Advertisement

Kambala:ಅರಸು ಕಂಬಳ ಡಿಸೆಂಬರ್‌ನಲ್ಲಿ ನಡೆಯುವುದು ವಾಡಿಕೆ ಕಂಬಳಕ್ಕೆ ದೈವಾರಾಧನೆಯ ಶಕ್ತಿಯಿದೆ

12:26 PM Nov 25, 2023 | Team Udayavani |

ಮೊನ್ನೆಯಷ್ಟೇ ನಾನು ಬೆಂಗಳೂರಿನ ವಿಜಯನಗರದಿಂದ ಬಿಎಂಟಿಸಿ ಬಸ್‌ನಲ್ಲಿ ಪ್ಯಾಲೇಸ್‌ ಗ್ರೌಂಡ್‌(ಅರಮನೆ ಮೈದಾನ)ಗೆ ಟಿಕೇಟ್‌ ನೀಡಿ ಎಂದಾಕ್ಷಣ ಪಕ್ಕದಲ್ಲಿ ಕೂತ ವ್ಯಕ್ತಿ ನೀವು ಮಂಗಳೂರಿನವರಾ? ಅದೇನು ಬೆಂಗಳೂರು ಕಂಬಳ.. ನಮ್ಮ ಕಂಬಳ ಸರ್‌..? ಅದು ಯಾವಾಗ ನಡೆಯುವುದು ಗೊತ್ತಾ…. ಎಂದಾಗ ನಮ್ಮ ಕಂಬಳದ ಬಗ್ಗೆ ಇವರಿಗೆ ಇರುವ ಆಸಕ್ತಿ ನೋಡಿ ತುಂಬಾ ಖುಷಿಯಾಯ್ತು. ಆಗ ನಾನು ಹೆಮ್ಮೆಯಿಂದ ಸ್ವಲ್ಪ ತಿಳಿದಷ್ಟು ಹೇಳಬಲ್ಲೆ ಎಂದೆ.

Advertisement

ನಾನು ದಕ್ಷಿಣ ಕನ್ನಡ ಜಿಲ್ಲೆಯ ಹಳೆಯಂಗಡಿಯಲ್ಲಿ ಬಾಲ್ಯದ ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ನಮ್ಮೂರಿನ ಇತಿಹಾಸ ಪ್ರಸಿದ್ಧ ಸಾಂಪ್ರದಾಯಿಕ ಮುಲ್ಕಿ ಸೀಮೆ ಅರಸು ಕಂಬಳ ನೋಡಿ ಬೆಳೆದವನು. ಸಾಂಪ್ರದಾಯಿಕ ಅರಸು ಕಂಬಳ ಹಿನ್ನೆಲೆ ಅರಮನೆಯ ರಾಜಪುರೋಹಿತರ ಸೂಚನೆಯಂತೆ ಅರಸರ ಜಾತಕದ ನಕ್ಷತ್ರ ನೋಡಿ ಕಂಬಳದ ದಿನಾಂಕವನ್ನು ನಿಗದಿ ಮಾಡುತ್ತಾರೆ.

ಮುಲ್ಕಿ ಸೀಮೆ ಅರಸು ಕಂಬಳ ಸಾಮಾನ್ಯವಾಗಿ ಡಿಸೆಂಬರ್‌ ತಿಂಗಳಲ್ಲಿ ನಡೆಯುವುದು ವಾಡಿಕೆ. ಮೂಲತಃ ಜೈನ ಮನೆತನದ ಅರಸರು ಮುಲ್ಕಿ ಸೀಮೆ ಅರಸು ಕಂಬಳ ಅರಮನೆಯಲ್ಲಿ ಸಾಂಪ್ರದಾಯಿಕವಾಗಿ ತಮ್ಮ ಆರಾಧ್ಯ ದೇವರಾದ ಪದ್ಮಾವತಿ ಅಮ್ಮ ಹಾಗೂ ಚಂದ್ರನಾಥ ಸ್ವಾಮಿಯ ಬಳಿ ಪ್ರಾರ್ಥನೆ ಸಲ್ಲಿಸಿ, ಮುಲ್ಕಿ ಸೀಮೆಯ ಇತಿಹಾಸ ಪ್ರಸಿದ್ಧ ಮುಲ್ಕಿ ಬಪ್ಪನಾಡು ದುರ್ಗಾಪರಮೇಶ್ವರಿ ಅಮ್ಮನರ ಸಂಪೂರ್ಣ ಅನುಗ್ರಹದಿಂದ ಕಂಬಳದ ಆರಂಭವಾಗುತ್ತದೆ.

ನದಿ ತೀರದಲ್ಲಿ ಏರು ಬಂಟ ದೈವಾರಾಧನೆ ವಿಧಿವಿಧಾನಗಳನ್ನು ಮುಗಿಸಿ ಅರಸರು ಇರುವ ಅರಮನೆಗೆ ಬಂದು ಅರಸು ಮನೆತನಕ್ಕೆ ಸಂಬಂಧ ಪಟ್ಟ ಜೋಡಿ ಕೋಣಗಳು ಮತ್ತು ಊರಿನ ಸಮಸ್ತ ಜನತೆಯ ಜತೆಗೆ ಡೋಲು, ಕೊಂಬು, ವಾದ್ಯದೊಂದಿಗೆ ಕಂಬಳದ ಕರೆಗೆ ಹೋಗಿ ಪ್ರಾರ್ಥನೆ ಸಲ್ಲಿಸಿ ಅರಸು ಮನೆತನದ ಕೋಣಗಳನ್ನೇ ಪ್ರಥಮವಾಗಿ ಕೋಣ ಓಡಿಸಿ ಕಂಬಳಕ್ಕೆ ಪ್ರಥಮ ಚಾಲನೆ ನೀಡುತ್ತಾರೆ.

ಅದಲ್ಲದೆ, ಕೋಣಗಳು ಕೊನೆಯತನಕ ಅಲ್ಲಿಯ ಜಾಗದಲ್ಲೇ ವಿಶ್ರಾಂತಿ ಪಡೆಯುತ್ತದೆ. ಈ ಸಮಯದಲ್ಲಿ ಅರಮನೆಯ ಅರಸರು ಕಂಬಳ ಮುಗಿಯುವವರೆಗೆ ಉಪವಾಸದಿಂದ ಶ್ರದ್ಧಾಭಕ್ತಿಯಿಂದ ಇರುತ್ತಾರೆ. ಕಂಬಳದ ಕೆರೆಯಲ್ಲಿ ಕೋಣಗಳನ್ನು ಓಟಕ್ಕೆ ಬಿಡುವ ಜಾಗಕ್ಕೆ ಗಂತ್‌ ಹಾಗೂ ತಲುಪುವ ಜಾಗಕ್ಕೆ ಮಂಜೊಟ್ಟಿ ಎಂದು ಕರೆಯಲಾಗುತ್ತದೆ.

Advertisement

ಅರಸರು ಉಪವಾಸ ಯಾಕೆ?
ಅರಸ ಮನೆತನದವರು ಮೂಲತಃ ಜೈನ ಸಮುದಾಯದವರು. ಹಿಂಸೆಗೆ ಯಾವತ್ತು ಅಸ್ಪದ ಕೊಡುವುದಿಲ್ಲ. ಅದೇ ಕಾರಣದಿಂದ ಅರಸರು ಉಪವಾಸ ಮಾಡುತ್ತಾರೆ. ಅರಸರು ಊರಿನ ಸಮಸ್ತ ಜನರ ಹಿತಕ್ಕಾಗಿ, ಮನಸ್ಸಿನ ಮನೋರಂಜನೆಗಾಗಿ ತುಳುನಾಡಿನ ಜನಪದ ಕ್ರೀಡೆಗೆ ತುಂಬಾ ಮಹತ್ವ ಕೊಡುತ್ತಾರೆ. ಕಂಬಳದ ಓಟದಲ್ಲಿ ಗೆದ್ದ ಯಾಜಮಾನರಿಗೆ ವೀಳ್ಯದೆಲೆ, ಅಡಕೆ ಹಾಗೂ ಲಿಂಬೆಹಣ್ಣು ಕೊಟ್ಟು ಗೌರವ ಪ್ರಧಾನ ಮಾಡುವ ಸಂಪ್ರದಾಯ.

ಯಾಕೆ ಸ್ಪಧೆಯಾಗಿ ಬದಲಾಗಿತ್ತು?
ಕೋಣಗಳನ್ನು ಸಾಕುವುದು ಅಷ್ಟು ಸುಲಭದ ಕೆಲಸವಲ್ಲ. ಹಿಂದಿನ ಕಾಲದ ಸಾಂಪ್ರದಾಯಿಕ ಕಂಬಳದಲ್ಲಿ ವೀಳ್ಯದೆಲೆ, ಅಡಕೆ, ಲಿಂಬೆಹಣ್ಣು ಕೊಟ್ಟು ಕಂಬಳದಲ್ಲಿ ಗೆದ್ದ ಯಾಜಮಾನರಿಗೆ ಗೌರವವಾಗಿ ಕೊಡುತ್ತಿದ್ದರು. ಆದರೆ, ಈಗ ಕೋಣ ಸಾಕುವವರ ಕಷ್ಟ ಅಷ್ಟಿಷ್ಟಲ್ಲ, ಖರ್ಚು ವೆಚ್ಚಗಳ ಜವಾಬ್ದಾರಿ ಯಜಮಾನರಿಗೆ ಹಾಗೂ ಕಂಬಳ ನಡೆಸುವ ಆಯೋಜಕರಿಗೆ ಮಾತ್ರ ಗೊತ್ತು.

ಅದಕ್ಕೆ ಈಗ ಒಂದು ಕೆರೆಯಿದ್ದ ಜಾಗದಲ್ಲಿ ಜೋಡು ಕೆರೆಗಳಾಗಿ ನೂರಾರು ಕೋಣಗಳ ಜೋಡಿಗಳಿರುವುದರಿಂದ ಸಮಯದ
ಮಿತಿ ಮೀರಿರುವುದರಿಂದ ಕಂಬಳ ಸ್ಪರ್ಧೆಯಾಗಿ ಬದಲಾವಣೆಗಳಾಗಿವೆ. ಜನಪದ ಕ್ರೀಡೆ ಕಂಬಳವನ್ನು ಉಳಿಸಿ ಬೆಳೆಸುವಲ್ಲಿ ತುಳುನಾಡಿನ ಮಣ್ಣಿನ ಜನರ ಪ್ರಮುಖ ಪಾತ್ರವಾಗಿದೆ. ಆದರೆ, ಒಳ್ಳೆಯ ಕೆಲಸ ಮಾಡುವಾಗ ಅಲ್ಲೊಂದು-ಇಲ್ಲೊಂದು ಜನ ಏನಾದರೂ ಸುಳ್ಳು ಸುದ್ದಿ ಹಬ್ಬಿಸುತ್ತಾರೆ. ಕಂಬಳಕ್ಕೆ ದೈವಾರಾಧನೆಯ ಶಕ್ತಿಯಿರುವುದರಿಂದ ಕಂಬಳಕ್ಕೆ ಎಂದಿಗೂ ಕಳಂಕ ಬರುವುದಿಲ್ಲ ಎಂದು ತುಳುವರ ನಂಬಿಕೆ.

ಅರಮನೆ ಮೈದಾನದಲ್ಲಿ ಕಂಬಳಕ್ಕೆ ಸಂಬಂಧ?
ತುಳುನಾಡಿನ ಮಣ್ಣಿನ ಜನಪದ ಕ್ರೀಡೆ ಕಂಬಳ ಇಡೀ ವಿಶ್ವದಲ್ಲೇ ಪ್ರಸಿದ್ಧವಾಗಿದೆ. ಅದು ಅಲ್ಲದೇ ಹಿಂದಿನ ಕಾಲದ ರಾಜ-ಮಹಾರಾಜರ ಸಂಬಂಧ ಇರುವುದರಿಂದಲೂ ತುಳುನಾಡಿನ ದೈವ ದೇವರುಗಳ ಸಂಕಲ್ಪದಿಂದಲೂ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೆಂಗಳೂರು ಕಂಬಳ -ನಮ್ಮ ಕಂಬಳ ಒಂದು ಇತಿಹಾಸ ಸೃಷ್ಟಿಯಾಗಬಹುದು. ಇತಿಹಾಸ ಪ್ರಸಿದ್ಧ ತುಳುನಾಡಿನ ಮಣ್ಣಿನ ಜನಪದ ಕ್ರೀಡೆಯಾದ ಬೆಂಗಳೂರು ಕಂಬಳ ನಮ್ಮ ಕಂಬಳ ನವೆಂಬರ್‌ 25,26 ಅರಮನೆ ಮೈದಾನದಲ್ಲಿ ನೋಡಿ ಕಂಬಳ ಸಮಿತಿಯ ಆಯೋಜಕರಿಗೆ ಪ್ರೋತ್ಸಾಹಿಸಿ ಹಾಗೂ ವಿಶ್ವದ ಹಾಗೂ ಕರುನಾಡಿನ ಸಮಸ್ತ ಕಂಬಳ ಅಭಿಮಾನಿಗಳು ಬಂದು ಕಂಬಳದಲ್ಲಿ ಭಾಗಿಯಾಗಿ ಕಣ್ತುಂಬಿಕೊಳಬಹುದು.

ಯಾದವ ಎಸ್‌. ಕಲ್ಲಾಪು.
(ಮಾಹಿತಿ : ಉದಯ ಕುಮಾರ ಇಂದ್ರ, ಪಡುಪಣಂಬೂರು)

Advertisement

Udayavani is now on Telegram. Click here to join our channel and stay updated with the latest news.

Next