದ ಬೋಳಾರರು ಹೊರಗೆ ಬಂದರು. ಅವರು ಮನೆಯಲ್ಲಿರುವುದೇ ಅಪರೂಪ. ಸಿಕ್ಕಿದ್ದು ನಮ್ಮ ಭಾಗ್ಯ ಎಂದುಕೊಂಡೆವು. ಯಾವುದೋ ನಾಟಕ ಮುಗಿಸಿ ಆಗಷ್ಟೇ ಮನೆ ತಲುಪಿದ್ದ ಅವರು ಇನ್ನ್ಯಾವುದೋ ಸಿನೆಮಾ ಶೂಟಿಂಗ್‌ಗೆ ಹೊರಡುವ ತರಾತುರಿಯಲ್ಲಿದ್ದಂತಿತ್ತು. ಬೋಳಾರರ ಪತ್ನಿ ಸಾವಿತ್ರಿಯವರು ಪತಿಯ ಕಾರ್ಯಕ್ರಮ ಪಟ್ಟಿಯನ್ನು ನೆನಪಿಸುತ್ತ ಹೊರಡುವ ತಯಾರಿಗೆ ಪೂರ್ಣ ಸಹಕರಿಸುತ್ತಿದ್ದರು.

Advertisement

ಅಂಥ ಒತ್ತಡದ ದಿನಚರಿಯ ನಡುವೆಯೂ ಇಬ್ಬರೂ ನಮ್ಮೊಡನೆ ಕ್ಷೇಮ-ಕುಶಲ ವಿಚಾರಣೆಗೆ ಕುಳಿತರು. ಬೋಳಾರರಲ್ಲಿ, “ನೀವು ಸದಾ ಮಾತನಾಡುವವರೇ. ಇವತ್ತು ಇವರು ಮಾತನಾಡಲಿ’ ಎಂದು ಸಾವಿತ್ರಿಯವರತ್ತ ನೋಡಿದೆವು.

ಸಾವಿತ್ರಿಯವರು ನಸುನಗುತ್ತ ಪತಿಯನ್ನೊಮ್ಮೆ ನೋಡಿ, ನಮ್ಮತ್ತ ತಿರುಗಿ ಮಾತಿಗೆ ತೊಡಗಿದರು…
.
.
ಇವರು ತಮ್ಮನ್ನು ತಾವು ರಂಗಭೂಮಿಗೆ ಸಮರ್ಪಿಸಿ ಕೊಂಡವರು. “ನನಗೆ ಇಬ್ಬರು ಅಮ್ಮಂದಿರು. ಹೊತ್ತು ಹೆತ್ತು ಸಾಕಿದ ಅಮ್ಮ ಮತ್ತು ನನ್ನ ಹೊಟ್ಟೆ ಹೊರೆಯುವ ಕಲಾಮಾತೆ’ ಎಂದು ಯಾವಾಗಲೂ ಹೇಳುತ್ತಿರುತ್ತಾರೆ. 24 ವರ್ಷಗಳ ಹಿಂದೆ ಇವರನ್ನು ಮದುವೆಯಾಗಿ ನಾನು ಬೋಳಾರದ ಮನೆಗೆ ಕಾಲಿಟ್ಟಿದ್ದೆ. ತತ್‌ಕ್ಷಣವೇ ಕಲಾಮಾತೆಯನ್ನು ಇವರು ಎಷ್ಟೊಂದು ಆರಾಧಿಸುತ್ತಾರೆ ಎಂಬುದು ನನಗೆ ಅರಿವಾಗಿತ್ತು. ಮದುವೆಯ ಸಂದರ್ಭವನ್ನು ನೆನಪಿಸಿಕೊಳ್ಳಲೆ? ಅಂದು ಮಂಗಳೂರಿನ ಶಾದಿಮಹಲ್‌ನಲ್ಲಿ ಮದುವೆಯಾಗಿ ಇವರ ಮನೆಪ್ರವೇಶ ಮಾಡಿದ್ದೆ. ಮರುದಿವಸ ಮಧ್ಯಾಹ್ನ ಬೀಗರ ಔತಣ.ಊಟ ಮುಗಿಸಿದವರೇ ಇವರು ನಾಟಕವೊಂದರಲ್ಲಿ ನಟಿಸಲು ಹೊರಟುನಿಂತಿದ್ದರು. ಪಾರ್ವತಿ ಎಂಬ ನಾಟಕದ ನಿರಂತರ ಎರಡು ಪ್ರದರ್ಶನಗಳನ್ನು ಮುಗಿಸಿಯೇ ಇವರು ಮನೆಗೆ ಮರಳಿದ್ದು !

ಬೋಳಾರದಲ್ಲಿ ಕೂಡುಕುಟುಂಬದ ಮನೆ ನಮ್ಮದು. ಅತ್ತೆಮಾವ ಹಾಗೂ ಮೂವರು ಭಾವಂದಿರು ಮತ್ತು ಅಕ್ಕಂದಿರು, ಅವರ ಮಕ್ಕಳೂ ಇದ್ದ ದೊಡ್ಡ ಕುಟುಂಬ ಅದು. ನಮ್ಮದೊಂದು ಪುಟ್ಟ ಕೊಠಡಿ. ಅದರಲ್ಲಿ ಇಬ್ಬರು ಮಕ್ಕಳು ಮತ್ತು ನಾನು ಮಲಗಿರುತ್ತಿದ್ದೆ. ಅವರು ತಡರಾತ್ರಿ ಪ್ರದರ್ಶನಗಳನ್ನು ಮುಗಿಸಿ ಬಂದು ಬಾಗಿಲು ತಳ್ಳಿದರೆ ಅದು ನನ್ನ ತಲೆಗೇ ತಾಗುತ್ತಿತ್ತು. ಎಲ್ಲರೂ ಜೊತೆಯಾಗಿದ್ದ ಕೂಡುಕುಟುಂಬ. ಇವೆಲ್ಲ ಕಷ್ಟಗಳು ಅಂತನ್ನಿಸಲೇ ಇಲ್ಲ. ಎಲ್ಲವನ್ನೂ ಬದುಕಿನ ಭಾಗವಾಗಿಯೇ ಸ್ವೀಕರಿಸಿದೆ.

ನಾನು ಹೆಚ್ಚು ಮಾತನಾಡುವ ಸ್ವಭಾವದವಳಲ್ಲ. ಅದೇ ಕಾರಣಕ್ಕೆ ಇವರು ನನ್ನ ಮೇಲೆ ಆಗೀಗ ಮುನಿಸಿಕೊಳ್ಳುತ್ತಾರೆ. ನನಗೆ ಸುಳ್ಳು ಹೇಳಲು ಬರುವುದಿಲ್ಲ ಎಂದೂ ರೇಗುತ್ತಾರೆ. ನನಗೆ ಜೋರಾಗಿ ಮಾತನಾಡುವ, ಜಗಳವಾಡುವ ಪ್ರಸಂಗವನ್ನು ಇವರು ಎಂದೂ ಸೃಷ್ಟಿಸಿಯೇ ಇಲ್ಲ.

Advertisement

ತವರೂರು ಕೆಮ್ಮಣ್ಣು
ಉಡುಪಿಯ ಕೆಮ್ಮಣ್ಣಿನಲ್ಲಿ ನನ್ನ ತಾಯಿಮನೆ. ಅವರಂತೆಯೇ ನಾನೂ ಆರನೆಯ ತರಗತಿಯವರೆಗೆ ಶಾಲೆಗೆ ಹೋದವಳು. ನನ್ನ ತಮ್ಮ ಶೇಖರ ಮಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾಗ, ಇವರನ್ನು ನೋಡಿ ಪರಿಚಯವಾಗಿದ್ದರಿಂದ ನಾನು ಇವರನ್ನು ಮದುವೆಯಾಗುವಂತಾಯಿತು. ಆದರೆ, ಅವರ ತರವಾಡು ಮಂಜೇಶ್ವರವಾದ್ದರಿಂದ ಮಲಯಾಳ ಅವರ ಮಾತೃಭಾಷೆ. ನನ್ನ ತವರುಮನೆಯಲ್ಲಿ ತುಳುವೇ ಮಾತೃ ಭಾಷೆ. ನಾವು ಮೊದಲು ಮಾತನಾಡಿಕೊಂಡದ್ದು ತುಳು ಭಾಷೆಯಲ್ಲಿಯೇ. ಈಗಲೂ ಇವರ ಬಳಿ ತುಳುವಿನಲ್ಲಿಯೇ ಮಾತುಕತೆ ! ಆದರೆ, ಮಲಯಾಳ ಭಾಷೆ ಕಲಿತುಕೊಂಡಿದ್ದೇನೆ. ನಾನೂ ಮಕ್ಕಳೂ ಮಲಯಾಳ ಮಾತನಾಡುತ್ತೇವೆ. ಇವರ ಬಳಿ ಮಾತ್ರ ತುಳುವೇ ಸಲೀಸು.

“ಅರವಿಂದ ಬೋಳಾರರು ನಟಿಸಿದ ತುಳು ಸಿನಿಮಾ ನೋಡಿದ್ದೀರಾ?’ ಎಂದು ಕೆಲವರು ನನ್ನಲ್ಲಿ ಕೇಳುತ್ತಾರೆ. ಕೆಲವು ಸಿನಿಮಾ ನೋಡಿದ್ದೇನೆ. ನಾಟಕಗಳನ್ನೂ ನೋಡಿದ್ದುಂಟು. ಅವರು ವೇದಿಕೆಗೆ ಬರುವಾಗ ಸಭಿಕರು ಭಾರೀ ಚಪ್ಪಾಳೆ ಹೊಡೆದು ಸಿಳ್ಳೆ ಹಾಕುವುದನ್ನೂ ನೋಡಿದ್ದೇನೆ. ಹೋದಲ್ಲೆಲ್ಲ ಇವರಿಗೆ ಅಭಿಮಾನಿಗಳು !

ಇವರಿಗೆ ವಿದೇಶಗಳಲ್ಲಿಯೂ ನಾಟಕ ಮಾಡುವಂತೆ ತುಂಬ ಅವಕಾಶಗಳು ಬಂದಿವೆ. ಹಲವಾರು ದೇಶಗಳಿಗೆ ಭೇಟಿ ನೀಡಿದ್ದಾರೆ.ಆದರೆ, ನಾನು ಅವರೊಡನೆ ಹೆಚ್ಚು ಪ್ರಯಾಣ ಮಾಡಲಿಲ್ಲ. ಮದುವೆಯಾದ ಹೊಸತರಲ್ಲಿ ಇವರು ಮುಂಬಯಿಗೆ ನಾಟಕ ಮಾಡಲು ಹೋದಾಗ ನಾನೂ ನನ್ನ ತಮ್ಮನೊಡನೆ ಹೋಗಿದ್ದೆ. ಅಲ್ಲಿ ನಾಟಕ ನೋಡಿದ ನೆನಪು ಚೆನ್ನಾಗಿದೆ.

ಬೋಳಾರದಲ್ಲಿದ್ದ ಮನೆಯ ನಿವೇಶನಕ್ಕೆ ಸಂಬಂಧಿಸಿ ಅದೇನೋ ಕಾನೂನು ಸಮಸ್ಯೆ ಉಂಟಾಗಿತ್ತು. ಅಲ್ಲಿಂದ ಇಲ್ಲಿಗೆ ಅಂದರೆ, ಬಜಾಲ್‌ನ ಕಾವುಬೈಲ್‌ಗೆ ಬಂದೆವು. ಇವರ ಸಹೋದರರೆಲ್ಲ ಪ್ರತ್ಯೇಕವಾದ ಮನೆಗಳನ್ನು ಕಟ್ಟಿಕೊಂಡಿದ್ದಾರೆ. ಆದರೆ, ಎಲ್ಲಿಗೇ ಪ್ರವಾಸ ಹೋಗುವುದಾದರೂ ಅಣ್ಣಂದಿರು, ಇವರ ಕುಟುಂಬದವರು ಸೇರಿ ಎಲ್ಲರೂ ಜೊತೆಯಾಗಿಯೇ ಹೋಗುತ್ತೇವೆ. ನನ್ನನ್ನು ವಿದೇಶಕ್ಕೆ ಕರೆದುಕೊಂಡು ಹೋಗುತ್ತೇನೆ ಅಂತ ಇತ್ತೀಚೆಗೆ ಪಾಸ್‌ಪೋರ್ಟ್‌ ಮಾಡಿಸಿದ್ದಾರೆ! ನನಗೆ ಪ್ರವಾಸ ಮಾಡುವ ಉತ್ಸಾಹವೇನೂ ಇಲ್ಲ. ಬಹಳ ಕಷ್ಟದ ದಿನಗಳನ್ನು ಕಂಡಿದ್ದೇವೆ ನಾವು. ಈಗ ಬಹಳ ನೆಮ್ಮದಿಯ ದಿನಗಳನ್ನೂ ದೇವರು ಕೊಟ್ಟಿದ್ದಾನೆ.

ನಟನೆಯೇ ದೇವರು
ಅವರ ಪಾಲಿಗೆ ನಟನೆಯೇ ದೇವರು. ಇವರ ತಾಯಿ ಸುಂದರಿಯವರು ಅಂದರೆ ನಮ್ಮತ್ತೆಯವರು ತೀರಿಕೊಂಡ ದಿನ ನನಗೆ ನೆನಪಿದೆ. ತಾಯಿಯ ಅಂತ್ಯಕ್ರಿಯೆ ನೆರವೇರಿಸಿದ ಅವರು ಸೀದಾ ಪಂಡ ನಂಬಯರ್‌ ನಾಟಕದಲ್ಲಿ ಪಾರ್ಟ್‌ ಮಾಡಲು ಹೊರಟಿದ್ದರು. ಹೃದಯದಲ್ಲಿ ನೋವಿನ ಮೂಟೆಯೇ ಇದ್ದರೂ ರಂಗದಲ್ಲಿ ನಿಂತು ಸಾವಿರಾರು ಜನರನ್ನು ನಕ್ಕು ನಗಿಸಿದರು. ಪರದೆಯ ಹಿಂದೆ ಹೋಗುತ್ತಲೇ ಅವರಿಗೆ ದುಃಖ ಉಮ್ಮಳಿಸಿ ಬಂದಿತ್ತಂತೆ. ತಂದೆಯನ್ನು ಬೇಗನೇ ಕಳೆದುಕೊಂಡದ್ದರಿಂದ ಅವರ ತಾಯಿಯೇ ಮನೆ ಕೆಲಸ, ಕೂಲಿ ಕೆಲಸ ಮಾಡಿ ಮಕ್ಕಳನ್ನು ಸಾಕಿದ್ದರು. ಆ ದಿನಗಳ ನೆನಪು ಅವರಿಗೆ ಯಾವಾಗಲೂ ಇದೆ.

ಕಷ್ಟದ ಅನುಭವವಿರುವುದರಿಂದಲೇ ಬಹಳ ಖರ್ಚುಮಾಡುವುದು, ದುಂದುವೆಚ್ಚ ಮಾಡುವುದು ಅವರಿಗೆ ಇಷ್ಟವಾಗುವುದಿಲ್ಲ. ನನಗೂ ಶಾಪಿಂಗ್‌-ಗೀಪಿಂಗ್‌ ಇಷ್ಟವಿಲ್ಲ. ನಮ್ಮ ದಾಂಪತ್ಯಕ್ಕೆ ಮುಂದಿನ ವರ್ಷ 25 ತುಂಬುತ್ತದೆ! ಆಗ ಬಡವರಿಗೆ ಸಹಾಯವಾಗುವಂತಹ ಏನಾದರೂ ಕೆಲಸ ಮಾಡಬೇಕು ಎಂಬ ಇಚ್ಛೆ ಅವರಿಗಿದೆ. ಆ ನಿರ್ಧಾರ ನನಗೂ ಇಷ್ಟವೇ.

ಇವರಿಗೆ ಪಲಾವ್‌ ಎಂದರೆ ತುಂಬ ಇಷ್ಟ !
ಇತ್ತೀಚೆಗಿನ ವರ್ಷಗಳಲ್ಲಿ ಇವರು ನಾಟಕ, ಸಿನಿಮಾ ಮತ್ತು ಯಕ್ಷಗಾನ ಮೂರೂ ಕ್ಷೇತ್ರಗಳಲ್ಲಿ ದುಡಿಯುತ್ತಿದ್ದಾರೆ. ಹಾಗಾಗಿ, ಒಂದು ಕ್ಷಣವೂ ಮನೆಯಲ್ಲಿ ಪುರುಸೊತ್ತಾಗಿ ಇರುವುದಿಲ್ಲ. ಆದರೆ, ಮನೆಗೆ ಬೇಕಾದ ವಸ್ತುಗಳನ್ನೆಲ್ಲ ತಂದಿಟ್ಟು ಹೊರಡುತ್ತಾರೆ. ಎಷ್ಟು ಮುಂಜಾನೆಯೇ ಹೊರಡಲಿ, ಇವರಿಗೆ ನಾನು ತಿಂಡಿ-ಚಹಾ ರೆಡಿ ಮಾಡಿ ಕೊಟ್ಟರೇ ಸಮಾಧಾನ ! ಮುಂಜಾನೆ ಹೊರಡುವಾಗ “ಲೇಟಾಯಿತು ಮಾರಾಯಿತಿ’ ಎನ್ನುತ್ತ ಸಿಡುಕಿದರೂ ಇವರಿಗೆ ನಾನು ತಯಾರಿಸಿದ ಉಪಾಹಾರ ತಿಂದು, ಚಹಾ ಕುಡಿಯುವುದು ಇಷ್ಟವೇ. ನಾನು ಪಲಾವ್‌ ಮಾಡಿದರೆ ಇವರಿಗೆ, ಮಕ್ಕಳು ಸುಪ್ರೀತಾ ಮತ್ತು ಅಕ್ಷಿತಾಳಿಗೂ ಬಹಳ ಪ್ರೀತಿ.

ಸಾವಿತ್ರಿ ಅರವಿಂದ ಬೋಳಾರ್‌
(ನಿರೂಪಣೆ : ಟೀಮ್‌ ಮಹಿಳಾಸಂಪದ)

Advertisement

Udayavani is now on Telegram. Click here to join our channel and stay updated with the latest news.

Next