ಹುಬ್ಬಳ್ಳಿ: ಪಕ್ಷದ ಪ್ರಾಮಾಣಿಕ ಶಾಸಕ ಅರವಿಂದ ಬೆಲ್ಲದ ಅವರಿಗೆ ಸಚಿವ ಸ್ಥಾನ ತಪ್ಪಿಸಲು ಜಿಲ್ಲೆಯ ಬಿಜೆಪಿ ನಾಯಕರು ಹುನ್ನಾರ ಕಾರಣವಾಗಿದ್ದು, ಇವರ ಏಳ್ಗೆ ಸಹಿಸದೆ ಸಚಿವ ಸ್ಥಾನ ತಪ್ಪಿಸಿದ್ದಾರೆ ಎಂದು ಗೋಕುಲ ಗ್ರಾಮದ ಬಿಜೆಪಿ ರೈತ ಮುಖಂಡರು ಹಾಗೂ ಅರವಿಂದ ಬೆಲ್ಲದ ಬೆಂಬಲಿಗರು ಅಸಮಧಾನ ವ್ಯಕ್ತಪಡಿಸಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಾಲೂಕು ರೈತ ಮೋರ್ಚಾ ಅಧ್ಯಕ್ಷ ಮಹಾದೇವಪ್ಪ ಪೂಜಾರ ಮಾತನಾಡಿ, ಅಭಿವೃದ್ಧಿ ದೃಷ್ಟಿಯಿಂದ ಬೆಲ್ಲದ ಅವರಿಗೆ ಸಚಿವ ಸ್ಥಾನ ನೀಡಬೇಕಾಗಿತ್ತು. ಮಾಜಿ ಸಿಎಂ ಜಗದೀಶ ಶೆಟ್ಟರ ಅವರು ಸಚಿವ ಸ್ಥಾನ ಬೇಡ ಎಂದಾಗ ಬೆಲ್ಲದ ಅವರಿಗೆ ದೊರೆಯುತ್ತದೆ ಎಂದು ಭಾವಿಸಿದ್ದೆವು. ಅಭಿವೃದ್ಧಿ ಕಾರ್ಯಗಳಿಂದ ಜನಮನ್ನಣೆ ಪಡೆದ ಶಾಕರಿಗೆ ಸಚಿವ ಸ್ಥಾನ ತಪ್ಪಿಸಿರುವುದು ಪಕ್ಷಕ್ಕೆ ಮಾಡಿದ ದ್ರೋಹವಾಗಿದೆ ಎಂದರು.
ಇದನ್ನೂ ಓದಿ :ಶಶಿಕಲಾ ಜೊಲ್ಲೆಯವರಿಗೆ ಸಚಿವ ಸ್ಥಾನ : ಚಿಕ್ಕೋಡಿ-ನಿಪ್ಪಾಣಿಯಲ್ಲಿ ಸಂಭ್ರಮಾಚರಣೆ
ಶೆಟ್ಟರ, ಜೋಶಿ ಕಾರಣ: ಬೆಲ್ಲದ ಅವರು ಸಾಕಷ್ಟು ಜನಪರ ಕಾರ್ಯಗಳನ್ನು ಮಾಡಿ ಜನಮನ್ನಣೆ ಪಡೆದ ಶಾಸಕರಾಗಿದ್ದಾರೆ. ಪ್ರಮಾಣಿಕ ಶಾಸಕರಾಗಿ ಕಾರ್ಯನಿರ್ವಹಿಸುತ್ತಿರುವುದು ತಪ್ಪಾಗಿದೆ. ಸ್ಥಳೀಯ ನಾಯಕರಾದ ಜಗದೀಶ ಶೆಟ್ಟರ ಹಾಗೂ ಪ್ರಹ್ಲಾದ ಜೋಶಿ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಎತ್ತಿಗಟ್ಟಿ ಇದೀಗ ಸಚಿವ ಸ್ಥಾನ ತಪ್ಪಿಸಿದ್ದಾರೆ. ಅವೈಜ್ಞಾನಿಕ ಬಿ.ಆರ್.ಟಿ.ಎಸ್ ಯೋಜನೆ ವಿರುದ್ಧ ಧ್ವನಿ ಎತ್ತಿದ್ದು ಹಾಗೂ ಮುಖ್ಯ ಮಂತ್ರಿಗಳಿಗೆ ದೂರು ನೀಡಿದ ಕಾರಣಕ್ಕೆ ಸಚಿವ ಸ್ಥಾನ ತಪ್ಪಿಸಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದರು.
ಪಕ್ಷ ಕಾರ್ಯಕರ್ತ ಹನುಮಂತ ಉಣಕಲ್ಲ ಮಾತನಾಡಿ, ಸಚಿವ ಸ್ಥಾನ ತಪ್ಪಿಸಿರುವುದು ಮುಂಬರುವ ಪಾಲಿಕೆ ಚುನಾವಣೆಯಲ್ಲಿ ದೊಡ್ಡ ಪೆಟ್ಟು ಪಕ್ಷಕ್ಕೆ ಬೀಳಲಿದೆ. ಇದು ಪಕ್ಷದ ಸಂಘಟನೆ ಮೇಲೂ ಪರಿಣಾಮ ಬೀರಲಿದೆ. ಶಾಸಕ ಅರವಿಂದ ಬೆಲ್ಲದ ಅವರಿಗೆ ಆಗಿರುವ ಅನ್ಯಾಯದ ವಿರುದ್ಧ ಹೋರಾಟ ಆರಂಭಿಸುತ್ತೇವೆ. ಅರಡನೇ ಹಂತದಲ್ಲದಾರೂ ಇವರನ್ನು ಸಚಿವ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.